HomeUncategorizedವರ್ಷಗಳು ಕಳೆದಂತೆ ಹೆಚ್ಚುತ್ತಲೇ ಇರುವ ಕಾರ್ಮಿಕರ ಸಂಕಷ್ಟಗಳು - ಹೆಚ್ಚು ಪ್ರಸ್ತುತವಾಗಿದೆ ಮೇ ದಿನ

ವರ್ಷಗಳು ಕಳೆದಂತೆ ಹೆಚ್ಚುತ್ತಲೇ ಇರುವ ಕಾರ್ಮಿಕರ ಸಂಕಷ್ಟಗಳು – ಹೆಚ್ಚು ಪ್ರಸ್ತುತವಾಗಿದೆ ಮೇ ದಿನ

- Advertisement -

’ವಿಶ್ವದ ಕಾರ್ಮಿಕರೇ ಒಂದಾಗಿ, ನಿಮ್ಮ ಸಂಕೋಲೆಗಳನ್ನಲ್ಲದೆ ನೀವು ಕಳೆದುಕೊಳ್ಳಲು ಬೇರೇನೂ ಇಲ್ಲ ಎಂದು ತತ್ವಜ್ಞಾನಿ ಕಾರ್ಲ್‌ಮಾರ್ಕ್ಸ್ ಕರೆ ನೀಡಿ ಶತಮಾನಗಳೇ ಕಳೆದುಹೋಗಿದೆ. ಕಾರ್ಮಿಕರ ಸಂಘಟನೆಯಲ್ಲಿ ನಂತರ ಹಲವು ಬೆಳವಣಿಗೆಗಳು ಆಗಿವೆ. ಇಷ್ಟಿದ್ದರೂ, ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಇನ್ನೂ ಸಂಘರ್ಷ ನಡೆಸುತ್ತಲೆ ಬಂದಿದ್ದಾರೆ. ಬಂಡವಾಳಶಾಹಿ ವ್ಯವಸ್ಥೆಯ ಅಭಿವೃದ್ಧಿ ಮಾದರಿ ಅಸಮಾನತೆಯನ್ನು ವೃದ್ಧಿಸುತ್ತಿದೆ ಎಂದು ಹಲವು ಖ್ಯಾತ ಅರ್ಥಶಾಸ್ತ್ರಜ್ಞರು ಎಚ್ಚರಿಸುತ್ತಲೇ ಇದ್ದಾರೆ. 21ನೇ ಶತಮಾನದಲ್ಲಿ ಕಾರ್ಮಿಕರು ಈ ಅಸಮಾನತೆಯ ಫಲಾನುಭವಿಗಳಾಗಿದ್ದು ಮತ್ತಷ್ಟು ಸಂಕಷ್ಟಕ್ಕೊಳಗಾಗಿದ್ದಾರೆ. ಜಗತ್ತಿನ ಸಂಪತ್ತಿನ ಸೃಷ್ಟಿಕರ್ತರಾದ ಕಾರ್ಮಿಕರ ಪರಿಸ್ಥಿತಿ ಕೊರೊನಾ ಸಾಂಕ್ರಾಮಿಕದಲ್ಲಿ ಮತ್ತಷ್ಟು ಬಿಗಡಾಯಿಸಿದೆ. ಈ ಹೊತ್ತಿನಲ್ಲಿ ಮತ್ತೊಂದು ಕಾರ್ಮಿಕರ ದಿನಾಚರಣೆ ಬಂದಿದೆ.

ಐತಿಹಾಸಿಕವಾಗಿ ಕಾರ್ಮಿಕರ ದಿನವು ಮೇ 4 1886ರಂದು ಅಮೆರಿಕದ ಚಿಕಾಗೋದ ’ಹೇ ಮಾರ್ಕೆಟ್ ಚೌಕ’ದಲ್ಲಿ ಹುತಾತ್ಮರಾದ ಕಾರ್ಮಿಕರ ನೆನಪಿಗಾಗಿ ಪ್ರಾರಂಭವಾಯಿತು. ಅಂದು ಎಂಟು ಗಂಟೆಯ ಕೆಲಸ, ವೇತನದ ಸಮಸ್ಯೆ ಸೇರಿದಂತೆ ಹಲವು ವಿಚಾರಗಳನ್ನು ಇಟ್ಟುಕೊಂಡು ನಡೆದ ಶಾಂತಿಯುತ ರ್‍ಯಾಲಿಯಲ್ಲಿ ಪೊಲೀಸರೊಂದಿಗೆ ನಡೆದ ಹಿಂಸಾತ್ಮಕ ಘರ್ಷಣೆಯ ಕಾರಣವಾಗಿ 11 ಜನರು ಮೃತಪಟ್ಟಿದ್ದರು. ಈ ಘಟನೆಯೆ ಮುಂದೆ ಮೇ 1ರ ಕಾರ್ಮಿಕರ ದಿನಾಚರಣೆಗೆ ಮುನ್ನುಡಿ ಬರೆಯಿತು.

1848ರಲ್ಲೇ ಕಾರ್ಲ್‌ಮಾರ್ಕ್ಸ್ ಮತ್ತು ಎಂಗಲ್ಸ್ ಬರೆದ ಕಮ್ಯುನಿಸ್ಟ್ ಪ್ರಣಾಳಿಕೆಯು ಕಾರ್ಮಿಕರ ಮೇಲೆ ದೊಡ್ಡ ಪ್ರಭಾವ ಬೀರಿತ್ತು. ಇದು ಕಾರ್ಮಿಕರ ಹಕ್ಕಗಳ ಬಗ್ಗೆ ಕಾರ್ಮಿಕರನ್ನು ಎಚ್ಚರಿಸುತ್ತಲೆ ಬಂದಿತ್ತು. ೧೮೮೯ರಲ್ಲಿ ಸಮಾಜವಾದಿ ಮತ್ತು ಕಾರ್ಮಿಕ ಪಕ್ಷಗಳು ಒಂದಾಗಿ ’ಸೆಕೆಂಡ್ ಇಂಟರ್ನ್ಯಾಷನಲ್ ಸಂಘಟನೆಯನ್ನು ಕಟ್ಟಿಕೊಂಡವು. ಈ ಸಂಘಟನೆಯೇ ಮೇ 1ಅನ್ನು ಅಂತಾರಾಷ್ಟ್ರೀಯ ಕಾರ್ಮಿಕರ ದಿನ ಮತ್ತು ಮಾರ್ಚ್ 8ಅನ್ನು ಅಂತಾರಾಷ್ಟ್ರೀಯ ಮಹಿಳಾ ದಿನ ಎಂದು ಘೋಷಿಸಿತು.

ಭಾರತದಲ್ಲಿ ಹಿಂದೂಸ್ತಾನ್ ಲೇಬರ್ ಕಿಸಾನ್ ಪಾರ್ಟಿ ಪ್ರಾರಂಭವಾದ ನಂತರ 1923ರ ಮೇ 1ರಂದು ಮೊದಲ ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ (ಮೇ ದಿನ) ಆಚರಿಸಲಾಯಿತು. ಬ್ರಿಟಿಷ್ ಆಡಳಿತದ ಮದ್ರಾಸ್ ಪ್ರೆಸಿಡೆನ್ಸಿಯ ಟ್ರಿಪ್ಲಿಕನ್ ಬೀಚ್ ಮತ್ತು ಮದ್ರಾಸ್ ಹೈಕೋರ್ಟ್ ಎದುರಿನ ಬೀಚಿನಲ್ಲಿ ಈ ಸಭೆಗಳು ನಡೆದವು. ಹಿಂದುಳಿದ ವರ್ಗಗಳ ಹಕ್ಕುಗಳ ಮತ್ತು ಸ್ವಾಭಿಮಾನಿ ಆಂದೋಲನದ ಹೋರಾಟಗಾರರಾದ ಸಿಂಗರವೇಲು ಚೆಟ್ಟಿಯಾರ್ ಈ ಸಭೆಗಳ ನೇತೃತ್ವ ವಹಿಸಿದ್ದರು. ಅಂದಿನ ಸಭೆಯಲ್ಲಿ ಕಾರ್ಮಿಕ ದಿನವನ್ನು ರಾಷ್ಟ್ರೀಯ ರಜಾದಿನವನ್ನಾಗಿ ಸರ್ಕಾರ ಘೋಷಿಸಬೇಕು ಎಂಬ ನಿರ್ಣಯವನ್ನು ಕೈಗೊಳ್ಳಲಾಯಿತು.
ಕೊರೊನಾ ಕಾಲದಲ್ಲಿ ಮತ್ತೊಂದು ಕಾರ್ಮಿಕ ದಿನಾಚರಣೆ ಬರುತ್ತಿದೆ. ಕಳೆದ ವರ್ಷ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಒಕ್ಕೂಟ ಸರ್ಕಾರವು ಯಾವುದೆ ಮುನ್ಸೂಚನೆ ಇಲ್ಲದೆ ಹೇರಿದ್ದ ಲಾಕ್‌ಡೌನ್‌ನಿಂದಾಗಿ ದೇಶವು ಹಿಂದೆಂದೂ ಕಂಡರಿಯದ ಕಾರ್ಮಿಕರ ಮಹಾವಲಸೆಗೆ ಸಾಕ್ಷಿಯಾಯಿತು. ಹಲವಾರು ಕಾರ್ಮಿಕರು ರಸ್ತೆಯಲ್ಲೇ ಅಸುನೀಗಿದ್ದರು. ಹಸಿವು ಕಾರ್ಮಿಕರ ಪ್ರಾಣ ಹಿಂಡಿತು.

ಈಗ ಮತ್ತೊಂದು ಅಂತಾರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯ ಸಮಯದಲ್ಲಿ ಕಾರ್ಮಿಕರ ಸ್ಥಿತಿಯನ್ನು ಪ್ರಾತಿನಿಧಿಕವಾಗಿ ಅವಲೋಕಿಸಲು ಹಲವು ವಲಯಗಳ ಕಾರ್ಮಿಕರನ್ನು, ಕಾರ್ಮಿಕ ಮುಖಂಡರನ್ನು ನ್ಯಾಯಪಥ ಸಂದರ್ಶಿಸಿದೆ.

“ರಾಜ್ಯದಲ್ಲಿ ಈಗ 15 ದಿನಗಳ ಮತ್ತೊಂದು ಲಾಕ್‌ಡೌನ್ ಘೋಷಿಸಲಾಗಿದೆ. ರಾಜ್ಯ ಸರ್ಕಾರವು ಲಾಕ್‌ಡೌನ್ ಹೇರಿ ಸುಮ್ಮನಿರುತ್ತದೆ. ಇದರಿಂದ ತೊಂದರೆಗೊಳಗಾಗುವ ಕಾರ್ಮಿಕರ ಆರ್ಥಿಕ ಪರಿಸ್ಥಿತಿಯ ಬಗ್ಗೆ, ಅವರಿಗೆ ಊಟದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಗಾರ್ಮೆಂಟ್ ಕಾರ್ಖಾನೆಯನ್ನು ಬಿಟ್ಟು ಎಲ್ಲಾ ಕಾರ್ಖಾನೆಗಳು ತೆರೆದಿರುತ್ತವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಸಾರ್ವಜನಿಕ ಸಾರಿಗೆಗಳು ಇರುವುದಿಲ್ಲ. ಕಾರ್ಮಿಕರು ತಮ್ಮ ಕೆಲಸಗಳಿಗೆ ತೆರಳುವುದು ಹೇಗೆ? ಬೆಂಗಳೂರು ಒಂದರಲ್ಲೇ ಏಳು ಲಕ್ಷ ಗಾರ್ಮೆಂಟ್ ಕಾರ್ಮಿಕರಿದ್ದಾರೆ, ಅವರೆಲ್ಲಾ ತಮ್ಮ ಊಟಕ್ಕೆ ಏನು ಮಾಡಬೇಕು?” ಎಂದು ಕಾರ್ಮಿಕ ಸಂಘಟನೆಯಾದ ಸಿಐಟಿಯು ಪ್ರಧಾನ ಕಾರ್ಯದರ್ಶಿ ಕೆ. ಬಸವರಾಜ್ ಅವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

“ಕೊರೊನಾ ಸಮಯದಲ್ಲಿ ಎಲ್ಲರೂ ತಮ್ಮ ಊಟಕ್ಕೆ ಕಷ್ಟ ಪಡುತ್ತಿದ್ದರೆ ಭಾರತದ ಶ್ರೀಮಂತ ವ್ಯಕ್ತಿಯಾದ ಅಂಬಾನಿಯ ಸಂಪತ್ತು ಹೆಚ್ಚಳಗೊಂಡಿದೆ. ಕಾರ್ಮಿಕರು ತಮ್ಮ ಶತಮಾನಗಳ ಹೋರಾಟ ಹಾಗೂ ತ್ಯಾಗಗಳಿಂದ ಗಳಿಸಿದ ಎಂಟು ಗಂಟೆಯ ಕೆಲಸದ ಹಕ್ಕನ್ನು ಸರ್ಕಾರವು ಕೊರೊನಾ ಹೆಸರಲ್ಲಿ ಮೊಟಕುಗೊಳಿಸಿರುವುದೂ ಇದಕ್ಕೆ ಕಾರಣ” ಎನ್ನುತ್ತಾರೆ ಕೆ. ಬಸವರಾಜ್.

ಕೊರೊನಾದಿಂದ ಹಿನ್ನಡೆ ಅನುಭವಿಸಿರುವ ಆರ್ಥಿಕತೆಯ ವೇಗ ಹೆಚ್ಚಿಸಲು ಈ ಬದಲಾವಣೆ ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಕಾರ್ಮಿಕರ ಬವಣೆಗಳು ಈ ಎರಡನೇ ಲಾಕ್‌ಡೌನ್‌ನಲ್ಲಿ ಇನ್ನೂ ಉಲ್ಬಣಗೊಳ್ಳುವ ಲಕ್ಷಣಗಳಿವೆ. ಕಳೆದ ಬಾರಿಯ ಲಾಕ್‌ಡೌನ್‌ನಿಂದಾದ ಹೊಡೆತದಿಂದಲೇ ಇನ್ನೂ ಅವರು ಸುಧಾರಿಸಿಕೊಂಡಿಲ್ಲ. ಆದರೆ ಈ ದೇಶದ ಶ್ರೀಮಂತರಾದ ಅಂಬಾನಿ ಅದಾನಿಗಳ ಸಂಪತ್ತು ಹೆಚ್ಚಾಗಿದೆ ಎಂಬ ವರದಿಗಳು ಇವೆ. ಅಂದರೆ ಈ ಬಂಡವಾಳಶಾಹಿ ವ್ಯವಸ್ಥೆಯ ಆರ್ಥಿಕತೆಯಲ್ಲಿ ಬೆರಳೆಣಿಕೆಯ ಜನರ ಸಂಪತ್ತಿನ ವೃದ್ಧಿಗಾಗಿ ಕಾರ್ಮಿಕರ ಹಕ್ಕನ್ನು ಮೊಟಕುಗೊಳಿಸಿ ಅವರನ್ನು ಶೋಷಿಸಿ ದುಡಿಸಲಾಗುತ್ತಿದೆ ಎಂಬುದನ್ನು ತಿಳಿಯಲು ಕಷ್ಟವೇನಲ್ಲ.

ಇಷ್ಟೇ ಅಲ್ಲದೆ ಬಹುತೇಕ ಎಲ್ಲಾ ಕಾರ್ಖಾನೆಗಳಲ್ಲಿ ಕಾಯಂ ಕಾರ್ಮಿಕರನ್ನು ಕಿತ್ತು ಹಾಕಿ ಕಡಿಮೆ ಕೂಲಿಗೆ ಕಾಂಟ್ರಾಕ್ಟ್ ಆಧಾರದಲ್ಲಿ ಕಾರ್ಮಿಕರನ್ನು ತರಲಾಗುತ್ತದೆ. ಈ ಮಾದರಿಯಲ್ಲಿ ಕಾರ್ಮಿಕರು ಅವರು ದುಡಿಯುವವರೆಗೂ ಅವರನ್ನು ಹಿಂಡಿ ಹಿಪ್ಪೆ ಮಾಡಿ, ನಂತರ ಒಂದು ದಿನ ಎಫಿಷಿಯನ್ಸಿ ಕಡಿಮೆಯಾಯಿತು ಎಂಬ ನೆಪವೊಡ್ಡಿ ಅವರಿಗೆ ಯಾವುದೆ ಮುನ್ಸೂಚನೆ ನೀಡದೆ ಕಿತ್ತುಹಾಕಲಾಗುತ್ತದೆ. ಈ ಮಾದರಿಯಲ್ಲಿ ಕಾರ್ಮಿಕರಿಗೆ ಯಾವುದೆ ಹೆಚ್ಚುವರಿ ಸೌಲಭ್ಯ ಸವಲತ್ತುಗಳನ್ನು ನೀಡಲಾಗುವುದಿಲ್ಲ. ಕಂಪೆನಿಗಳು ಅವರ ಲಾಭವನ್ನಷ್ಟೇ ನೋಡುತ್ತದೆ, ಸರ್ಕಾರಗಳು ಇಂತಹ ಸಿರಿವಂತ ಕಂಪೆನಿಗಳ ಮಾತನ್ನು ಮಾತ್ರ ಕೇಳಿಸಿಕೊಳ್ಳುತ್ತದೆ. ಕಂಪನಿಗಳ ಪರವಾಗಿ ನಿಲ್ಲುತ್ತವೆ. ಇತ್ತೀಚೆಗೆ ದೇಶದ ಗಮನ ಸೆಳೆದ ಟೊಯೊಟೊ ಕಾರ್ಮಿಕರ ಸಮಸ್ಯೆ ಕೂಡಾ ಇದಕ್ಕೆ ದೊಡ್ಡ ನಿದರ್ಶನ.

“ನನಗೆ 35 ವರ್ಷ, ಟೊಯೊಟಾ ಸೇರಿ 13 ವರ್ಷಗಳಾಯಿತು. ಇಲ್ಲಿ ಸೆಕೆಂಡುಗಳ ಲೆಕ್ಕದಲ್ಲಿ ಕೆಲಸ ಮಾಡಬೇಕು. ಮೂತ್ರ ವಿಸರ್ಜನೆಗೆ ಹೋಗಿ ಬಂದಾಗ ತುಸು ತಡವಾದರೂ ನಮ್ಮ ಸಂಬಳದಿಂದ ಕಡಿತ ಮಾಡುತ್ತಾರೆ. ಈ ಹದಿಮೂರು ವರ್ಷಗಳಲ್ಲಿ ಕಂಪೆನಿಯು ನನ್ನನ್ನು ಶಕ್ತಿ ಮೀರಿ ದುಡಿಸಿಕೊಂಡದ್ದರ ಪರಿಣಾಮವಾಗಿ ನನ್ನ ಬೆನ್ನುಮೂಳೆ ಸವೆದುಹೋಗಿದೆ. ಈಗ ಸಣ್ಣ ಪುಟ್ಟ ತಪ್ಪುಗಳಿಗೂ ನನ್ನನ್ನು ಗುರಿಯಾಗಿಸುತ್ತಾರೆ. ಈಗ ಕಂಪೆನಿಯು ನನಗೆ ಸ್ವಯಂ ನಿವೃತ್ತಿ ಪಡೆದುಕೊಳ್ಳಲು ಒತ್ತಡ ಹೇರುತ್ತಿದೆ. ಹೀಗೆ ಮಾಡಿ ಕೆಲವು ವರ್ಷಗಳಲ್ಲೇ ಕಾಯಂ ಕೆಲಸಗಳನ್ನೆಲ್ಲಾ ಕಿತ್ತು ಹಾಕಿ ಕಾಂಟ್ರಾಕ್ಟ್ ಆಧಾರದಲ್ಲಿ ಕೆಲಸಗಾರರನ್ನು ನೇಮಿಸುವ ಧಾವಂತದಲ್ಲಿ ಕಂಪೆನಿಯಿದೆ” ಎಂದು ಹೆಸರು ಹೇಳಲಿಚ್ಛಸದ ಕಾರ್ಮಿಕರೊಬ್ಬರು ಹೇಳುತ್ತಾರೆ.

ಟೊಯೊಟಾ ಕಿರ್ಲೋಸ್ಕರ್ ಆಡಳಿತ ಮಂಡಳಿಯ ನೀತಿಗಳನ್ನು ಪ್ರಶ್ನಿಸಿದ್ದಕ್ಕಾಗಿ, ಕಾರ್ಮಿಕರು ಮುಷ್ಕರ ಹೂಡಿದ್ದಾರೆ ಎಂದು ಹೇಳಿ ಲಾಕ್‌ಔಟ್ ಮಾಡಿತ್ತು. ಇದರ ವಿರುದ್ಧ ಸುಮಾರು ನಾಲ್ಕು ತಿಂಗಳು ಹೋರಾಟ ನಡೆಸಿದ್ದ ಕಾರ್ಮಿಕರು ಕಂಪೆನಿಯನ್ನು ಮಣಿಸುವಲ್ಲಿ ಅಲ್ಪ ಮಟ್ಟದ ಗೆಲುವನ್ನು ಕೂಡಾ ಪಡೆದಿದ್ದರು. ಆದರೆ ಕಾರ್ಮಿಕ ಸಂಘಟನೆಯಲ್ಲಿ ಸಕ್ರಿಯವಾಗಿದ್ದು, ಹೋರಾಟವನ್ನು ಮುನ್ನಡೆಸಿದ ಸುಮಾರು ೭೫ ಮಂದಿಯನ್ನು ಕಂಪೆನಿ ಇನ್ನೂ ಕೆಲಸಕ್ಕೆ ಸೇರಿಸಿಕೊಂಡಿಲ್ಲ, ಅವರಿನ್ನೂ ಕಂಪೆನಿಯ ಹೊರಗೆ ಹೋರಾಟನಿರತರಾಗಿದ್ದಾರೆ. ಆಪಲ್ ಸಂಸ್ಥೆಯ ಐಫೋನ್ ನಿರ್ಮಾಣ ಸಂಸ್ಥೆಯಾದ ವಿಸ್ಟ್ರಾನ್‌ನಲ್ಲಿ ನಡೆದ ಘರ್ಷಣೆ ಗೊಂದಲಕ್ಕೂ, ಆ ಸಂಸ್ಥೆ ಕಾರ್ಮಿಕರ ಮೇಲೆ ನಡೆಸುತ್ತಿದ್ದ ಶೋಷಣೆಯೇ ಕಾರಣವಾಗಿತ್ತು.

ಟೊಯೊಟಾ ಕಂಪೆನಿಯ ಹೋರಾಟವಾಗಲಿ, ವಿಸ್ಟ್ರಾನ್ ಕಂಪೆನಿಯ ಘರ್ಷಣೆಯ ಪ್ರಕರಣವಾಗಲೀ ಆಳುವ ಸರ್ಕಾರ ಕಾರ್ಮಿಕರ ಜೊತೆಗೆ ನಿಲ್ಲದೆ ಕಂಪೆನಿಗಳ ಪರವಾಗಿಯೆ ನಿಂತದ್ದು ಕಾರ್ಮಿಕರಿಗೆ ಗಾಯದ ಮೇಲೆ ಉಪ್ಪು ಸವರಿದಂತಹ ಅನುಭವ.

“ಕಾರ್ಮಿಕ ವರ್ಗದ ಸಂಘಟಿತ ಹೋರಾಟವು ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಕಾರ್ಮಿಕರ ಪರವಾಗಿ ಹಲವಾರು ಕಾನೂನುಗಳು ಬಂದಿದೆ. ಅದೇ ಕಾರ್ಮಿಕ ವರ್ಗ ತಮ್ಮ ರಾಜಕೀಯ ಹಿನ್ನಡೆ ಅನುಭವಿಸಿದಾಗ, ಬಂಡವಾಳಶಾಹಿಗಳು ಅಧಿಕಾರಕ್ಕೆ ಬಂದು ತಮ್ಮ ಪರವಾದ ಮತ್ತು ಕಾರ್ಮಿಕ ವಿರೋಧಿ ಕಾನೂನನ್ನು ತರುತ್ತಾರೆ. ಪ್ರಸ್ತುತ ಶತಮಾನದಲ್ಲಿ ವಿಶ್ವದಾದ್ಯಂತ ಕಾರ್ಮಿಕ ವರ್ಗದ ರಾಜಕೀಯ ದುರ್ಬಲಗೊಂಡಿದೆ. ಆದರೆ ಸಮಾಧಾನದ ವಿಷಯವೇನೆಂದರೆ ಇದು ಶಾಶ್ವತವಾದ ಪರಿಸ್ಥಿತಿಯಲ್ಲ. ದೇಶದಲ್ಲಿ ಕಾರ್ಮಿಕರ ಪರವಾಗಿರುವ ಕಾನೂನುಗಳನ್ನು ತರುವುದಕ್ಕೆ ಸುಮಾರು ನೂರು ವರ್ಷಗಳ ಕಾರ್ಮಿಕ ಚಳವಳಿಗಳೇ ಕಾರಣ. ಈಗ ಆ ಕಾನೂನುಗಳನ್ನು ಕಿತ್ತೊಗೆಯುತ್ತಾರೆ ಎಂದರೆ ಮತ್ತೆ ಹೋರಾಟಗಳು ವಾಪಸ್ಸು ಬರುತ್ತದೆ. ಇದು ಇನ್ನೊಂದು ಹೊಸ ಪರಿಸ್ಥಿತಿಗೆ ಕಾರಣವಾಗುತ್ತದೆ. ಇದು ನಿರಂತರವಾದ ಸಂಘರ್ಷ. ಕಾರ್ಮಿಕ ವರ್ಗಕ್ಕೆ ಹಿನ್ನಡೆ ಅನುಭವಿಸುತ್ತದೆಯೆ ವಿನಃ ಸೋತಿಲ್ಲ ಎಂದು ಕಾರ್ಮಿಕ ಸಂಘಟನೆಯಾದ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಹೇಳುತ್ತಾರೆ.

“ಆದ್ದರಿಂದ 133 ವರ್ಷಗಳ ನಂತರವೂ ಮೇ ದಿನಾಚರಣೆಗೆ ಬಹಳ ಮಹತ್ವವಿದೆ. ಪ್ರಸ್ತುತ ಐಟಿ ಸೆಕ್ಟರ್ ವಿಭಾಗದಲ್ಲಿ ಎಂಟು ಗಂಟೆಯ ಕೆಲಸ ಇಲ್ಲವೆ ಇಲ್ಲ. ಈ ಕಂಪೆನಿಗಳು ಸರ್ಕಾರದ ಮೇಲೆ ಒತ್ತಡ ತಂದು ತಮಗೆ ಬೇಕಾದ ಕಾನೂನನ್ನು ತರುತ್ತಿವೆ. ಆದರೆ ಈಗ ಐಟಿ ವಿಭಾಗದಲ್ಲಿ ಕೂಡಾ ಕಾರ್ಮಿಕ ಸಂಘಗಳು ಪ್ರಾರಂಭವಾಗಿದೆ. ಐತಿಹಾಸಿಕವಾಗಿ ಕೂಡಾ ಕಾರ್ಮಿಕ ಚಳವಳಿಗಳು ಬೆಳೆದಿರುವುದು ಹೀಗೆಯೇ. ಮೊದಲಿಗೆ ಕೈಗಾರಿಕೆಗಳು ಬಲಿಷ್ಠವಾಗುತ್ತದೆ, ನಂತರ ಕಾರ್ಮಿಕರು ತಮ್ಮ ಹಕ್ಕುಗಳಿಗಾಗಿ ಒಗ್ಗಟ್ಟಾಗಿ ಹೋರಾಟ ಮಾಡುತ್ತಾರೆ” ಎಂದು ವಿಜಯ್ ಭಾಸ್ಕರ್ ಹೇಳುತ್ತಾರೆ.

ದೇಶದಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೂ ಕಾರ್ಮಿಕ ಸಂಘಟನೆಗಳು ಮತ್ತು ಚಳವಳಿಗಳು ಬೆಂಬಲ ನೀಡಿವೆ. ಕೊರೊನಾ ಬಿಕ್ಕಟ್ಟಿನಲ್ಲಿ ಕಾರ್ಮಿಕರ ಕಷ್ಟಗಳನ್ನು ಸರ್ಕಾರ ಕೇಳುತ್ತಿಲ್ಲ. ಸರ್ಕಾರದ ಕೆಟ್ಟ ನೀತಿಗಳಿಂದ ಸಾಂಕ್ರಾಮಿಕದ ಸಮಯದಲ್ಲಿ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗುತ್ತಲೆ ಇದ್ದಾರೆ. ಸಾಮಾನ್ಯವಾಗಿ ಎಲ್ಲಾ ವಿಭಾಗಗಳ ಕಾರ್ಮಿಕರಲ್ಲೂ ಅಸಮಾಧಾನ ಹೊಗೆಯಾಡುತ್ತಲೆ ಇದೆ. ಕಳೆದ ನವೆಂಬರ್‌ನಲ್ಲಿ ನಡೆದ ಸಾರ್ವತ್ರಿಕ ಮುಷ್ಕರದಲ್ಲಿ ದೇಶದ ಸುಮಾರು 20 ಕೋಟಿ ಜನರು ಭಾಗವಹಿಸಿದ್ದರು. ಅದರ ಹಿಂದಿನ ವರ್ಷದಲ್ಲಿ 12 ಕೋಟಿ ಜನರಷ್ಟೇ ಭಾಗವಹಿಸಿದ್ದರು. ಅಂದರೆ ಕಾರ್ಮಿಕ ಚಳವಳಿಗಳು ಜೀವಂತವಾಗಿದೆ ಮತ್ತು ಕಾರ್ಮಿಕರಿಗೆ ವ್ಯವಸ್ಥೆಯ ಮೇಲೆ ಅಸಮಾಧಾನ ಇನ್ನೂ ಹೆಚ್ಚಾಗುತ್ತಲೇ ಇದೆ.

ಕೊರೊನಾ ಕಾಲದಲ್ಲಿ ಸರ್ಕಾರಗಳು ಹೇರುವ ನೀತಿನಿಯಮಗಳಿಗೆ ಮೊದಲ ಬಲಿಪಶುಗಳು ಕೂಡಾ ಕಾರ್ಮಿಕರೇ ಆಗಿರುವುದರಿಂದ, ಕಾರ್ಮಿಕರು ಹೋರಾಟದ ಇತಿಹಾಸವನ್ನು ನೆನಪಿಸಿಕೊಳ್ಳುವ ಅಗತ್ಯತೆ ಹಿಂದೆಂದಿಗಿಂತಲೂ ಈಗ ಹೆಚ್ಚಿದೆ. ಕಾರ್ಲ್‌ಮಾರ್ಕ್ಸ್ ಹೇಳಿದಂತೆ, ಕಾರ್ಮಿಕರು ಒಗ್ಗಟ್ಟಾದರೆ, ಕಳೆದುಕೊಳ್ಳುವುದು ಸಂಕೋಲೆಗಳಲ್ಲದೆ ಬೇರೇನು ಇಲ್ಲ.

+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಒಕ್ಕೂಟ ಸರ್ಕಾರ ತಿರಸ್ಕರಿಸಿದ ಸುಭಾಷ್ ಚಂದ್ರ ಬೋಸ್ ಸ್ತಬ್ಧಚಿತ್ರ ಕೊಲ್ಕತ್ತಾದಲ್ಲಿ ಪ್ರದರ್ಶನ: ಬಂಗಾಳ ಸರ್ಕಾರ

0
ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್‌ಗೆ ಪಶ್ಚಿಮ ಬಂಗಾಳದ ಸ್ತಬ್ಧಚಿತ್ರವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ವಿವಾದದ ನಡುವೆ, ಕೋಲ್ಕತ್ತಾದಲ್ಲಿ ನಡೆಯುವ ಗಣರಾಜ್ಯೋತ್ಸವದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸ್ತಬ್ಧಚಿತ್ರ ಪ್ರದರ್ಶಿಸಲು ರಾಜ್ಯ ಸರ್ಕಾರ...
Wordpress Social Share Plugin powered by Ultimatelysocial