ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ (ಕೆಎಂವಿಎಸ್‌ಟಿಡಿಸಿಎಲ್) ಹಣ ದುರ್ಬಳಕೆ ಪ್ರಕರಣದ ತನಿಖೆ ಸಂದರ್ಭದಲ್ಲಿ ವಶಪಡಿಸಿಕೊಂಡಿರುವ 6.11 ಕೋಟಿ ರೂಪಾಯಿ ಹಣವನ್ನು ನಿಗಮಕ್ಕೆ ವರ್ಗಾವಣೆ ಮಾಡಲು ವಿಶೇಷ ನ್ಯಾಯಾಲಯ ವಿಶೇಷ ತನಿಖಾ ದಳಕ್ಕೆ (ಎಸ್‌ಐಟಿ) ಆದೇಶಿಸಿದೆ.
ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸೇರಿದಂತೆ ಏಳು ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯದ ನ್ಯಾಯಧೀಶರಾದ ಕೆ.ಎಂ.ರಾಧಾಕೃಷ ಅವರು, ಪ್ರಕರಣದ ತನಿಖಾಧಿಕಾರಿ ನಿಗಮದ ಖಾತೆಯನ್ನು ಪರಿಶೀಲನೆ ನಡೆಸಿ ಖಾತರಿ ಪಡಿಸಿಕೊಂಡು 6,11,72,400 ಕೋಟಿ ರೂ. ವರ್ಗಾವಣೆ ಮಾಡಲು ನಿರ್ದೇಶನ ನೀಡಿದ್ದಾರೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ವಾಲ್ಮೀಕಿ ನಿಗಮದ ಹಗರಣದಲ್ಲಿ ರಾಜಕಾರಣಿ, ಬ್ಯಾಂಕ್ ಅಧಿಕಾರಿಗಳು ಸೇರಿ 15 ಆರೋಪಿಗಳು ದಾಖಲೆಗಳನ್ನು ತಿರುಚಿ, ನಿಗಮದ ಖಾತೆಯನ್ನು ಎಂ.ಜಿ ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ವರ್ಗಾಯಿಸಿದ್ದರು.
ಬಳಿಕ ನಿಗಮದ 89.62 ಕೋಟಿ ರೂ.ವನ್ನು ಅಲ್ಲಿಗೆ ವರ್ಗಾಯಿಸಿ, ಬಳಿಕ ಹಣವನ್ನು ಹೈದರಾಬಾದ್ ಮೂಲದ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 18 ಖಾತೆಗಳಿಗೆ ವರ್ಗಾಯಿಸಲಾಗಿತ್ತು.ಅಲ್ಲಿಂದ 300-500 ವಿವಿಧ ಉದ್ಯಮಿಗಳು, ವ್ಯಾಪಾರಿಗಳ ಖಾತೆಗೆ ಹಣ ವರ್ಗಾವಣೆ ಮಾಡಿ, ನಗದು ಮಾಡಿಕೊಳ್ಳಲಾಗಿತ್ತು.
ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡ ಇದುವರೆಗೆ 79 ರಿಂದ 80 ಕೋಟಿ ರೂ. ಜಪ್ತಿ ಮಾಡಿದೆ. ಉಳಿದ ಹಣವನ್ನು ಜಪ್ತಿ ಮಾಡಬೇಕಿದೆ ಎಂದು ನ್ಯಾಯಾಲಯವು ಆದೇಶದಲ್ಲಿ ತಿಳಿಸಿದೆ.
ಕೃಪೆ : ಬಾರ್ &ಬೆಂಚ್
ಇದನ್ನೂ ಓದಿ : ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ | ಪ್ರಕರಣವನ್ನು ಸಿಐಡಿಗೆ ವಹಿಸಿದ ರಾಜ್ಯ ಸರ್ಕಾರ


