ಇವತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್‍ರವರು ಒಂದು ಫಿರ್ಯಾದನ್ನು ಕೊಟ್ಟು ಹೋಗಿದ್ದಾರೆ. ಕೆಲವರ ಮೇಲೆ ವಿಶೇಷವಾಗಿ ರಮೇಶ್ ಜಾರಕಿಹೊಳಿ ಮೇಲೆ ಕ್ರಮ ಜರುಗಿಸುವಂತೆ ಈಗಾಗಲೇ ಹಳೆಯ ಅರ್ಜಿ ಜೊತೆ ಫಿರ್ಯಾದು ಕೊಟ್ಟಿದ್ದಾರೆ. ನಾನು ಅವರಿಗೆ ಎರಡು ದಿನ ಸಮಯ ಕೊಟ್ಟಿದ್ದೇನೆ. 11ನೇ ತಾರೀಖು ನೀವು ಬಂದು ನಿಮ್ಮ ವಾದ ಏನಿದೆ ಮಂಡಿಸಿ ಎಂದು ಹೇಳಿದ್ದೇನೆ. ನಂತರ ಅನರ್ಹತೆ ವಿಚಾರಕ್ಕೆ ದಿನಾಂಕ ನಿಗಧಿ ಮಾಡಿ ಅವರೆಲ್ಲರಿಗೂ ನೋಟಿಸ್ ಕೊಟ್ಟು ಕ್ರಮ ಕೈಗೊಳ್ಳಬೇಕು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಇನ್ನು ರಾಜೀನಾಮೆ ನೀಡಿರುವ ಶಾಸಕರ ವಿಚಾರಕ್ಕೆ ಬರುವುದಾದರೆ ಕ್ರಮಬದ್ಧವಾಗಿಲ್ಲದ 8 ಜನಕ್ಕೂ ನೋಟಿಸ್ ಕಳಿಸಿದ್ದೇನೆ. ಅವರು ಬೇಕಾದರೆ ಮತ್ತೊಮ್ಮೆ ಬಂದು ಕ್ರಮಬದ್ಧವಾಗಿ ರಾಜೀನಾಮೆ ಸಲ್ಲಿಸಬಹುದು. ಇನ್ನು ಕ್ರಮಬದ್ಧವಾಗಿರುವ ಐದು ಜನರಿಗೂ ನೇರವಾಗಿ ಬಂದು ತಮ್ಮ ಅಭಿಪ್ರಾಯ ಸೂಚಿಸುವಂತೆ ಪತ್ರ ಕಳಿಸಿದ್ದೇನೆ. ಅವರಿಗೆ ತಲುಪಿ ಕಮ್ಯುನಿಕೇಶನ್ ನಡೆಸಲು ಎರಡು ದಿನ ಸಮಯ ಬೇಕಿದೆ. ಹಾಗಾಗಿ 12ನೇ ತಾರೀಖು ಮೂರು ಜನ ಬಂದು ನನ್ನನ್ನು ಕಾಣಲು ಹೇಳಿದ್ದೇನೆ. ಇನ್ನು ಇಬ್ಬರು 13 ಮತ್ತು 14ರಂದು ಸಾರ್ವತ್ರಿಕ ರಜಾದಿನಗಳಿರುವುದರಿಂದ 15ರಂದು ನನ್ನನ್ನು ಭೇಟಿಯಾಗಲು ಸೂಚಿಸಿದ್ದೇನೆ ಎಂದು ಖಡಕ್ ಆಗಿ ಹೇಳಿದ್ದಾರೆ. ಅಂದರೆ 15ನೇ ತಾರೀಖಿನವರೆಗೂ ಸರ್ಕಾರಕ್ಕೆ ಅಪಾಯವಿಲ್ಲ ಎಂಬುದು ಸ್ಪಷ್ಟವಾಗಿದೆ.
6 ಸಾರ್ವಜನಿಕ ದೂರುಗಳು ಬಂದಿವೆ. ಅವರನ್ನು ನಾವು ಪರಿಗಣಿಸಬೇಕು
ಕಾರ್ಮಿಕರು, ಬಡವರು, ಬೀದಿ ವ್ಯಾಪಾರಿಗಳು ಮುಂತಾದವರು ನಾವು ದುಡಿದು ಜಿಎಸ್‍ಟಿ ಕಟ್ಟುತ್ತೇವೆ. ಈಗ ಮತ್ತೆ ಚುನಾವಣೆ ನಡೆದರೆ ನಮ್ಮ ಹಣವೇ ನಷ್ಟವಾಗುತ್ತದೆ, ಯಾವ ಪುರುಷಾರ್ಥಕ್ಕೆ ರಾಜೀನಾಮೆ ಕೊಡುತ್ತಿದ್ದಾರೆ? ಇವರು ಖುಷಿ ಬಂದಂಗೆ ರಾಜಿನಾಮೆ ಮತ್ತೆ ರಾಜಿನಾಮೆ ಕೊಟ್ಟರೆ ಎರೆಡೆರಡು ಚುನಾವಣೆ ನಡೆದರೆ ನಮ್ಮ ಹಣವೇ ಖರ್ಚಾಗುವುದು ತಾನೇ? ಇದು ನ್ಯಾಯನಾ? ಕೆಲವರು ಬರಗಾಲವಿದೆ, ರೈತರು ಬೀಕರ ಸ್ಥಿತಿಯಲ್ಲಿದ್ದಾರೆ ಇದರ ಬಗ್ಗೆ ಚರ್ಚೆಯಾಗುತ್ತಿಲ್ಲ ಎಂದು ದೂರು ಸಲ್ಲಿಸಿದ್ದಾರೆ. ಇನ್ನು ಕೆಲವರು ಸಂವಿಧಾನದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಹಾಗಾಗಿ ನಾನು ಪಬ್ಲಿಕ್ ಹಿಯರಿಂಗ್ (ಸಾರ್ವಜನಿಕ ವಿಚಾರಣೆ) ಇಟ್ಟುಕೊಳ್ಳುತ್ತೇನೆ, ಅವತ್ತು ದಯಮಾಡಿ ಬಂದು ಪಾಲ್ಗೊಳ್ಳಿ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.


