ಕೈಗಾರಿಕೆಗಳು ಪರಿಸರ ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿವೆ ಎಂದು ಯುವಜನರ ನೇತೃತ್ವದ ಚೆನ್ನೈ ಕ್ಲೈಮೇಟ್ ಆಕ್ಷನ್ ಗ್ರೂಪ್ ನಡೆಸಿರುವ ಆರ್.ಟಿ.ಐ ಆಧಾರಿತ ಅಧ್ಯಯನ ಆತಂಕ ವ್ಯಕ್ತಪಡಿಸಿದೆ.
ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿ (ಟಿಎನ್‌ಪಿಸಿಬಿ) ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ಇನ್ನೋರ್-ಮನಾಲಿ ಚಿಲ್ಡ್ರನ್ ಸಂಸ್ಥೆ ಬೇಸರ ವ್ಯಕ್ತಪಡಿಸಿದ್ದು, ಟಿಎನ್‌ಪಿಸಿಬಿ ವಿರುದ್ಧ ಕ್ರಮ ಕೈಗೊಳ್ಳಲು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಲಾಗಿದೆ.
ಚೆನ್ನೈನ ಇನ್ನೋರ್- ಮನಾಲಿ ಪ್ರಾಂತ್ಯದ ಕೈಗಾರಿಕೆಗಳು ಶೇ.50ರಷ್ಟು ಮಾಲಿನ್ಯ ನಿಯಂತ್ರಣ ನಿಯಮಗಳನ್ನು ಉಲ್ಲಂಘಿಸಿದ್ದು, ವಿಷಕಾರಿ ಅನಿಲಗಳು ಪರಿಸರದಲ್ಲಿ ಸೇರಲು ಕಾರಣವಾಗಿವೆ. ಇದೆಲ್ಲವನ್ನೂ ಟಿಎನ್‌ಪಿಸಿಬಿ ಸುಮ್ಮನೆ ಕುಳಿತು ನೋಡುತ್ತಿದೆ. ಯಾವುದೇ ಕ್ರಮವನ್ನು ಜರುಗಿಸುತ್ತಿಲ್ಲ ಎಂದು ಅಧ್ಯಯನ ಆರೋಪಿಸಿದೆ.
ಜನವರಿ 26, 2019ರಿಂದ ಡಿಸೆಂಬರ್ 2019ವರೆಗೆ ಆಗಿರುವ ಮಾಲಿನ್ಯವನ್ನು ಅಧ್ಯಯನದಲ್ಲಿ ಪರಿಶೀಲಿಸಲಾಗಿದೆ. ಆರು ಬೃಹತ್ ಕೈಗಾರಿಕೆಗಳು ಪದೇಪದೇ ನಿಯಮ ಉಲ್ಲಂಘನೆ ಮಾಡುತ್ತಿರುವುದು ತಿಳಿದುಬಂದಿದೆ. ಉತ್ತರ ಚೆನ್ನೈ ಉಷ್ಣ ವಿದ್ಯುತ್ ಘಟಕ, ಎನ್‌ಟಿಪಿಸಿ ತಮಿಳುನಾಡು ಎನಾರ್ಜಿ ಕಾರ್‍ಪೋರೇಷನ್ ಲಿಮಿಟೆಡ್, ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್, ಮದ್ರಾಸ್ ಫಟ್ರಿಲೈಸರ್ ಲಿಮಿಡೆಡ್, ಮನಾಲಿ ಪೆಟ್ರೋಕೆಮಿಕಲ್ ಲಿಮಿಡೆಡ್, ತಮಿಳುನಾಡು ಪೆಟ್ರೊಪ್ರೊಡಕ್ಟ್ ಲಿಮಿಟೆಡ್ – ಈ ಸಂಸ್ಥೆಗಳು ನಿಯಮ ಉಲ್ಲಂಘಿಸುತ್ತಿರುವುದನ್ನು ಸಂಶೋಧನೆ ಉಲ್ಲೇಖಿಸಿದೆ.