ಕೊರೊನಾ ಲಾಕ್‌ಡೌನ್ ಹಿನ್ನಲೆಯಲ್ಲಿ ಆನ್‍ಲೈನ್ ಶಿಕ್ಷಣಕ್ಕೆ ರಾಜ್ಯ ಸರಕಾರ ಇಲ್ಲಿಯವರೆಗೂ ಅನುಮತಿ ನೀಡಿಲ್ಲವೆಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಇಂದು ಕಲ್ಬುರ್ಗಿಯಲ್ಲಿ ನಡೆದ ಎಸೆಸೆಲ್ಸಿ ಪರೀಕ್ಷೆ ಪೂರ್ವ ಸಿದ್ಧತಾ ಸಭೆಯಲ್ಲಿ, ಕೊರೊನಾ ಸೋಂಕು ತೀವ್ರಗೊಂಡ ನಂತರ ಎಲ್ಲ ಕಡೆ ಆನ್‍ಲೈನ್ ಶಿಕ್ಷಣಕ್ಕೆ ಒತ್ತು ಕೊಡಲಾಗುತ್ತಿದೆ. ಆದರೆ, ಚಿಕ್ಕ ಮಕ್ಕಳಿಗೆ ಆನ್‍ಲೈನ್ ಶಿಕ್ಷಣ ಸೂಕ್ತವೂ, ಅದು ಬೋಧನೆಯ ಪ್ರಕಾರವು ಅಲ್ಲ ಎಂದು ಸುರೇಶ್ ಕುಮಾರ್ ತಿಳಿಸಿದರು.
ಆನ್‍ಲೈನ್ ಶಿಕ್ಷಣಕ್ಕೆ ಪೂರಕವಾದ ವಾತಾವರಣ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಆನ್‍ಲೈನ್ ಶಿಕ್ಷಣದ ಸಂಬಂಧ ನಿಮ್ಹಾನ್ಸ್ ಗೆ ಪತ್ರ ಬರೆಯಲಾಗಿತ್ತು. ಅಲ್ಲಿಂದ ಸುಧೀರ್ಘವಾದ ಪತ್ರ ಬಂದಿದೆ. ಅದನ್ನು ಪರಿಶೀಲನೆ ಮಾಡಿ ನಂತರ ಆನ್‍ಲೈನ್ ಶಿಕ್ಷಣದ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದೆಂದು ಸಚಿವರು ಹೇಳಿದ್ದಾರೆ.
ಆನ್‌ಲೈನ್ ಶಿಕ್ಷಣದ ವಿರುದ್ದ ಕರ್ನಾಟಕದಾಂದ್ಯಂತ ಪರವಿರೋಧ ಚರ್ಚೆಗಳು ಎದ್ದಿದ್ದು, ನೆರೆಯ ಕೇರಳದಲ್ಲಿ ಹತ್ತನೇ ತರಗತಿಯ ಬಾಲಕಿಯೊಬ್ಬರು, ತನಗೆ ಕ್ಲಾಸ್‌ಗಳು ತಪ್ಪಿಹೋಗುತ್ತಿದೆ ಎಂಬ ಆತಂಕದಿಂದ ಮನೆಯ ಹತ್ತಿರದ ತೋಟದಲ್ಲಿ ಸೀಮೆ ಎಣ್ಣೆ ಸುರಿದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಓದಿ: ಆನ್‌ಲೈನ್ ತರಗತಿಗೆ ಹಾಜರಾಗಲು ಅಸಾಧ್ಯ: 10 ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ


