ಹಾಸ್ಯ ಕಾರ್ಯಕ್ರಮವೊಂದರಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ವಿರುದ್ಧ ನೀಡಿದ್ದ ಹೇಳಿಕೆ ಬಗ್ಗೆ ದಾಖಲಾಗಿರುವ ಪ್ರಕರಣದ ಹಿನ್ನಲೆ ಮುಂಬೈ ಪೊಲೀಸರು ಬುಧವಾರ ಸ್ಟ್ಯಾಂಡ್-ಅಪ್ ಹಾಸ್ಯನಟ ಕುನಾಲ್ ಕಮ್ರಾ ವಿರುದ್ಧ ಎರಡನೇ ನೋಟಿಸ್ ಜಾರಿ ಮಾಡಿದ್ದಾರೆ. ಶಿಂಧೆ ವಿರುದ್ಧ ಹೇಳಿಕೆ
ಶಿವಸೇನಾ ಶಾಸಕ ಮುರ್ಜಿ ಪಟೇಲ್ ಅವರು ನೀಡಿದ ದೂರಿನ ಮೇರೆಗೆ ಮುಂಬೈನ ಖಾರ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ತನಿಖಾಧಿಕಾರಿಯ ಮುಂದೆ ಹಾಜರಾಗಲು ಕುನಾಲ್ ಅವರನ್ನು ಕೇಳಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು ವರದಿಯಾಗಿದೆ. ಅದಾಗ್ಯೂ, ಅವರು ಯಾವಾಗ ಹಾಜರಾಗಬೇಕು ಎಂಬುದು ಸ್ಪಷ್ಟವಾಗಿಲ್ಲ.
ಮಂಗಳವಾರ ಕುನಾಲ್ ಅವರಿಗೆ ಮೊದಲ ನೋಟಿಸ್ ಜಾರಿ ಮಾಡಿದ್ದ ಪೊಲೀಸರು, ಅವರ ವಿರುದ್ಧದ ಮಾನನಷ್ಟ ಪ್ರಕರಣದ ತನಿಖೆಯನ್ನು ಪ್ರಾರಂಭಿಸುವಂತೆ ಕೋರಿದ್ದರು. ಮೊದಲ ನೋಟಿಸ್ ನಂತರ, ಶಿವಸೇನೆ ಕಾರ್ಯಕರ್ತರಿಂದ ಕೊಲೆ ಬೆದರಿಕೆ ಇದೆ ಎಂದು ಉಲ್ಲೇಖಿಸಿ ಕುನಾಲ್ ಅವರು ಪೊಲೀಸರ ಮುಂದೆ ಹಾಜರಾಗಲು ಒಂದು ವಾರದ ಸಮಯ ಕೋರಿದ್ದರು.
ಕೆಲವು ದಿನಗಳ ಹಿಂದೆ ಮುಂಬೈನ ಸ್ಟುಡಿಯೋವೊಂದರಲ್ಲಿ ರೆಕಾರ್ಡ್ ಮಾಡಲಾದ ತಮ್ಮ ಕಾರ್ಯಕ್ರಮದಲ್ಲಿ ಶಿವಸೇನಾ ಮುಖ್ಯಸ್ಥ ಶಿಂಧೆ ವಿರುದ್ಧ ಹಾಸ್ಯನಟ ಕುನಾಲ್ ಕಮ್ರಾ ತೀವ್ರ ಟೀಕೆಗಳನ್ನು ಮಾಡುವ ಮೂಲಕ ಮಹಾರಾಷ್ಟ್ರದಲ್ಲಿ ದೊಡ್ಡ ರಾಜಕೀಯ ಬಿರುಗಾಳಿ ಎಬ್ಬಿಸಿದ್ದಾರೆ.
ಶಿಂಧೆ ಅವರ ಹೆಸರನ್ನು ಉಲ್ಲೇಖಿಸದೆ, ಉಪಮುಖ್ಯಮಂತ್ರಿ ಅವರ ರಾಜಕೀಯ ಜೀವನದ ಬಗ್ಗೆ ಕುನಾಲ್ ಟೀಕಿಸಿದ್ದರು. ಅದರಲ್ಲಿ 2022 ರಲ್ಲಿ ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವನ್ನು ಉರುಳಿಸಿದ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧದ ದಂಗೆಯ ವಿಚಾರವೂ ಸೇರಿತ್ತು.
ಶಿಂಧೆ ಅವರನ್ನು “ಗದ್ದರ್” (ದೇಶದ್ರೋಹಿ) ಎಂದು ಉಲ್ಲೇಖಿಸಿ “ದಿಲ್ ತೋ ಪಾಗಲ್ ಹೈ” ಚಿತ್ರದ ಜನಪ್ರಿಯ ಹಿಂದಿ ಹಾಡಿನ ವಿಡಂಬನೆಯನ್ನು ಕುನಾಲ್ ಪ್ರದರ್ಶಿಸಿದ್ದರು. ಶಿವಸೇನೆ (2022) ಮತ್ತು ಎನ್‌ಸಿಪಿ (2023) ವಿಭಜನೆ ಸೇರಿದಂತೆ ಮಹಾರಾಷ್ಟ್ರದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆಯೂ ಅವರು ಹಾಸ್ಯ ಚಟಾಕಿ ಹಾರಿಸಿದ್ದರು.
ಭಾನುವಾರ ರಾತ್ರಿ, ಶಿವಸೇನೆ ಸದಸ್ಯರು ಕುನಾಲ್ ಅವರ ಕಾರ್ಯಕ್ರಮ ನಡೆದ ಖಾರ್‌ನಲ್ಲಿರುವ ಹ್ಯಾಬಿಟಾಟ್ ಕಾಮಿಡಿ ಕ್ಲಬ್ ಮತ್ತು ಸ್ಥಳ ಇರುವ ಹೋಟೆಲ್‌ಗೆ ಹಾನಿ ಮಾಡಿದ್ದರು. ಇದರ ನಂತರ ಶಿವಸೇನೆ ಶಾಸಕ ಪಟೇಲ್ ಅವರ ದೂರಿನ ಆಧಾರದ ಮೇಲೆ, ಶಿಂಧೆ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಖಾರ್ ಪೊಲೀಸರು ಕುನಾಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಈ ನಡುವೆ ಕುನಾಲ್ ಅವರ ಕಾರ್ಯಕ್ರಮ ನಡೆದ ಸ್ಥಳವನ್ನು ಧ್ವಂಸ ಮಾಡಿದ್ದಕ್ಕಾಗಿ ಶಿಂಧೆ ನೇತೃತ್ವದ ಶಿವಸೇನೆಯ 40 ದುಷ್ಕರ್ಮಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸೋಮವಾರ, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ದರೋಡೆ ಮಾಡಿದ್ದಕ್ಕಾಗಿ ಪೊಲೀಸರು ಶಿವಸೇನೆ ಕಾರ್ಯಕರ್ತ ರಾಹುಲ್ ಕನಾಲ್ ಮತ್ತು ಇತರ 11 ಜನರನ್ನು ಬಂಧಿಸಿದ್ದಾರೆ. ಅದೇ ದಿನ ಸ್ಥಳೀಯ ನ್ಯಾಯಾಲಯವು ಅವರಿಗೆ ಜಾಮೀನು ನೀಡಿತು.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಮೈತ್ರಿಕೂಟದ ಹಲವಾರು ನಾಯಕರು ಕಮ್ರಾ ಅವರ ಹಾಸ್ಯವನ್ನು ಖಂಡಿಸಿದರೆ, ವಿರೋಧ ಪಕ್ಷದ ನಾಯಕರು ಹಾಸ್ಯನಟನ ವಿರುದ್ಧದ ವಿಧ್ವಂಸಕ ಕೃತ್ಯ ಮತ್ತು ಬೆದರಿಕೆಗಳನ್ನು ಟೀಕಿಸಿದ್ದಾರೆ. ಇದನ್ನು ಅವರು ವಾಕ್ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಕರೆದಿದ್ದಾರೆ.
ಅದೇ ರೀತಿ, ಮಹಾರಾಷ್ಟ್ರ ಸರ್ಕಾರವು ಕುನಾಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದು, ಅಧಿಕಾರಿಗಳು ಕುನಾಲ್ ಅವರ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಮಂಗಳವಾರದಂದು ಕುನಾಲ್ ಅವರು ಪ್ರದರ್ಶನ ನೀಡಿದ್ದ ಕಾಮಿಡಿ ಕ್ಲಬ್ ಅನ್ನು ಧ್ವಂಸ ಮಾಡಿದ್ದಕ್ಕಾಗಿ ಶಿವಸೇನೆ ಕಾರ್ಯಕರ್ತರನ್ನು ಅಪಹಾಸ್ಯ ಮಾಡಲು ಹೊಸ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಅದಕ್ಕೂ ಒಂದು ದಿನ ಮೊದಲು ಅವರು ತನ್ನ ಹೇಳಿಕೆಗಳಿಗೆ ಕ್ಷಮೆಯಾಚಿಸುವುದಿಲ್ಲ ಎಂದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, “ಈ ಜನಸಮೂಹಕ್ಕೆ ನಾನು ಹೆದರುವುದಿಲ್ಲ ಮತ್ತು ಸಾಯುವವರೆಗೆ ಕಾಯುತ್ತಾ ನನ್ನ ಹಾಸಿಗೆಯ ಕೆಳಗೆ ಅಡಗಿಕೊಳ್ಳುವುದಿಲ್ಲ” ಎಂದು ಹೇಳಿದ್ದರು.
ತನ್ನ ವಿರುದ್ಧ ತೆಗೆದುಕೊಂಡ ಯಾವುದೇ ಕಾನೂನುಬದ್ಧ ಕ್ರಮಕ್ಕೆ ಪೊಲೀಸರು ಮತ್ತು ನ್ಯಾಯಾಲಯಗಳೊಂದಿಗೆ ಸಹಕರಿಸುವುದಾಗಿ ಹೇಳಿರುವ ಕುನಾಲ್, ತನ್ನ ಹಾಸ್ಯ ಕಾರ್ಯಕ್ರಮವನ್ನು ಚಿತ್ರೀಕರಿಸಿದ ಸ್ಥಳವನ್ನು ಧ್ವಂಸ ಮಾಡಿದವರ ವಿರುದ್ಧ ನ್ಯಾಯಯುತ ಕ್ರಮ ಕೈಗೊಳ್ಳಲಾಗುತ್ತದೆಯೇ ಎಂದು ಪ್ರಶ್ನಿಸಿದ್ದರು. ಶಿಂಧೆ ವಿರುದ್ಧ ಹೇಳಿಕೆ
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಚಾಮರಾಜನಗರ ಆಕ್ಸಿಜನ್ ದುರಂತ | ನ್ಯಾ.ಬಿ.ಎ ಪಾಟೀಲ್ ವರದಿ ತಿರಸ್ಕಾರ; ಡಿಸಿಎಂ ಡಿ.ಕೆ ಶಿವಕುಮಾರ್
ಚಾಮರಾಜನಗರ ಆಕ್ಸಿಜನ್ ದುರಂತ | ನ್ಯಾ.ಬಿ.ಎ ಪಾಟೀಲ್ ವರದಿ ತಿರಸ್ಕಾರ; ಡಿಸಿಎಂ ಡಿ.ಕೆ ಶಿವಕುಮಾರ್

