ನವದೆಹಲಿ: ಚುನಾವಣಾ ಆಯೋಗವು ಬಿಹಾರ ಹಾಗೂ ನಂತರ ಪಶ್ಚಿಮ ಬಂಗಾಳ ಸೇರಿದಂತೆ ಇತರ ರಾಜ್ಯಗಳಲ್ಲಿ ಜಾರಿಗೆ ತರುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (Special Intensive Revision) (SIR)ಯು ನಾಜಿ ಜರ್ಮನಿಯ ‘ಪೂರ್ವಜರ ಪಾಸ್‌ಪೋರ್ಟ್‌ಗಳ’ ವಿತರಣೆಯನ್ನು ಹೋಲುತ್ತದೆ ಎಂದು ತೃಣಮೂಲ ಕಾಂಗ್ರೆಸ್ ಶನಿವಾರ ಆರೋಪಿಸಿದೆ. ಈ ಪರಿಷ್ಕರಣೆಯು ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಬಿಜೆಪಿಯ ಹುನ್ನಾರವಾಗಿದೆ ಎಂದು ಟಿಎಂಸಿ ಹೇಳಿದೆ.
ಈ ವಿಷಯವನ್ನು ‘ಇಂಡಿಯಾ’ ಒಕ್ಕೂಟದ ಎಲ್ಲಾ ಪಕ್ಷಗಳು ಸಂಸತ್ತಿನ ಒಳಗೆ ಮತ್ತು ಹೊರಗೆ ಪ್ರಸ್ತಾಪಿಸಲಿವೆ ಎಂದು ಟಿಎಂಸಿ ತಿಳಿಸಿದೆ. ಅಷ್ಟೇ ಅಲ್ಲದೆ, ಎಲ್ಲಾ ಪಕ್ಷಗಳೊಂದಿಗೆ ಸಭೆ ನಡೆಸುವವರೆಗೂ ಚುನಾವಣಾ ಆಯೋಗವು ಈ ಪ್ರಕ್ರಿಯೆಯನ್ನು ನಿಲ್ಲಿಸಬೇಕು ಎಂದೂ ಅದು ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೃಣಮೂಲ ರಾಜ್ಯಸಭೆಯ ಸದನ ನಾಯಕ ಡೆರೆಕ್ ಓ’ಬ್ರಿಯಾನ್, ಚುನಾವಣಾ ಆಯೋಗವು ಸಾಂವಿಧಾನಿಕ ಸಂಸ್ಥೆಯಾಗಿದ್ದು, ತನ್ನ ಇಚ್ಛೆಯಂತೆ ವರ್ತಿಸುವ ತಾತ್ಕಾಲಿಕ ಘಟಕವಲ್ಲ ಎಂದು ಹೇಳಿದರು. “ಅದು ಸಂವಿಧಾನವನ್ನು ಅನುಸರಿಸಬೇಕು. ಇದು ನಿಜಕ್ಕೂ ಭಾರತೀಯ ಚುನಾವಣಾ ಆಯೋಗದ ಅಸಲೀಯತ್ತೇ? ನಾವು ಇದನ್ನು ಗೌರವದಿಂದಲೇ ಹೇಳುತ್ತಿದ್ದೇವೆ. ಅದು ಬಿಜೆಪಿಯ ಶಾಖಾ ಕಚೇರಿಯಾಗಬಾರದು” ಎಂದು ಅವರು ಟೀಕಿಸಿದರು.
ಬಿಹಾರದ ನಂತರ ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಲ್ಲಿ ಈ ಪರಿಷ್ಕರಣೆ ನಡೆಯಲಿದೆ. ಈಗಲೇ ಈ ಪ್ರಕ್ರಿಯೆಯನ್ನು ಏಕೆ ನಡೆಸಲಾಗುತ್ತಿದೆ. ಇದು ಈಗ ಏಕೆ ನಡೆಯುತ್ತಿದೆ ಎಂಬುದನ್ನು ವಿವರಿಸಲು ನಮ್ಮ ಬಳಿ ಪುರಾವೆಗಳಿವೆ. ಬಿಜೆಪಿಯ ಇತ್ತೀಚಿನ ಆಂತರಿಕ ಸಮೀಕ್ಷೆಯು ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ನಡೆದರೆ ಬಿಜೆಪಿಯು ಕೇವಲ 46-49 ಸ್ಥಾನಗಳನ್ನು ಪಡೆಯುತ್ತದೆ ಎಂದು ಹೇಳಿದೆ. ಇದನ್ನು ಬದಲಾಯಿಸುವ ಅಥವಾ ಬದಲಾಯಿಸಲು ಪ್ರಯತ್ನಿಸುವ ಹತಾಶೆಯಲ್ಲಿ ಅವರು ಇದನ್ನು ಮಾಡುತ್ತಿದ್ದಾರೆ ಎಂದು ಓ’ಬ್ರಿಯಾನ್ ಆರೋಪಿಸಿದರು.
ಈ SIR (ವಿಶೇಷ ತೀವ್ರ ಪರಿಷ್ಕರಣೆ) NRC (ರಾಷ್ಟ್ರೀಯ ನಾಗರಿಕರ ನೋಂದಣಿ) ಗೆ ಹಿಂಬಾಗಿಲಿನ ಪ್ರವೇಶವಾಗಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದು ಸರಿಯಾಗಿದೆ. ಇದು ದುಷ್ಟ ನಡೆ. 1935ರಲ್ಲಿ ನಾಜಿಗಳ ಆಡಳಿತದಲ್ಲಿ ಜನರು ಪೂರ್ವಜರ ಪಾಸ್‌ಗಳನ್ನು, ಅಂದರೆ ಗುರುತಿನ ಪುರಾವೆಗಳನ್ನು ಒದಗಿಸಬೇಕಾಗಿತ್ತು. ಇದು ನಾಜಿ ಪೂರ್ವಜರ ಪಾಸ್‌ನ ಹೊಸ ಆವೃತ್ತಿಯೇ? ನಾವು ಇಲ್ಲಿಂದ ಎಲ್ಲಿಗೆ ಹೋಗಬೇಕು?” ಎಂದು ಓ’ಬ್ರಿಯಾನ್ ಪ್ರಶ್ನಿಸಿದರು.
‘ಪೂರ್ವಜರ ಪಾಸ್‌ಪೋರ್ಟ್’ (Ahnenpass) ನಾಜಿ ಜರ್ಮನಿಯ ಆರ್ಯನ್ ಪ್ರಮಾಣಪತ್ರದ ಒಂದು ರೂಪವಾಗಿತ್ತು. ಇದು ಜರ್ಮನ್ ಜನರ ಆರ್ಯನ್ ವಂಶಾವಳಿಯನ್ನು ದಾಖಲಿಸಲು ಬಳಸಲಾಗುತ್ತಿತ್ತು.
ಬಿಜೆಪಿ ಕೇಂದ್ರ ಏಜೆನ್ಸಿಗಳನ್ನು ದುರುಪಯೋಗಪಡಿಸಿಕೊಳ್ಳುವ ‘ಹವ್ಯಾಸವನ್ನು’ ಹೊಂದಿದೆ. ಚುನಾವಣಾ ಆಯೋಗದ ಮೂಲಕವೂ ಬಿಜೆಪಿ ವಿರೋಧ ಪಕ್ಷಗಳನ್ನು ಗುರಿಯಾಗಿಸುತ್ತಿದೆ. ಜೂನ್ 26ರಂದು, ಚುನಾವಣಾ ಆಯೋಗವು ಬಿಹಾರ ವಿಧಾನಸಭಾ ಚುನಾವಣೆಗಳಿಗೆ ಮತದಾರರ ಪಟ್ಟಿ ಪರಿಷ್ಕರಣೆ ನಡೆಸುವುದಾಗಿ ಘೋಷಿಸಿತು, ಆದರೆ ನಿಜವಾದ ಗುರಿ ಬಂಗಾಳವಾಗಿದೆ ಎಂದು ತೃಣಮೂಲ ರಾಜ್ಯಸಭೆಯ ಉಪ ನಾಯಕಿ ಸಾಗರಿಕಾ ಘೋಷ್ ತಿಳಿಸಿದರು.
ನಾವೆಲ್ಲರೂ ನಮ್ಮ ಪೋಷಕರ ಜನನ ಪ್ರಮಾಣಪತ್ರಗಳನ್ನು ಇಟ್ಟುಕೊಂಡಿದ್ದೇವೆಯೇ? ಬಡವರು ಮತ್ತು ವಲಸೆ ಕಾರ್ಮಿಕರಿಗೆ ಪೋಷಕರ ಜನನ ಪ್ರಮಾಣಪತ್ರಗಳು ಹೇಗೆ ಸಿಗುತ್ತವೆ? ಈ ಮತದಾರರ ಪಟ್ಟಿ ಪರಿಷ್ಕರಣೆ ಒಂದು ದೊಡ್ಡ ಪಿತೂರಿ. ಇದು ಬಿಜೆಪಿಯ ತಂತ್ರ. ಈ ಮೂಲಕ ಅದು ತಮ್ಮ ಅಜೆಂಡಾ ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆ ಮೂಲಕ ಬಿಜೆಪಿ ಮತ್ತು ಚುನಾವಣಾ ಆಯೋಗವು ಭಾರತದ ನಾಗರಿಕರ ಮತದಾನದ ಹಕ್ಕುಗಳನ್ನು ಕಸಿದುಕೊಳ್ಳುತ್ತವೆ. ಇದನ್ನು ಈಗ ಏಕೆ ತರಲಾಗಿದೆ? ಎಂದು ಸಾಗರಿಕಾ ಪ್ರಶ್ನಿಸಿದರು.
ಬಿಜೆಪಿಗೆ ಬಂಗಾಳ ಚುನಾವಣೆಗಳನ್ನು ಕುಶಲತೆಯಿಂದ ನಿರ್ವಹಿಸುವುದು ಮತ್ತು ನಂತರ ಈ ಮಾದರಿಯನ್ನು ಭಾರತದಾದ್ಯಂತ ಪುನರಾವರ್ತಿಸುವುದು ಈ ಹೊಸ ಮತದಾರರ ಪಟ್ಟಿ ಪರಿಷ್ಕರಣೆಯ ಉದ್ದೇಶವಾಗಿದೆ. ಮತದಾರರನ್ನು ತೆಗೆದುಹಾಕಲು ಮತ್ತು ಅವರ ಪೌರತ್ವವನ್ನು ಕಸಿದುಕೊಳ್ಳಲು ಬಳಸಲಾಗುವ ಈ ಅಪಾಯಕಾರಿ ಮತ್ತು ದುಷ್ಟ ಕಾರ್ಯಕ್ರಮವನ್ನು ಚುನಾವಣಾ ಆಯೋಗವು ತಕ್ಷಣವೇ ಹಿಂತೆಗೆದುಕೊಳ್ಳಬೇಕು ಮತ್ತು ರದ್ದುಪಡಿಸಬೇಕು ಎಂದು ಹಿರಿಯ ರಾಜ್ಯಸಭಾ ಸಂಸದ ಸಾಕೇತ್ ಗೋಖಲೆ ಒತ್ತಾಯಿಸಿದರು.
‘ಭಾರತ-ಪಾಕ್ ಯುದ್ಧ ತಡೆದಿದ್ದು ನಾನೇ’: ಶ್ವೇತಭವನದಲ್ಲಿ ಪುನರುಚ್ಚರಿಸಿದ ಟ್ರಂಪ್


