ಸಾಕಷ್ಟು ದಾಸ್ತಾನುಗಳಿದ್ದರೂ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟದಲ್ಲಿ ಸಾರವರ್ಧಿತ (fortified) ಅಕ್ಕಿಯ ಬಳಕೆಯನ್ನು ಕಡಿಮೆ ಮಾಡಿರುವ ಬಗ್ಗೆ ಒಕ್ಕೂಟ ಸರ್ಕಾರವು ಅಸಮಾಧಾನ ವ್ಯಕ್ತಪಡಿಸಿದ್ದು, ಸಾರವರ್ಧಿತ ಅಕ್ಕಿಯ ಬಳಕೆಯನ್ನು ತ್ವರಿತವಾಗಿ ಹೆಚ್ಚಿಸುವಂತೆ ರಾಜ್ಯಗಳಿಗೆ ಸೂಚಿಸಿದೆ.
ಒಕ್ಕೂಟ ಸರ್ಕಾರದ ಶಿಕ್ಷಣ ಸಚಿವಾಲಯವು ಅಕ್ಟೋಬರ್ 20 ರಂದು ಈ ವಿಷಯದ ಕುರಿತು ರಾಜ್ಯಗಳಿಗೆ ಪತ್ರ ಬರೆದಿದೆ. ಪತ್ರದಲ್ಲಿ, “ಪ್ರಧಾನ ಮಂತ್ರಿಗಳು ನಿಗದಿಪಡಿಸಿದ ಗುರಿಯನ್ನು ಗಮನದಲ್ಲಿಟ್ಟುಕೊಂಡು, ಸಾರವರ್ಧಿತ ಅಕ್ಕಿ ದಾಸ್ತಾನು ಬಳಕೆಯನ್ನು ತ್ವರಿತಗೊಳಿಸಬೇಕು” ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಂಟಿ ಕಾರ್ಯದರ್ಶಿ ಆರ್‌ಸಿ ಮೀನಾ ಅವರು ರಾಜ್ಯ ಶಿಕ್ಷಣ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ‘Tika ಉತ್ಸವ’ ಆಯ್ತು, ಇನ್ನು ‘ತಿಥಿ ಭೋಜನ’!: ಬಿಸಿಯೂಟ ಹೆಸರು ಬದಲಾವಣೆ ಬಗ್ಗೆ ನೆಟ್ಟಿಗರು
ಮಧ್ಯಾಹ್ನದ ಊಟದ ಯೋಜನೆಯನ್ನು ಸೆಪ್ಟೆಂಬರ್‌ನಲ್ಲಿ ಪಿಎಂ ಪೋಷಣ್ ಎಂದು ಮರುನಾಮಕರಣ ಮಾಡಲಾಗಿದೆ. ಈ ವರ್ಷದ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು 2024 ರ ವೇಳೆಗೆ ಪಡಿತರ ಯೋಜನೆ ಮತ್ತು ಮಧ್ಯಾಹ್ನದ ಊಟ ಯೋಜನೆ ಮತ್ತು ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್) ಅಡಿಯಲ್ಲಿ ಸಾರೀಕೃತ ಅಕ್ಕಿಯನ್ನು ಮಾತ್ರವೇ ವಿತರಿಸಲಾಗುವುದು ಎಂದು ಘೋಷಿಸಿದ್ದರು.
“ಬಡ ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಅಗತ್ಯ ಪೋಷಕಾಂಶಗಳ ಕೊರತೆಯು ಕಂಡುಬರುತ್ತಿದೆ. ಇದು ಅವರ ದೈಹಿಕ ಮತ್ತು ಮಾನಸಿಕ ಅಭಿವೃದ್ಧಿಗೆ ಪ್ರಮುಖ ಅಡೆತಡೆಗಳನ್ನು ಒಡ್ಡುತ್ತದೆ…” ಎಂದು ಪ್ರಧಾನಿ ಹೇಳಿದ್ದರು.
ಸರ್ಕಾರದ ದಾಖಲೆಗಳ ಪ್ರಕಾರ, ಪಿಎಂ ಪೋಷಣ್ ಮತ್ತು ಐಸಿಡಿಎಸ್ ಯೋಜನೆಗಳ ಅಡಿಯಲ್ಲಿ ಕ್ರಮವಾಗಿ 1.05 ಮತ್ತು 6.36 ಎಲ್ಎಂಟಿ (ಲಕ್ಷ ಮೆಟ್ರಿಕ್ ಟನ್) ಸಾರವರ್ಧಿತ ಅಕ್ಕಿಯನ್ನು ಹಂಚಿಕೆ ಮಾಡಲಾಗಿದೆ. ಆದರೆ ಇದುವರೆಗೆ ಕ್ರಮವಾಗಿ 0.57 ಎಲ್‌ಎಂಟಿ ಮತ್ತು 2.09 ಎಲ್‌ಎಂಟಿ ಮಾತ್ರ ರಾಜ್ಯಗಳಿಂದ ಬಳಲ್ಪಟ್ಟಿವೆ. PM ಪೋಷಣ್ ಅಡಿಯಲ್ಲಿ ಅಕ್ಟೋಬರ್-ಮಾರ್ಚ್ ಅವಧಿಯಲ್ಲಿ ಒಟ್ಟು 13.9 LMT ಅಕ್ಕಿಯ ಹಂಚಿಕೆಯಾಗಿದೆ.
‘‘ಸಾಕಷ್ಟು ಪ್ರಮಾಣದಲ್ಲಿ ಸಾರವರ್ಧಿತ ಅಕ್ಕಿ ಲಭ್ಯವಿದ್ದರೂ” ಶಿಕ್ಷಣ ಸಚಿವಾಲಯದ ನಿರ್ದೇಶನಗಳ ಕೊರತೆಯಿಂದಾಗಿ ರಾಜ್ಯಗಳು ತಮ್ಮ ಪಾಲನ್ನು ಬಳಸುತ್ತಿಲ್ಲ ಎಂದು FCI ಒಕ್ಕೂಟ ಸರ್ಕಾರಕ್ಕೆ ತಿಳಿಸಿದೆ.
ಇದನ್ನೂ ಓದಿ: ‘ಪಿಎಂ ಪೋಶನ್’: ಬಿಸಿಯೂಟ ಯೋಜನೆಯ ಹೆಸರು ಬದಲಿಸಿದ ಒಕ್ಕೂಟ ಸರ್ಕಾರ!


