ಗೋವಾದ ಬಿಚೋಲಿಮ್‌ನ ಲೈರಾಯಿ ದೇವಿ ದೇವಸ್ಥಾನದ ಜಾತ್ರೆಯಲ್ಲಿ ಕಾಲ್ತುಳಿತ ಸಂಭವಿಸಿ ಆರು ಜನರು ಸಾವನ್ನಪ್ಪಿದ್ದು, 50ಕ್ಕಿಂತ ಅಧಿಕ ಜನರು ಗಾಯಗೊಂಡಿದ್ದಾರೆ.
ಜಾತ್ರೆಗೆ ಸಾವಿರಾರು ಜನರು ಆಗಮಿಸಿದ್ದ ವೇಳೆ, ಶನಿವಾರ ಮುಂಜಾನೆ 3 ಗಂಟೆಯ ಸುಮಾರಿಗೆ ಅವಘಡ ಸಂಭವಿಸಿದೆ. ಗಾಯಾಳುಗಳಲ್ಲಿ ಕನಿಷ್ಠ 10 ಜನರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಗೋವಾ ವೈದ್ಯಕೀಯ ಕಾಲೇಜಿನಲ್ಲಿ ನಿಗಾದಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾತ್ರೆಗೆ ಗೋವಾ ಮಾತ್ರವಲ್ಲದೆ ಮಹಾರಾಷ್ಟ್ರ ಮತ್ತು ಕರ್ನಾಟಕದ ಭಕ್ತರು ಸೇರಿದ್ದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ತನಿಖೆಯ ನಂತರ ದುರಂತದ ನಿಖರವಾದ ಕಾರಣ ತಿಳಿದುಬರಲಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ವರದಿಯಾಗಿದೆ.
ಕನಿಷ್ಠ 30 ಜನರು ಗಾಯಗೊಂಡಿದ್ದಾರೆ ಎಂದು ರಾಜ್ಯ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ದೃಢಪಡಿಸಿದ್ದಾರೆ. ಅವರಲ್ಲಿ ಎಂಟು ಜನರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಲ್ಲಿ ಇಬ್ಬರನ್ನು ಬಂಬೋಲಿಮ್‌ನಲ್ಲಿರುವ ಗೋವಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದಾರೆ.
ಲೈರಾಯಿ ದೇವಿ ದೇವಾಲಯವು ಉತ್ತರ ಮತ್ತು ದಕ್ಷಿಣ ಭಾರತದ ವಾಸ್ತುಶಿಲ್ಪ ಶೈಲಿಯಿಂದ ಹೆಸರುವಾಸಿಯಾಗಿದೆ. ಪ್ರತಿ ವರ್ಷ ಮೇ ತಿಂಗಳಲ್ಲಿ ಇಲ್ಲಿ ಜಾತ್ರೆ ನಡೆಯುತ್ತದೆ. ಸಾಂಪ್ರದಾಯಿಕ ಬೆಂಕಿಯ ಮೇಲೆ ನಡೆಯುವ ಆಚರಣೆಯನ್ನು ಒಳಗೊಂಡಿರುವ ಈ ಜಾತ್ರೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಳ್ಳುತ್ತಾರೆ.
ಮಣಿಪುರ ಜನಾಂಗೀಯ ಹಿಂಸಾಚಾರಕ್ಕೆ 2 ವರ್ಷ; ರಾಜ್ಯದಾದ್ಯಂತ ಬಿಗಿ ಭದ್ರತೆ


