ಶ್ರೀರಂಗಪಟ್ಟಣ: ‘ತಾಲ್ಲೂಕಿನ ಹುಂಜನೆರೆ ಗ್ರಾಮದ ಚನ್ನಕೇಶ್ವರಸ್ವಾಮಿ ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದು, ದಲಿತರಿಗೆ ವರ್ಷದ ಎಲ್ಲ ದಿನವೂ ಮುಕ್ತ ಪ್ರವೇಶ ನೀಡಬೇಕು’ ಎಂದು ಗ್ರಾಮಸ್ಥರು ಹಾಗೂ ದಲಿತ ಸಂಘರ್ಷ ಸಮಿತಿಯ ಮುಖಂಡರು ಮಂಗಳವಾರ ಆಗ್ರಹಿಸಿದ್ದಾರೆ ಎಂದು ಪ್ರಜಾವಾಣಿ ವರದಿ ಮಾಡಿದೆ.
ಪಟ್ಟಣದಲ್ಲಿ ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ಮತ್ತು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮೇಘ ಅವರಿಗೆ ಮನವಿ ಸಲ್ಲಿಸಿದ ಮುಖಂಡರು, ‘ದೇವಾಲಯ ಮುಜರಾಯಿ ಇಲಾಖೆಗೆ ಸೇರಿದ್ದರೂ ಗ್ರಾಮದ ದಲಿತರಿಗೆ ಪ್ರವೇಶವಿಲ್ಲ. ಶಾಸಕ ರಮೇಶ ಬಂಡಿಸಿದ್ದೇಗೌಡ ಅವರಿಗೆ ತಿಳಿಸಿದ ಬಳಿಕ, ವಿಶೇಷ ದಿನಗಳಲ್ಲಿ ಮಾತ್ರ ಅವಕಾಶ ನೀಡಲು ಒಪ್ಪಿಗೆ ಸಿಕ್ಕಿದೆ. ವರ್ಷದ ಎಲ್ಲ ದಿನವೂ ದಲಿತರು ಇಲ್ಲಿ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ದೇವಾಲಯದ ಮುಂದೆ ಫಲಕ ಹಾಕಬೇಕು’ ಎಂದು ಮುಖಂಡರಾದ ಚನ್ನಪ್ಪ ಮತ್ತು ಸಿದ್ದಲಿಂಗು ಒತ್ತಾಯಿಸಿದರು.
‘ಯುಗಾದಿ ಉತ್ಸವ ಸೇರಿ ವಿಶೇಷ ದಿನಗಳಲ್ಲಿ ಮಾತ್ರ ದಲಿತರಿಗೆ ಪ್ರವೇಶ ಮತ್ತು ಪೂಜೆ ಸಲ್ಲಿಸಲು ಅವಕಾಶ ನೀಡಲಾಗುತ್ತದೆ. ಉಳಿದ ದಿನಗಳಲ್ಲೂ ದಲಿತರಿಗೆ ಪೂಜೆ ಮಾಡಲು ಕ್ರಮ ವಹಿಸಬೇಕು’ ಎಂದು ದಸಂಸ ಮುಖಂಡ ಎಂ. ಚಂದ್ರಶೇಖರ್, ಗಂಜಾಂ ರವಿಚಂದ್ರ, ಮಹದೇವಸ್ವಾಮಿ ಮನವಿ ಮಾಡಿದರು.
‘ಮುಜರಾಯಿ ಇಲಾಖೆಗೆ ಸೇರಿದ ಯಾವುದೇ ದೇವಾಲಯದಲ್ಲೂ ಪ್ರವೇಶದ ವಿಷಯದಲ್ಲಿ ತಾರತಮ್ಯ ಮಾಡುವಂತಿಲ್ಲ. ತಾರತಮ್ಯ ಮಾಡಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುತ್ತದೆ. ಶೀಘ್ರ ದಲಿತರು ಮತ್ತು ಸವರ್ಣೀಯರ ಸಭೆ ನಡೆಸಿ ಗೊಂದಲ ಬಗಹರಿಸಲಾಗುವುದು’ ಎಂದು ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ಭರವಸೆ ನೀಡಿದ್ದಾರೆ ಎಂದು ಪ್ರಜಾವಾಣಿ ವರದಿ ತಿಳಿಸಿದೆ.
ಅಪೆಕ್ಸ್ ಬ್ಯಾಂಕ್ ಮಾಜಿ ನಿರ್ದೇಶಕ ಅರಕೆರೆ ಶಿವಯ್ಯ, ರೈತ ಸಂಘದ ತಾಲ್ಲೂಕು ಘಟಕದ ಸಂಚಾಲಕ ಪಾಂಡು, ಬೆಳಗೊಳ ಬಸವಯ್ಯ, ಕುಬೇರಪ್ಪ, ಕೆ.ಶೆಟ್ಟಹಳ್ಳಿ ಅಪ್ಪಾಜಿ, ಸುರೇಶ್, ಸೋಮೇಶ್ ಪಾಲ್ಗೊಂಡಿದ್ದರು.
ರಾಜಸ್ಥಾನ| ದಲಿತ ನಾಯಕನ ಭೇಟಿಯ ನಂತರ ದೇವಾಲಯ ಶುದ್ಧೀಕರಿಸಿದ ಬಿಜೆಪಿ ಮುಖಂಡ


