ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಸಾಗಿಸುವ ಹಡಗನ್ನು ಸ್ಪೇನ್ ಬಂದರಿನಲ್ಲಿ ನಿಲ್ಲಿಸಲು ಅನುಮತಿ ನಿರಾಕರಿಸಲಾಗಿದೆ ಎಂದು ಅಲ್ಲಿನ ವಿದೇಶಾಂಗ ಸಚಿವ ಜೋಸ್ ಮ್ಯಾನುಯೆಲ್ ಅಲ್ಬರೆಸ್ ಗುರುವಾರ ಹೇಳಿದ್ದಾರೆ.
“ಇದೇ ಮೊದಲ ಬಾರಿಗೆ ನಾವು ಇಸ್ರೇಲ್‌ಗೆ ತೆರಳುತ್ತಿದ್ದ ಹಡಗಿಗೆ ಅನುಮತಿ ನಿರಾಕರಿಸಿದ್ದೇವೆ. ಏಕೆಂದರೆ, ಸ್ಪ್ಯಾನಿಷ್ ಬಂದರಿನಲ್ಲಿ ನಿಲುಗಡೆ ಬಯಸಿದ್ದ ಇಸ್ರೇಲ್‌ಗೆ ತೆರಳುತ್ತಿದ್ದ ಹಡಗಿನಲ್ಲಿ ಇದೇ ಮೊದಲ ಬಾರಿಗೆ ನಾವು ಶಸ್ತ್ರಾಸ್ತ್ರ ಪತ್ತೆ ಹಚ್ಚಿದ್ದೇವೆ” ಎಂದು ಅಲ್ಬರೆಸ್ ತಿಳಿಸಿದ್ದಾರೆ.
“ಇಸ್ರೇಲ್‌ಗೆ ಶಸ್ತ್ರಾಸ್ತ್ರ ಹೊತ್ತೊಯ್ಯುವ ಎಲ್ಲಾ ಹಡಗುಗಳಿಗೆ ಸ್ಪ್ಯಾನಿಷ್ ಬಂದರಿನಲ್ಲಿ ಇದೇ ನಿಯಮ ಅನ್ವಯಿಸಲಿದೆ. ವಿದೇಶಾಂಗ ಸಚಿವಾಲಯ ಒಂದು ಸ್ಪಷ್ಟ ಕಾರಣಕ್ಕಾಗಿ ಅಂತಹ ಹಡಗುಗಳ ನಿಲುಗಡೆಗೆ ಅವಕಾಶ ನಿರಾಕರಿಸಿದೆ. ಮಧ್ಯಪ್ರಾಚ್ಯಕ್ಕೆ ಹೆಚ್ಚಿನ ಶಸ್ತ್ರಾಸ್ತ್ರಗಳ ಅಗತ್ಯವಿಲ್ಲ, ಅಲ್ಲಿ ಶಾಂತಿ ನೆಲೆಸಬೇಕು” ಎಂದು ಅಲ್ಬರೆಸ್ ಹೇಳಿದ್ದಾರೆ.
ಅಲ್ಬರೆಸ್ ಅವರು ಹಡಗಿನ ಬಗ್ಗೆ ವಿವರಗಳನ್ನು ನೀಡಿಲ್ಲ. ಆದರೆ, ಸ್ಪೇನ್‌ನ ಸಾರಿಗೆ ಸಚಿವ ಆಸ್ಕರ್ ಪುಯೆಂಟೆ ಅವರು “ಮೇ 21 ರಂದು ಕಾರ್ಟೇಜಿನಾದ ಆಗ್ನೇಯ ಬಂದರಿನಲ್ಲಿ ನಿಲುಗಡೆಗೆ ‘ಮೇರಿಯಾನ್ನೆ ಡ್ಯಾನಿಕಾ’ ಎಂಬ ಹಡಗು ಅನುಮತಿ ಕೋರಿತ್ತು ಎಂದು ತಿಳಿಸಿದ್ದಾರೆ.
ಡ್ಯಾನಿಶ್ ಧ್ವಜ ಹೊಂದಿದ್ದ ಈ ಹಡಗು ಭಾರತದ ಚೆನ್ನೈನಿಂದ ಇಸ್ರೇಲ್‌ನ ಹೈಫಾ ಬಂದರಿಗೆ 27 ಟನ್ ಸ್ಫೋಟಕ ವಸ್ತುಗಳನ್ನು ಸಾಗಿಸುತ್ತಿತ್ತು ಎಂದು ವರದಿಗಳು ಹೇಳಿವೆ.
ಪ್ರಧಾನ ಮಂತ್ರಿ ಪೆಡ್ರೊ ಸ್ಯಾಂಚೆಜ್ ಮತ್ತು ಅವರ ಸಮ್ಮಿಶ್ರ ಪಾಲುದಾರರಾದ ಎಡಪಂಥೀಯ ‘ಸುಮಾರ್ ಒಕ್ಕೂಟ’ ಶುಕ್ರವಾರ ಕಾರ್ಟೇಜಿನಾ ಬಂದರಿನಲ್ಲಿ ಶುಕ್ರವಾರ ನಿಲುಗಡೆ ಬಯಸಿದ್ದ ‘ಬೋರ್ಕಮ್’ ಎಂಬ ಮತ್ತೊಂದು ಹಡಗಿನ ಮೇಲೂ ಈ ಘೋಷಣೆ ಮಾಡಿದೆ.
‘ಬೋರ್ಕಮ್’ ಹಡಗು ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಒಯ್ಯುತ್ತಿದೆ ಎಂದು ಪ್ಯಾಲೆಸ್ತೀನ್ ಪರ ಗುಂಪುಗಳು ಹೇಳಿವೆ. ಈ ಹಡಗಿಗೂ ನಿಲುಗಡೆ ನಿಷೇಧಿಸಬೇಕು ಎಂದು ‘ಸುಮಾರ್’ ಒಕ್ಕೂಟ ಒತ್ತಾಯಿಸಿದೆ. ಆದರೆ, ಬೋರ್ಕಮ್ ಹಡಗು ಮಿಲಿಟರಿ ವಸ್ತುಗಳನ್ನು ಜೆಕ್ ಗಣರಾಜ್ಯಕ್ಕೆ ಸಾಗಿಸುತ್ತಿದೆ, ಇಸ್ರೇಲ್ ಅಲ್ಲ ಎಂದು ಸಾರಿಗೆ ಸಚಿವ ಆಸ್ಕರ್ ಪುಯೆಂಟೆ ಹೇಳಿದ್ದಾರೆ.
ಗಾಝಾ ಮೇಲಿನ ಇಸ್ರೇಲ್ ಆಕ್ರಮಣವನ್ನು ಕಟುವಾಗಿ ಖಂಡಿಸಿದ ಯುರೋಪಿನ ಪ್ರಮುಖ ದೇಶಗಳಲ್ಲಿ ಸ್ಪೇನ್ ಮೊದಲ ಮುಂಬದಿಯದಲ್ಲಿದೆ. ಪ್ಯಾಲೆಸ್ತೀನ್ ದೇಶದ ಹಕ್ಕುಗಳನ್ನು ಬೆಂಬಲಿಸಲು ಇತರ ಯುರೋಪಿಯನ್ ದೇಶಗಳಲ್ಲಿ ಸ್ಪೇನ್ ಕರೆ ನೀಡಿವೆ.
ಗಾಝಾ ಪಟ್ಟಿಯಲ್ಲಿ ಇಸ್ರೇಲ್ ಆಕ್ರಮಣ ಪ್ರಾರಂಭಿಸಿದ ನಂತರ ಸ್ಪೇನ್ ಇಸ್ರೇಲ್‌ಗೆ ಶಸ್ತ್ರಾಸ್ತ್ರ ಮಾರಾಟವನ್ನು ನಿಲ್ಲಿಸಿದೆ. 2023ರ ಅಕ್ಟೋಬರ್‌ನಿಂದ ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನಿರಂತರವಾಗಿ ನಡೆಸುತ್ತಿರುವ ಆಕ್ರಮಣದಲ್ಲಿ 35 ಸಾವಿರಕ್ಕೂ ಅಧಿಕ ಪ್ಯಾಲೆಸ್ತೀನಿಯರು ಬಲಿಯಾಗಿದ್ದಾರೆ. ಇಸ್ರೇಲ್ ಆಕ್ರಮಣ ಈಗಲೂ ಮುಂದುವರೆಯುತ್ತಿದೆ.
ತಂಬ್‌ನೈಲ್ ಚಿತ್ರ ಸಾಂದರ್ಭಿಕ
ಇದನ್ನೂ ಓದಿ : ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಅಧ್ಯಕ್ಷರಾಗಿ ಕಪಿಲ್ ಸಿಬಲ್ ಆಯ್ಕೆ


