ಬೆಂಗಳೂರು: ಧರ್ಮಸ್ಥಳದಲ್ಲಿ ಬಯಲಿಗೆ ಬಂದಿರುವ ಅತ್ಯಾಚಾರಗಳು ಮತ್ತು ಕೊಲೆಗಳ ಸಮಗ್ರ ತನಿಖೆಗಾಗಿ ಸಿಟ್ ರಚನೆಗೆ ಆಗ್ರಹಿಸಿ ನಾಳೆ (ಜು.21) ರಾಜ್ಯದ್ಯಂತ ಪ್ರತಿಭಟನೆ ನಡೆಸಲಾಗುವುದು ಮತ್ತು ಈ ಕುರಿತು ಪತ್ರಿಕಾಗೋಷ್ಠಿಗಳನ್ನು ನಡೆಸಲಾಗುವುದು ಎಂದು ಕರ್ನಾಟಕ ಜನಶಕ್ತಿ, ಮಹಿಳಾ ಮುನ್ನಡೆ ಮತ್ತು ಸಮಾನ ಮನಸ್ಕರ ಸಂಘಟನೆಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿವೆ.
ಧರ್ಮಸ್ಥಳದಲ್ಲಿ ನಡೆದಿರುವ ಎಲ್ಲಾ ಅಪಹರಣ, ಅತ್ಯಾಚಾರ, ಕೊಲೆ ಪ್ರಕರಣಗಳ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ದಳ (ಸಿಟ್) ಈ ಕೂಡಲೆ ರಚನೆಯಾಗಲೇಬೇಕು. ನಿಜವಾದ ಅಪರಾಧಿಗಳ ಬಂಧನವಾಗಬೇಕು ಎಂದು ಈ ಹೇಳಿಕೆ ತಿಳಿಸಿದೆ.
ಸೌಜನ್ಯ ಪ್ರಕರಣದಲ್ಲಿ ಸಿಬಿಐ ಕೋರ್ಟ್ ಸೂಚನೆಯಂತೆ ಕೂಡಲೇ ಪ್ರಕರಣದ ತನಿಖೆಯ ಜವಾಬ್ದಾರಿ ಹೊತ್ತಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮ ಮತ್ತು ಪ್ರಕರಣದ ಮರುತನಿಖೆ ಆಗಬೇಕು ಎಂದು ಈ ಸಂಘಟನೆಗಳು ಒತ್ತಾಯಿಸಿವೆ.

ಖಾಸಗಿ ಒಡೆತನದಲ್ಲಿ ನಡೆಯುತ್ತಾ ಬಂದ ಧರ್ಮಸ್ಥಳ ದೇವಾಲಯದ ದುಷ್ಕೃತ್ಯಗಳು ಶಾಶ್ವತವಾಗಿ ನಿಲ್ಲುವಂತೆ ಸರಕಾರ ದೇವಾಲಯವನ್ನು ಮುಜರಾಯಿ ಇಲಾಖೆಯ ವಶಕ್ಕೆ ಪಡೆಯಬೇಕು ಎಂದು ಈ ಹೇಳಿಕೆಯಲ್ಲಿ ಆಗ್ರಹಿಸಿವೆ.
ಸಾಮಾನ್ಯ ಜನರ ದೇವರ ಮೇಲಿನ ನಂಬಿಕೆಯನ್ನು ದುರ್ಬಳಕೆ ಮಾಡಿಕೊಳ್ಳುವ ಎಲ್ಲಾ ಧಾರ್ಮಿಕ ಕ್ಷೇತ್ರಗಳ ಮೇಲೆ ನಿಯಂತ್ರಣ ಇಡಬೇಕು ಎಂದು ಈ ಸಂಘಟನೆಗಳು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿವೆ.
ಧರ್ಮಸ್ಥಳದ ನೂರಾರು ಹೆಣ್ಣು ಮಕ್ಕಳ ಅತ್ಯಾಚಾರ ಕೊಲೆಗಳ ಹಿಂದೆ ಅಡಗಿರುವ ವ್ಯಕ್ತಿಗಳ ಅನಾವರಣಕ್ಕೆ ಇನ್ನೆಷ್ಟು ಹೆಣ್ಣು ಮಕ್ಕಳ ಬಲಿಯಾಗಬೇಕು. ಸಿಟ್ ರಚನೆಗೆ ಮುಂದಾಗದಂತೆ ಸರಕಾರವನ್ನು ತಡೆಯುತ್ತಿರುವ ಕಾಣದ ಕೈಗಳು ಯಾವುವು ಎಂದು ಈ ಹೇಳಿಕೆಯಲ್ಲಿ ಪ್ರಶ್ನಿಸಲಾಗಿದೆ.
ಧರ್ಮಸ್ಥಳ ಪ್ರಕರಣ: ನ್ಯಾಯಕ್ಕಾಗಿ ಹೋರಾಟ, ಸವಾಲುಗಳು ಮತ್ತು ನಿರೀಕ್ಷೆಗಳು – ಸಮಗ್ರ ವಿಶ್ಲೇಷಣೆ


