ದಕ್ಷಿಣ ಕೊರಿಯಾದ ಪದಚ್ಯುತ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ಸಾಂವಿಧಾನಿಕ ನ್ಯಾಯಾಲಯ ಶುಕ್ರವಾರ (ಏ.3) ಅಧಿಕಾರದಿಂದ ವಜಾಗೊಳಿಸಿದೆ. ಈ ಮೂಲಕ ಕಳೆದ ನಾಲ್ಕು ತಿಂಗಳಿನಿಂದ ತಲೆದೋರಿದ್ದ ರಾಜಕೀಯ ಅಸ್ಥಿರತೆಗೆ ಅಂತ್ಯ ಹಾಡಿದೆ.
ಎಂಟು ನ್ಯಾಯಮೂರ್ತಿಗಳಲ್ಲಿ ಆರು ಮಂದಿ ಯೂನ್ ಅವರ ಪದಚ್ಯುತಿ ಪರವಾಗಿ ತೀರ್ಪು ನೀಡಿದ್ದಾರೆ. ಆದ್ದರಿಂದ ಅವರು ಅಧಿಕಾರದಿಂದ ವಜಾಗೊಂಡಿದ್ದಾರೆ ಎಂದು ನ್ಯಾಯಾಲಯದ ತೀರ್ಪನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
“ಯೂನ್ ಅವರು ತುರ್ತು ಮಿಲಿಟರಿ ಆಡಳಿತ ಜಾರಿಗೊಳಿಸಿರುವುದು ದೇಶದ ಸಾಂವಿಧಾನಿಕ ವ್ಯವಸ್ಥೆಯ ಮೇಲೆ ಗಂಭೀರ ಋಣಾತ್ಮಕ ಪರಿಣಾಮ ಬೀರಿದೆ. ಯೂನ್ ಅವರು ಸಾಂವಿಧಾನಿಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ಅವರನ್ನು ಅಧಿಕಾರದಿಂದ ವಜಾಗೊಳಿಸುವುದು ಸೂಕ್ತವೆನಿಸುತ್ತದೆ” ಎಂದು ತೀರ್ಪು ಪ್ರಕಟಿಸುವಾಗ ನ್ಯಾಯಾಲಯದ ಹಂಗಾಮಿ ಮುಖ್ಯಸ್ಥ ಮೂನ್ ಹ್ಯುಂಗ್-ಬೇ ಹೇಳಿದ್ದಾರೆ.
“ಯೂನ್ ಅವರು ತುರ್ತು ಮಿಲಿಟರಿ ಆಡಳಿತವನ್ನು ಜಾರಿಗೊಳಿಸಿ, ಶಾಸಕಾಂಗದ ಆಡಳಿತ ಅಧಿಕಾರವನ್ನು ಕಿತ್ತುಕೊಂಡಿದ್ದಾರೆ. ಇದಕ್ಕಾಗಿ ಮಿಲಿಟರಿ ಮತ್ತು ಪೊಲೀಸ್ ಬಲ ಪ್ರಯೋಗಿಸಿ ಸಂವಿಧಾನ ಉಲ್ಲಂಘಿಸಿದ್ದಾರೆ. ತುರ್ತು ಮಿಲಿಟರಿ ಆಡಳಿತ ಹೇರುವ ಮೂಲಭೂತ ನಿಯಮಗಳನ್ನು ಅವರು ಪಾಲಿಸಿಲ್ಲ” ಎಂದಿದ್ದಾರೆ.
ನ್ಯಾಯಾಲಯದ ತೀರ್ಪಿನಿಂದ ಕಳೆದ ನಾಲ್ಕು ತಿಂಗಳಿನಿಂದ ತಲೆದ್ದೋರಿದ್ದ ರಾಜಕೀಯ ಅಸ್ಥಿರತೆ ಕೊನೆಗೊಂಡಿದೆ. ಮುಂದಿನ ಎರಡು ತಿಂಗಳ ಒಳಗೆ ಅಧ್ಯಕ್ಷೀಯ ಚುನಾವಣೆ ನಡೆಸಿ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಬೇಕಿದೆ.
ನ್ಯಾಯಾಲಯದ ಆದೇಶ ದಕ್ಷಿಣ ಕೊರಿಯಾದಲ್ಲಿ ಮಹತ್ವದ ರಾಜಕೀಯ ಬದಲಾವಣೆಗೆ ಕಾರಣವಾಗಬಹುದು. ನ್ಯಾಯಯುತ ರೀತಿಯಲ್ಲಿ ಹೊಸ ಅಧ್ಯಕ್ಷರ ಆಯ್ಕೆಯೂ ನಡೆಯಬಹುದು. ಆದರೆ, ಮತ್ತೊಂದೆಡೆ ಯೂನ್ ಅವರ ಬೆಂಬಲಿಗರು ತಿರುಗಿ ಬೀಳುವ ಸಾಧ್ಯತೆಯೂ ಇದೆ. ಯೂನ್ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದೂ ಕಾದು ನೋಡಬೇಕಿದೆ. ಹಾಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ದೇಶದಲ್ಲಿ ಮಿಲಿಟರಿ ಕಣ್ಗಾವಲು ಹೆಚ್ಚಿಸಲಾಗಿದೆ.
“ಜನರು ಶಾಂತವಾಗಿರಬೇಕು, ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು. ಯಾರೂ ಉದ್ವೇಗಕ್ಕೆ ಒಳಗಾಗಬಾರದು” ಎಂದು ಹಂಗಾಮಿ ಅಧ್ಯಕ್ಷ ಹಾನ್ ಡಕ್-ಸೂ ಮನವಿ ಮಾಡಿದ್ದಾರೆ.
ನ್ಯಾಯಾಲಯದ ತೀರ್ಪಿಗೂ ಮುನ್ನ ಸಚಿವ ಸಂಪುಟದ ಸಭೆ ನಡೆಸಿದ ಅವರು, ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವಂತೆ ಮನವಿ ಮಾಡಿದ್ದಾರೆ. ರಾಜಕಾರಣಿಗಳು ಅಶಾಂತಿ ಉಂಟು ಮಾಡಬಹುದಾದ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಬಾರದು ಎಂದು ನಿರ್ದೇಶನ ನೀಡಿದ್ದಾರೆ.
ಯಾವುದೇ ಕಾನೂನುಬಾಹಿರ, ಹಿಂಸಾತ್ಮಕ ಕೃತ್ಯಗಳನ್ನು ಸರ್ಕಾರ ಸಹಿಸುವುದಿಲ್ಲ. ಅಂತಹ ಕೃತ್ಯವೆಸಗುವವರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.
ಯೂನ್ ಸುಕ್ ಯೋಲ್ ಅಧಿಕಾರ ಕಳೆದುಕೊಂಡಿದ್ದೇಕೆ?
ಯೂನ್ ಸುಕ್ ಯೋಲ್ ಅವರು ಡಿಸೆಂಬರ್ 3, 2024ರಂದು ರಾತ್ರಿ ದೇಶದಲ್ಲಿ ತುರ್ತು ಮಿಲಿಟರಿ ಆಡಳಿತ ಜಾರಿಗೊಳಿಸಿದ್ದರು. ಸ್ವಪಕ್ಷದವರು ಸೇರಿದಂತೆ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಮರುದಿನ ಅದನ್ನು ವಾಪಸ್ ಪಡೆದಿದ್ದರು.
ಸ್ವಹಿತಾಸಕ್ತಿಗಾಗಿ ದೇಶದಲ್ಲಿ ಮಿಲಿಟರಿ ಆಡಳಿತ ಹೇರಿದ ಆರೋಪದ ಮೇಲೆ ಯೂನ್ ಅವರನ್ನು ಸಂಸತ್ ವಾಗ್ದದಂಡನೆ ಮೂಲಕ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಿತ್ತು. ಅವರ ವಿರುದ್ದ ಪ್ರಕರಣ ದಾಖಲಾಗಿತ್ತು.
ಪ್ರಕರಣ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯ ಮೂರು ಬಾರಿ ಸಮನ್ಸ್ ಜಾರಿಗೊಳಿಸಿದ್ದರೂ ಯೂನ್ ಅದನ್ನು ಕಡೆಗಣಿಸಿದ್ದರು. ನ್ಯಾಯಾಲಯದ ಆದೇಶದ ಮೇರೆಗೆ ಅಧಿಕಾರಿಗಳು ಅವರ ಬಂಧನಕ್ಕೆ ಮನೆ ಬಳಿಗೆ ಹೋದಾಗ, ಬೆಂಬಲಿಗರು ಹೈಡ್ರಾಮ ಸೃಷ್ಟಿಸಿ ಬಂಧನಕ್ಕೆ ಅಡ್ಡಿಪಡಿಸಿದ್ದರು.
ಕೊನೆಗೆ, 2025ರ ಜನವರಿ 15ರಂದು ಬೆಳಗಿನ ಜಾವಕ್ಕೆ ಮುನ್ನ, ಭ್ರಷ್ಟಾಚಾರ ತನಿಖಾ ಕಚೇರಿಯ ನೂರಾರು ಪೊಲೀಸ್ ಮತ್ತು ತನಿಖಾಧಿಕಾರಿಗಳು ಮತ್ತೆ ಯೋನ್ ಅವರ ಮನೆಯಯನ್ನು ಸುತ್ತುವರೆದರು. ಕೆಲವರು ಹಿಂದಿನ ಭಾಗದಲ್ಲಿ ಕಾಂಪೌಂಡ್ ಗೋಡೆ ಹತ್ತಿ ಮುಖ್ಯ ಕಟ್ಟಡ ತಲುಪಿದರು. ಈ ವೇಳೆ ಭದ್ರತಾ ಸಿಬ್ಬಂದಿ ಅವರನ್ನು ತಡೆಯಲು ಮುಂದಾದರು. ಸುಮಾರು ಐದು ಗಂಟೆಗಳ ಕಾಲ ನಡೆದ ತಿಕ್ಕಾಟದ ನಂತರ, ಅಧಿಕಾರಿಗಳು ಯೋಲ್ ಅವರನ್ನು ಬಂಧಿಸಿಲಾಗಿದೆ ಎಂದು ಘೋಷಿಸಿದರು.
ಶುಕ್ರವಾರ ನ್ಯಾಯಾಲಯದ ತೀರ್ಪು ಹೊರ ಬೀಳುವ ಹೊತ್ತಿಗೆ ಯೂನ್ ಅವರ ಸಾವಿರಾರು ಬೆಂಬಲಿಗರು ಸಿಯೋಲ್‌ನ ಡೌನ್‌ಟೌನ್‌ನಲ್ಲಿ ಜಮಾಯಿಸಿದ್ದರು. ಸಂಭಾವ್ಯ ಘರ್ಷಣೆಗಳನ್ನು ತಡೆಗಟ್ಟಲು ಸರ್ಕಾರ ನೂರಾರು ಪೊಲೀಸ್ ಬಸ್‌ಗಳು, ಬ್ಯಾರಿಕೇಡ್‌ಗಳು ಮತ್ತು ಅಧಿಕಾರಿಗಳನ್ನು ನಿಯೋಜಿಸಿತ್ತು.
ಗಾಜಾದ ‘ವಿಶಾಲ ಪ್ರದೇಶಗಳ’ ವಶಕ್ಕೆ ಮಿಲಿಟರಿ ಕಾರ್ಯಾಚರಣೆ ವಿಸ್ತರಣೆ: ನಿವಾಸಿಗಳು ಹೊರಹೋಗಲು ಆದೇಶಿಸಿದ ಇಸ್ರೇಲ್


