ನಾರಾಯಣಗೌಡ
ಕರವೇ ರಾಜ್ಯಾಧ್ಯಕ್ಷರಾದ ನಾರಾಯಣಗೌಡ

ಸೆಪ್ಟೆಂಬರ್ 14ರಂದು ಭಾರತ ಒಕ್ಕೂಟ ಸರ್ಕಾರ ನಡೆಸುವ ಹಿಂದಿ ದಿವಸ ಆಚರಣೆಗೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ವಿರೋಧಿಸುತ್ತದೆ. ಆ ದಿನದಂದು ರಾಜ್ಯದ ಎಲ್ಲ ಭಾಗಗಳಲ್ಲೂ ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕ್ ಗಳ ಮುಂಭಾಗ  ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಕನ್ನಡಿಗರ ತೆರಿಗೆ ಹಣದಲ್ಲಿ ನಡೆಸಲಾಗುವ ಹಿಂದಿ ದಿವಸ ಆಚರಣೆ ಕನ್ನಡಿಗರಿಗೆ ಬೇಕಾಗಿಲ್ಲ. ಭಾಷಾ ವೈವಿಧ್ಯದ ಭಾರತದಲ್ಲಿ ಒಂದು ಭಾಷೆಯನ್ನು ಹೊತ್ತು ಮೆರೆಸುವುದರ ಅಗತ್ಯವಿಲ್ಲ. ಭಾರತೀಯ ಭಾಷೆಗಳಲ್ಲಿ ಹಿಂದಿಯೂ ಒಂದು, ಅದಕ್ಕೆ ವಿಶೇಷ ಮಹತ್ವ, ಪ್ರೋತ್ಸಾಹ ನೀಡುವುದು ಅನ್ಯಾಯ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದ ಸಂವಿಧಾನದ ಹದಿನಾಲ್ಕನೇ ಪರಿಚ್ಛೇದವು ಪ್ರತಿಯೊಬ್ಬ ಭಾರತೀಯನಿಗೂ ಸಮಾನತೆಯ ಹಕ್ಕನ್ನು ನೀಡುತ್ತದೆ. ಹಿಂದಿ ದಿವಸ ಆಚರಣೆಯ ಮೂಲಕ ಇತರ ಭಾರತೀಯ ಭಾಷೆಗಳನ್ನು ಕಡೆಗಣಿಸಿ, ಇತರ ಭಾಷಿಕರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿಸುವುದು ಅಕ್ಷಮ್ಯ. ಇದು ಇನ್ನು ಮೇಲಾದರೂ ನಿಲ್ಲಬೇಕಿದೆ ಎಂದು ಆಗ್ರಹಿಸಿದ್ದಾರೆ.

ಹಿಂದಿನುಡಿಯೊಂದನ್ನು ಇಡೀ ದೇಶದಲ್ಲಿ ಬೆಳೆಸುವ ಪ್ರಮುಖ ಉದ್ದೇಶ, ಹಿಂದಿ ಭಾಷಿಕರಿಗೆ ಎಲ್ಲ ರಾಜ್ಯಗಳಲ್ಲೂ ಅಗತ್ಯ ಸೇವೆಗಳನ್ನು ಕಲ್ಪಿಸುವುದೇ ಆಗಿದೆ. ಇದರ ಮೂಲಕ ಇತರ ಭಾಷಿಕರಿಗೆ ಇಲ್ಲದ ಸೌಲಭ್ಯ ಹಿಂದಿ ಭಾಷಿಕರಿಗೆ ಒದಗಿಸಲಾಗುತ್ತಿದೆ. ಇದು ಸಂವಿಧಾನದ ಸಮಾನತೆಯ ಆಶಯಗಳಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.

ಒಕ್ಕೂಟ ಸರ್ಕಾರದ ನೇತೃತ್ವವನ್ನು ಯಾವುದೇ ರಾಜಕೀಯ ಪಕ್ಷ ಹಿಡಿದರೂ ಹಿಂದಿ ಹೇರಿಕೆಯನ್ನು ಎಗ್ಗಿಲ್ಲದೆ ನಡೆಸಲಾಗುತ್ತಿದೆ. ಕಳೆದ ಇಪ್ಪತ್ತು ವರ್ಷಗಳಿಂದಲೂ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿವರ್ಷ ಹಿಂದಿ ದಿವಸ ಆಚರಣೆಯನ್ನು ವಿರೋಧಿಸುತ್ತ ಬಂದಿದೆ. ಭಾರತದ ಎಲ್ಲ ಭಾಷೆಗಳಿಗೂ ಸಮಾನ ಸ್ಥಾನಮಾನ ದೊರೆಯುವವರೆಗೆ ಈ ಪ್ರತಿರೋಧ ಮುಂದುವರೆಯಲಿದೆ ಎಂದು ಎಚ್ಚರಿಸಿದ್ದಾರೆ.

ಭಾರತ ಒಕ್ಕೂಟ ಸರ್ಕಾರ ಸಂವಿಧಾನದ 343ರಿಂದ 351ವರೆಗಿನ ಪರಿಚ್ಛೇದಗಳಿಗೆ ತಿದ್ದುಪಡಿ ತಂದು, ಹಿಂದಿ ಭಾಷೆಗೆ ನೀಡಲಾಗಿರುವ ವಿಶೇಷ ಅವಕಾಶಗಳನ್ನು ಕಿತ್ತುಹಾಕಬೇಕು. ಈ ಪರಿಚ್ಛೇದಗಳನ್ನು ತೆಗೆದುಹಾಕದ ಹೊರತು ಭಾರತೀಯರೆಲ್ಲರೂ ಸಮಾನರಾಗಲು ಸಾಧ್ಯವೇ ಇಲ್ಲ. ಭಾಷೆಯ ಹೆಸರಿನ ತಾರತಮ್ಯ ಕೊನೆಗೊಳ್ಳಲೇಬೇಕಾಗಿದೆ. ಹಿಂದಿ ಹೇರಿಕೆಯ ಪರಿಣಾಮವಾಗಿ ಕೇಂದ್ರ ಸರ್ಕಾರದ ಉದ್ಯೋಗಗಳು ಹಿಂದಿ ಭಾಷಿಕರ ಪಾಲಾಗುತ್ತಿವೆ. ಕನ್ನಡದ ಮಕ್ಕಳು ನಿರುದ್ಯೋಗದ ಸಮಸ್ಯೆ ಎದುರಿಸುವಂತಾಗಿದೆ. ಕರ್ನಾಟಕಕ್ಕೆ ಉತ್ತರದ ರಾಜ್ಯಗಳಿಂದ ವಲಸೆ ವಿಪರೀತವಾಗಿದ್ದು, ಕನ್ನಡಿಗರ ಅಸ್ಮಿತೆ, ಸಂಸ್ಕೃತಿ, ಪರಂಪರೆ ಮತ್ತು ಬದುಕು ಅಪಾಯಕ್ಕೆ ಸಿಲುಕಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಂತ್ರಜ್ಞಾನ ಮುಂದುವರೆದಿರುವುದರಿಂದ ಭಾರತದಲ್ಲಿ ಬಹುಭಾಷೆಗಳನ್ನು ಆಡಳಿತ ಭಾಷೆಗಳನ್ನಾಗಿ ಹೊಂದುವುದಕ್ಕೆ ಅವಕಾಶವಿದೆ. ಹಿಂದಿ, ಇಂಗ್ಲಿಷ್ ಮಾತ್ರವಲ್ಲದೆ ದೇಶದ ಎಲ್ಲ ಭಾಷೆಗಳನ್ನೂ ಆಡಳಿತ ಭಾಷೆಗಳನ್ನಾಗಿ ಮಾಡಬೇಕು. ಹಿಂದಿಯನ್ನರು ಶ್ರೇಷ್ಠ, ಉಳಿದವರು ಕನಿಷ್ಠ ಎಂಬ ಧೋರಣೆ ತೊಲಗಬೇಕು‌. ಈ ಎಲ್ಲ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸೆಪ್ಟೆಂಬರ್ 14ರಂದು ರಾಜ್ಯದಾದ್ಯಂತ ಎಲ್ಲ ರಾಷ್ಟ್ರೀಕೃತ, ಗ್ರಾಮೀಣ ಬ್ಯಾಂಕ್ ಗಳ ಮುಂಭಾಗ ಬೆಳಿಗ್ಗೆಯಿಂದ ಸಂಜೆಯವರೆಗೆ ವಿಭಿನ್ನ ರೀತಿಯ ಪ್ರತಿಭಟನೆಗಳನ್ನು ಹಮ್ಮಿಕೊಂಡಿದೆ. ಹಿಂದಿ ದಿವಸ ಆಚರಣೆ ಹೆಸರಿನ‌ ಮೋಸ, ದಬ್ಬಾಳಿಕೆಯನ್ನು ಕರವೇ ತೀವ್ರವಾಗಿ ವಿರೋಧಿಸಲಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ’ನಿಮ್ಮ ದುರಹಂಕಾರದ ನೆತ್ತಿಯ ಮೇಲೆ ಕಾಲಿಟ್ಟು ನಡೆಯುತ್ತೇವೆ’: ಕರವೇ ಅಭಿಯಾನಕ್ಕೆ ವ್ಯಾಪಕ ಬೆಂಬಲ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

1 COMMENT

  1. ಕರ್ನಾಟಕ ರಕ್ಷಣಾ ವೇದಿಕೆಯ ಈ ನಿರ್ದಾರ ಸ್ವಾಗತಾರ್ಹ. ಕನ್ನಡಿಗರೂ ಈ ನಿರ್ಧಾರವನ್ನು ಬೆಂಬಲಿಸಬೇಕು.

LEAVE A REPLY

Please enter your comment!
Please enter your name here