Homeಕಥೆಕಪಿಲ ಪಿ ಹುಮನಾಬಾದೆ ಅವರ ಕಥೆ: ಫೋಟೋ ಕನಸು

ಕಪಿಲ ಪಿ ಹುಮನಾಬಾದೆ ಅವರ ಕಥೆ: ಫೋಟೋ ಕನಸು

- Advertisement -
- Advertisement -

ರಾತ್ರಿ ಯಾವ ಸಪ್ಪಳವು ಮಾಡದೆ ಸುಮ್ಮನೆ ಮಲಗಿತ್ತು. ನಕ್ಷತ್ರಗಳು ಸಹ ಸುಸ್ತಾಗಿದ್ದವು. ನೆಲದ ಮೇಲಿನ ಮಣ್ಣಿನ ಮೇಲೆ ಯಾರೋ ನೀರು ಎರಚಿ ಹೋದಂತೆ ತಂಪಾದ ಗಾಳಿ ಮೂಗಿಗೆ ಬಂದು ಬಡಿಯುತ್ತಿತ್ತು. ಅಲ್ಲೇ ಮನೆ ಮುಂದಿನ ಅಂಗಳದಲ್ಲಿ ಮಲಗಿದ್ದ ಸುಮಯ್ಯ ಇವೆಲ್ಲ ಗಮನಿಸುತ್ತ ತನ್ನ ಪುಟ್ಟ ಕೈಗಳಿಂದ ತನ್ನವೇ ಕಾಲುಗಳು ಒತ್ತಿಕೊಳ್ಳುತ್ತ ಕೂತಿದ್ದಳು. ನಡುರಾತ್ರಿ ಹೀಗೆ ಹುಡುಗಿ ಎಚ್ಚರಗೊಂಡ ಸದ್ದಿಗೆ, ಸುಮಯ್ಯಳ ಅಮ್ಮ ರಜಿಯಾ ಕಣ್ಣು ಬಿಟ್ಟು ಎಚ್ಚರಗೊಂಡರು ಸಹ, ಮಗಳೊಂದಿಗೆ ಮಾತನಾಡಲು ಹೋಗಲಿಲ್ಲ. ಪಡಸಾಲಿಗೆ ಹೋಗಿ ನೀರು ಕುಡಿಯಬೇಕೆಂದುಕೊಂಡ ಫಾತಿಗೆ ಕತ್ತಲು ಯಾಕೋ ಭಯ ಹುಟ್ಟಿಸುತ್ತಿತ್ತು.

ನಡುರಾತ್ರಿ ನಸುಕಿಗೆ ಧುಮುಕುವುದಕ್ಕೆ ಇವತ್ಯಾಕೆ ಇಷ್ಟು ಹೊತ್ತು ತಗುಲಿತಿದೆಯೆಂದು ವಿಚಾರಕ್ಕೆ ಕೂತವಳಿಗೆ, ನಿದ್ದೆ ಬಂದು ಎತ್ತುಕೊಂಡು ಹೋಗಿದ್ದು, ಮುಂಜಾನೆ ಎದ್ದಮೇಲೆಯೇ ಹೊಳೆದದ್ದು. ಅಮ್ಮೀ ರಜಿಯಾ ಬಂದು “ಏಳೇ ಸುಮ್ಮಿ ಹೊತ್ತು ತಲಿ ಮ್ಯಾಲ ಏರ್ಯಾದ” ಅಂದಾಗ ಬುಸಕ್ಕನೆ ಎದ್ದಳು. ಹಾಸಿಗೆಯಿಂದ ಎದ್ದ ತಕ್ಷಣ ಮಗಳ ಮುಖ ದಿಟ್ಟಿಸಿ ವಿವರವಾಗಿ ನೋಡಿದ ರಜಿಯಾ, ಸುಮಯ್ಯ ದಿನಕ್ಕಿಷ್ಟು ಎತ್ತರವಾಗಿ ಮತ್ತು ಗಂಭೀರವಾಗಿ ಕಾಣುತ್ತಿರುವುದನ್ನು ನೋಡಿ ಒಳಗೊಳಗೆ ಭಯಪಟ್ಟಳು.

ಹಲ್ಲುಜ್ಜಿ, ಮುಖ ತೊಳೆದುಕೊಳ್ಳಲು ಹೇಳಿದ ಅಮ್ಮಿಯ ಮಾತು ಧಿಕ್ಕರಿಸಿ ನೇರವಾಗಿ ಚಹಾ ಹೀರುತ್ತಾ ಕೂತಳು. ಎಂದಿನಂತೆ ಅವಸರದಲ್ಲಿದ್ದಳು. ಕಣ್ಣೆದುರು ಬಗೆಬಗೆಯ ತರಕಾರಿಗಳು ತುಂಬಿದ ಬುಟ್ಟಿಯೊಂದು ಅವಳ ತಲೆಯೇರಲು ಕಾದು ಕುಳಿತಿತ್ತು. “ಅಮ್ಮಿಯ ಕಾಲು ನೆಟ್ಟಗಿದ್ದರೆ, ನಾನೊಂದು ಕೈಯಲ್ಲಿ ಸಣ್ಣ ತರಕಾರಿ ಚೀಲವೊಂದು ಹಿಡಿದುಕೊಂಡು ಬರ್ತಿದ್ದೆ. ಈಗ ಇಡೀ ತರಕಾರಿ ಬುಟ್ಟಿ ಹೊತ್ತುಕೊಳ್ಳುವಂತೆ” ಆಗಿದೆಯೆಂದು ಒಳಗೊಳಗೆ ಅಂದುಕೊಂಡು ನಿಟ್ಟುಸಿರೊಂದಬಿಟ್ಟಳು.

“ಅಮ್ಮೀ ಈ ಬುಟ್ಟಿ ಎತ್ತಿ ಜರಾ ತಲಿ ಮ್ಯಾಲಿನ ಸಿಂಬಿ ಮ್ಯಾಲ ಕರೆಕ್ಟ್ ಆಗಿ ಕುಂದರುವಂಗ ಇಡು” ಅಂದಳು ಸುಮಯ್ಯ. ತಾಳಗಿ ಇನ್ನೂ ಗಟ್ಟಿಯಾಗದ ತಲೆ ಮೇಲೆ ಎಂತಹ ಭಾರ ಹೊರೆಸುವಂತಾಯಿತ್ತಲ್ಲ ಎಂದು ರಜಿಯಾ ಮರುಕಪಟ್ಟಳು.

ಅಮ್ಮೀ ಕಣ್ಣುಗಳು ಹಸಿಯಾಗಿದ್ದು ನೋಡಿ, “ಆಮ್ಯಾಲ ಅಳುವಂತಿ, ಫಸ್ಟ್ ತಲೀ ಮ್ಯಾಲ ಬುಟ್ಟಿ ಇಡು, ಬಿಸಿಲು ನೆತ್ತಿಗೇರದರ ಏನ ಮಾಡ್ಲಿ ಹೇಳು, ಕಾಯಿಪಲ್ಯ ಎಷ್ಟು ನೀರು ಹಾಕಿದ್ರು ಒಣಗಿ ಹೋಗ್ತದ” ಎಂದಳು.

ನಾಜೂಕಾಗಿ ಮಗಳ ತಲೆ ಮೇಲೆ ಬುಟ್ಟಿ ಇಟ್ಟು ಅಂಗಳದಿಂದ ಇಳಿದುಹೋಗುತ್ತಿದ್ದ ಸುಮಯ್ಯಳ ಬೆನ್ನು ನೋಡುತ್ತಾ ನಿಂತಳು. ಅವಳ ದೇಹದ ಆಕಾರಕ್ಕಿಂತ ದೊಡ್ಡದಾದ ತರಕಾರಿ ಬುಟ್ಟಿ ಭಾರಕ್ಕೆ, ಹುಡುಗಿಗೆ ಸರಿಯಾಗಿ ಬಾಯಿಂದ ಗಾಳಿ ಸಹ ಬಿಡಲು ತೊಂದರೆ ಮಾಡುತ್ತಿತ್ತು. ಕೂದಲು ದಟ್ಟವಾಗಿ, ಉದ್ದವಾಗಿ ಬೆಳೆದು ನಿಂತಿದೆ. ನಮ್ಮ ಸುಮಯ್ಯಳಿಗೆ ಸಾಲಿಗೆ ಸೇರಿಸಿದ್ದರೆ ಈಗ ಏಳನೇ ಕ್ಲಾಸಿನಲ್ಲಿರುತಿದ್ದಳು, ಎಂದು ಒಂದೆರಡು ವರ್ಷದ ಕೆಳಗೆ ಹೇಳಿದ ತುಂಗಪ್ಪ ಮಾಸ್ತರರ ಮಾತು ಎಂದಿನಂತೆ ಮತ್ತೆ ಕೇಳಿಸಿತು. ಏನೂ ಮಾಡಲಾಗದ ಅಸಹಾಯಕತೆಯಲ್ಲಿ ಅಡುಗೆ ಮನೆ ಸೇರಿ ರಜಿಯಾ ಕೆಲಸಕ್ಕಿಳಿದಳು.

ಅರ್ಧ ಎಕರೆಯಷ್ಟು ಹೊಲವಿರುವ ರಜಿಯಾ, ಊರಲ್ಲಿ ಯಾರ ಮುಂದೆಯೂ ಕೈ ಚಾಚಿದವಳಲ್ಲ. ಕುಡಿದು ಬಂದು ದನಕ್ಕೆ ಬಡಿದಂತೆ ಬಡಿಯುತ್ತಿದ್ದ ಗಂಡ ಸತ್ತು ಮೂರ್ನಾಲ್ಕು ವರ್ಷಗಳೆ ಆಯ್ತು. ಅವನ ನೆನಪುಗಳಿಗೆ ಎಂದಿಗೂ ಮಾತಾಡಿಸಿದವಳಲ್ಲ. ಒಂದಿಷ್ಟು ತರಕಾರಿ ಬೆಳೆದು, ಮಗಳಿಂದ ಮಾರಿಸಿ ಬದುಕು ಸಾಗಿಸುತ್ತಿದ್ದಳು.

“ಎರಡು ಹೊಟ್ಟಿ ತುಂಬಲಕ ಇಷ್ಟು ಸಾಕಲ್ಲವೇ?” ಎಂದು ತನಗೆ ತಾನೇ ಹೇಳಿಕೊಳ್ಳುತ್ತಿದ್ದಳು.

ಮುಂಜಾನೆ ಏಳೆಂಟು ಅನ್ನುವಷ್ಟರಲ್ಲಿಯೇ “ಫ್ರೆಶ್ ಪಾಲಕ್, ಚೌಳಿಕಾಯಿ, ಎಳಿಕ ಗಜರಿ, ಹೀರೆಕಾಯಿ, ಹತ್ತು ರೂಪಾಯಿಗಿ ಎರಡು ಸೂಡು ಮೆಂತಿ ಪಲ್ಯ ಅಂತ ಸೌಂಡು ಬರುವವರೆಗೂ ಎಷ್ಟೋ ಮನೆಗಳಲ್ಲಿ ಗ್ಯಾಸ್ ಆನ್ ಆಗುತ್ತಲೆ ಇರಲಿಲ್ಲ. ಸುಮಯ್ಯ ತನ್ನೂರಿಂದ ಸಮೀಪವೆ ಇರುವ ದೊಡ್ಡ ಪಟ್ಟಣದ ಏರಿಯಾ ಒಂದರಲ್ಲಿ ತರಕಾರಿ ಮಾರುತ್ತಿದ್ದಳು. ಅದೇ ಟೈಮಲ್ಲಿ ಬಣ್ಣಬಣ್ಣದ ಸ್ಕರ್ಟ್‌ಗಳು ತೊಟ್ಟುಕೊಂಡು, ತಲೆಗೆ ಕೆಂಪು ರಿಬ್ಬನ್ ಹಾಕಿಕೊಂಡು ಸ್ಕೂಲಿಗೋಗುವ ಹುಡುಗಿಯರತ್ತ ಆಸೆಗಣ್ಣಿನಿಂದ ನೋಡುತ್ತಾ ನಿಲ್ಲುತ್ತಿದ್ದಳು.

“ಏನೇ ಫಾತಿ ಮೊನ್ನಿ ಉಳದಿಂದೆ ಬುಟ್ಯಾಗ ತುರಕೊಂಡ ಬಂದಿ ಅನಸ್ತದ” ಅನ್ನುತ್ತಲೆ ತರಕಾರಿ ತೆಗೆದುಕೊಳ್ಳುವ ಆಂಟಿಯರೆದುರು, “ಇಲ್ಲರೀ ಯವ್ವಾ ಫ್ರೆಶ್ ಮಾಲ್ ಅದ” ಅಂತ ನಗುತ್ತಾ ಹೇಳುವುದನ್ನು ಈಗ ಅವಳು ಪೂರ್ತಿ ಕೈಬಿಟ್ಟಿದ್ದಳು. ನಾಲ್ಕೈದು ರೂಪಾಯಿ ಉಳಸೋ ಸಲುವಾಗಿ ಈ ಆಂಟಿಯರು ಈ ಡೈಲಾಗ್ ಹೊಡಿಲತರ ಎಂಬುವುದು ಅವಳಿಗೆ ಗೊತ್ತಾಗಿ ಹೋಗಿತ್ತು.

ಹೀಗೆ ಮನೆಯಿಂದ ಮನೆಗೆ ನಡೆಯುತ್ತಿದ್ದ ಸುಮಯ್ಯಳಿಗೆ, ರಸ್ತೆಯಲ್ಲಿ ಕೆಸರು ಗುಂಡಿಗಳು ಕಂಡರೆ ಸಾಕು ಮೊದಲಿನಂತೆ ಟಣ್ ಅಂತ ಹಾರದೆ, ಅದರ ಇನ್ನೊಂದು ಬದಿಯಿಂದ ನಾಜೂಕಾಗಿ ನಡೆಯುವುದು ಈಗ ಕಲಿತು ಬಿಟ್ಟಿದ್ದಳು. ಹಾಗೇ ಹೋಗು ತ್ತಿದ್ದವಳಿಗೆ ಎಂದಿನಂತೆ ಕರೆದು, ಒಂದಿಷ್ಟು ಉಳಿದಿದ್ದ ಟಿಫಿನ್ ಕೊಟ್ಟು ಮಾತಾಡಿಸುವ ದೊಡ್ಡ ದೇಹದ ಹೆಂಗಸಾದ ಸಂಗವ್ವ ಇವತ್ತೂ ಸಹ ಕರೆದಳು.

ಅಷ್ಟೇನೂ ವಯಸ್ಸಾಗಿರದ ಐವತ್ತು ದಾಟಿದ ಸಂಗವ್ವ ಸುಮಯ್ಯಗೆ ಏನಾದರೂ ತಿನ್ನಲು ಸದಾ ಕೊಡುತ್ತಿದ್ದಳು.
“ರಾತ್ರಿ ಭಾಳ ಕಾಲ ನೋಯಿಸಿತಿರಬೇಕಲ್ಲ? ಮೊದಲೆ ಎಳಿ ಹುಡುಗಿ” ಅಂದಳು ಸಂಗವ್ವ. ಇದಕ್ಕೆ ಏನು ಪ್ರತಿಕ್ರಿಯೆ ನೀಡದೆ ಪ್ಲೇಟಿನಲ್ಲಿದ್ದ ಉಪ್ಪಿಟ್ಟು ತಿನ್ನುತ್ತಾ ಕೂತಿದ್ದಳು ಸುಮಯ್ಯ.

ಪ್ರೀತಿ ಉಕ್ಕಿಸುವ ನೋಟದಿಂದ ಸಂಗವ್ವ “ಯಾಕೋ ಮುಖ ಭಾಳ ಬಾಡಿ ಹೋಗ್ಯಾದೆ ಪೋರಿ” ಎಂದಳು.

“ಏನಿಲ್ಲೇ ಸಂಗವ್ವ ರಾತ್ರಿ ವಿಚಿತ್ರ ಕನಸು ಬೀಳ್ತಾವ. ಫಸ್ಟ್ ಫಸ್ಟಿಗಿ ತರಕಾರಿ ಮಾರೋದ ಹೆಂಗತ ಚಿಂತಿ ಆಗಿತ್ತು. ಈಗ ರೂಢಿ ಬಿದ್ದದ. ಥೋಡೆ ಕಾಲು ಕೈ ಎಳಿತವ ಖರೇ, ಅವೆ ದೊಡ್ಡದು ಮಾಡಕೊಂತ ಕುಂತ ಅಂದರ ಅಮ್ಮೀ ಮೊತಿ ಸಣ್ಣದ ಮಾಡ್ತಾಳ” ಅನ್ನುತ್ತಲೇ ಸುಮಯ್ಯ ಮೌನವಾದಳು.

“ರಾತ್ರಿಗಿ ಅಂತದೇನ ಕನಸು ಬೀಳ್ತಾವೆ ಸುಮ್ಮಿ?”

ಎದೆಯೊಳಗೆ ಮುಚ್ಚಿಟ್ಟುಕೊಂಡಿದ್ದ ಪುಟ್ಟದೊಂದು ನಿಟ್ಟುಸಿರು ಬಿಟ್ಟಳು ಸುಮ್ಮಿ. “ಈ ಹೀರೆಕಾಯಿ ಹಂಗ ಉದ್ದ ಬೆಳಿಲತಿನಿ ಆದರ ಜೀವ ಇಲ್ಲ ಅನಸಲತದ ಒಳಗ. ಬಾಜು ಮನಿ ಫಾತಿ ಅಂತಾಳ ಟಮೋಟ್ ಹಂಗ ಕೆಂಪು ಅದೀ ಅಂತ ಆದರ ಒಳಗ ಒಣಗಿ ಹೋಗಿನಿ ಅನಸಲತದ ಸಂಗವ್ವ. ನನ್ನ ವಯಸ್ಸಿನ ಗೆಳತ್ಯಾರ ಜೊತಿ ಆಟ ಆಡೋ ವಯಸ್ಸಾಗ ನಿನ್ನ ಹಂತಕಿ ಸಂಗಟ ಮಾತ ಆಡಕೊತ ಕುಂದರೋ ಟೈಮ್ ಬಂದದ ನೋಡು ಯವ್ವಾ ಅಂದಳು.

ಯಾಕೋ ತಟ್ಟನೆ ಇಬ್ಬರೂ ಮಾತು ಮುಂದು ವರೆಸುವ ಆಸಕ್ತಿ ತೋರಿಸಲಿಲ್ಲ. ಮನೆಮುಂದಿನ ಗಾರ್ಡನ್ನಿನಲ್ಲಿಟ್ಟಿದ್ದ ಪಂಜರದೊಳಗೆ ಬಣ್ಣ ಬಣ್ಣದ ಹಕ್ಕಿಗಳು ಆಡೋದು ನೋಡಿ ಹೊರಗಿಂದ ಸುಮ್ಮಿ ಕೈತಟ್ಟಿ ಸಂಭ್ರಮಿಸಿದಳು. ಆ ಪಂಜರದ ಪಕ್ಕದಲ್ಲಿದ್ದ ಕೆಂಪು ಗೋಡೆ ಮೇಲೆ ಹಸಿರು ಬಣ್ಣದ ಹಕ್ಕಿಯೊಂದು ತಲೆ ಮೇಲೆ ಕೂತಂತೆ ಫೋಟೋ ತೆಗೆಸಿಕೊಂಡಿದ್ದ ಪುಟ್ಟ ಹುಡುಗನ ಪಟ ನೋಡಿ,

“ಯಾರಿದು ಸಂಗವ್ವ?” ಅಂದಳು.

“ಇದು ನನ್ನ ಮೊಮ್ಮಗ ಆಕರ್ಷ, ಅವರಪ್ಪ ಏನೇನೋ ಮಾಡಿ ಹಕ್ಕಿ ಒಯ್ದು ಪಾರಂದ ತಲಿ ಮ್ಯಾಲ ಕುಂದರಸಿ ಹಂಗ ಫೋಟೋ ತೆಗದಾನ ನೋಡು” ಅಂದಳು ಸಂಗವ್ವ.

“ಚಂದ ಬಂದದ, ಮೊಮ್ಮಗ ಮಸ್ತ್ ಹನಾ ನೋಡ” ಎನ್ನುತ್ತಾ, ಬುಟ್ಟಿಯಲ್ಲಿ ಉಳಿದಿದ್ದ ಕೋತ್ತಂಬರಿಯನ್ನ ಸಂಗವ್ವ ಬೇಡ ಅಂದರು ಅವಳ ಕೈಗಿಟ್ಟು, ಗೇಟು ತೆಗೆದು ಹೊರಬಂದಳು.

ಸಣ್ಣ ಕನ್ನಡಿಯಲ್ಲಿ ತನ್ನ ಮುಖ ತಾನೇ ನೋಡಿಕೊಂಡದ್ದು ಬಿಟ್ಟರೆ ತನ್ನದು ಅಂತ ಒಂದು ಫೋಟೋ ಇಲ್ಲವಲ್ಲ ಎಂಬುವುದು ಅವಳಿಗೆ ಇವತ್ತು ನೆನಪಾಯ್ತು! “ಛೇ! ಇಷ್ಟು ದಿನ ಹೊಳೆಯಲೇ ಇಲ್ಲ. ನಂದೊಂದು ಪೋಟೋ ಆದ್ರು ತೆಗಸಿಕೊಂಡು ಬರಬೇಕು ಅಮ್ಮೀಗೆ ಹೇಳಿ. ಒಂದು ಹತ್ತು ರೂಪಾಯಿ ಹೆಚ್ಚಿಗಿ ಕೊಟ್ಟು ಅಂಥದೊಂದು ಹಕ್ಕಿ ನನ್ನ ತಲಿ ಮ್ಯಾಲನು ಕುಂದರಸ ಅಂತ ಹೇಳಬೇಕು ಫೋಟೋ ತೆಗಿಯೊನಿಗೆ ಅಂದುಕೊಳ್ಳುತ್ತಾ, ಬುಟ್ಟಿಯಲ್ಲಿ ಇನ್ನೂ ಸ್ವಲ್ಪ ಉಳಿದಿದ್ದ ತರಕಾರಿ ಕಡೆ ನೋಡದೆ ಊರ ಹಾದಿ ಹಿಡಿದಳು.

“ಅಮ್ಮಿದು ನಂದು ಒಂದು ಫೋಟೊಯಿಲ್ಲ. ನೆನಪಿಗರೆ ಮುಂದ ನೋಡಲಕ ಫೋಟೋ ಇರಬೇಕು. ಸಂಗವ್ವನ ಜೊತಿ ಇವತ್ತು ಕುಂತಿದು ಮಸ್ತ್ ಆಯ್ತು ಇಲ್ಲಂದ್ರ ತಲ್ಯಾಗೆ ಬರತಿರಲಿಲ್ಲ ಈ ವಿಚಾರ” ಅಂದುಕೊಳ್ಳುತ್ತಾ, ಊರು ಪ್ರವೇಶಿಸಿದಳು.

ಊರಿಗೆ ಕಾಲಿಟ್ಟ ಸುಮ್ಮಿಗೆ ತಲಿ ಮ್ಯಾಲಿನ ಬುಟ್ಟಿ ಇನ್ನೂ ತುಸು ಭಾರವಾಗೆ ಇರೋದು ಈಗ ಅರಿವಿಗೆ ಬಂತು. ಅಮ್ಮಿಗೆ ಇವತ್ತು ಯಾರೂ ಅಷ್ಟು ತೊಗೊಳಿಲ್ಲ ಅಂತ ಹೇಳಿದರೆ ಆಯ್ತೆಂದು ಧೈರ್ಯದಿಂದ ನಡೆದಳು. ಅವಳ ಮುಂದಿನಿಂದಲೇ ಠಣ್ ಅಂತ ಜಿಗಿದು ಕರಿ ಬೆಕ್ಕಿನ ಮರಿಯೊಂದು ಮಿಂಚಿಹೋಯ್ತು. ಅವಳು ತಲೆಗೆ ಬಿಗಿಯಾಗಿ ಕಟ್ಟಿಕೊಂಡಿದ್ದ ಸ್ಕಾರ್ಫ್ ಸಡಿಲವಾಗಿತ್ತು. ಕೊಳೆತ ಈರುಳ್ಳಿಯೊಂದರ ವಾಸನೆ ಬುಟ್ಟಿಯಿಂದ ಸೋರಿ ಅವಳ ಮೂಗಿಗೆ ಕಿರಿಕಿರಿ ಉಂಟುಮಾಡುತ್ತಿತ್ತು.

ಓಣಿ ತಿರುವಿಗೆ ಸುಮ್ಮಿಗಾಗಿ ಶತಮಾನದಿಂದ ಕಾಯುತ್ತಿರುವಂತೆ ಅವಳ ಗೆಳತಿ ಫಾತಿ ಯಾವುದೋ ಒಂದು ಗಾಢ ಚಿಂತೆಯಲ್ಲಿರುವಂತೆ ಕುಳಿತಿದ್ದವಳು, ಇವಳಿಗೆ ನೋಡಿ ತುಸು ನಿರಾಳವಾಗಿ ಬಂದು ಕೈಹಿಡಿದಳು. ಇಬ್ಬರೂ ಮನೆಯತ್ತ ಸಾಗಿದರು. ಅಂಗಳವೇರಿ ಒಳಬಂದ ಸುಮ್ಮಿಯ ಕಣ್ಣುಗಳ ಮುಂದೆ ಅಮ್ಮೀ ತೀರಾ ಸೊರಗಿ ಹೋದಂತೆ ಕಾಣುತ್ತಿದ್ದಳು. ಮುಂಜಾನೆ ಲವಲವಿಕೆಯಿಂದ ಓಡಾಡಿಕೊಂಡಿದ್ದ ಅಮ್ಮೀ ಹೀಗೆ ಗರಬಡಿದಂತೆ ಕೂರಲು ಕಾರಣವೇನಿರಬಹುದೆಂದು ಹುಡುಕುತ್ತಿದ್ದ ಸುಮ್ಮಿಗೆ ತಲೆಯೊಳಗಿದ್ದ ಫೋಟೋ ಕಲ್ಪನೆಗಳು ಫಳಾರನೆ ಒಡೆದುಹೋದವು.

ರಜಿಯಾ ಮಗಳ ಗಲ್ಲ ನೇವರಿಸುತ್ತ. ಒಳಮನೆಯಿಂದ ಕುಡಿಯಲು ನೀರು ತಂದುಕೊಟ್ಟಳು.

“ಮಗ ಹೆಂಗಾಯ್ತು ವ್ಯಾಪಾರ?”

“ಅಮ್ಮೀ, ಎಲ್ಲಾ ಹೆಂಗಸರದು ಒಂದೇ ಗೋಳು, ತರಕಾರಿ ಎಷ್ಟು ಫ್ರೆಶ್ ಒಯ್ದು ಕೊಟ್ಟರೂ ಫ್ರೆಶ್ ಇಲ್ಲಂತರಾ, ಅಷ್ಟೇನ ಉಳಿದಿಲ್ಲ ಬಿಡು ಬುಟ್ಯಾಗ, ದಿನ ಹೋಗೊಷ್ಟೆ ಹೊಗ್ಯಾದ” ಅಂದಳು.

ಸಪ್ಪಗೆ ಬಿದ್ದ ಅಮ್ಮೀ ಮುಖ ನೋಡಿ ಏನಾಗಿದೆ ಅನ್ನೋ ನೋಟ ಬೀರಿದಳು.

ರಜಿಯಾ ತುದಿ ಬೆರಳುಗಳಿಂದ ನೆಲ ಸವರುತ್ತ ಮಗಳ ಹಣಿ ಮೇಲೆ ಕೈಯಾಡಿಸುತ್ತ. “ನಿನಗಂತೂ ಸಾಲಿ ಮುಖ ತೋರಸೋದು ನನ್ನ ಕೈಯಲ್ಲಿಂದ ಆಗಲಿಲ್ಲ ಸುಮ್ಮು, ನಂದು ಕಾಲಂತೂ ಮುರದೆ ಹೊಗ್ಯಾದ, ಅದು ನೆಟ್ಟಗ ನಿಲ್ಲಬೇಕಂದರ ಎಷ್ಟು ದಿನ ಬೇಕೊ ಏನೋ…” ಅನ್ನುತ್ತಾ ರಜಿಯಾ ಮಾತು ತುಂಡರಸಿ ನಿಂತಳು.

ಹೇಳಲಾಗದ ಮಾತುಗಳು ಗಂಟಲೊಳಗೆ ನುಂಗಿಕೊಳ್ಳುತ್ತಿದ್ದ ರಜಿಯಾಗೆ ಆ ಮಾತುಗಳು ಹೊರಹಾಕುವುದು ಇಷ್ಟವಿರಲಿಲ್ಲ.

ಇದು ಕಂಡ ಸುಮ್ಮಿ ನಗುತ್ತಾ “ಅಮ್ಮೀ ಒಂದು ಮಾತು ಛೋಲೊಂದು ಇರ್ತದ, ಇನ್ನೊಂದು ಖರಾಬ್ ಇರ್ತಾದ, ಎರಡರಾಗವೊಂದು ಕೇಳಬೇಕೆ ಬಿಡು, ಹೇಳ ಏನ ಆಗಲ್ಲ ಅಂದಳು.

ಸುತ್ತ ಕಣ್ಣಾಡಿಸಿದ ರಜಿಯಾಳಿಗೆ, ಅಂಗಳದಲ್ಲಿ ದಟ್ಟ ಬಳ್ಳಿ ಹರಡಿಕೊಂಡು ನಿಂತ ಹೀರೆಕಾಯಿ ನೋಡಿ ನನ್ನ ಮಗಳು ಸಹ ಹೀಗೆ ಅಂಗಳದ ತುಂಬಾ ಆಡಿ ಬೆಳೆದವಳು, ಮೂಲೆಯಲ್ಲಿದ್ದ ಟಮೋಟಗಿಂತಲೂ ಕೆಂಪಿರುವವಳು, ಇದೊಂದು ವಸ್ತು ನನ್ನ ಕಡೆ ಉಳಿಬಹುದು ಅನ್ನಕೊಂಡಿದ್ದೆ ಅದು ಸಹ ಹೋಗುವ ಕಾಲ ದೂರವಿಲ್ಲ ಅಂದುಕೊಂಡಳು.

“ಸುಮ್ಮಿ, ಮೆಹಬೂಬ್ ನಗರದ ಹುಸೇನಿ ತಾತ ಬಂದಿದ್ರು. ಮಗಳ ಬೆಳದ ನಿಂತಾಳ. ನಿನ್ನ ಕಣ್ಣಿಗಿ ಸಣ್ಣಾಕಿನಿ ಇರಬೇಕು ಆದರ ಪ್ಯಾಟಿ ಮಂದಿ ಕಣ್ಣು ಛೋಲೊ ಇರಲ್ಲ. ಕಾಲ ಸೂಕ್ಷ್ಮ ಅದ. ನಿನ್ನ ತರಕಾರಿ ಮಾರೋ ಕಾಲಗ, ಕೈಯಾಗಿನ ವಜ್ರ ಕಳಕೊಬ್ಯಾಡ, ಪಟ್ಟಂತ ನಮ್ಮ ಸಂಬಂಧಿ ಹುಡುಗ ಒಂದದ ಅವರ ಕಡೆ ಸಂಬಂಧ ನೋಡೊಣ ಸುಮ್ಮಿಗಿ ಅಂದಾರ” ಅಂದಳು .

ಅಮ್ಮೀ ಮಾತು ಬೆಳೆಯುತ್ತಲೆ ಹೋಗುತಿತ್ತು. “ಕಾನೂನು ಅದು ಇದು ಅಡ್ಡ ಬರ್ತಾವ ನೀ ಇನ್ನೂ ಸಣ್ಣಕಿ ಅದಿ, ಈಗ ಫಿಕ್ಸ್ ಮಾಡಿ ಇಡೋಣ, ಮುಂದಿಂದ ಮುಂದ ನೋಡೊಣ”.

ತುದಿ ಮೊದಲಿಲ್ಲದ ಅಮ್ಮೀ ಮಾತು ಬೆಳೆಯುತ್ತಲೇ ಹೋಗುತ್ತಿತ್ತು.

ಸುಮಯ್ಯ ಗಂಭೀರವಾಗಿ ತಟ್ಟನೆ “ಅಮ್ಮೀ ನಾಳಿಗಿ ಪ್ಯಾಟಿಗಿ ಹೋಗಿ ಒಂದು ಫೋಟೋ ತೆಗಿಸೋಣವಾ? ಅಂದಳು.

ಕಪಿಲ ಪಿ ಹುಮನಾಬಾದೆ

ಕಪಿಲ ಪಿ ಹುಮನಾಬಾದೆ
ಯುವ ಬರಹಗಾರ ಕಪಿಲ ಪಿ ಹುಮನಾಬಾದೆ ಅವರು ಮೂಲತಃ ಬೀದರ್‌ನವರು. ಸದ್ಯ ಕಾವ್ಯಮನೆ ಪ್ರಕಾಶನ ಬಳ್ಳಾರಿ, ಮುಖ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕಾದಂಬರಿ ಹಾಣಾದಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ. ಈಗ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿದ್ಯಾರ್ಥಿ


ಇದನ್ನೂ ಓದಿ: ಇಬ್ಬರು ಹೆಣ್ಣುಗಳು : ಅಕ್ಷತಾ .ಕೆ ಅವರ ಕಥೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...