ರಾಜೀವ್ ಸತ್ತು ಹದಿನೈದು ದಿನ ಆಗಿತ್ತು.

`ಸರ್ ಅಕ್ಕನ ಬಳಿ ನೀವಾಗಿದ್ದಕ್ಕೆ ನೋಡಿ ಮನೆಯ ಕೀ ವಸೂಲು ಮಾಡಿದ್ರಿ. ಇಲ್ಲ ಅಂದಿದ್ದರೆ ಸರ್ ಮನೆಗೊಮ್ಮೆ ಹೋಗಿ ಅವರ ಚೂರು-ಪಾರುಗಳನ್ನು ಹೆಕ್ಕುವ ನನ್ನ ಆಸೆ ಹಾಗೆಯೇ ಉಳಿದುಬಿಡ್ತಿತ್ತು ಎಂದಳು ಸರಳೆ.

`ಅದಕ್ಕೆ ಅಷ್ಟೆಲ್ಲ ಕಷ್ಟ ಪಡಬೇಕಾಗ್ಲಿಲ್ಲ. ಕೆಲಸದವಳೊಬ್ಬಳು ಸಿಕ್ಕಿದ್ದಾಳೆ ಮನೆ ಸ್ವಚ್ಛಮಾಡಿಸಿಕೊಡ್ತೀನಿ ಕೀ ಕೊಟ್ಟರೆ ಅಂದ’. `ಬಹಳ ಥ್ಯಾಂಕ್ಸ್ ಅಪರ್ಣೆ, ಮನೆ ಮಾರಾಟ ಮಾಡೋಣ ಅಂತಿದ್ದೇನೆ ಸ್ವಚ್ಚ ಮಾಡಿಸಿಕೊಟ್ಟರೆ ಬಹಳ ಉಪಕಾರ ಆಗ್ತದೆ’ ಎಂದು ಕೊಟ್ಟರು. ಅವರಿಗೆ ನಿಮ್ಮ ಸರ್ ಎಲ್ಲಿ ಮನೆಯನ್ನು ನನ್ನ ಗಂಡನ ಹೆಸರಿಗೆ ಬರೆದಿದ್ದಾರೋ ಎಂದು ಅನುಮಾನ.. ನೇರಾನೇರ ಕೇಳುವುದಿಲ್ಲ. ನಾನೆ ಮತ್ತೆ ಮತ್ತೆ ಹೇಳ್ತೇನೆ `ತಗೊಳ್ಳೊದಾದರೆ ರಾಜೀವ್ ಮನೆಯಿಂದ ಒಂದಿಷ್ಟು ಪುಸ್ತಕ ತಗೊಳ್ತೀವಿ ಮತ್ತೇನು ಬೇಡ ಅಂತ. ಅದಿರಲಿ, ಅದೇನು ಚೂರು-ಪಾರು ಹೆಕ್ಕುವುದು?

`ಸರ್, ಒಂದು ಕಾಲದಲ್ಲಿ ನನ್ನ ಕಣ್ಣಲ್ಲಿ ಎಲ್ಲ ಆಗಿದ್ದರಲ್ಲ ಅಕ್ಕ, ಆಗ ಒಂದು ಅಭ್ಯಾಸ ಬೆಳೀತು, ಅವರ ಅರೆಬರೆ ಬರೆದ ನೋಟ್ ಪ್ಯಾಡ್ ಕದಿಯೋದು, ಅವರು ಬಳಸಿದ ಪೆನ್ನು ಕದಿಯೋದು, ಬಳಸಿದ ಸೋಪು ಕದಿಯೋದು, ಶೇವಿಂಗ್ ಕ್ರೀಂ ಕದಿಯೋದು, ಮತ್ತೆ ಅದನ್ನು ನಾನು ಬಳಸ್ತಿರಲಿಲ್ಲ. ಎಲ್ಲ ಜೋಪಾನವಾಗಿಡೋದು. ಆಗಾಗ ತೆಗೆದು ಮೆತ್ತಗೆ ಸವರಿ ಮತ್ತೆ ಗಂಟುಕಟ್ಟಿ ಜೋಪಾನ ಮಾಡೋದು. ಒಮ್ಮೆಯಂತೂ ಅಕ್ಕ, ಅವರ ರೀಡಿಂಗ್ ಗ್ಲಾಸ್ ಕದ್ದುಬಿಟ್ಟು ಅವರು ಓದಲಾಗದೆ ಒದ್ದಾಡೋದು ನೋಡಿ ಹುಡುಕಿದಂತೆ ಮಾಡಿ ಮರಳಿ ತಂದುಕೊಟ್ಟಿದ್ದೆ’.

`ಈ ರೀತಿ ಎಲ್ಲ ಹುಚ್ಚುತನ ನನ್ನಿಂದ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಸರಳಾ.’

ಅಕ್ಕ , ನಾನು ಸರ್‍ಗೆ ಬರೆದ ಪತ್ರಗಳನ್ನು ಹುಡುಕಿ ತೆಗೆದುಕೊಳ್ಳಲಾ? ನನಗೆ ಅವು ಬೇಕು?

`ಹೆಣ್ಣುಮಕ್ಕಳ ಜಾಣತನ ಎಷ್ಟಲ್ವಾ… ನಮ್ಮ ಪ್ರೇಮದ ನಿಶಾನಿಗಳು ಯಾರಿಗೂ ಕಾಣಬಾರದು ಅಂತ ಬಯಸುತ್ತೇವೆ. ಮುಟ್ಟಿನ ಬಟ್ಟೆಗಳ ರೀತಿ.’

`ಹಾಗೇನೂ ಇಲ್ಲ ಅಕ್ಕ ಪ್ರೀತಿಸಿದ್ದೆ ಇದೆಯಂತೆ… ಗೊತ್ತಾಗಬಾರದು ಅಂತ ಅದು ಸರ್ ಇಲ್ಲದ ಈ ಹೊತ್ತಲ್ಲಿ ಏಕೆ ಬಯಸಲಿ? ಇದನ್ನೆಲ್ಲ ಪ್ರಶ್ನೆ ಮಾಡುವವರು ಕೂಡಾ ನನ್ನಷ್ಟೆ ಬದುಕಿನಲ್ಲಿ ಜಡಗೊಂಡಿದ್ದಾರೆ. ನಾ ಬರೆದ ಪತ್ರಗಳು ಈಗಿನ ಜಡಗೊಂಡ ಬದುಕಿನಲ್ಲಿ ಆಸರೆಯಾಗುತ್ತವಾ ಅಂತ ಎಲ್ಲೋ ಆಸೆ.’

`ಮದ್ವೆ ಮಾಡಿಕೊಳ್ಳಬೇಕಿತ್ತು ನಿನ್ನ ಸರ್‌ನ… ಯಾಕೆ ಎರೆಡರಡು ಸರ್ತಿ ಇನ್ನೇನು ಮದ್ವೆ ಆಗಿಯೇಬಿಟ್ಟೆ ಎಂದು ನಿರ್ಧಾರ ಪ್ರಕಟಿಸಿ ಮತ್ತೆ ಹಿಂಜರಿದೆ? ನೀನು ಮದ್ವೆ ಆಗಿದ್ರೆ ರಾಜೀವ್ ಇನ್ನತ್ತು ವರ್ಷ ಬದುಕಿರುತ್ತಿದ್ದರು. ಹೀಗೆ 52ನೇ ವರ್ಷದಲ್ಲಿ ಸಾಯೋದು ಬರ್ತಿರಲಿಲ್ಲ..’

`ಅಕ್ಕ , ಅಷ್ಟು ಕಟು ಆಗ್ಬೇಡಿ. ನಾನು ಒಮ್ಮೆ ಮದುವೆಯಾಗುವ ನಿರ್ಧಾರ ಮಾಡಿದಾಗ ಸರ್ ಹಿಂಜರಿದರು ಅಕ್ಕ. ನೀನಿನ್ನು ಚಿಕ್ಕವಳು. ಮದ್ವೆ ಬಂಧನಕ್ಕೆ ಇಷ್ಟು ಬೇಗ ಸಿಲುಕಿದ್ರೆ ನಾಶವಾಗ್ತಿಯ.. ನಿನ್ನಿಷ್ಟದ ನಟನೆ ಬಿಡಬೇಡ, ಕೆಲಸ ಹಿಡಿ, ಆದರೆ ನನ್ನಿಷ್ಟದ ಹುಡುಗಿ ನೀನು. ನಿನಗೆ ಬೇಕಾದಷ್ಟು ದಿನ ನನ್ನ ಮನೆಯಲ್ಲಿ ಬಂದಿರು. ನಂಗೂ ಖುಷಿನೆ. ಮದ್ವೆ ಬಗ್ಗೆ ಮಾತ್ರ ಮಾತು ಬೇಡ ಎಂದರು.’

`ನೀನು ಬರ್ತಿದ್ಯ ಆಗ.. ರಾಜೀವ್ ಆಗಲೇ ನನಗೆ ಪರಿಚಯವಾಗಿದ್ದು, ನಿನ್ನ ವಿಷಯ ಅವರು ಹೇಳಿದ್ರು. ಆದರೆ ನಿನಗೆ ಅವರು ಬರ್ತಿರು ಅಂದಿದ್ದನ್ನು ಹೇಳಲಿಲ್ಲ, ಅದು ಬಿಟ್ಟು ಬೇರೆಲ್ಲವನ್ನು ಹೇಳಿದ್ರು.

`ಕೆಲಸ ಸಿಕ್ಕು ಗುಲ್ಬರ್ಗಕ್ಕೆ ಹೋದವಳು ಐದು ವರ್ಷ ಸರ್‍ನ ನೋಡ್ಲೆ ಇಲ್ಲ. ಮದುವೆ ಬೇಡ ನೀನು ಬೇಕು ಎಂದವರ ಮೇಲೆ ನನಗೆ ಸಿಟ್ಟು ಉಕ್ಕಿತ್ತು ಅಕ್ಕ. ಆದರೆ ಅವರ ಅನುಪಸ್ಥಿತಿಯಲ್ಲಿ ಅವರ ಮೇಲಿನ ಪ್ರೇಮ ಬಲಿಯುತ್ತಾ ಹೋಯಿತು.. ಚೂರು ಕಡಿಮೆ ಆಗ್ಲಿಲ್ಲ. ನೂರಾರು ಪತ್ರ ಬರೀತಿದ್ದೆ. ಅವರು ಉತ್ತರವೇ ಬರೀತಿರಲಿಲ್ಲ…ಆದರೂ ನಾ ಬರೀತಿದ್ದೆ.’

`ತಪ್ಪು ತಿಳಿಬೇಡ. ರಾಜೀವ್‍ಗೆ ಪತ್ರ ಬರೀತಿದ್ದೆಯಲ್ಲ ಅದೆಲ್ಲವನ್ನು ಓದಿದ್ದೇನೆ.. ಆದರೆ ನಿನ್ನ ಮೂವತ್ತು, ನಲವತ್ತು ಪತ್ರದಲ್ಲಿ ಒಂದೂ ಪ್ರೇಮಪತ್ರ ಅನ್ನಿಸಲೇ ಇಲ್ಲ. ಎಲ್ಲದರಲ್ಲೂ `ಸರ್ ನಾನು ಇದನ್ನು ಓದಿದೆ, ನನಗೆ ಕುವೆಂಪು ಹೋಗುವೆನು ಮಲೆಯನಾಡಿಗೆ ಅನ್ನೋದು, ಬೇಂದ್ರೆ ಬಾರೋ ಸಾಧನಕೇರಿಗೆ ಅನ್ನೋದು ಎರಡೂ ಒಂದೆ ಧ್ವನಿಯಾ ಬೇರೇನಾ ಚೂರು ವಿವರಿಸ್ತೀರಾ? ತನ್ನ ಸಮಕಾಲೀನರು ಹೆಣ್ಣಿನ ಬಗ್ಗೆ ಅಷ್ಟು ಸಂಪ್ರದಾಯಸ್ಥವಾಗೇ ಯೋಚಿಸ್ತಿದ್ದಾಗ (ಎಂತ ಹೆಸರು ಅವನದು ಹಾಂ ನೆನಪಾಯ್ತು,) ಶಾಂತಿನಾಥ ದೇಸಾಯಿ ಎಂಬ ಕಥೆಗಾರನಿಗೆ ಅಷ್ಟು ಆಧುನಿಕಳಾದ ಹೆಣ್ಣನ್ನು ಚಿತ್ರಿಸಲಿಕ್ಕೆ ಹೇಗೆ ಸಾಧ್ಯವಾಯಿತು? ನಾನು ಮೊನ್ನೆ ಬುದ್ದಧಾಮಕ್ಕೆ ಹೋಗಿದ್ದೆ, ನಿಮ್ಮನ್ನು ಇಲ್ಲಿಗೆ ಕರೆತಂದು ನಿಮ್ಮಿಂದ ಅಂಬೇಡ್ಕರ್ ಯಾಕೆ ಬೌದ್ಧಧರ್ಮವನ್ನೆ ಆಯ್ಕೆ ಮಾಡಿಕೊಂಡರು ಅಂತ ಕೇಳೋ ಮನಸಾಗುತಿದೆ….’ `ಓ ಇಂಥದ್ದೇ ಅಲ್ಲ ನೀನು ಬರೀತಾ ಇದ್ದಿದ್ದು’ ನಾನು ರಾಜೀವ್‍ಗೆ ಅಣಕಿಸತೊಡಗಿದ್ದೆ `ನಿಮ್ಮ ಶಿಷ್ಯೆಗೆ ಯಾವ ಕವಿ ಪುಂಗವರ ಕಾವ್ಯವನ್ನು ನಿಮ್ಮಿಂದ ಓದಿಸಲಿಕ್ಕಿದೆಯಂತೆ?’ ಅಂತೆಲ್ಲ. ಕೊನೆಯ ಸಾಲಿನಲ್ಲು ವಿತ್ ಲವ್ ಅಂತ ಬರೆದು ಯುವರ್ಸ್ ಒಬಿಡಿಯಂಟ್ಲಿ ಅಂತ ಬರೀತಿದ್ದೆಯಲ್ಲ?…ನನಗಂತೂ ಅವೆಲ್ಲ ಓದ್ತಿದ್ರೆ ಭಲೆ ನಗು ಬರೋದು… ಆದರೂ ನಿನ್ನ ಪತ್ರ ಓದೋಕೇನೋ ಆಸಕ್ತಿ…ಹತ್ತಾರು ಸರ್ತಿ ಓದಿದಮೇಲೆ ಆ ಎಲ್ಲ ಸಾಹಿತಿಗಳ ಹೆಸ್ರು ಬಾಯಿಪಾಠ ಆಗಿದೆ ನೋಡು. ನಾನಂತೂ ತುಂಬಾ ಜನರ ಹೆಸರೂ ಕೇಳಿರಲಿಲ್ಲ.

`ಅಕ್ಕ, ಆದರೆ ಆ ರೀತಿ ಪತ್ರಗಳನ್ನು ಬರೀತಿದ್ದ ಕಾಲದಲ್ಲಿ ನಾನು ಪ್ರೇಮದಲ್ಲಿ ಮುಳುಗಿಹೋಗಿದ್ದೇನೆ ಎಂದು ಭಾವಿಸಿದ್ದೆ. ಸರ್ ಬಿಟ್ಟರೆ ಬೇರೊಂದು ಗಂಡು ಜೀವಕ್ಕೆ ನನ್ನಲ್ಲಿ ಪ್ರವೇಶವೇ ಇರಲಿಲ್ಲ. ನನ್ನ ಓದು, ಬರಹ, ಮಾತು ಸರ್‍ಗೆ ಅರ್ಥವಾಗೋ ಹಾಗೆ ನನ್ನ ಲೋಕದ ಯಾರಿಗೂ ಅರ್ಥವೇ ಆಗ್ತಿರಲಿಲ್ಲ. ನನಗೆ ಸರ್ ಜೊತೆ ಮಾತಾಡೋ, ಅವರನ್ನು ಆಲಿಸುವ ತಹತಹ ಎಷ್ಟರಮಟ್ಟಿಗಿತ್ತು ಅಂದ್ರೆ…, ಎಷ್ಟೋ ಸರ್ತಿ ಕೆಲಸಕ್ಕೆ ರಾಜೀನಾಮೆ ಎಸೆದು ಸರ್ ಜೊತೆ ಬಂದು ಇದ್ಬಿಡೋಣ ಅನಿಸೋದು… ಆದರೆ ಸರ್‍ಗೆ ಎಂದಿಗೂ ಆಶ್ರಯದಾತರಾಗಲು ಸಾಧ್ಯವಿಲ್ಲ ಎಂದೂ ನನಗನಿಸುತ್ತಿತ್ತು.

`ಐದು ವರ್ಷದನಂತರ ನಿನ್ನ ಸರ್ ಆಯಿತು ಮದುವೆ ಮಾಡಿಕೊಳ್ಳೋಣ ಬಾ’ ಎಂದಾಗ ಒಪ್ಪಿ ಬಂದು ಅವರ ಮನೆಯಲ್ಲೇ ಮೂರು ದಿನ ಕಳೆದು ನಮ್ಮ ಮನೆಗೂ ಬಂದು ಇನ್ನು ಮದುವೆ ಆಗಿಯೇಬಿಟ್ಟಿತು ಅಂತೆಲ್ಲ ಘೋಷಿಸಿ.. ನಾವು ಗಂಡಹೆಂಡತಿ ನಿಮ್ಮಿಬ್ಬರಿಗೂ ಒಂದು ಪಾರ್ಟಿ ಕೊಟ್ಟು ಎಲ್ಲ ಆದಮೇಲೆ… ನೀನು ವಾಪಾಸ್ ಹೋದವಳು ಮದುವೆ ಸಾಧ್ಯವೆ ಇಲ್ಲ ಎಂದು ಪತ್ರ ಹಾಕಿ ಸುಮ್ಮನಾಗಿದ್ದೆ. ಆಗಂತೂ ರಾಜೀವ್, ನಿನ್ನ ಪ್ರೇಮದಲ್ಲಿ ಹುಚ್ಚಾಗಿ ನಿನ್ನ ಮನೆಗೆ ಬಂದು ಕಾಲು ಹಿಡಿದು ಕೇಳಿದ್ದರೂ ಒಪ್ಪಿರಲಿಲ್ಲ’…

`ತಪ್ಪು ತಿಳಿಬೇಡಿ ಅಕ್ಕ. ಸರ್ ಜೊತೆಗಿದ್ದ ಮೂರು ದಿನಗಳಲ್ಲಿ ನನಗೆ ಖಚಿತವಾಗಿದ್ದು, ಸರ್ ನನ್ನನ್ನಲ್ಲ ನಿಮ್ಮನ್ನು ಪ್ರೀತಿಸ್ತಿದ್ದಾರೆ. ಮತ್ತೆ ನಿಮ್ಮಿಬ್ಬರ ಸಂಬಂಧದ ಸರಾಗತೆಗೆ ನನ್ನನ್ನು ಬಳಸಿಕೊಳ್ಳಲಾಗ್ತಿದೆ ಅಂತ. ನಿಮ್ಮ ಬಗೆಗಿನ ಅವರ ಪ್ರೇಮ ಕಣ್ಣಲ್ಲಿ ಕಾಣುವಷ್ಟು ಡಾಳಾಗಿತ್ತು.

`ನಿನಗೆ ತಲೆ ಕೆಟ್ಟಿದ್ಯಾ? ನನಗೆ ಮದುವೆಯಾಗಿದೆ. ಪ್ರೀತಿಸುವ ಗಂಡ, ಮುದ್ದಾದ ಮಗು ಎಲ್ಲ ಇದ್ದರು ನನಗೆ.

`ಅಕ್ಕ, ಈಗಲಾದ್ರೂ ನಾವು ಪರಸ್ಪರರಿಗೆ ಸುಳ್ಳು ಹೇಳೋದು ಬೇಡ. ಸರ್‍ಗೆ ಹತ್ತಿರವಾಗಲು ತಾನೇ ನೀವು ಇಷ್ಟು ದೂರ ವರ್ಗ ಮಾಡಿಸಿಕೊಂಡು ಬಂದ್ರಿ. ನಿಮ್ಮ ಪತಿಗೆ ವರ್ಗಾವಣೆ ಇಲ್ಲದ ಕಾರಣಕ್ಕೆ ಅವರು ಅವರ ಕೆಲಸವನ್ನೇ ಬಿಟ್ಟು ಬೇರೆ ಕೆಲಸ ಹುಡುಕಬೇಕಾಯಿತು’. ನಾನು ಸರ್ ಜೊತೆಗಿದ್ದ ಆ ಮೂರು ದಿನದಲ್ಲಿ ನನಗೆ ಸ್ಪಷ್ಟವಾಗಿದ್ದು ನನ್ನಲ್ಲಿ ಸರ್ ನಿಮ್ಮನ್ನು ಹುಡುಕುತಿದ್ದಾರೆ ಅಂತ.’

`ನಿನಗೆ ಹೇಳಿಬಿಡ್ತೇನೆ… ನಾನೇ ನಿನ್ನನ್ನು ಕರೆಸಲು ರಾಜೀವ್‍ಗೆ ಒತ್ತಾಯಿಸಿದ್ದೆ, ನನಗೆ ಅವನ ಜೊತೆಗಿನ ಸಂಬಂಧದಿಂದ ಬಿಡಿಸಿಕೊಳ್ಳಬೇಕಿತ್ತು. ಸುಸ್ತಾಗಿದ್ದೆ ನಾನು. ಸಾಗರ್ ಜೊತೆ ರಾಜೀವ್ ಸರಿಯಾಗಿ ಮುಖ ಕೊಟ್ಟು ಮಾತಾಡದೇ ಕಣ್ತಪ್ಪಿಸುತ್ತಿರುವುದು ನನ್ನ ಅರಿವಿಗೆ ಬಂದು ಹಿಂಸೆಯಾಗುತಿತ್ತು. ಎಲ್ಲ ಕೊಡವಿಹೋಗಲೂ ಸಾಧ್ಯವಿರಲಿಲ್ಲ. ಸಂಸಾರವೊಂದಿಗಳು… ಮನೆಯಿಂದ ಹೊರಬೀಳಬೇಕಾದರೆ ಮನೆಯ ದೇಖರೇಖಿಯಿಂದ ಹಿಡಿದು, ಹಾಲಿಗೆ ಹೆಪ್ಪಿಟ್ಟು ನನ್ನ ಅನುಪಸ್ಥಿತಿಯಲ್ಲಿ ಮೊಸರಿಗೆ ಸಹ ಕೊರತೆಯಾಗದಂತೆ ವ್ಯವಸ್ಥೆ ಮಾಡಿಟ್ಟುಹೋಗುವ ಜವಾಬ್ದಾರಿ ಯಾರೂ ಹೇಳದಿದ್ದರೂ ಮೈಗೂಡಿತ್ತು. ಮತ್ತೊಂದೆಡೆ ಯಾವುದೇ ಸಂಬಂಧವು ತೀವ್ರವಾಗಿದ್ದಷ್ಟು ಅದರ ದೀರ್ಘತೆಯಲ್ಲಿ ಸುಸ್ತು ಜಾಸ್ತಿ. ಹಾಗೆ ನೀನು ರಾಜೀವ್ ಮದುವೆಯಾದರೆ ನಾನು ನಿರಾಳವಾಗಬಹುದೆಂದು ತಿಳಿದಿದ್ದೆ… ನಿಮ್ಮಿಬ್ಬರಿಗಿಂತ ನನಗೆ ನಿಮ್ಮ ಮದುವೆ ಬೇಕಿತ್ತು.’

`ಅಕ್ಕ, ಆಮೇಲೂ ಸರ್ ಜೊತೆ ನೀವು ತುಂಬಾ ಚೆನ್ನಾಗಿಯೇ ಇದ್ರಿ ಅಲ್ವ? ಸಾಯುವ ಕೊನೆಗಳಿಗೆಯವರೆಗೂ ನೀವೆ ಸರ್ ಜೊತೆ ಇದ್ರಿ. ನೀವು ದಂಪತಿಗಳು ಇಲ್ಲದಿದ್ದರೆ ನನ್ನ ತಮ್ಮನಿಗೆ ಧಾತಾರರು ಯಾರೂ ಇರಲಿಲ್ಲ ಎಂದು ಅವರಕ್ಕ ಆ ದಿನ ನಿಮ್ಮ ಕೈ ಹಿಡಿದು ಅಳುತಿದ್ದರು.’

‘ನಿಮ್ಮಿಬ್ಬರ ಮದುವೆ ಆಗಲಿಲ್ಲ. ಆದರೆ ನಾನು ಮತ್ತೆ ರಾಜೀವ್‍ಗೆ ಹತ್ತಿರವಾಗದಷ್ಟು ದೂರವಾಗಿಬಿಟ್ಟಿದ್ದೆ… ಈ ನಡುವೆ ಮತ್ತೊಂದು ವಿಚಿತ್ರ ನಡೆಯಿತು. ರಾಜೀವ್‍ಗೆ ಸಾಗರ್ ಹತ್ತಿರವಾಗತೊಡಗಿದ್ದ. ನಿಮ್ಮ ಮದುವೆ ಮುರಿದುಬಿದ್ದಿದ್ದೇ ನೆಪವಾಯಿತೇನೋ ಸಾಗರ್ ರಾಜೀವ್‍ರನ್ನು ಬಹಳ ಕಾಳಜಿ, ಸ್ನೇಹದಲ್ಲಿ ನೋಡಿಕೊಳ್ಳತೊಡಗಿದ. ಪ್ರೇಮದಲ್ಲಿ ಸೋತ ಗಂಡಸಿಗೆ ಅನುಕಂಪ ಹೆಚ್ಚೇ ದೊರೆಯುತ್ತದೆ… ರಾಜೀವ್‍ಗೆ ಊಟ, ತಿಂಡಿ ಎಲ್ಲ ನಮ್ಮ ಮನೆಯಿಂದಲೇ ಹೋಗುವ ವ್ಯವಸ್ಥೆ ಮಾಡಿದ. ಸಂಜೆ ಹೊತ್ತು ಅವರಿಬ್ಬರು ಒಟ್ಟಿಗೆ ಕಳೆಯತೊಡಗಿದರು. ಹಬ್ಬದ ದಿನದಲ್ಲಿ ಮೊದಲೇ ಅವರಿಗೆ ಕರೆಹೋಗುತಿತ್ತು.. ಮಗುವನ್ನು ಕರೆದುಕೊಂಡು ಪ್ರತಿ ಭಾನುವಾರ ಅವರಿಬ್ಬರು ಹೊರಗೆ ಹೋಗಿ ಸಮಯ ಕಳೆದು ಬರುವುದು ಸಾಮಾನ್ಯವಾಯಿತು. ಅವರು ಮೂರು ಜನರದ್ದೇ ಒಂದು ತಂಡವಾಗಿ ನಾನೇ ಹೊರಗಿನವಳು ಎನಿಸುತಿತ್ತು… ಆದರೆ ಎಲ್ಲವು ಅಷ್ಟು ಸರಾಗವಿರಲಿಲ್ಲ..

ರಾಜೀವ್ ನನ್ನ ಕಡೆಗೆ ಯಾಚನೆಯ ಕಣ್ಣರಳಿಸುತಿದ್ದುದು ಕಾಣುತಿತ್ತು… ಆದರೆ ನಾನು ನಿರ್ಲಕ್ಷಿಸಿ ನಡೆಯುತಿದ್ದೆ… ನನ್ನ ಕಟುವರ್ತನೆಯನ್ನು ಅವರಿಗೆ ಸಹಿಸಿಕೊಳ್ಳಲಾಗಲಿಲ್ಲ..’ ಕೊನೆಯ ವಾಕ್ಯ ಹೇಳುತ್ತಾ ಅವಳ ಗಂಟಲು ಬಿಗಿದಿತ್ತು… ಎದುರಿದ್ದವಳ ಕಣ್ಣಲ್ಲೂ ನೀರಿತ್ತು.


ಇದನ್ನು ಓದಿ: ‘ಎಜುಕೇಟೆಡ್ ಗರ್ಲ್ಸ್’ : ಎಡೆಯೂರು ಪಲ್ಲವಿ ಅವರ ಕಥೆ

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts