ಶ್ರೀಶೈಲಂ ಎಡದಂಡೆ ಕಾಲುವೆಯ ಸುರಂಗದ ಒಂದು ಭಾಗ ಶನಿವಾರ (ಫೆ.22) ಕುಸಿದು ಬಿದ್ದಿದ್ದು, ಅದರಲ್ಲಿ ಸಿಲುಕಿರುವ ಎಂಟು ಮಂದಿ ಕಾರ್ಮಿಕರನ್ನು ರಕ್ಷಿಸುವ ಬಗ್ಗೆ ಮುಂದಿನ ದಾರಿಯನ್ನು ಸೂಚಿಸಲು ತೆಲಂಗಾಣ ಸರ್ಕಾರ ಜಿಎಸ್‌ಐ ಮತ್ತು ಎನ್‌ಜಿಆರ್‌ಐ ತಜ್ಞರ ಮೊರೆ ಹೋಗಿದೆ.
ಎಂಟು ಮಂದಿ ಕಾರ್ಮಿಕರು ನಾಲ್ಕು ದಿನ ಕಳೆದರೂ ಸುರಂಗದೊಳಗಡೆಯೇ ಸಿಲುಕಿಕೊಂಡಿದ್ದು, ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (ಜಿಎಸ್‌ಐ) ಮತ್ತು ರಾಷ್ಟ್ರೀಯ ಭೌಗೋಳಿಕ ಸಂಶೋಧನಾ ಸಂಸ್ಥೆ (ಎನ್‌ಜಿಆರ್‌ಐ)ಯ ತಜ್ಞರನ್ನು ರಕ್ಷಣಾ ಕಾರ್ಯಗಳಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ (ಫೆ.25) ತಿಳಿಸಿದ್ದಾರೆ.
ನಾಗರಕುರ್ನೂಲ್ ಜಿಲ್ಲಾಧಿಕಾರಿ ಬಿ ಸಂತೋಷ್ ಮಂಗಳವಾರ ಮಾತನಾಡಿ, “ಯಾವುದೇ ಹೆಜ್ಜೆ ಮುಂದಿಡುವ ಮುನ್ನ ಸುರಂಗದ ಸ್ಥಿರತೆಯನ್ನು ಪರಿಗಣಿಸಿ ಮುಂದುವರಿಯಲಾಗುತ್ತಿದೆ. ಪ್ರಸ್ತುತ ಸುರಂಗದ ನಿರ್ಜಲೀಕರಣ (ನೀರು ಇಂಗಿಸುವುದು) ಕಾರ್ಯ ನಡೆಯುತ್ತಿದೆ” ಎಂದಿದ್ದಾರೆ.
“ಸದ್ಯಕ್ಕೆ ಕಾರ್ಮಿಕರೊಂದಿಗೆ ಯಾವುದೇ ಸಂವಹನ ನಡೆಸಲು ಸಾಧ್ಯವಾಗುತ್ತಿಲ್ಲ. ನಾವು ಜಿಎಸ್‌ಐ ತಜ್ಞರು ಮತ್ತು ಇತರ ಕೆಲವು ಜನರ ಸಲಹೆಯನ್ನು ಪಡೆಯುತ್ತಿದ್ದೇವೆ. ಪ್ರಸ್ತುತ ನೀರು ಇಂಗಿಸುವ ಕಾರ್ಯ ನಡೆಯುತ್ತಿದೆ. ಸುರಂಗದ ಕೊನೆಯ 40-50 ಮೀಟರ್‌ಗಳವರೆಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಜಿಎಸ್‌ಐ ಮತ್ತು ಎನ್‌ಜಿಆರ್‌ಐ ತಜ್ಞರ ಸಲಹೆಯನ್ನು ಪಡೆಯುತ್ತಿದ್ದೇವೆ. ಎಲ್& ಟಿ ಸಂಸ್ಥೆಯ ತಜ್ಞರು ಕೂಡ ಸ್ಥಳಕ್ಕೆ ಬಂದಿದ್ದಾರೆ” ಎಂದು ಜಿಲ್ಲಾಧಿಕಾರಿ ಹೇಳಿದ್ದಾಗಿ ಸುದ್ದಿ ಸಂಸ್ಥೆ ಪಿಟಿಐ ತಿಳಿಸಿದೆ.
“ಎಂಟು ಜನರು ಸಿಲುಕಿಕೊಂಡಿರುವ ಕೊನೆಯ ಐವತ್ತು ಮೀಟರ್ ಒಳಗೆ ಹೋಗಲು ರಕ್ಷಣಾ ತಂಡಗಳಿಗೆ ಸಾಧ್ಯವಾಗಿಲ್ಲ. ಅಲ್ಲಿ ಮಣ್ಣು ಮತ್ತು ಅವಶೇಷಗಳು ತುಂಬಿಕೊಂಡಿದೆ” ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಜಿಎಸ್‌ಐ ಮತ್ತು ಎನ್‌ಜಿಆರ್‌ಐ ತಜ್ಞರ ಜೊತೆಗೆ, ಸುರಂಗ ಸಂಬಂಧಿತ ಕಾರ್ಯಾಚರಣೆಗಳಲ್ಲಿ ಅಪಾರ ಅನುಭವ ಹೊಂದಿರುವ ಎಲ್ & ಟಿ ಜೊತೆ ಸಂಬಂಧ ಇರುವ ಆಸ್ಟ್ರೇಲಿಯಾದ ತಜ್ಞರನ್ನು ಅವಘಡ ನಡೆದ ಸ್ಥಳದಲ್ಲಿ ಎಸ್‌ಎಲ್‌ಬಿಸಿ ಸುರಂಗದ ಸ್ಥಿರತೆಯನ್ನು ನಿರ್ಣಯಿಸಲು ನೇಮಿಸಲಾಗಿದೆ ಎಂದು ವರದಿಯಾಗಿದೆ.
ಉಪಮುಖ್ಯಮಂತ್ರಿ ಮಲ್ಲು ಭಟ್ಟಿ ವಿಕ್ರಮಾರ್ಕ ಮತ್ತು ನೀರಾವರಿ ಸಚಿವ ಉತ್ತಮ್ ಕುಮಾರ್ ರೆಡ್ಡಿ ಇಂದು ಅವಘಡ ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸಿ ಕೆಲವು ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.
ಭಾರತೀಯ ಸೇನೆ, ನೌಕಾಪಡೆ, ಎನ್‌ಡಿಆರ್‌ಎಫ್ ಮತ್ತು ಇತರ ತಂಡಗಳ ನಿರಂತರ ಪ್ರಯತ್ನಗಳ ಹೊರತಾಗಿಯೂ ರಕ್ಷಣಾ ಕಾರ್ಯಾಚರಣೆಯಲ್ಲಿ ಇದುವರೆಗೆ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಕಾರ್ಮಿಕರು ಸಿಲುಕೊಂಡಿರುವ ಜಾಗದಲ್ಲಿ ಸಿಮೆಂಟ್, ಕಂಬಿ, ಮಣ್ಣು ಮತ್ತು ಇತರ ಅವಶೇಷಗಳು ಸಿಲುಕೊಂಡಿದೆ. ಅದನ್ನು ದಾಟಿ ಕಾರ್ಮಿಕರನ್ನು ತಲುಪುವುದು ಸವಾಲಾಗಿದೆ.
ಭೂಸೇನೆ, ನೌಕಾಪಡೆ, ಸಿಂಗರೇಣಿ ಕಲ್ಲಿದ್ದಲು ಗಣಿ ಮತ್ತು ಇತರ ಸಂಸ್ಥೆಗಳ 584 ನುರಿತ ಸಿಬ್ಬಂದಿಯ ತಂಡವು ಕೇಂದ್ರ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳೊಂದಿಗೆ ಏಳು ಬಾರಿ ಸುರಂಗ ಪರಿಶೀಲನೆ ನಡೆಸಿದ್ದು, ಲೋಹದ ರಾಡ್ ಕತ್ತರಿಸಲು ಗ್ಯಾಸ್ ಕಟ್ಟರ್‌ಗಳನ್ನು ಬಳಸುವ ಮೂಲಕ ನಿರಂತರ ಪ್ರಯತ್ನ ಪಡುತ್ತಿದೆ ಎಂದು ವರದಿಗಳು ತಿಳಿಸಿವೆ.
“ದುರಂತ ಸ್ಥಳವು ಕೆಸರು ಮತ್ತು ಅವಶೇಷಗಳಿಂದ ತುಂಬಿರುವುದರಿಂದ ಸುರಂಗದೊಳಗಡೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಲು ಇನ್ನೂ ಕನಿಷ್ಠ ಮೂರರಿಂದ ನಾಲ್ಕು ದಿನಗಳು ಬೇಕಾಗಬಹುದು” ಎಂದು ತೆಲಂಗಾಣ ಸಚಿವ ಜೂಪಲ್ಲಿ ಕೃಷ್ಣ ರಾವ್ ಸೋಮವಾರ (ಫೆ.24) ಹೇಳಿದ್ದಾರೆ.
2023ರಲ್ಲಿ ಉತ್ತರಾಖಂಡದ ಸಿಲ್ಕ್ಯಾರಾ ಬೆಂಡ್-ಬಾರ್ಕೋಟ್ ಸುರಂಗದಲ್ಲಿ ಸಿಲುಕಿದ್ದ ನಿರ್ಮಾಣ ಕಾರ್ಮಿಕರನ್ನು ರಕ್ಷಿಸಿದ್ದ ಇಲಿ ಗಣಿಗಾರರ ತಂಡವು, ಕಾರ್ಮಿಕರನ್ನು ಹೊರತರಲು ರಕ್ಷಣಾ ತಂಡಗಳೊಂದಿಗೆ ಸೇರಿಕೊಂಡಿವೆ ಎಂದು ಕೃಷ್ಣ ರಾವ್ ತಿಳಿಸಿದ್ದಾರೆ.
ಕೇರಳ | ಸಹೋದರ, ಚಿಕ್ಕಪ್ಪ, ಚಿಕ್ಕಮ್ಮ ಸೇರಿ ಐವರನ್ನು ಕೊಂದ ಯುವಕ : ವಿಷ ಸೇವಿಸಿ ಪೊಲೀಸರ ಮುಂದೆ ಶರಣು!


