Homeಕರ್ನಾಟಕಸಂಗೊಳ್ಳಿ ರಾಯಣ್ಣ-ಶಿವಾಜಿ ಪ್ರತಿಮೆ ವಿವಾದ: ಕನ್ನಡಿಗರು, ಮರಾಠಿಗರ ನಡುವೆ ಘರ್ಷಣೆ

ಸಂಗೊಳ್ಳಿ ರಾಯಣ್ಣ-ಶಿವಾಜಿ ಪ್ರತಿಮೆ ವಿವಾದ: ಕನ್ನಡಿಗರು, ಮರಾಠಿಗರ ನಡುವೆ ಘರ್ಷಣೆ

ಈ ಮಧ್ಯೆ ಸಚಿವ ಸಿ.ಟಿ. ರವಿ, "ಕನ್ನಡಿಗರಿಗೆ ಹೋರಾಟ ಮಾಡುವ ಅವಶ್ಯಕತೆ ಏನಿತ್ತು" ಎಂದು ಪ್ರಶ್ನಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

- Advertisement -
- Advertisement -

ಬೆಳಗಾವಿ ಜಿಲ್ಲೆಯ ಪಿರನವಾಡಿ ಗ್ರಾಮದ ವಿವಾದಿತ ಸ್ಥಳದಲ್ಲಿ ಬುಧವಾರ ತಡರಾತ್ರಿ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಅನಧಿಕೃತವಾಗಿ ಸ್ಥಾಪಿಸಿದ್ದು ಶುಕ್ರವಾರ ಬೆಳಿಗ್ಗೆ ಉದ್ವಿಗ್ನಗೊಂಡು, ಕನ್ನಡಿಗರು ಮತ್ತು ಮರಾಠಿಗರ ನಡುವೆ ಕಲಹಕ್ಕೆ ಕಾರಣವಾಗಿದೆ.

ಇಲ್ಲಿ ಪ್ರತಿಮೆ ಸ್ಥಾಪನೆಯ ನಂತರ ಕೆರಳಿದ ಜನಸಮೂಹವೊಂದು ಧಾವಿಸಿ ಶಿವಾಜಿ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಪಟ್ಟು ಹಿಡಿದಿತ್ತು.

ಶುಕ್ರವಾರ ಮುಂಜಾನೆ ಪೀರನ‌ವಾಡಿ ವೃತ್ತದಲ್ಲಿ ನೆರೆದಿದ್ದ ದೊಡ್ಡ ಜನಸಮೂಹವನ್ನು ನಿಯಂತ್ರಣಕ್ಕೆ ತರುವ ಪೋಲಿಸರ ಪ್ರಯತ್ನಗಳಿಗೆ ತೊಡಕಾಯಿತು.

ನೆರೆದಿದ್ದ ಸಮೂಹ ‘ಜೈ ಭವಾನಿ, ಜೈ ಶಿವಾಜಿ’ ಎಂದು ಘೋಷಣೆಗಳನ್ನು ಕೂಗಿ, ರಾಯಣ್ಣನ ಪ್ರತಿಮೆಯನ್ನು ವೃತ್ತದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದೆ.

ವೃತ್ತಕ್ಕೆ ಶಿವಾಜಿ ಹೆಸರಿದೆ, ಶಿವಾಜಿ ವೃತ್ತದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ನೋಡಿದರೆ ಪ್ರಯಾಣಿಕರಿಗೆ ಗೊಂದಲವಾಗುತ್ತದೆ ಎಂದು ಮರಾಠಿಗರು ವಾದಿಸಿದ್ದಾರೆ.

ಪ್ರತಿಮೆಯನ್ನು ಅನುಮತಿಯಿಲ್ಲದೆ ಸ್ಥಾಪಿಸಲಾಗಿದೆ. ಹಾಗಾಗಿ ಕಾನೂನುಬದ್ಧವಾಗಿ ವ್ಯವಹರಿಸಲಾಗುವುದು. ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಕೆ. ತ್ಯಾಗರಾಜನ್ ತಿಳಿಸಿದ್ದಾರೆ.

ಇದನ್ನು ಖಂಡಿಸಿ ಸಾಮಾಜಿಕ ಮಾಧ್ಯಮಗಳಲ್ಲಿ ಪರ-ವಿರೋಧದ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿದೆ. ಟ್ವಿಟರ್ ನಲ್ಲಿಯೂ ಈ ಚರ್ಚೆ ಟ್ರೆಂಡಿಂಗ್ ಆಗುತ್ತಿದೆ.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, “ಸಂಗೊಳ್ಳಿ‌ ರಾಯಣ್ಣನ ಪ್ರತಿಮೆಸ್ಥಾಪನೆಯನ್ನು @BJP4Karnataka ಸರ್ಕಾರ ನಿರ್ಲಕ್ಷದಿಂದ ವಿವಾದ ಮಾಡಿಕೊಂಡಿದೆ. ನೆಲ, ಜಲ, ಭಾಷೆ ಮತ್ತು ನಾಡಿನ ಹೆಮ್ಮೆಯ ವ್ಯಕ್ತಿತ್ವಗಳ ವಿಷಯದಲ್ಲಿ ರಾಜಿ ಸಲ್ಲದು. ಕನ್ನಡ ಸಂಘಟನೆಗಳು ಮತ್ತು ರಾಯಣ್ಣ ಅಭಿಮಾನಿಗಳು‌ ಕೂಡಾ ಸಂಯಮದಿಂದ ವರ್ತಿಸಿ ವಿವಾದ ಇತ್ಯರ್ಥಕ್ಕೆ ಸಹಕರಿಸಬೇಕು” ಎಂದು ಟ್ವೀಟ್ ಮಾಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, “ಬೆಳಗಾವಿ ಜಿಲ್ಲೆ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಪ್ರತಿಷ್ಟಾಪನೆಗೆ ವಿರೋಧಿಸಿ ಮರಾಠೀ ಭಾಷಿಗರು ದಾಂಧಲೆ ನಡೆಸಿದ್ದು ಅಕ್ಷಮ್ಯ. ನಮ್ಮ ನೆಲದಲ್ಲಿ ಅಪ್ರತಿಮ ಹೋರಾಟಗಾರ ರಾಯಣ್ಣನ ಪ್ರತಿಮೆ ಸ್ಥಾಪನೆಗೆ ಯಾವ ದೊಣ್ಣೆ ನಾಯಕನ ಅಪ್ಪಣೆಯೂ ಬೇಕಿಲ್ಲ” ಎಂದಿದ್ದಾರೆ.

“ಎಂಇಎಸ್, ಶಿವಸೇನೆ ಅಥವಾ ಮತ್ಯಾರೇ ಆಗಲಿ ನಮ್ಮ ನಾಡಿನ ಹೆಮ್ಮೆಯ ವೀರಪುತ್ರ ಸಂಗೊಳ್ಳಿ ರಾಯಣ್ಣನಿಗೆ ಅಪಮಾನ ಮಾಡಿದರೆ ಕನ್ನಡಿಗರ ಸಹನೆ ಪರೀಕ್ಷಿಸಿದಂತೆ. ಇಂತಹ ಉದ್ಧಟತನಗಳನ್ನು ಕನ್ನಡಿಗರು ಸಹಿಸುವುದಿಲ್ಲ ಎಂದು ಎಚ್ಚರಿಸುವೆ” ಎಂದು ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.

ಪೀರನವಾಡಿಯಲ್ಲಿನ ಸದ್ಯದ ಪರಿಸ್ಥಿತಿ ಬಗ್ಗೆ ಬೆಳಗಾವಿ ಜಿಲ್ಲಾಧಿಕಾರಿಗೆ ದೂರವಾಣಿ ಕರೆ ಮಾಡಿ ಮಾಹಿತಿ ಪಡೆದ ಸಿಎಂ ಯಡಿಯೂರಪ್ಪ, “ಅಹಿತಕರ ಘಟನೆಗೆ ಅವಕಾಶ ಕೊಡಬೇಡಿ. ಶಾಂತಿಯುತವಾಗಿ ಪರಿಸ್ಥಿತಿ ನಿಭಾಯಿಸಿ” ಎಂದು ಸೂಚನೆ ನೀಡಿದ್ದಾರೆ.

ಈ ವಿವಾದ ಕುರಿತು ಮಾತನಾಡಿರುವ ಬಸವರಾಜ ಬೊಮ್ಮಾಯಿ, “ನಾನು ಬೆಳಗಾವಿ ಡಿಸಿ ಮತ್ತು ಎಸ್ಪಿ ಜೊತೆ ಮಾತನಾಡಿದ್ದೇನೆ. ಸಂಗೊಳ್ಳಿ ರಾಯಣ್ಣ ಮತ್ತು ಶಿವಾಜಿ ಇಬ್ಬರೂ ದೇಶಭಕ್ತರು. ಅವರ ಗೌರವ ಕಾಪಾಡುವ ಕೆಲಸ ಮಾಡುತ್ತೇವೆ. ಎರಡೂ ಸಮುದಾಯದ ಮುಖಂಡರ ಸಭೆ ನಡೆಯಲಿದೆ. ಬೆಂಗಳೂರಿಂದ ಎಡಿಜಿಪಿ ಸ್ಥಳಕ್ಕೆ ಹೋಗುತ್ತಿದ್ದಾರೆ. ಅಗತ್ಯ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ” ಎಂದು ಹೇಳಿದ್ದಾರೆ.

ಈ ಮಧ್ಯೆ ಈ ಮಧ್ಯೆ ಕನ್ನಡ, ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, “ಕನ್ನಡಿಗರಿಗೆ ಹೋರಾಟ ಮಾಡುವ ಅವಶ್ಯಕತೆ ಏನಿತ್ತು” ಎಂದು ಪ್ರಶ್ನಿಸಿದ್ದಾಗಿ ಖಾಸಗಿ ಸುದ್ದಿ ವಾಹಿನಿಯೊಂದು ವರದಿ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಚಿವರ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.

ಈ ಹೋರಾಟವನ್ನು ಬೆಂಗಳೂರಿನ ಡಿಜೆ.ಹಳ್ಳಿ ಗಲಭೆಗೆ ಹೊಲಿಸಿದ್ದಾರೆ. ನಮಗೆ ಹೋರಾಟ ಮಾಡುವ ಹಕ್ಕೂ ಇಲ್ಲವೇ? ಎಂದು ಶೃತಿ ಎಂಬುವವರು ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಶ್ವಿನಿ ಎಂಬುವವರು ಟ್ವೀಟ್ ಮಾಡಿ ರಾಜಕಾರಣಿಗಳು ಮರಾಠಿಗರ ಓಲೈಕೆ ಮಾಡುತ್ತಿರುವುದೇ ಇದಕ್ಕೆ ಕಾರಣ ಎಂದಿದ್ದಾರೆ.


ಇದನ್ನೂ ಓದಿ: ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆಗೆ ಪಟ್ಟು: ಬೆಳಗಾವಿ ಚಲೋಗೆ ಭಾರೀ ಜನಬೆಂಬಲ

ಇದನ್ನೂ ಓದಿ: ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ತೆರವು: ಕನ್ನಡಿಗರಿಂದ ತೀವ್ರ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅಮೆರಿಕದ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಬಗ್ಗೆ ಸ್ಯಾಮ್ ಪಿತ್ರೋಡಾ ಕೊಟ್ಟಿದ್ದ ವಿವರಣೆಯನ್ನು ‘ರಾಜಕೀಯ ಅಸ್ತ್ರ’...

0
ಲೋಕಸಭೆ ಚುನಾವಣೆ ಹಿನ್ನೆಲೆ ಪ್ರಧಾನಿ ಮೋದಿ ಹಾದಿಯಾಗಿ ಬಿಜೆಪಿ ನಾಯಕರು ವಿವಾದಾತ್ಮಕ ಹೇಳಿಕೆ ಮೂಲಕ ಕಾಂಗ್ರೆಸ್‌ ಪಕ್ಷವನ್ನು ಮತ್ತು ಕಾಂಗ್ರೆಸ್‌ನ ಪ್ರಣಾಳಿಕೆ ವಿರುದ್ಧ ವಾಗ್ಧಾಳಿ ನಡೆಸುತ್ತಾ ಬಂದಿದ್ದಾರೆ. ಈ ಮಧ್ಯೆ ಭಾರತೀಯ ಸಾಗರೋತ್ತರ...