ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂದು ಆರೋಪಿಸಿ ಕಳೆದ ತಿಂಗಳು ಬಂಧಿಸಲ್ಪಟ್ಟ 83 ವರ್ಷದ ಬುಡಕಟ್ಟು ಹಕ್ಕುಗಳ ಕಾರ್ಯಕರ್ತ ಫಾದರ್ ಸ್ಟಾನ್ ಸ್ವಾಮಿಯವರು ಆಹಾರ ಸೇವಿಸಲು ಬಳಸುವ ಸ್ಟ್ರಾ ಹಾಗೂ ಸಿಪ್ಪರ್ ಕಪ್ ಸೇರಿದಂತೆ ಚಳಿಗಾಲದ ಬಟ್ಟೆಗಳಿಗೆ ಕನಿಷ್ಠ ಮುಂದಿನ ಶುಕ್ರವಾರ( ಡಿಸೆಂಬರ್ 4) ವರೆಗೆ ಕಾಯಬೇಕಾಗುತ್ತದೆ.
ತಮಗೆ ಪಾರ್ಕಿನ್ಸನ್ ಕಾಯಿಲೆ ಇರುವುದರಿಂದ ಕೈಗಳು ನಡುಗುತ್ತದೆ. ಆದ್ದರಿಂದ ಆಹಾರ ಸೇವಿಸಲು ಆಗುದಿಲ್ಲ. ಹಾಗಾಗಿ ಬಂಧನದ ಸಮಯದಲ್ಲಿ ಮುಟ್ಟುಗೋಲು ಹಾಕಿಕೊಂಡಿದ್ದ ಸ್ಟ್ರಾ ಮತ್ತು ಸಿಪ್ಪರ್ ಅನ್ನು ವಾಪಸ್ ಕೊಡುವಂತೆ ಕೋರಿ ಸ್ಟಾನ್ ಸ್ವಾಮಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು ಆದರೆ ನ್ಯಾಯಾಲಯವು ಅವರಿಗೆ 20 ದಿನಗಳ ಸಮಯವನ್ನು ಕೇಳಿತ್ತು.
ಇದನ್ನೂ ಓದಿ: ಜೈಲಿನಲ್ಲಿರುವ ಸ್ಟ್ಯಾನ್ ಸ್ವಾಮಿಗೆ ಅಗತ್ಯ ಸೌಲಭ್ಯ ಖಚಿತ ಪಡಿಸಲು NHRC ಮಧ್ಯಪ್ರವೇಶಕ್ಕೆ ಒತ್ತಾಯ
ಈಗ ಅರ್ಜಿಯ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆ ಉತ್ತರವನ್ನು ಸಲ್ಲಿಸಿದ್ದು, ಸ್ಟ್ರಾ ಮತ್ತು ಸಿಪ್ಪರ್ ಕಪ್‌ಗಳನ್ನು ನಾವು ತೆಗೆದುಕೊಂಡಿಲ್ಲ ಎಂದು ಪುಣೆಯ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.
“ಸ್ಟಾನ್ ಸ್ವಾಮಿಯನ್ನು ಎನ್ಐಎ ವಶಕ್ಕೆ ತೆಗೆದುಕೊಳ್ಳಲಾಗಿಲ್ಲ, ಆದ್ದರಿಂದ ನಾವು ಅವರ ಯಾವುದೇ ವಸ್ತುಗಳನ್ನು ಹೊಂದಿರಲಿಲ್ಲ. ಅವರನ್ನು ನೇರವಾಗಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು, ಆದ್ದರಿಂದ ಅವರು ಜೈಲು ಅಧಿಕಾರಿಗಳಿಗೆ ವಿನಂತಿಸಬೇಕಾಗಿದೆ. ಅವರು ಜೈಲು ಅಧಿಕಾರಿಗಳಿಗೆ ವಿನಂತಿ ಮಾಡಿದ್ದಾರೆಯೆ ಎಂದು ನಮಗೆ ತಿಳಿದಿಲ್ಲ” ಎಂದು ಎನ್ಐಎ ಅಧಿಕಾರಿಯೊಬ್ಬರು ಹೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಎನ್‌ಐಎ ಪ್ರತಿಕ್ರಿಯೆಯನ್ನು ಆಲಿಸಿದ ವಿಶೇಷ ನ್ಯಾಯಾಲಯವು, ಫಾದರ್ ಸ್ಟಾನ್ ಸ್ವಾಮಿ ಅವರ ಅರ್ಜಿಯನ್ನು ತಿರಸ್ಕರಿಸಿದೆ. ಹಾಗಾಗಿ ಸ್ಟ್ರಾನ್ ಸ್ವಾಮಿಯು ಜೈಲಿನೊಳಗೆ ಸ್ಟ್ರಾ ಮತ್ತು ಸಿಪ್ಪರ್ ಹಾಗೂ ಚಳಿಗಾಲದ ಬಟ್ಟೆಗಳನ್ನು ಬಳಸಲು ಅನುಮತಿ ಕೋರಿ ಹೊಸ ಅರ್ಜಿಯನ್ನು ಸಲ್ಲಿಸಿದ್ದಾರೆ.
ಇದನ್ನೂ ಓದಿ: ಪಾರ್ಕಿನ್ಸನ್ ಕಾಯಿಲೆ: ನೀರು ಕುಡಿಯಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಬಂಧಿತ ಹೋರಾಟಗಾರ ಸ್ಟಾನ್ ಸ್ವಾಮಿ!
ಜೈಲು ಅಧಿಕಾರಿಗಳ ಪ್ರತಿಕ್ರಿಯೆ ಕೋರಿ ನ್ಯಾಯಾಲಯ ಈ ವಿಷಯವನ್ನು ಡಿಸೆಂಬರ್ 4 ರವರೆಗೆ ಮುಂದೂಡಿದೆ.
ಈ ತಿಂಗಳ ಆರಂಭದಲ್ಲಿ, ಸ್ಟ್ಯಾನ್ ಸ್ವಾಮಿಯನ್ನು ಅಕ್ಟೋಬರ್ 8 ರಂದು ರಾಂಚಿಯಲ್ಲಿರುವ ಅವರ ನಿವಾಸದಿಂದ ಎನ್ಐಎ ಬಂಧಿಸಿತ್ತು. ನವೆಂಬರ್ 6 ರಂದು ಅವರು ತಮಗೆ ಪಾರ್ಕಿನ್ಸನ್ ಕಾಯಿಲೆ ಇರುವುದರಿಂದ ಸ್ಟ್ರಾ ಮತ್ತು ಸಿಪ್ಪರ್ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರಾದರೂ ಅವರ ಮನವಿಗೆ ಸ್ಪಂದಿಸಲು 20 ದಿನಗಳ ಸಮಯವನ್ನು ಕೇಳಿತ್ತು.
ಪಾರ್ಕಿನ್ಸನ್ ಎಂಬುದು ಕೇಂದ್ರ ನರಮಂಡಲವನ್ನು ದುರ್ಬಲಗೊಳಿಸುವ ಕಾಯಿಲೆಯಾಗಿದ್ದು, ಇದು ನಡುಗುವಿಕೆ ಮತ್ತು ಸ್ನಾಯು ಸೆಳೆತವನ್ನು ಉಂಟುಮಾಡುತ್ತದೆ. ಹಾಗಾಗಿ ದೈನಂದಿನ ಕ್ರಿಯೆಗಳಾದ ನೀರು ಸೇವಿಸುವುದು ಸೇರಿದಂತೆ ನುಂಗಲು ಅಥವಾ ಜಗಿಯಲು ಕಷ್ಟಕರವಾಗುತ್ತದೆ.
ಇದನ್ನೂ ಓದಿ: ಭೀಮಾ ಕೋರೆಗಾಂವ್: 83 ವರ್ಷದ ಹಿರಿಯ ಹೋರಾಟಗಾರ ಸ್ಟ್ಯಾನ್ ಸ್ವಾಮಿ ಬಂಧಿಸಿದ NIA


