ಮೆಟ್ರೋ ಯೋಜನೆಗೆ ರಾಜ್ಯ ಸರ್ಕಾರ ಶೇಕಡ 87.37ರಷ್ಟು ಹಣ ನೀಡುತ್ತಿದ್ದು, ಕೇಂದ್ರ ಸರ್ಕಾರದ ಪಾಲು ಕೇವಲ ಶೇ12.63ರಷ್ಟು ಮಾತ್ರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಭಾನುವಾರ ಮೆಟ್ರೋ ಯೋಜನೆಯ 2ನೇ ಹಂತದ ಹಳದಿ ಮಾರ್ಗದ ಉದ್ಘಾಟನೆ ಹಾಗೂ ಜೆ.ಪಿ ನಗರ 4ನೇ ಹಂತದ ಶಂಕುಸ್ಥಾಪನೆ ನೆರವೇರಿಸಿ ಹಾಗೂ ವಂದೇ ಭಾರತ್ ರೈಲುಗಳಿಗೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಕೇಂದ್ರ ಸರ್ಕಾರದ ಸಹಭಾಗಿತ್ವವೂ ಕೂಡ ಬೆಂಗಳೂರು ಮೆಟ್ರೋ ಯೋಜನೆಯ ಅನುಷ್ಠಾನಕ್ಕೆ ಕಾರಣವಾಗಿದೆ ಎಂದು ಸಿಎಂ ಇದೇ ವೇಳೆ ಹೇಳಿದರು.
ಮೆಟ್ರೋ ಯೋಜನೆಗೆ ಕೇಂದ್ರ ಸರ್ಕಾರ ಹಣಕಾಸು ಮತ್ತು ತಾಂತ್ರಿಕ ನೆರವು ಒದಗಿಸುತ್ತಿದೆ. ರಾಜ್ಯ ಸರ್ಕಾರ ಯೋಜನೆಯ ಹಂತ 1,2, 2ಎ, 2ಬಿ ಮತ್ತು ಹಂತ 3ರ ಅನುಷ್ಠಾನಕ್ಕೆ ತನ್ನ ಪಾಲಿನ ರೂಪಾಯಿ 25,387 ಕೋಟಿ ಒದಗಿಸಿದೆ. ಇದರೊಂದಿಗೆ ಹೆಚ್ಚುವರಿ ಹಣಕಾಸು ನೆರವಿನ ರೂಪದಲ್ಲಿ ಸಾಲ ಮರುಪಾವತಿಗಾಗಿ ರೂ.3,987 ಕೋಟಿ ನೀಡಿದೆ. ಮೆಟ್ರೋ ಯೋಜನೆಗಳಿಗಾಗಿ ಇದುವರೆಗೂ 59,139 ಕೋಟಿ ರೂ. ಅನುದಾನವನ್ನು ವಿನಿಯೋಗಿಸಲಾಗಿದೆ. ರಾಜ್ಯ ಸರ್ಕಾರದ ಜವಾಬ್ಧಾರಿ ಶೇ. 87.37ರಷ್ಟಿದೆ. ಕೇಂದ್ರ ಸರ್ಕಾರ ತನ್ನ ಖಜಾನೆಯಿಂದ ಕೊಟ್ಟಿರುವುದು ಶೇ. 12.63 ರಷ್ಟು. ಕೇಂದ್ರ ಸರ್ಕಾರ ಒದಗಿಸಿರುವುದು 7,468.86 ಕೋಟಿ ರೂಗಳು ಮಾತ್ರ ಎಂದು ಸಿಎಂ ವಿವರಿಸಿದರು.
ಕರ್ನಾಟಕ ಸರ್ಕಾರ ಮತ್ತು ಕೇಂದ್ರ ಸರ್ಕಾಗಳು ಶೇ.50;50 ಅನುಪಾತದಲ್ಲಿ ಹೂಡಿಕೆ ಮಾಡಬೇಕೆಂದು ಒಪ್ಪಂದವಾಗಿದೆ. ಆದರೆ, ಕೇಂದ್ರ ಸರ್ಕಾರದಿಂದ ಈಕ್ವಿಟಿಯ ಹೊರತಾಗಿ ಸಾಲದ ರೂಪದಲ್ಲಿ ಬಂದ ಹಣವನ್ನು ಬಡ್ಡಿ ಸಮೇತ ರಾಜ್ಯ ಸಕಾರ ಹಾಗೂ ಮೆಟ್ರೋ ಸಂಸ್ಥೆಗಳು ತೀರಿಸಬೇಕಾಗಿದೆ. ಇದರಿಂದ ರಾಜ್ಯದ ಮೇಲೆ ಶೇ.87.37ರಷ್ಟು ಭಾರವಿದೆ ಎಂಬುವುದನ್ನು ಪ್ರಧಾನಮಂತ್ರಿಗೆ ಮನವರಿಕೆ ಮಾಡ ಬಯಸುತ್ತೇನೆ ಎಂದು ಸಿಎಂ ಹೇಳಿದರು.
ಮೆಟ್ರೊ ಹಳದಿ ಮಾರ್ಗದ ಉದ್ಘಾಟನೆಯಿಂದ ಬೆಂಗಳೂರು ಮೆಟ್ರೋ ಒಟ್ಟು 96.10 ಕಿ.ಮೀ ಕಾರ್ಯಾಚರಣೆಯೊಂದಿಗೆ ದಕ್ಷಿಣ ಭಾರತದಲ್ಲಿಯೇ ಅತಿ ಉದ್ದದ ಮೆಟ್ರೊ ಜಾಲದ ಗೌರವಕ್ಕೆ ಪಾತ್ರವಾಗಿದೆ. ಇದು ಪ್ರತಿಯೊಬ್ಬ ಕನ್ನಡಿಗನಿಗೆ ಹೆಮ್ಮೆಯ ಕ್ಷಣವಾಗಿದ್ದು, ಅಭಿವೃದ್ಧಿಯ ಕಡೆಗಿನ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ ಎಂದು ಸಿಎಂ ತಿಳಿಸಿದರು.
ಇಂದು ಲೋಕಾರ್ಪಣೆಗೊಂಡಿರುವ ರೂ.7,160 ಕೋಟಿ ವೆಚ್ಚದ ಹಳದಿ ಲೇನ್ ಬೆಂಗಳೂರಿನ ಪ್ರಮುಖ ಐಟಿ ಮತ್ತು ತಂತ್ರಜ್ಞಾನ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ವೃತ್ತಿಪರರಿಗೆ, ಉದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಸುರಕ್ಷಿತ ಮತ್ತು ತ್ವರಿತ ಪ್ರಯಾಣವನ್ನು ಖಾತ್ರಿಪಡಿಸುತ್ತದೆ. ಪ್ರತಿನಿತ್ಯ ಸುಮಾರು 3.5 ಲಕ್ಷ ಪ್ರಯಾಣಿಕರು ಹಳದಿ ಲೇನ್ ಬಳಸುವ ನಿರೀಕ್ಷೆಯಿದೆ. ಇದರಿಂದ ಮುಖ್ಯವಾಗಿ ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಜಯದೇವ ಆಸ್ಪತ್ರೆ ಸುತ್ತಲಿನ ಭಾರೀ ಟ್ರಾಫಿಕ್ ಸಮಸ್ಯೆ ಸುಧಾರಿಸುವ ವಿಶ್ವಾಸ ಹೊಂದಿದ್ದೇವೆ ಎಂದರು.
ಇಂದು ಉದ್ಘಾಟನೆಗೊಂಡಿರುವ ಹಳದಿ ಲೇನ್ ಪ್ರಮುಖ ಬಯೋಟೆಕ್ ಮತ್ತು ಐಟಿ ಹಬ್‌ಗಳನ್ನು ಪರಸ್ಪರ ಜೋಡಿಸುತ್ತದೆ. ಮಾತ್ರವಲ್ಲದೆ ಹಲವು ಪ್ರಮುಖ ಆಸ್ಪತ್ರೆಗಳು ಮತ್ತು ಕೈಗಾರಿಕಾ ವಲಯಗಳಿಗೂ ಸುಲಭದ ಸಂಪರ್ಕ ಸಾಧ್ಯವಾಗಿಸಿದೆ. ರಾಗಿಗುಡ್ಡದಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್‌ವರೆಗೆ ರಾಜ್ಯ ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾಗಿರುವ ಡಬಲ್ ಡೆಕ್ಕರ್ ಫ್ಲೈಓವರ್, ಬೆಂಗಳೂರಿನ ಅತ್ಯಂತ ನಿಬಿಡ ಜಂಕ್ಷನ್‌ಗಳಲ್ಲಿನ ಸಂಚಾರ ವ್ಯವಸ್ಥೆಯನ್ನು ಸುಧಾರಿಸಲಿದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ ಎಂಬುವುದಕ್ಕೆ ಇದು ನಿದರ್ಶನವಾಗಿದೆ ಎಂದು ಸಿಎಂ ಹೇಳಿದರು.
ಹೆಚ್ಚುತ್ತಿರುವ ನಗರೀಕರಣ ಮತ್ತು ಜನಸಂಖ್ಯೆ ನಗರದ ರಸ್ತೆಗಳ ಮೇಲೆ ವಿಪರೀತ ಒತ್ತಡವನ್ನು ಹೇರುತ್ತಿದೆ. ಪ್ರತಿದಿನ ಸುಮಾರು 9 ಲಕ್ಷ ಪ್ರಯಾಣಿಕರು ಬೆಂಗಳೂರು ಮೆಟ್ರೋ ಸೇವೆ ಬಳಸುತ್ತಿದ್ದಾರೆ. ಹಳದಿ ಲೇನ್ ಸೇರ್ಪಡೆಯಿಂದ ಪ್ರಯಾಣಿಕರ ಸಂಖ್ಯೆ 12.5 ಲಕ್ಷ ದಾಟುವ ನಿರೀಕ್ಷೆ ಹೊಂದಲಾಗಿದೆ ಎಂದರು.
ಬೆಂಗಳೂರು ಮೆಟ್ರೋ ಹಾದಿಯಲ್ಲಿ ನಾವು ಸಾಗಬೇಕಾದ ದೂರ ಇನ್ನೂ ಬಹಳಷ್ಟಿದೆ. ಎರಡನೇ ಹಂತದ ಮಾರ್ಗದ ಕಾರ್ಯಾಚರಣೆಯೊಂದಿಗೆ, ನಾವು 117 ಕಿ.ಮೀ ಮೆಟ್ರೋ ಸಂಪರ್ಕ ಸಾಧಿಸಲಿದ್ದೇವೆ. ಇದರಿಂದ 15 ಲಕ್ಷ ಮಂದಿ ಮೆಟ್ರೋದಲ್ಲಿ ಪ್ರಯಾಣಿಸಲು ಅವಕಾಶವಾಗಲಿದೆ ಎಂದು ತಿಳಿಸಿದರು.
ಮೆಟ್ರೋ 2ಎ ಮತ್ತು 2ಬಿ ಹಂತದಲ್ಲಿ ಹೊರ ವರ್ತುಲ ರಸ್ತೆ ಮತ್ತು ವಿಮಾನ ನಿಲ್ದಾಣ ಸಂಪರ್ಕಿಸುವ 58 ಕಿ.ಮೀ ಉದ್ದದ ರೂ.15,131 ಕೋಟಿ ವೆಚ್ಚದ ಮಾರ್ಗ 2027ರ ಡಿಸೆಂಬರ್‌ನಲ್ಲಿ ಪೂರ್ಣಗೊಳ್ಳಲಿದೆ. ಈ ಮಾರ್ಗ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಬೆಂಗಳೂರು ನಗರವನ್ನು ಜೋಡಿಸಲಿದೆ ಎಂದು ಸಿಎಂ ವಿವರಿಸಿದರು.
ಹಂತ-3ರ 44.65 ಕಿ.ಮೀ ಉದ್ದದ ರೂ.15,611 ಕೋಟಿ ಹೂಡಿಕೆಯ ಮಾರ್ಗ ಬೆಂಗಳೂರು ನಗರದ ಸಂಪರ್ಕ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸಲಿದೆ. ಇದರ ಸಿವಿಲ್ ಕಾಮಗಾರಿಗಳು ಸದ್ಯದಲ್ಲಿಯೇ ಆರಂಭವಾಗಲಿದೆ. ಮೆಟ್ರೋ ಹಂತ 4ರಲ್ಲಿ 53 ಕಿ.ಮೀ ಉದ್ದದ ಡಬಲ್ ಡೆಕ್ಕರ್-ಕಂ-ಮೆಟ್ರೋ ಮಾರ್ಗ ನಿರ್ಮಾಣದ ಕಾರ್ಯಸಾಧ್ಯತಾ ವರದಿ (Feasibility Report) ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸಿಎಂ ಹೇಳಿದರು.
2030ರ ವೇಳೆಗೆ ಬೆಂಗಳೂರು ನಗರದಲ್ಲಿ 220 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಪೂರ್ಣಗೊಳಿಸಿ. 30 ಲಕ್ಷ ಜನರು ಪ್ರಯಾಣಿಸಲು ಮೂಲಸೌಕರ್ಯ ಕಲ್ಪಿಸುವುದು ನಮ್ಮ ಬದ್ಧತೆಯಾಗಿದೆ. ಮೆಟ್ರೋ ನಿಲ್ದಾಣಗಳ ನಿರ್ಮಾಣದಲ್ಲಿ ಇನ್ಫೋಸಿಸ್ ಫೌಂಡೇಶನ್, ಬಯೋಕಾನ್ ಮತ್ತು ಡೆಲ್ಟಾ ಎಲೆಕ್ಟ್ರಾನಿಕ್ಸ್ ನಂತಹ ಖಾಸಗಿ ಸಂಸ್ಥೆಗಳು ಕೈ ಜೋಡಿಸಿವೆ. ಬೆಂಗಳೂರಿನ ಅಭಿವೃದ್ಧಿ ಕಾರ್ಯಗಳಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವ ಮುಂದಿನ ದಿನಗಳಲ್ಲಿ ಇನ್ನಷ್ಟು ಸದೃಢಗೊಳ್ಳುವ ವಿಶ್ವಾಸ ನನಗಿದೆ ಎಂದರು.
ನಮ್ಮ ರಾಜ್ಯವು ದೇಶದ ಐಟಿ ರಫ್ತಿನಲ್ಲಿ ಶೇ.35-40 ರಷ್ಟು ಕೊಡುಗೆ ಕೊಡುತ್ತಿದೆ. ಇದರಲ್ಲಿ ಬೆಂಗಳೂರಿನ ಪಾಲು ದೊಡ್ಡದು. ಎಲೆಕ್ಟ್ರಾನಿಕ್ಸ್ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿಯ ರಫ್ತಿನಲ್ಲಿ ಶೇ.40ಕ್ಕೂ ಹೆಚ್ಚಿನ ಪಾಲು ರಾಜ್ಯದ್ದಾಗಿದೆ. ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರವು 1.35 ಲಕ್ಷ ಕೋಟಿ ರೂಗಳಿಗೂ ಅಧಿಕ ಮೊತ್ತದ ಯೋಜನೆಗಳನ್ನು ರೂಪಿಸಿ ಸಂಪನ್ಮೂಲಗಳನ್ನು ವಿನಿಯೋಗಿಸಿ ಬೆಂಗಳೂರನ್ನು ಮಾದರಿ ನಗರವನ್ನಾಗಿಸಲು ಪ್ರಯತ್ನ ಮಾಡುತ್ತಿದ್ದೇವೆ. ಈಗಾಗಲೇ ಅನೇಕ ಯೋಜನೆಗಳು ಕಾರ್ಯಗತಗೊಳ್ಳುತ್ತಿವೆ. ದೇಶದ ಆರ್ಥಿಕತೆಗೆ ಬೃಹತ್ ಕೊಡುಗೆ ಕೊಡುತ್ತಿರುವ ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರ ಸರ್ಕಾರವೂ ಸಹ ಕೈ ಜೋಡಿಸಬೇಕೆಂದು ವಿನಂತಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮತಗಳ್ಳತನ ವಿರುದ್ಧ ಅಭಿಯಾನ ಆರಂಭಿಸಿದ ಕಾಂಗ್ರೆಸ್: ಡಿಜಿಟಲ್ ಮತದಾರರ ಪಟ್ಟಿ ನೀಡಲು ಆಗ್ರಹ


