Homeಮುಖಪುಟನಟ – ನಿರ್ದೇಶಕನಿಂದ ಡೆಲಿವರಿ ಬಾಯ್ ಆದ ಅನುಭವ: ಗಿಗ್ ಜಾಬ್ ಗಳು ಸೃಷ್ಟಿಸುತ್ತಿರುವ ಅವಾಂತರಗಳು...

ನಟ – ನಿರ್ದೇಶಕನಿಂದ ಡೆಲಿವರಿ ಬಾಯ್ ಆದ ಅನುಭವ: ಗಿಗ್ ಜಾಬ್ ಗಳು ಸೃಷ್ಟಿಸುತ್ತಿರುವ ಅವಾಂತರಗಳು ಏನು?

- Advertisement -
- Advertisement -

ಜೀವಕ್ಕೆ ನೆಮ್ಮದಿ ಬೇಕು. ಇದ್ದಷ್ಟು ಕಾಲ ನೆಮ್ಮದಿ ಹುಡುಕುವುದೇ ಒಂದು ಕೆಲಸ. ನಾವು ಇರುವ ರೀತಿಯಲ್ಲಿಯೇ, ಹೊಟ್ಟೆಪಾಡಿನ ದುಡಿಮೆಯ ಹಾದಿಯಲ್ಲಿ, ಒಟ್ಟಿನಲ್ಲಿ ಬದುಕಲು ಬೇಕಿರುವ “ಅನ್ನ ಸಂಪಾದನೆಯ” ಹಾದಿಯ ಮೂಲಕ ನೆಮ್ಮದಿಯನ್ನು ಹುಡುಕಿಕೊಳ್ಳಳು ಸದಾ ಪ್ರಯತ್ನಿಸುತ್ತಿರುತ್ತೇವೆ. ನಮಗೆ ಇವತ್ತು ಅನ್ನ ದಕ್ಕಿದಂತೆ ಮುಂದಿನ ದಿನ, ಮರುದಿನ, ಮುಂದೆ ಮತ್ತೊಂದು ದಿನ ಹೀಗೇ ಹೆಚ್ಚುಕಾಲದವರೆಗೆ ಅದರ ವ್ಯವಸ್ಥೆ ಆದಲ್ಲಿ ನೆಮ್ಮದಿ ಎನ್ನಿಸುತ್ತದೆ. ಹಾಗೆ ಹೆಚ್ಚಿನ ಕಾಲದವರೆಗೂ ಅನ್ನ ಉತ್ಪಾದಿಸಿಕೊಳ್ಳಲಾಗುವ ಒಂದು ದುಡಿಮೆಗಾಗಿ, ಅಂಥ ದುಡಿಮೆಯಿಂದ ಸಿಕ್ಕುವ ಆತ್ಮಗೌರವಕ್ಕಾಗಿ ನಾವು ಏನೆಲ್ಲ ಮಾಡುವೆವು. ಆದರೆ, ಅದರಿಂದ ಏನೆಲ್ಲಾ ಆಗುವುದು?

ನಮ್ಮಂತೆ ಯೋಚಿಸುವವರನ್ನು ಒಟ್ಟಾಗಿ ಸೇರಿಸಿ, ಅಂದರೆ ದುಡಿಯುವ, ದುಡಿದು ಆತ್ಮಗೌರವ ಸಂಪಾದಿಸುವ, ನೆಮ್ಮದಿಯ ಬದುಕು ಗಳಿಸುವ ನಮಗಿರುವ ಈ ಅನಿವಾರ್ಯತೆಯನ್ನ ಬಳಸಿಕೊಂಡು, ಆದರೆ ಅದರ ಲಾಭವನ್ನು ಮಾತ್ರ ಕೆಲವರೇ ಪಡೆದಾಗ? ನಾನು ಇಷ್ಟೆಲ್ಲ ಪೀಠಿಕೆ ಹಾಕಿ ನಮ್ಮ ಬದುಕಿನ ಮೂಲಭೂತ ವ್ಯವಸ್ಥೆಯನ್ನ ನೆನಪಿಸುತ್ತಿರುವುದು ಯಾಕೆ ಅಂದರೆ, ಇದೆ ಕಾರಣಕ್ಕಾಗಿ ಸಾಗಿದ ಬದುಕಿನ ಬಂಡಿ ಈಗ ಎಂಥ ಹಂತ ತಲುಪಿದೆ ಅನ್ನುವುದನ್ನ ಅವಲೋಕಿಸಲು..

ನಮ್ಮಂತೆ ಯೋಚಿಸಿದರೂ ಅವರಲ್ಲಿ ಕೆಲವರು ತಮ್ಮ ಲಾಭವನ್ನಷ್ಟೆ ಗುರಿಯಾಗಿಸಿಕೊಂಡಿರುವ ಅಭ್ಯಾಸದಿಂದ ದೊಡ್ಡ ಬಿಕ್ಕಟ್ಟು ಏರ್ಪಟ್ಟಿದೆ. ಹಳ್ಳ ಇದ್ದಲ್ಲಿ ನೀರು ನಿಂತಂತೆ ಅನುಕೂಲಸ್ಥರೇ ಹೆಚ್ಚು ಅನುಕೂಲ ಪಡೆವಂಥ ಹಂತಕ್ಕೆ ನಾವು ತಲುಪಿರೂವುದೂ ಬಿಕ್ಕಟ್ಟಿನ ಪರಿಸ್ಥಿತಿಯೇ. ಆದರೂ ನೇರವಾಗಿ ನಾನು ಈ ವಿಷಯಕ್ಕೆ ಇಳಿಯುತ್ತಿಲ್ಲ. ಅದನ್ನ ಜಗತ್ತಿನ ಕೆಲ ಅರ್ಥಶಾಸ್ತ್ರ ತಜ್ಞರು ಹೇಳುತ್ತಿದ್ದಾರೆ. ಇವುಗಳ ಬಗ್ಗೆ ಮಾತಾಡಲು ಸೂಕ್ಷ್ಮ ಅಧ್ಯಯನ ಬೇಕು. ನಾನು ಅಂತಹ ಅಧ್ಯಯನ ಮಾಡಿಲ್ಲವಾದರೂ ಸ್ವಂತ ಅನುಭಗಳಿಂದ ಕೆಲವು ವಿಷಯಗಳನ್ನು ಚರ್ಚಿಸಬೇಕು ಎಂದುಕೊಂಡಿದ್ದೇನೆ. ಈಗ ಬಂದಿರುವ ಕೊರೋನ ಮಹಾಮಾರಿಯ ಸಂದರ್ಭದಲ್ಲಿ, ಅಸ್ತವ್ಯಸ್ತತೆಯ ನಡುವೆ ಸಾಗಿರುವ ನನ್ನಂತಹ ಯುವಕರ  ದಾರಿಯನ್ನ ನನಗೆ ಕಂಡ, ನಾನು ಅನುಭವಿಸಿದ ರೀತಿಯಲ್ಲಿ ಇಲ್ಲಿ ಹಂಚಿಕೊಳ್ಳಲು ಪ್ರಯತ್ನಿಸುತ್ತಿರುವೆ ಅಷ್ಟೆ.

2007 ರಿಂದ 2019ರ ವರೆಗೂ ನಾನು ನಟನಾಗಿ, ನಿರ್ದೇಶಕನಾಗಿ, ನಟನಾ ತರಬೇತುದಾರನಾಗಿ ರಂಗಭೂಮಿ ಮತ್ತು ಸಿನಿಮಾ ಮಾಧ್ಯಮಗಳಲ್ಲಿ ನನ್ನ “ಅನ್ನ ದುಡಿದುಕೊಳ್ಳುವ” ಮೂಲಕ ಬದುಕಿದ್ದೆ. ಇಲ್ಲಿಯವರೆಗೂ ಹಲವುಸಲ ಬದುಕಲು ಬೇರೇನಾದರೂ ದುಡಿಮೆ ಮಾಡಬೇಕು ಅನ್ನಿಸಿದರೂ ಅದಕ್ಕಾಗಿ ಬೇರೆ ದಾರಿಗಳನ್ನ ಹುಡುಕಲು ಸೋಮಾರಿಯಾಗಿದ್ದ ನಾನು ಈಗ 2020ರ ಮಾರ್ಚ್ ತಿಂಗಳಲ್ಲಿ “ಫುಡ್ ಡೆಲಿವರಿ” ಮಾಡುವ ಕೆಲಸ ಶುರುಮಾಡಿದ್ದೆ.

ನಾನು ಕೆಲಸ ಶುರುಮಾಡಿ ವಾರವೂ ಆಗಿರಲಿಲ್ಲ ಕರೋನ ಇಂದಾಗಿ ನಮ್ಮ ದೇಶದಾದ್ಯಂತ “ಲಾಕ್ ಡೌನ್” ಘೋಶಿಸಲಾಯಿತು.

ಇಲ್ಲಿಂದ ಶುರುವಾಯ್ತು ನನ್ನ ವಿಚಿತ್ರ ಮತ್ತು ಸಚಿತ್ರ ಅನುಭವ. ಹೊರದೇಶದಿಂದ ಬಂದವರನ್ನ ಗಂಭೀರ ಪರೀಕ್ಷೆ ಮತ್ತು ನಜರ್ ಬಂದಿಯಲ್ಲಿ ಇರಿಸುವಲ್ಲಿ ನಮ್ಮ ಸರಕಾರಗಳು ಸೋತಿದ್ದರಿಂದಾಗಿ, ಈಗ ನಮ್ಮಲ್ಲಿ ಯಾರ್ಯಾರಿಗೆ ಈ ವೈರಸ್ ಹರಡಿರುವುದೋ ಖಾತ್ರಿ ಇಲ್ಲದ ಕಾರಣ,ಇದು ಹರಡುವುದನ್ನ ತಡೆಯಲು ಮಾಡಿದ ಉಪಾಯ ಲಾಕ್ ಡೌನ್. ಆದರೆ ನಾನು ಫುಡ್ ಡೆಲಿವರಿ ಮಾಡುವ ಕೆಲಸ ಶುರುಮಾಡಿದ್ದರಿಂದ, ಇಂಥ ಪರಿಸ್ಥಿತಿಯಲ್ಲಿ ನಮ್ಮ ಹಲವು ಕಲಾವಿದರಂತೆ “ನನಗೆ ತೊಂದರೆ ಆಗಿದೆ ಸಹಾಯ ಮಾಡಿ” ಅಂತ ಕೈ ಒಡ್ಡುವ ಪರಿಸ್ಥಿತಿ ಇರಲಿಲ್ಲ. ಆದರೆ ನಾನು ಯಾವ ಸುರಕ್ಷತೆಯೂ ಇಲ್ಲದೆ ಫುಡ್ ಡೆಲಿವರಿ ಮಾಡಬೇಕಿರುವ ಅನಿವಾರ್ಯತೆಗೆ ಸಿಕ್ಕಿಕೊಂಡಿರುವ ಡೇಂಜರ್ ಕೂಡ ಇದೆ.

ನಾನು ಒಂದು ದೊಡ್ಡ ಅಪಾರ್ಟ್ಮೆಂಗೆ ಡೆಲಿವರಿ ಮಾಡಲು ಅಲ್ಲಿಗೆ ತಲುಪಿದಾಗ ನಡೆದ ಒಂದು ಸಣ್ಣ ಘಟನೆ ಹೇಳುವೆ. ಕೊರೋನ ಇರುವುದರಿಂದ ಡೆಲಿವರಿ ಮಾಡುವ ನಾವು ಅಪಾರ್ಟ್ಮೆಂಟ್ ಗೇಟಿನ ಹೊರಗೆ ಕಾಯಬೇಕು. ಈ ದೊಡ್ಡ ಅಪಾರ್ಟ್ಮೆಂಟ್’ನಿಂದ ಆರ್ಡರ್ ಮಾಡುವ ಕಸ್ಟಮರ್ ಗೇಟಿನ ಬಳಿ ಬಂದು ನಮ್ಮ ಬಳಿ ಫುಡ್ ಕಲೆಕ್ಟ್ ಮಾಡಲು ಕೆಲವು ಸಲ 15 ರಿಂದ 20 ನಿಮಿಷಗಳೂ ಆಗಬಹುದು. ಕಾರಣ ಎಕರೆಗಟ್ಟಲೆ ಇರುವ ಅಪಾರ್ಟ್ಮೆಂಟ್’ನ ಒಂದು ಮೂಲೆಯಿಂದ ಇನ್ನೊಂದು ಮೂಲೆಯಲ್ಲಿರುವ ಗೇಟಿನ ಬಳಿ ಬರಬೇಕಾಗಿರುವ ಸಮಸ್ಯೆ ಅವರಿಗೇ ಗೊತ್ತು. ಹೀಗೆ ಒಮ್ಮೆ ನಾನು  ಕಾಯುತ್ತಿರಬೇಕಾದರೆ ಸಮಯ ರಾತ್ರಿ ಸುಮಾರು 10 ಘಂಟೆ. ಕಣ್ಣಳತೆಯಲ್ಲಿ ರೋಡಿನ ಮೇಲೆ ನನ್ನಂತೆ ಡೆಲಿವರಿ ಮಾಡವ ಮತ್ತೊಂದು ಕಂಪನಿಯವ ನಿಂತು ಫೋನಾಯಿಸುತ್ತಿದ್ದ.  ಕಂಗಾಲಾಗಿ ನಿಂತಿದ್ದ. ಓಡಾಡಿ ಓಡಾಡಿ ದಣಿದಿರಬೇಕು ಇವ ಎಂದೆನಿಸಿತು ನನಗೆ. ಅವನ ಹತ್ತಿರ ಹೋಗಿ “ಅಲ್ಲ ನಮ್ಮ ಕಂಪನಿ ನಮಗೆಲ್ಲ ಒಂದು ಬ್ಯಾಗ್ ಕೊಡ್ತದೆ. ಹೆಚ್ಚೆಂದರೆ ಒಂದೇ ದಾರಿಯಲ್ಲಿ ತಗಲುವ 2 ಅಥವ ಒಮ್ಮೊಮ್ಮೆ 3 ಡೆಲಿವರಿ ಆರ್ಡರ್ ಕೊಡ್ತದೆ. ಆದರೆ ಇದೇನು ನಿಮ್ಮ ಕಂಪನಿ ನಿಮಗೆ ಗಾಡಿಯೇ ಕಾಣದಷ್ಟು ಬ್ಯಾಗುಗಳನ್ನ ಹೊರಸಿ ಕಳಸುತ್ತಲ್ಲ ಹೇಗೆ ಇದು” ಅಂದೆ. ಯಾವುದೋ ಚಿಂತೆಯಲ್ಲಿದ್ದವ ನನಗೆ “ಇಷ್ಟೆಲ್ಲ ಆರ್ಡರ್ ಬಂದಮೇಲೆ ನಮಗೆ ಒಟ್ಟಿಗೇ ಹೊರಿಸಿ ಕಳಿಸ್ತಾರೆ” ಅಂದ. ನಾನಾಗ ಮನಸ್ಸಲ್ಲೇ ನನ್ನ ಮತ್ತೆ ಅವನ ಕೆಲಸಗಳ ನಡುವೆ ವ್ಯತ್ಯಾಸಗಳೇನು, ಅನುಕೂಲಗಳೆಷ್ಟು, ಅನಾನುಕೂಲಗಳೆಷ್ಟು ಎಂದು ಲೆಕ್ಕಹಾಕತೊಡಗಿದೆ. ಅಷ್ಟರಲ್ಲಿ ನನ್ನ ಲೆಕ್ಕಚಾರ ಬುಡಮೇಲಾಗುವ ವಿಚಾರ ಅವನಿಂದ ನನಗೆ ಅಪ್ಪಳಿಸಿತು. “ಸಾರ್ ನನ್ ಗಾಡಿಲಿ ಪೆಟ್ರೋಲ್ ಖಾಲಿ ಆಗಿದೆ, ನಿಮ್ ಗಾಡಿ ಕೊಟ್ರೆ ಇಲ್ಲೆ 2 ಕಿಲೋಮಿಟರ್ ಒಳಗೆ ಒಂದು ಪೆಟ್ರೋಲ್ ಬಂಕಿದೆ ಅಲ್ಲಿಂದ ಪೆಟ್ರೋಲ್ ತಂದುಕೋತಿನಿ ಪ್ಲೀಸ್, ನಮ್ ಕಂಪನಿಯವರಿಗೆ ಫೋನ್ ಮಾಡಿದ್ರೆ ಸರಿಯಾಗಿ ರಿಸ್ಪಾಂಡ್ ಮಾಡ್ತಿಲ್ಲ. ಒಂದು 5 ನಿಮಿಷ ಬಂದ್ಬಿಡ್ತಿನಿ ಪ್ಲೀಸ್” ಅಂತ ಒಂದೇ ಉಸಿರಲ್ಲಿ ಹೇಳಿಬಿಟ್ಟ. ನನಗೆ ಆತನ ಒದ್ದಾಟ ನೋಡಿ ಮಾತೇ ಹೊರಡದೆ, ಸೀದ ನನ್ನ ಕೈಲಿದ್ದ ನನ್ನ ಗಾಡಿಯ ಕೀ ಅವನೆಡೆ ಮಾಡಿದೆ, ಕೈ ಚಾಚಿ. ಅವ ನನ್ ಗಾಡಿ ಒಂಚೂರ್ ನೋಡ್ಕೊಳ್ಳಿ ಸರ್ ಪ್ಲೀಸ್ ಎಂದವನೆ ನನ್ನ ಗಾಡಿ ತೊಗೊಂಡು ಹೊರಟ. ಕೆಲ ಕ್ಷಣಗಳಲ್ಲಿ ನಾನು ಯಾರಿಗಾಗಿ ಕಾಯುತಿದ್ದೆನೋ ಆ ಕಸ್ಟಮರ್ ಬಂದರು. ನಾನು ಅವರಿಗೆ ಅವರ ಫುಡ್ ಡೆಲಿವರಿ ಮಾಡಲು ಹೋಗುವಾಗ ನನ್ನ ತಲೇಲಿ, ಇಲ್ಲಿ ಈ ಇನ್ನೊಬ್ಬಾತ ನೋಡಿಕೋ ಎಂದು ನಿಲ್ಲಿಸಿ ಹೋಗಿರುವ ಗಾಡಿಗೆ ಜೋತು ಬಿದ್ದಿರುವ ಆಹಾರ ಪದಾರ್ಥಗಳು ತುಂಬಿರುವ ಚೀಲಗಳಿಗೆ, ಅಲ್ಲೇ ಅಲೆದಾಡುತ್ತಿರುವ ಯಾವುದರು ನಾಯಿ ಬಾಯಿ ಹಾಕಿದರೆ ಎಂದು ಗಾಬರಿ ಆಯಿತು. ನಾನು ಇತ್ತ ಒಂದು ಕಣ್ಣಿಟ್ಟುಕೊಂಡೇ ಹೋಗಿ ನನ್ನ ಕಸ್ಟಮರ್ ಗೆ ಡೆಲಿವರಿ ಮಾಡಿ, ವಾಪಾಸು ಬಂದೆ. ಡೆಲಿವರಿ ಮಾಡಿದೆ ಎಂದು ನಾನು ಬಟನ್ ಒತ್ತಿದರೆ, ಮತ್ತೊಂದು ಹೊಸ ಡೆಲಿವರಿ ಆರ್ಡರ್ ಬರಬಹುದು. ಹಾಗಾಗಿ ನನ್ನ ಗಾಡಿ ವಾಪಾಸು ಬರುವವರೆಗೂ ಕಾದು, ಅವ ಬಂದ ನಂತರ ಈಗ ಇಲ್ಲಿಯ ಡೆಲಿವರಿ ಮುಗಿಯಿತು ಎಂದು ಬಟನ್ ಒತ್ತಿದೆ.

ಹೀಗೆ ದೂರದಲ್ಲಿ ಎಲ್ಲೋ ನನ್ನ ಗಾಡಿಯ ಪೆಟ್ರೋಲ್ ಖಾಲಿ ಆಗಲಿ, ಅಥವಾ ಪಂಚರ್ ಆಗಲಿ ನಾನು ಅದನ್ನ ಡೆಲಿವರ್ ಮಾಡುವುದು ನನ್ನ ಜವಾಬ್ದಾರಿ ಮತ್ತು ನನ್ನ ಸಹಾಯಕ್ಕೆ ಕಂಪನಿ ಬರದು ಎಂತಾದರೆ ಎಂಥ ಅಸಹಾಯಕ ಸ್ಥಿತಿಗೆ ನಮ್ಮನ್ನ ತಳ್ಳಿಬಿಡಲಾಗಿದೆ ಎನಿಸಿ ಬೆಚ್ಚಿದೆ. ಇನ್ನೊಂದು ಘಟನೆ ನನ್ನನ್ನ ವಿಚಿತ್ರ ಮೌನಕ್ಕೆ ದೂಡಿತ್ತು. ರಾತ್ರಿ 11ಕ್ಕೆ ಕಂಪನಿಯ ಪ್ರಕಾರ ನನ್ನ ಕೆಲಸದ ಸಮಯ ಪೂರ್ತಿ ಆಗುತ್ತದೆ. ಅವತ್ತು ಸಮಯ ಸರಿಯಾಗಿ ರಾತ್ರಿ 11:30. ನಾನು ಮನೆಕಡೆ ಹೊರಟಿದ್ದೆ. ಕಂಪನಿಯ ಪ್ರಕಾರ ನನ್ನ ಡೆಲಿವರಿ ಯಾಪ್ ಅನ್ನ ನಾನು ಆಫ್ ಮಾಡಿರಲಿಲ್ಲ. ಕಾರಣ ನಾನು ಹೋಗುವ ದಾರಿಲಿ ಅದೇ ದಿಕ್ಕಿನ  ಯಾವುದರ ಆರ್ಡರ್ ಬಂದರೆ ಒಳ್ಳೆಯದು. ಹಾಗೇ ಕೊಟ್ಟು ಮನೆಗೆ ಹೋದರಾಯ್ತು ಅಂತ.

ನಾನು ಮನೆಗೆ ಹತ್ತಿರದಲ್ಲಿರುವಾಗ, ನನಗೆ 12 ಕಿಲೋ ಮೀಟರ್ ದೂರ ಹೋಗುವ ಆರ್ಡರ್ ಬಂದು ಬಿಟ್ಟಿತು. ನನಗೋ ಹೊಟ್ಟೆ ಹಸಿತಿದೆ, ನಿದ್ದೆ ಬರಹತ್ತಿದೆ, ಸತತ ಗಾಡಿ ಓಡಿಸಿದ್ದರಿಂದ ಸೀಟು ಉರಿಯುತ್ತಿದೆ, ಭುಜ ಬೆನ್ನುಗಳು ಪದ ಹಾಡುತ್ತಿವೆ. ನಾನು ಅದನ್ನ ರಿಜೆಕ್ಟ್ ಮಾಡಿದೆ. ಕನ್ಫರ್ಮೇಶನ್ ಕೇಳಿತು ಯಾಪ್: “ನೋಡು ನೀನು ಈ ಆರ್ಡರ್ ರಿಜೆಕ್ಟ್ ಮಾಡಿದರೆ ನಿನ್ನ ದುಡಿಮೆ ಇಂದ 40 ರೂಪಾಯಿ ಕಡಿತವಾಗುತ್ತದೆ” ಅಂತ. ದಿನವೆಲ್ಲ ದುಡಿದರೆ 450 ರಿಂದ 500 ಆಗುವುದು ಕಷ್ಟ ಅದರಲ್ಲಿ ಪೆಟ್ರೋಲಿನ ಖರ್ಚು ತೆಗೆದರೆ ಮಿಕ್ಕುವುದು ಬರೋಬ್ಬರಿ ಅರ್ಧದಷ್ಟೇ.

ಅದರಲ್ಲಿ ನಲವತ್ತು ರೂ ಒಂದೇ ಏಟಿಗೆ ಕಡಿತ ಆದರೆ? ಇದ್ಯಾವ ರೀತಿಯ ಧಮಕಿ ಅನ್ನಿಸಿತು ನನಗೆ. ಸುಸ್ತು ತಡಿಯಲಾಗದೆ ರಿಜೆಕ್ಟ್ ಮಾಡಿದೆ. ನನಗೆ ಅವತ್ತಿನ ಯಾರೋ ಕಸ್ಟಮರ್ ಕೊಟ್ಟಿದ್ದ ಟಿಪ್ 40/- ಅಲ್ಲಿ ಅನಿವಾರ್ಯವಾಗಿ ಹೋಯಿತು.

 

ನನ್ನ ಆರೋಗ್ಯ ಸುರಕ್ಷತೆಯಿಂದ ಹಿಡಿದು ಯಾವ ಭದ್ರತೆಯನ್ನೂ ಯಾರೂ ಕೊಡರು. ಆದರೆ ನಾನು ನನ್ನ ನೆಮ್ಮದಿಗಾಗಿ ದುಡಿಯಬೇಕಿರುವ ಅನಿವಾರ್ಯತೆಯನ್ನ ಬಳಸಿಕೊಳ್ಳಲಾಗುತ್ತಿದೆ ಅಷ್ಟೇ. ಡೆಲಿವರಿ ಮಾಡುವವರನ್ನ ಹೀರೋಗಳೆಂದು ಕರೆದು ಕಸ್ಟಮರ್’ಗಳಿಂದ ಮತ್ತು ಇತರರಿಂದ “ನೋಡಿ ನಮ್ಮ ಡೆಲಿವರಿ ಹೀರೋಗಳು ಇಂಥ ಸಂದರಭದಲ್ಲೂ ನಿಮಗಾಗಿ ದುಡಿಯುತಿರುವರು ಅವರಿಗೆ ಸಹಾಯ ಮಾಡಿ” ಎಂದು ಕಂಪನಿಗಳು ನಮ್ಮ ಹೆಸರಲ್ಲಿ ಚಂದ ಎತ್ತುತ್ತಿದ್ದಾರೆ. ಆದರೆ ಡೆಲಿವರಿ ಮಾಡುವವರ ಪಾಡು ಮಾತ್ರ ಸುಧಾರಿಸದು.

ಇನ್ನು ಫುಡ್ ಆರ್ಡರ್ ಮಾಡುವ ಗ್ರಾಹಕರಿಗೆ ಈ ಕಂಪನಿಯು ಕೊಡುತ್ತಿರುವ ಭರವಸೆ  “ನಾವು ನಮ್ಮ ಡೆಲಿವರಿ ಪಾರ್ಟ್ನರ್’ಗಳನ್ನ ಪ್ರತಿನಿತ್ಯ ಚೆಕ್ ಮಾಡುತ್ತೇವೆ ಆ ಮೂಲಕ ನಿಮ್ಮ ಸುರಕ್ಷತೆಯನ್ನೂ ಕಾಪಾಡುತ್ತೇವೆ” ಎನ್ನುವುದು. ಆದರೆ ನನ್ನಂತೆ ಹಲವು ಡೆಲಿವರಿ ಮಾಡುವವರನ್ನ ಯಾರೂ ಸರಿಯಾಗಿ ಚೆಕ್ ಮಾಡುತ್ತಿಲ್ಲ ಎಂಬುದೆ ಸತ್ಯ.

ಮತ್ತೆ ಆರ್ಡರ್ ಮಾಡುವ ಕಸ್ಟಮರ್’ಗಳು ಯಾರೂ ಕಾಣದ, ಅಡುಗೆ ತಯ್ಯಾರಾಗುವ ಕಿಚನ್ ನಲ್ಲಿ ಹಲವು ವಿಷಯಗಳು ನನ್ನ ಕಣ್ಣಿಗೆ ಬಿದ್ದಿವೆ.

  1. ಪ್ಲಾಸ್ಟಿಕ್ ಟೇಬಲ್ಲು ಅಥವಾ ಪ್ಲಾಸ್ಟಿಕ್ ಮಣೆಯ ಮೇಲೆ ತರಕಾರಿಗಳನ್ನ ಕತ್ತರಿಸುವರು. ಕತ್ತರಿಸಿದ ತರಕಾರಿಯೊಡನೆ ತಳದಲ್ಲಿಯ ಪ್ಲಾಸ್ಟಿಕ್’ನ ಅತಿ ಸಣ್ಣ ಕಣಗಳು ತರಕಾರಿಯೊಡನೆ ಬೆರೆಯದೇ ಇರವು.
  2. ಸಾರಿನಂಥ ಯಾವುದನ್ನೇ ದ್ರಾವಣ ಆಗಲಿ ಕವರ್ ಒಂದಕ್ಕೆ ಹಾಕಿ ಅದಕ್ಕೆ ರಬ್ಬರ್ ಬ್ಯಾಂಡ್ ಹಾಕುವಾಗ ಪ್ರತಿಸಲ ಪ್ಯಾಕ್ ಮಾಡುತ್ತಿದ್ದ ಹುಡುಗ ತನ್ನ ಎಡಗೈಲಿ ಸಾರು ಅಥವಾ ಸೂಪ್ ಅಥವಾ ಗ್ರೇವಿ ತುಂಬಿರುವ ಕವರ್ ಹಿಡಿದು ಬಲಗೈ ಇಂದ ರಬ್ಬರ್ ಬ್ಯಾಂಡ್ ಒಂದನ್ನ ತೊಗೊಂಡು, ತನ್ನ ಹಲ್ಲುಗಳಿಂದ ಅದನ್ನ ಕಚ್ಚಿ ಹಿಡಿದು ಹಿಗ್ಗಿಸಿ,ತನ್ನ ಬಲಗೈಯ್ಯ ಬೆರಳುಗಳಿಂದ ಹಿಗ್ಗದ ರಬ್ಬರ್ ಬ್ಯಾಂಡ್ ಹಿಡಿದು ಕವರಿಗೆ ನಾಕೈದು ಸುತ್ತು ಹಾಕುವುದು.
  3. ಡೆಲಿವರಿ ಮಾಡುವವರಿಗೆ ಅಂತ ಒಂದು ಚಿಕ್ಕ ಸ್ಯಾನಿಟೈಸರ್ ಡಬ್ಬಿಯನ್ನು ಕೊಟ್ಟಿಲ್ಲ. ಆಯಾ ಸ್ಥಳಗಳಲ್ಲಿ ಸಂಗ್ರಹ ಮಾಡುವಾಗ ಗೋಡೆಗೆ ಇರುವ ಸ್ಯಾನಿಟೈಸರ್ ಅನ್ನು ಮಾತ್ರ ಬಳಸಬೇಕು. ಇನ್ನು ಹಲವೆಡೆ ಇಂಥ ಯಾವ ವ್ಯವಸ್ಥೆ ಇಲ್ಲ. ಗಾಡಿ ಓಡಿಸುವ ಡೆಲಿವರಿಯ ನಾವು ಏನೇನನ್ನ ಮುಟ್ಟಿರುವೆವೋ ನಮಗೇ ನೆನಪಿರದು. ಅವೇ ಕೈಗಳಿಂದ ಕೆಲ ಅಂಗಡಿಗಳಲ್ಲಿ ಪ್ಯಾಕಿಂಗ್ ಕವರ್ ಇಲ್ಲದ್ದರಿಂದಾಗಿ ಐಸ್ ಕ್ರೀಮ್ ಕೋನುಗಳನ್ನ, ಡಬ್ಬಿಗಳನ್ನ ಪ್ರತಿಸಲವು ಕೈಯಲ್ಲಿ ಮುಟ್ಟುವ ಅನಿವಾರ್ಯತೆ ಏರ್ಪಡುತ್ತದೆ.

ಇಡೀ ವಿಶ್ವ ಎದುರಿಸುತ್ತಿರುವ ಇಂತಹ ವಿಷಮ ಪರಿಸ್ಥಿತಿಯಲ್ಲಿ ಈ ವಿಷಯಗಳ ಗಂಭೀರತೆ ಯಾರಿಗೂ ಬೇಡವಾಗಿದೆ. ಕೋಟ್ಯಂತರ ಜನರ ಅನಿವಾರ್ಯತೆಗಳನ್ನ ಬೆರಳೆಣಿಕೆಯ ಜನರ ಸಂಪತ್ತು ವೃದ್ಧಿಗಾಗಿ ಬಳಸಿಕೊಳ್ಳುವುದರಲ್ಲಿ ಜಗತ್ತು ಇಂಥ ಕೊರೊನ ಸಂದರ್ಭದಲ್ಲಿಯೂ ಮುಳುಗಿದೆ. ಮುಂದೆ ಇದು ಇಲ್ಲಿಂದ ಎಲ್ಲಿಗೆ ಹೋಗುತ್ತದೆಯೋ – ಊಹಿಸಲೂ ಕಷ್ಟ!

  • ಸಿದ್ಧಾರ್ಥ ಮಾಧ್ಯಮಿಕ

ಕವಲುದಾರಿ, ಶುದ್ಧಿ, ಭಿನ್ನ ಇತ್ಯಾದಿ ಸಿನೆಮಾಗಳಲ್ಲಿ ನಟರಾಗಿ ಗಮನ ಸೆಳೆದಿದ್ದಾರೆ. ಬಹುಮುಖಿ ನಾಟಕ ನಿರ್ದೇಶನಕ್ಕೆ ಪ್ರಶಸ್ತಿ ಪಡೆದಿದ್ದಾರೆ. ಇತ್ತೀಚಿಗೆ ಇವರು ನಿರ್ದೇಶಿಸಿದ ‘ಫೂ’ ನಾಟಕ ಕರ್ನಾಟಕದಾದ್ಯಂತ ಹತ್ತಾರು ಪ್ರದರ್ಶನ ಕಂಡು ವೀಕ್ಷಕರ ಮೆಚ್ಚುಗೆ ಗಳಿಸಿತ್ತು. ಕೊರೊನ ಸಮಯದಲ್ಲಿ ಖಾಸಗಿ ಸಂಸ್ಥೆಯೊಂದಿಗೆ ಡೆಲಿವರಿ ಪಾರ್ಟನರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ತನ್ನ ದಿನದ ತುತ್ತಿಗೆ. . ದುಡಿವ ಎಲ್ಲ ದುಡಿಮೆಗಾರನ ಹಣೆಬರಹ ಈ unsecured feeling ಏ .. ಗೆಳೆಯ

  2. ತುಂಬಾ ಚನ್ನಾಗಿ ನಿರ್ಲಿಪ್ತವಾಗಿ ಬರೆದಿದ್ದಿರಿ. ನಿಮ್ಮ ಯಾವ ಸಾಲೂ ಆರೋಪನಲ್ಲೂ ಆರೋಪ, ಆಕ್ರೋಶ, ಸಿಟ್ಟು, ಬೇಸರ ಕಾಣಲಿಲ್ಲ.
    ಆದ್ರೆ ಹಿಂಗೆಲ್ಲ ಬರೆದರೆ ಸಿಕ್ಕ ಕೆಲಸಾನೂ ಕಳಕೋತಿರಿ.

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...