Homeಕರ್ನಾಟಕಸದ್ದಿಲ್ಲದೆ ಮುಸ್ಲಿಂ ವಿದ್ಯಾರ್ಥಿಗಳ ಡಾಟಾ ಸಂಗ್ರಹಿಸುತ್ತಿರುವ ರಾಜ್ಯ ಸರ್ಕಾರ!

ಸದ್ದಿಲ್ಲದೆ ಮುಸ್ಲಿಂ ವಿದ್ಯಾರ್ಥಿಗಳ ಡಾಟಾ ಸಂಗ್ರಹಿಸುತ್ತಿರುವ ರಾಜ್ಯ ಸರ್ಕಾರ!

- Advertisement -
- Advertisement -

ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್‌ ನಿಷೇಧ ಮಾಡಿರುವ ಪ್ರಕರಣದ ವಿರುದ್ದ ಸಲ್ಲಿಸಲಾಗಿರುವ ಅರ್ಜಿ ಇನ್ನೂ ಕೋರ್ಟ್‌ನಲ್ಲಿದೆ. ಈ ನಡುವೆ ರಾಜ್ಯ ಸರ್ಕಾರವು ಖಾಸಗಿ ಮತ್ತು ಸರ್ಕಾರಿ ಶಿಕ್ಷಣ ಸಂಸ್ಥೆಗಳಿಂದ ವಿಶೇಷವಾಗಿ 1 ರಿಂದ 10 ನೇ ತರಗತಿಗೆ ದಾಖಲಾಗಿರುವ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಡೇಟಾವನ್ನು ಸದ್ದಿಲ್ಲದೆ ಸಂಗ್ರಹಿಸಲು ಹೊರಟಿದೆ ಎಂದು ಡೆಕ್ಕನ್ ಹೆರಾಲ್ಡ್‌ ವರದಿ ಮಾಡಿದೆ.

ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪಡೆದ ಅಂಕಿಅಂಶಗಳ ಪ್ರಕಾರ, ರಾಜ್ಯಾದ್ಯಂತ ವಿವಿಧ ಸರ್ಕಾರಿ ಶಾಲೆಗಳಲ್ಲಿ 17,39,742 ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ. ಬೆಂಗಳೂರು ದಕ್ಷಿಣದಲ್ಲಿ 1,55,104 ವಿದ್ಯಾರ್ಥಿಗಳಿದ್ದು ಇದು ಅತಿ ಹೆಚ್ಚು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿರುವ ಪ್ರದೇಶವಾಗಿದೆ. ನಂತರದ ಸ್ಥಾನದಲ್ಲಿ ಕಲಬುರಗಿಯಿದ್ದು, ಇಲ್ಲಿ 1,31,802 ವಿದ್ಯಾರ್ಥಿಗಳಿದ್ದಾರೆ. ಬೆಂಗಳೂರು ಉತ್ತರದಲ್ಲಿ 1,22,993 ವಿದ್ಯಾರ್ಥಿಗಳು ಇದ್ದಾರೆ ಎಂದು ಅಂಕಿಅಂಶಗಳು ಬಹಿರಂಗಪಡಿಸಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ 9,603 ಮುಸ್ಲಿಂ ವಿದ್ಯಾರ್ಥಿಗಳಿದ್ದಾರೆ. ಇದು ರಾಜ್ಯದಲ್ಲೇ ಅತಿ ಕಡಿಮೆ ಮುಸ್ಲಿಂ ವಿದ್ಯಾರ್ಥಿಗಳಿರುವ ಪ್ರದೇಶವಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಯುಪಿ ಚುನಾವಣೆ: 2 ಹಂತಗಳ ಮತದಾನದಲ್ಲಿ ಎಸ್‌ಪಿ ಶತಕ ಬಾರಿಸಿದೆ ಎಂದ ಅಖಿಲೇಶ್ ಯಾದವ್

ಈ ಮಧ್ಯೆ, ತಮ್ಮ ಕಾಲೇಜುಗಳಿಗೆ ದಾಖಲಾದ ಮುಸ್ಲಿಂ ವಿದ್ಯಾರ್ಥಿಗಳ ಸಂಖ್ಯೆಯ ಡೇಟಾವನ್ನು ಸಲ್ಲಿಸಲು ಬೆಂಗಳೂರಿನ ಕೆಲವು ಖಾಸಗಿ ಕಾಲೇಜುಗಳಿಗೆ ಕೇಳಲಾಗಿದೆ ಎಂದು DH ಮೂಲಗಳಲ್ಲಿ ಉಲ್ಲೇಖಿಸಿ ವರದಿ ಮಾಡಿದೆ.

“ನಡೆಯುತ್ತಿರುವ ಹಿಜಾಬ್ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಕಾಲೇಜುಗಳನ್ನು ಸೂಕ್ಷ್ಮ ವಲಯಗಳಾಗಿ ವರ್ಗೀಕರಿಸಲು ಮತ್ತು ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಮಾಡುತ್ತಿರುವ ಕಸರತ್ತು ಇದು ಇರಬಹುದು ಎಂದು ನಾವು ಭಾವಿಸಿದ್ದೇವೆ” ಎಂದು ಬೆಂಗಳೂರು ದಕ್ಷಿಣದ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರೊಬ್ಬರು ಅಭಿಪ್ರಾಯಪಟ್ಟಿದ್ದಾರೆ ಎಂದು ವರದಿ ಹೇಳಿದೆ.

ವಿದ್ಯಾರ್ಥಿಗಳ ದತ್ತಾಂಶ ಸಂಗ್ರಹದ ಹಿಂದಿನ ಕಾರಣದ ಬಗ್ಗೆ ಅಧಿಕಾರಗಳೊಂದಿಗೆ ಪ್ರಶ್ನಿಸಿದಾಗ, ನಡೆಯುತ್ತಿರುವ ವಿಧಾನಮಂಡಲದ ಅಧಿವೇಶನ ಮತ್ತು ಉಚ್ಚ ನ್ಯಾಯಾಲಯದ ವಿಚಾರಣೆ ಹಿನ್ನಲೆಯಲ್ಲಿ ಸಂಗ್ರಹಿಸಲಾಗುತ್ತಿದೆ ಎಂದು ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. “ವಿಧಾನ ಮಂಡಲ ಅಧಿವೇಶ ನಡೆಯುತ್ತಿರುವುದರಿಂದ ಚುನಾಯಿತ ಪ್ರತಿನಿಧಿಗಳು ಡೇಟಾವನ್ನು ಕೇಳಬಹುದು ಹಾಗೂ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಇದು ಬೇಕಾಗಬಹುದು” ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ‘ಪ್ರಧಾನಿ ಹುದ್ದೆಗೆ ವಿಶೇಷ ಸ್ಥಾನಮಾನವಿದೆ’: ಮೋದಿ ವಿರುದ್ಧ ಮಾಜಿ ಪಿಎಂ ಮನಮೋಹನ್ ಸಿಂಗ್ ಕಿಡಿ

ಈ ಕುರಿತು ಸ್ಪಷ್ಟನೆ ನೀಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ. ಸಿ. ನಾಗೇಶ್, ದಿನನಿತ್ಯ ಮಾಧ್ಯಮ ವರದಿಗಳು ತಪ್ಪುದಾರಿಗೆ ಎಳೆಯುತ್ತಿವೆ. ಈ ಅಂಕಿಅಂಶಗಳನ್ನು ಎದುರಿಸಲು ಡೇಟಾವನ್ನು ಸಂಗ್ರಹಿಸಲಾಗುತ್ತಿದೆ ಎಂದು ಡಿಎಚ್‌ಗೆ ತಿಳಿಸಿದ್ದಾರೆ. “ಪ್ರತಿದಿನ, ವಿದ್ಯುನ್ಮಾನ ಮತ್ತು ಮುದ್ರಣ ಮಾಧ್ಯಮಗಳು ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಧಿಕ್ಕರಿಸಿ ಮನೆಗೆ ಮರಳಿದ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯ ವಿವಿಧ ಅಂಕಿಅಂಶಗಳೊಂದಿಗೆ ಸಮಸ್ಯೆಯನ್ನು ವರದಿ ಮಾಡುತ್ತಿವೆ. ವಿದ್ಯಾರ್ಥಿಗಳು ಈ ಸಮಸ್ಯೆಯಿಂದ ನಿಜವಾಗಿಯೂ ತೊಂದರೆಗೀಡಾಗಿದ್ದಾರೆಯೇ ಅಥವಾ ಅಧ್ಯಯನದ ಮೇಲೆ ಕೇಂದ್ರೀಕರಿಸಿದ್ದಾರೆಯೇ ಎಂದು ನೋಡುವುದು ನಮ್ಮ ಉದ್ದೇಶವಾಗಿತ್ತು. ಸುತ್ತಲೂ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಗಮನವಿಲ್ಲದೆ ಎಷ್ಟು ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗುತ್ತಿದ್ದಾರೆ ಎಂಬುದನ್ನು ನಾವು ತಿಳಿದುಕೊಳ್ಳಲು ಬಯಸಿದ್ದೇವೆ” ಎಂದು ಸಚಿವರು ಹೇಳಿದ್ದಾರೆ.

ಗುರುವಾರದಂದು ರಾಜ್ಯದ 14 ಶಾಲೆಗಳಲ್ಲಿ ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಧಿಕ್ಕರಿಸಿದ ಒಟ್ಟು 162 ವಿದ್ಯಾರ್ಥಿನಿಯರನ್ನು ಮನೆಗೆ ಕಳುಹಿಸಲಾಗಿದೆ ಎಂದು ಇಲಾಖೆಯ ಅಂಕಿಅಂಶಗಳು ಹೇಳಿವೆ. “ಬೀದರ್ ಒಂದರಲ್ಲೇ, ಹೈಕೋರ್ಟ್ ನಿರ್ದೇಶನವನ್ನು ಧಿಕ್ಕರಿಸಿದ ಮತ್ತು ತರಗತಿಯೊಳಗೆ ಹಿಜಾಬ್ ತೆಗೆಯಲು ನಿರಾಕರಿಸಿದ ಏಳು ಶಾಲೆಗಳ 114 ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ. ಅದೇ ರೀತಿ ಶಿವಮೊಗ್ಗದ ಮೂರು ಶಾಲೆಗಳ 20 ವಿದ್ಯಾರ್ಥಿಗಳು, ಚಿತ್ರದುರ್ಗದ ಎರಡು ಶಾಲೆಗಳಲ್ಲಿ 18 ವಿದ್ಯಾರ್ಥಿನಿಯರು ಮತ್ತು ಚಿಕ್ಕಮಗಳೂರಿನ ಶಾಲೆಯಲ್ಲಿ ಎಂಟು ಮತ್ತು ಚಿಕ್ಕಬಳ್ಳಾಪುರದ ಇಬ್ಬರು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ಡಿಎಚ್‌ ವರದಿ ಮಾಡಿದೆ.

ಇದನ್ನೂ ಓದಿ: ಹಿಜಾಬ್ ಸಮಸ್ಯೆಯಲ್ಲ: ಬಡತನ, ನಿರುದ್ಯೋಗ, ದೇಶದ ಅಭಿವೃದ್ದಿ ಬಗ್ಗೆ ಚರ್ಚಿಸೋಣ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read