ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಎಡಪಂಥೀಯ ನಾಯಕ ಅನುರ ಕುಮಾರ ದಿಸ್ಸನಾಯಕೆ ಮಂಗಳವಾರ (ಸೆ.24) ದೇಶದ ಸಂಸತ್ತನ್ನು ವಿಸರ್ಜಿಸಿದ್ದಾರೆ ಮತ್ತು ಒಂದು ತಿಂಗಳೊಳಗೆ ಕ್ಷಿಪ್ರ ಚುನಾವಣೆಗೆ ಕರೆ ನೀಡಿದ್ದಾರೆ.
ಈ ಮೂಲಕ ರಾಜಕೀಯ ಕುಟುಂಬಗಳ ಕೈಯಲ್ಲಿದ್ದ ಶ್ರೀಲಂಕಾದ ದಶಕಗಳ ಹಳೆಯ ಆಡಳಿತದಲ್ಲಿ ಬದಲಾವಣೆಯನ್ನು ತರುವ ತನ್ನ ಚುನಾವಣಾ ಭರವಸೆಯನ್ನು ಈಡೇರಿಸುವಲ್ಲಿ ದಿಸ್ಸನಾಯಕೆ ಮುಂದಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಸಂಸತ್ ವಿಸರ್ಜನೆ ಮಂಗಳವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ. ಮುಂದಿನ ನವೆಂಬರ್ 14 ರಂದು ಹೊಸದಾಗಿ ಚುನಾವಣೆ ನಡೆಯಲಿದೆ ಎಂದು ವಿಶೇಷ ಗೆಜೆಟ್ ಅಧಿಸೂಚನೆ ತಿಳಿಸಿದೆ. ಕೊನೆಯದಾಗಿ 2020ರಲ್ಲಿ ಶ್ರೀಲಂಕಾ ಸಂಸತ್‌ಗೆ ಚುನಾವಣೆ ನಡೆದಿತ್ತು. ಸರ್ಕಾರದ ಅವಧಿ 2025ರ ಆಗಸ್ಟ್‌ವರೆಗೆ ಇದೆ. ಆದರೂ, 11 ತಿಂಗಳಿಗಿಂತ ಮುಂಚಿತವಾಗಿ ಸಂಸತ್ ವಿಸರ್ಜಿಸಿರುವ ಅಧ್ಯಕ್ಷ ಚುನಾವಣೆಗೆ ಆದೇಶಿಸಿದ್ದಾರೆ.
2020ರಲ್ಲಿ ಹೊಸ ಸರ್ಕಾರ ಬಂದ ಬಳಿಕ ಶ್ರೀಲಂಕಾ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿತ್ತು. ಅದು ತೀವ್ರ ರೂಪಕ್ಕೆ ಹೋಗಿ, 2022ರಲ್ಲಿ ಜನರು ಸರ್ಕಾರದ ವಿರುದ್ದ ದಂಗೆಯೆದ್ದಿದ್ದರು. ಅಧ್ಯಕ್ಷ ಗೋಟಬಯ ರಾಜಪಕ್ಸೆ ವಿರುದ್ದ ಬೀದಿಗಿಳಿದು ಪ್ರತಿಭಟಿಸಿದ್ದರು. ಆ ಸಮಯದಲ್ಲಿ ರಾಜಪಕ್ಸೆ ಅವರು ರಾಷ್ಟ್ರದಿಂದ ಪಲಾಯನ ಮಾಡಿದ್ದರು. ಇದರಿಂದ ಇನ್ನಷ್ಟು ಆಕ್ರೋಶಿತರಾದ ಸಾವಿರಾರು ಜನರು ಕೊಲಂಬೊದಲ್ಲಿರುವ ಅಧ್ಯಕ್ಷರ ಭವನಕ್ಕೆ ನುಗ್ಗಿದ್ದರು. ಕೈಗೆ ಸಿಕ್ಕ ವಸ್ತುಗಳನ್ನು ಎತ್ತಿಕೊಂಡು ಬಂದಿದ್ದರು.
ನಂತರ, ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ಅಧಿಕಾರ ವಹಿಸಿಕೊಂಡಿದ್ದರು. ಪ್ರಧಾನಿಯಾಗಿ ದಿನೇಶ್ ಗುಣವರ್ಧನ ನೇಮಕಗೊಂಡಿದ್ದರು. ರಾನಿಲ್ ವಿಕ್ರಮಸಿಂಘೆ ಲಂಕಾ ಆರ್ಥಿಕತೆಗೆ ಸ್ಥಿರತೆ ತರಲು ಮತ್ತು ದೇಶದಲ್ಲಿ ಶಾಂತಿ ಸ್ಥಾಪಿಸಲು ಪ್ರಯತ್ನಿಸಿದ್ದಾರೆ ಎಂದು ಹೇಳಲಾಗ್ತಿದೆ.
ಆರ್ಥಿಕ ಬಿಕ್ಕಟ್ಟಿನ ಬಳಿಕ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಕಳೆದ ವಾರ ಚುನಾವಣೆ ನಡೆದಿದ್ದು, ಮಾರ್ಕ್ಸ್‌ವಾದಿ ನಾಯಕ ದಿಸ್ಸನಾಯಕೆ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಬಳಿಕ ಅವರು, ಹರಿಣಿ ಅಮರಸೂರ್ಯ ಅವರನ್ನು ಹೊಸ ಪ್ರಧಾನಿಯಾಗಿ ನೇಮಿಸಿದ್ದಾರೆ.
ಇದನ್ನೂ ಓದಿ : ಹರಿಣಿ ಅಮರಸೂರ್ಯ | ಶ್ರೀಲಂಕಾದ ಪ್ರಧಾನಿಯಾಗಿ ಎಡಪಂಥೀಯ ನಾಯಕಿ ಪ್ರಮಾಣ ವಚನ


