ದೇಶದಲ್ಲಿ ತುರ್ತು ಮಿಲಿಟರಿ ಆಡಳಿತ ಜಾರಿಗೊಳಿಸಿ ಜನಾಕ್ರೋಶದ ಬಳಿಕ ವಾಪಸ್ ಪಡೆಯುವ ಮೂಲಕ ವಾಗ್ದಂಡನೆಗೆ ಗುರಿಯಾಗಿರುವ ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ನ್ಯಾಯಾಲಯದ ಬಂಧನ ವಾರೆಂಟ್ ಹಿನ್ನೆಲೆ ಯೂನ್ ಸುಕ್ ಯೋಲ್ ಅವರನ್ನು ಬಂಧಿಸಲು ಈ ಹಿಂದೆ (ಜ.3) ಅಧಿಕಾರಿಗಳು ಪ್ರಯತ್ನಿಸಿದ್ದರು. ಆದರೆ, ಅದು ವಿಫಲವಾಗಿತ್ತು. ಪ್ರಧಾನಿ ನಿವಾಸದ ಬಳಿಗೆ ಅಧಿಕಾರಿಗಳು ಬಂದಾಗ, ಯೋಲ್ ಬೆಂಬಲಿಗರು ಮತ್ತು ಭದ್ರತಾ ಸಿಬ್ಬಂದಿ ತಡೆಯೊಡ್ಡಿದ್ದರು.
ಆ ಬಳಿಕ ಯೋಲ್ ಕಡೆಯವರು ಮತ್ತು ಅಧಿಕಾರಿಗಳ ನಡುವೆ ತಿಕ್ಕಾಟ ಏರ್ಪಟ್ಟಿತ್ತು. ಬಂಧನ ವಾರೆಂಟ್ ಕಾನೂನುಬಾಹಿರ ಎಂಬ ಯೋಲ್ ವಾದವನ್ನೂ ನ್ಯಾಯಾಲಯ ಇತ್ತೀಚೆಗೆ ತಿರಸ್ಕರಿಸಿತ್ತು. ಇದೀಗ ಕೊನೆಗೂ ಯೋಲ್ ಬಂಧನವಾಗಿದೆ ಎಂದು ವರದಿಯಾಗಿದೆ.
ಯೂನ್ ಸುಕ್ ಯೋಲ್ ಬಂಧನದ ಮೂಲಕ ದಕ್ಷಿಣ ಕೊರಿಯಾದ ಇತಿಹಾಸದಲ್ಲೇ ಮೊದಲ ಬಾರಿಗೆ ಅಧ್ಯಕ್ಷರೊಬ್ಬರ ಬಂಧನವಾದಂತಾಗಿದೆ.
ತನ್ನ ಅಧಿಕಾರ ಉಳಿಸಿಕೊಳ್ಳಲು ಮತ್ತು ಪ್ರತಿಪಕ್ಷಗಳನ್ನು ಹತ್ತಿಕ್ಕಲು ಹಠಾತ್ ಮಿಲಿಟರಿ ಆಡಳಿತ ಜಾರಿಗೊಳಿಸುವ ಮೂಲಕ ಯೂನ್ ಸುಕ್ ಯೋಲ್ ಅವರು ದೇಶದಲ್ಲಿ ದಂಗೆ ಉಂಟಾಗಲು ಕಾರಣರಾಗಿದ್ದಾರೆ ಎಂಬ ಆರೋಪವಿದೆ. ಈ ಆರೋಪ ಸಾಬೀತಾದರೆ ಅವರಿಗೆ ಜೀವಾವಧಿ ಅಥವಾ ಮರಣದಂಡನೆ ಶಿಕ್ಷೆಯಾಗಬಹುದು ಎಂದು ವರದಿಗಳು ಹೇಳಿವೆ.
ನ್ಯಾಯಾಲಯದಿಂದ ಬಂಧನ ವಾರೆಂಟ್ ಜಾರಿಯಾದ ಬಳಿಕ, ಅಧ್ಯಕ್ಷರ ನಿವಾಸದಲ್ಲಿ ಯೋಲ್ ಅವಿತುಕೊಂಡಿದ್ದರು. ಅವರ ಬಂಧನಕ್ಕೆ ಅಧಿಕಾರಿಗಳು ಪ್ರಯತ್ನಿಸಿದರೂ ಅಧ್ಯಕ್ಷೀಯ ಭದ್ರತಾ ಸೇವೆಯ (ಪಿಎಸ್‌ಎಸ್) ಸಿಬ್ಬಂದಿ ಅವಕಾಶ ನೀಡುತ್ತಿರಲಿಲ್ಲ. ಇದರ ಜೊತೆಗೆ ಯೋಲ್ ಬೆಂಬಲಿಗರು ಕೂಡ ಮನೆ ಬಳಿ ಜಮಾಯಿಸಿದ್ದರು.
ಇಂದು (ಜ.15) ಬೆಳಗಿನ ಜಾವಕ್ಕೆ ಮುನ್ನ, ಭ್ರಷ್ಟಾಚಾರ ತನಿಖಾ ಕಚೇರಿಯ ನೂರಾರು ಪೊಲೀಸ್ ಮತ್ತು ತನಿಖಾಧಿಕಾರಿಗಳು ಮತ್ತೆ ಯೋಲ್ ನಿವಾಸವನ್ನು ಸುತ್ತುವರೆದರು. ಕೆಲವರು ಹಿಂದಿನ ಭಾಗದಲ್ಲಿ ಕಾಂಪೌಂಡ್ ಗೋಡೆ ಹತ್ತಿ ಮುಖ್ಯ ಕಟ್ಟಡ ತಲುಪಿದರು. ಈ ವೇಳೆ ಭದ್ರತಾ ಸಿಬ್ಬಂದಿ ಅವರನ್ನು ತಡೆಯಲು ಮುಂದಾದರು. ಸುಮಾರು ಐದು ಗಂಟೆಗಳ ಕಾಲ ನಡೆದ ತಿಕ್ಕಾಟದ ನಂತರ, ಅಧಿಕಾರಿಗಳು ಯೋಲ್ ಅವರನ್ನು ಬಂಧಿಸಿಲಾಗಿದೆ ಎಂದು ಘೋಷಿಸಿದರು ಎಂದು ವರದಿಗಳು ವಿವರಿಸಿವೆ.
ಬಂಧನದ ಬಳಿಕ ಯೋಲ್ ಅವರನ್ನು ಬೆಂಗಾವಲು ಪಡೆಯೊಂದಿಗೆ ಭ್ರಷ್ಟಾಚಾರ ತನಿಖಾ ಕಚೇರಿಗೆ ಕರೆದೊಯ್ಯಲಾಯಿತು. ಅಲ್ಲಿ ಅಧಿಕಾರಿಗಳು ಯೋಲ್ ಅವರ ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಅವರು ಮೌನವಾಗಿ ಕುಳಿತಿದ್ದು, ಏನೂ ಮಾತನಾಡುತ್ತಿಲ್ಲ ಎಂದು ವರದಿಗಳು ಹೇಳಿವೆ.
ಯೂನ್ ಸುಕ್ ಯೋಲ್ ಅವರು ಡಿಸೆಂಬರ್ 3, 2024ರಂದು ರಾತ್ರಿ ದೇಶದಲ್ಲಿ ತುರ್ತು ಮಿಲಿಟರಿ ಆಡಳಿತ ಜಾರಿಗೊಳಿಸಿದ್ದರು. ಸ್ವಪಕ್ಷದವರು ಸೇರಿದಂತೆ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಮರುದಿನ ಅದನ್ನು ವಾಪಸ್ ಪಡೆದಿದ್ದರು.
ಯೂನ್ ಸುಕ್ ಯೋಲ್ ಸ್ವಹಿತಾಸಕ್ತಿಗಾಗಿ ದೇಶದಲ್ಲಿ ಮಿಲಿಟರಿ ಆಡಳಿತ ಹೇರಿದ ಆರೋಪದ ಮೇಲೆ ಅವರನ್ನು ಸಂಸತ್ ವಾಗ್ದದಂಡನೆ ಮೂಲಕ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿದೆ. ಆದರೆ, ಅವರ ವಿರುದ್ದ ನ್ಯಾಯಾಲಯದಲ್ಲಿ ಪ್ರಕರಣ ಬಾಕಿಯಿದೆ.
ತುರ್ತು ಮಿಲಿಟರಿ ಆಡಳಿತ ಹೇರಿದ ಸಂಬಂಧ ತನಿಖಾ ತಂಡ ಯೂನ್ ಸುಕ್ ಯೋಲ್ ಅವರನ್ನು ಮೂರು ಬಾರಿ ವಿಚಾರಣೆಗೆ ಕರೆದರೂ ಅವರು ಹಾಜರಾಗಲು ವಿಫಲರಾಗಿದ್ದಾರೆ. ಈ ಹಿನ್ನೆಲೆ ಅವರ ಬಂಧನಕ್ಕೆ ಡಿಸೆಂಬರ್ 31ರಂದು ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದೆ.
ವಿಚಾರಣೆಯಿಲ್ಲದೆ ದೀರ್ಘಾವಧಿ ಜೈಲಿನಲ್ಲಿಡುವುದು ‘ಬದುಕುವ ಹಕ್ಕಿನ’ ಉಲ್ಲಂಘನೆ : ಬಾಂಬೆ ಹೈಕೋರ್ಟ್


