‘ಹಿಂದಿ ದಿವಸ್’ ಆಚರಣೆಯನ್ನು ವಿರೋಧಿಸಿ ‘ಕರ್ನಾಟಕ ರಕ್ಷಣಾ ವೇದಿಕೆ’(ಕರವೇ) ವತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ನೂರಾರು ಕರವೇ ಕಾರ್ಯಕರ್ತರು ರಾಜ್ಯದಲ್ಲಿರುವ ಬ್ಯಾಂಕುಗಳ ಮುಂದೆ ಜಮಾಯಿಸಿ ಹಿಂದಿ ಹೇರಿಕೆಯನ್ನು ವಿರೋಧಿಸಿ ಘೋಷನೆಗಳನ್ನು ಕೂಗುತ್ತಿದ್ದಾರೆ. ಈಗಾಗಲೆ ಸುಮಾರು 1500 ಕಡೆ ಪ್ರತಿಭಟನೆಗಳು ನಡೆದಿದ್ದು, ಸಂಜೆಯ ಹೊತ್ತಿಗೆ ಸುಮಾರು 2 ಸಾವಿರಕ್ಕೂ ಹೆಚ್ಚು ಕಡೆಗಳಲ್ಲಿ ಪ್ರತಿಭಟನೆ ದಾಖಲಾಗಲಿದೆ ಎಂದು ಕರವೇ ಹೇಳಿದೆ.
‘ಹಿಂದಿ ದಿನ’ ವಿರೋಧಿ ಪ್ರತಿಭಟನೆಗಾಗಿ ವೇದಿಕೆ ಸುಮಾರು 300 ಕ್ಕೂ ಹೆಚ್ಚು ಪೂರ್ವಭಾವಿ ಸಭೆಗಳನ್ನು ನಡೆಸಿತ್ತು ಎಂದು ವೇದಿಕೆಯ ಸಾಮಾಜಿಕ ಜಾಲತಾಣ ಮುಖ್ಯಸ್ಥರಾಗಿರುವ ದಿನೇಶ್ ಕುಮಾರ್ ಅವರು ಈ ಹಿಂದೆ ಹೇಳಿದ್ದರು. ರಾಜ್ಯ, ಜಿಲ್ಲೆ, ತಾಲ್ಲೂಕು, ಹೋಬಳಿ ಮಟ್ಟಗಳಲ್ಲಿ ಈ ಸಭೆಗಳನ್ನು ನಡೆಸಲಾಗಿತ್ತು ಎಂದು ಅವರು ತಿಳಿಸಿದ್ದರು.
ಇದನ್ನೂ ಓದಿ: ಸೆ.14 ರಂದು ’ಹಿಂದಿ ಹೇರಿಕೆ ನಿಲ್ಲಿಸಿ’ ಟ್ವಿಟರ್ ಆಂದೋಲನಕ್ಕೆ ಕ ರ ವೇ ಕರೆ
ಇಂದಿನ ಪ್ರತಿಭಟನೆ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ದಿನೇಶ್ ಕುಮಾರ್ ಅವರು, “ನಾವು ಮೊದಲಿಗೆ 1 ಸಾವಿರ ರಾಷ್ಟ್ರೀಕೃತ ಬ್ಯಾಂಕ್‌ಗಳ ಮುಂದೆ ಮಾತ್ರ ಪ್ರತಿಭಟನೆ ಮಾಡಲಿದ್ದೇವೆ ಎಂದು ತೀರ್ಮಾನಿಸಿದ್ದೆವು. ಆದರೆ ನಮ್ಮ ಕಾರ್ಯಕರ್ತರು ಖಾಸಗಿ ಬ್ಯಾಂಕುಗಳ ಮುಂದೆ ಕೂಡಾ ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ರಾಜ್ಯದಾದದ್ಯಂತ 1500 ಕ್ಕೂ ಹೆಚ್ಚು ಕಡೆಯಲ್ಲಿ ಪ್ರತಿಭಟನೆಗಳು ನಡೆದಿವೆ. ಸಂಜೆಯ ಹೊತ್ತಿಗೆ 2 ಸಾವಿರಕ್ಕೂ ಹೆಚ್ಚು ಕಡೆಗಳಲ್ಲಿ ಪ್ರತಿಭಟನೆ ದಾಖಲಾಗಲಿದೆ” ಎಂದು ತಿಳಿಸಿದ್ದಾರೆ.
‘ಹಿಂದಿ ದಿನ’ ವಿರೋಧಿಸಿ ‘ಕರ್ನಾಟಕ ರಕ್ಷಣಾ ವೇದಿಕೆ’ ವತಿಯಿಂದ ಪ್ರತಿಭಟನೆಗಳ ಝಲಕ್
‘ಕರವೇ’ ಪ್ರತಿಭಟನೆ ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲೂ ಹಿಂದಿ ಹೇರಿಕೆಯನ್ನು ವಿರೋಧಿಸಿ ಹ್ಯಾಶ್ ಟ್ಯಾಗ್ ಚಳುವಳಿಗೆ ಕರೆ ನೀಡಿದೆ. ಸೆಪ್ಟೆಂಬರ್ 14 ಮಂಗಳವಾರ ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸತತ 12 ಗಂಟೆಗಳು #StopHindiImposition ಮತ್ತು #ಹಿಂದಿಹೇರಿಕೆನಿಲ್ಲಿಸಿ ಎಂಬ ಹ್ಯಾಶ್‌ಟ್ಯಾಗ್ ಅಡಿಯಲ್ಲಿ ಟ್ವಿಟರ್ ಅಭಿಯಾನವನ್ನು ಕರವೇ ಹಮ್ಮಿಕೊಂಡಿದೆ. ವೇದಿಕೆಯ ಕರೆಗೆ ಜನರು ಸಾಮಾಜಿಕ ಜಾಲತಾಣದಲ್ಲೂ ಕೈಜೋಡಿಸಿದ್ದಾರೆ. ಈಗಾಗಲೆ ಹ್ಯಾಶ್‌ಟ್ಯಾಗ್‌ಗಳು ಟ್ರೆಂಡ್ ಆಗಿವೆ.
ಇದನ್ನೂ ಓದಿ: ಕನ್ನಡಿಗರಿಗೆ ಹಿಂದಿ ದಿವಸ ಬೇಕಾಗಿಲ್ಲ; ರಾಜ್ಯಾದ್ಯಂತ ಪ್ರತಿಭಟನೆಗೆ ಕ ರ ವೇ ಸಜ್ಜು: ನಾರಾಯಣಗೌಡ


