ಧರ್ಮಸ್ಥಳದಲ್ಲಿ ನಡೆದಿದ್ದ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ನಡೆಸುವಂತೆ ಕೋರಿ ಸೌಜನ್ಯಾಳ ತಂದೆ, ಧರ್ಮಸ್ಥಳ ನಿವಾಸಿ ಚಂದಪ್ಪ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಇಂದು (ಆ.30) ವಜಾಗೊಳಿಸಿದೆ ಎಂದು ವರದಿಯಾಗಿದೆ.
ಇದರ ಜೊತೆಗೆ ಸೆಷನ್ಸ್ ಕೋರ್ಟ್ ತೀರ್ಪು ಪ್ರಶ್ನಿಸಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಮತ್ತು ಆರೋಪಿ ಸಂತೋಷ್ ರಾವ್ ಅಕ್ರಮ ಬಂಧನಕ್ಕೆ ಪರಿಹಾರ ಕೋರಿದ್ದ ಅರ್ಜಿ ಕೂಡಾ ವಜಾ ಆಗಿದೆ ಎಂದು ತಿಳಿದು ಬಂದಿದೆ.
ಮೂರೂ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್ ಹರೀಶ್ ಕುಮಾರ್ ಹಾಗೂ ನ್ಯಾ.ಜೆ.ಎಂ.ಖಾಜಿ ಅವರ ಹೈಕೋರ್ಟ್ ಪೀಠ ಇಂದು ಪ್ರಕಟಿಸಿದೆ.
2012ರ ಅ.9ರಂದು ವಿದ್ಯಾರ್ಥಿನಿ ಸೌಜನ್ಯಳನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿ, ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಠಾಣಾ ಪೊಲೀಸರು ಸಂತೋಷ್ ರಾವ್ ಎಂಬಾತನನ್ನು ಬಂಧಿಸಿದ್ದರು. ನಂತರ ಪ್ರಕರಣವನ್ನು ಸಿಐಡಿ ತನಿಖೆ, ಆ ಬಳಿಕ ಸಿಬಿಐಗೆ ವರ್ಗಾಯಿಸಲಾಗಿತ್ತು. ಸಿಬಿಐ ತನಿಖೆ ಪೂರ್ಣಗೊಳಿಸಿ ಸಂತೋಷ್ ರಾವ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು.
ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸಂತೋಷ್ ರಾವ್ ನಿರಪರಾಧಿ, ಆತನ ವಿರುದ್ಧ ಯಾವುದೇ ಸಾಕ್ಷ್ಯ ಇಲ್ಲ ಎಂದು 2023ರ ಜೂನ್ 16ರಂದು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಆರೋಪಿಯ ಪಾತ್ರವನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ. ಸೂಕ್ತ ಸಮಯದಲ್ಲಿ ತನಿಖೆ ನಡೆಸಿಲ್ಲ ಎಂದು ಹೇಳಿತ್ತು. ಹಾಗಾಗಿ, ಇಡೀ ತನಿಖೆ ನ್ಯಾಯೋಚಿತವಾಗಿ ನಡೆದಿಲ್ಲ ಎಂದು ಮರುತನಿಖೆಗೆ ಆಗ್ರಹಿಸಿ ಕೋರ್ಟ್ ಮೊರೆ ಹೋಗಲಾಗಿತ್ತು.
ಇದನ್ನೂ ಓದಿ : ಪೋಕ್ಸೋ ಪ್ರಕರಣ : ಯಡಿಯೂರಪ್ಪ ಅರ್ಜಿ ವಿಚಾರಣೆ ಸೆ.5ಕ್ಕೆ ಮುಂದೂಡಿಕೆ


