ಸಿಎಂಗೆ ಮೀಸಲಾದ ಸಮೋಸಾವನ್ನು ಅವರ ಸಿಬ್ಬಂದಿಗೆ ನೀಡಿದ ಕಾರಣಕ್ಕೆ ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಲ್ಲದೆ, ಐವರು ಪೊಲೀಸರಿಗೆ ಸಮನ್ಸ್ ನೀಡಿರುವ ವಿಚಿತ್ರ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಇಷ್ಟೆ ಅಲ್ಲದೆ, ಈ ಬಗ್ಗೆ ರಾಜ್ಯದ ರಾಜಕೀಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಆಡಳಿತರೂಢ ಪಕ್ಷ ಮತ್ತು ಪ್ರತಿಪಕ್ಷಗಳು ಪರಸ್ಪರ ವಾಗ್ದಾಳಿಗಳು ನಡೆಸುತ್ತಿವೆ.
ಘಟನೆ ಏನು?
ಅಕ್ಟೋಬರ್ 21 ರಂದು ಶಿಮ್ಲಾದ ಹೋಟೆಲ್‌ನಲ್ಲಿ ರಾಜ್ಯದ ಸಿಐಡಿ ಅಧಿಕಾರಿಗಳ ಕಾರ್ಯಕ್ರಮದಲ್ಲಿ ಸಿಎಂ ಸುಖು ಭಾಗವಹಿಸಿದ್ದರು. ಈ ವೇಳೆ ಸಿಎಂಗೆ ಮೀಸಲಾದ ಸಮೋಸಾಗಳು ಪ್ಯಾಕೆಟ್‌ಗಳಲ್ಲಿ ಬಂದಿತ್ತು. ಆದರೆ, ಈ ಸಮೋಸವನ್ನು ಅವರಿಗೆ ನೀಡದೆ ಅವರ ಭದ್ರತಾ ಸಿಬ್ಬಂದಿಗೆ ನೀಡಲಾಗಿತ್ತು. ಈ ಘಟನೆ ರಾಜ್ಯ ಸಿಐಡಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು, ಘಟನೆ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ರಾಜ್ಯದ ಕಾಂಗ್ರೆಸ್ ಸರ್ಕಾರವು ಅನಗತ್ಯ ವಿಷಯಗಳತ್ತ ಗಮನ ಹರಿಸುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸುತ್ತಿವೆ.
ಘಟನೆ ನಡೆದು ಹದಿನೈದು ದಿನಗಳ ನಂತರ, ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ನಡೆಸಿದ ತನಿಖೆಯು ಇದನ್ನು “ಸರ್ಕಾರ ವಿರೋಧಿ” ಕೃತ್ಯ ಎಂದು ಬಣ್ಣಿಸಿದೆ. ಇದರ ಪರಿಣಾಮವಾಗಿ ಮಹಿಳಾ ಇನ್ಸ್‌ಪೆಕ್ಟರ್ ಸೇರಿದಂತೆ ಐವರು ಪೊಲೀಸ್ ಸಿಬ್ಬಂದಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ.
ಕಾಂಗ್ರೆಸ್ ಸರ್ಕಾರದ ಈ ಕ್ರಮವನ್ನು ಪ್ರತಿಪಕ್ಷ ಬಿಜೆಪಿ ವಿರೋಧಿಸಿದ್ದು, “ಸರ್ಕಾರವು ನಾಪತ್ತೆಯಾಗಿರುವ ಸಮೋಸಾಗಳ ಬಗ್ಗೆ ತನಿಖೆಗೆ ಆದೇಶಿಸಿದೆ. ಆದರೆ ಗಂಭೀರ ಪ್ರಕರಣಗಳತ್ತ ಕಣ್ಣು ಮುಚ್ಚಿ ಕುಳಿತಿದೆ” ಎಂದು ತರಾಟೆಗೆ ತೆಗೆದುಕೊಂಡಿದೆ.
ವಿರೋಧ ಪಕ್ಷದ ನಾಯಕ ಮತ್ತು ಮಾಜಿ ಸಿಎಂ ಜೈ ರಾಮ್ ಠಾಕೂರ್ ಪ್ರತಿಕ್ರಿಯಿಸಿ, “ಪ್ರತಿಪಕ್ಷಗಳು ಆ ಸಮೋಸಗಳನ್ನು ತಿಂದಿಲ್ಲ. ಸರ್ಕಾರದ ಭಾಗವಾಗಿದ್ದ ವ್ಯಕ್ತಿಗಳೆ ಆ ಸಮೋಸಗಳನ್ನು ಬಡಿಸಿದ್ದಾರೆ. ಹಾಗಾದರೆ ಈ ನಡೆಯು ಸರ್ಕಾರಿ ವಿರೋಧಿ ಆಗುವುದು ಹೇಗೆ?” ಎಂದು ಕೇಳಿದ್ದಾರೆ.
“ರಾಜ್ಯ ಸರ್ಕಾರ ಮತ್ತು ಮುಖ್ಯಮಂತ್ರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಸಮೋಸಾ ಸಂಚಿಕೆ ಬಗ್ಗೆ ತನಿಖೆಗೆ ಆದೇಶಿಸಬೇಕು” ಎಂದು ಅವರು ಹೇಳಿದ್ದಾರೆ. ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಭ್ರಷ್ಟಾಚಾರದ ಆರೋಪಗಳ ಬಗ್ಗೆ ತನಿಖೆ ನಡೆಸುತ್ತಿಲ್ಲ. ಬದಲಾಗಿ ಸಮೋಸಾ ವಿತರಣೆಯ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಹಿಮಾಚಲ ಪ್ರದೇಶದ ಬಿಜೆಪಿಯ ಮಾಜಿ ಮುಖ್ಯಸ್ಥ ಸತ್ಪಾಲ್ ಸತ್ತಿ ಅವರು ಕಾಂಗ್ರೆಸ್ ಸರ್ಕಾರವು ಸಮೋಸಾಗಳ ವಿಚಾರಣೆಗೆ ಆದೇಶಿಸುವ ಮೂಲಕ ನಗೆಪಾಟಲಿಗೀಡಾಗಿದೆ ಎಂದು ಹೇಳಿದ್ದಾರೆ.
ಆದರೆ ಕಾಂಗ್ರೆಸ್ ಸರ್ಕಾರ ಇದನ್ನು ನಿರಾಕರಿಸಿದೆ. ಬಿಜೆಪಿಗೆ ಬೇರೆ ಯಾವುದೇ ಸಮಸ್ಯೆಗಳಿಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರ ನರೇಶ್ ಚೌಹಾಣ್ ಹೇಳಿದ್ದಾರೆ.
ವಿವಾದದ ಸುಳಿಯಲ್ಲಿ ಸಿಲುಕಿರುವ ಸಿಐಡಿ ಈ ವಿಚಾರವನ್ನು ಆಂತರಿಕ ವಿಚಾರ ಎಂದು ಬಣ್ಣಿಸಿದ್ದು, ರಾಜಕೀಯ ಮಾಡಬೇಡಿ ಎಂದು ಎಲ್ಲರಿಗೂ ಮನವಿ ಮಾಡಿದೆ. ”ಇದು ನಮ್ಮ ಇಲಾಖೆಯ ಆಂತರಿಕ ವಿಚಾರ. ಸರಕಾರಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ,’’ ಎಂದು ಸಿಐಡಿ ಮಹಾನಿರ್ದೇಶಕ (ಡಿಜಿ) ಸಂಜೀವ್ ರಂಜನ್ ಓಜಾ ಹೇಳಿದ್ದಾರೆ.
ಮುಖ್ಯಮಂತ್ರಿಗಳಿಗೆ ತರಿಸಿದ್ದ ತಿಂಡಿ ಏನಾಯಿತು ಎಂದು ತಿಳಿಯಲು ಕೇವಲ ಮೌಖಿಕ ಆದೇಶಗಳನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. “ಯಾವುದೇ ತನಿಖೆಗೆ ಆದೇಶಿಸಲಾಗಿಲ್ಲ, ಯಾವುದೇ ವಿವರಣೆಯನ್ನು ಕೇಳಲಾಗಿಲ್ಲ ಮತ್ತು ಯಾರ ವಿರುದ್ಧವೂ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ. ಜನರು ಈ ವಿಷಯವನ್ನು ಉಲ್ಬಣಗೊಳಿಸುವುದನ್ನು ಮತ್ತು ರಾಜಕೀಯಗೊಳಿಸುವುದನ್ನು ನಿಲ್ಲಿಸಬೇಕು” ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಸಿಐಡಿ ಪ್ರಧಾನ ಕಚೇರಿಗೆ ತೆರಳಿದ್ದ ಮುಖ್ಯಮಂತ್ರಿಗಳಿಗೆ ನೀಡಲು ಶಿಮ್ಲಾದ ಲಕ್ಕರ್ ಬಜಾರ್‌ನಲ್ಲಿರುವ ಹೋಟೆಲ್ ರಾಡಿಸನ್ ಬ್ಲೂನಿಂದ ಮೂರು ಬಾಕ್ಸ್‌ನಲ್ಲಿ ತಿಂಡಿ ತಿನಿಸುಗಳನ್ನು ತರಲಾಗಿತ್ತು. ಆದರೆ ಸಿಎಂಗೆ ಮೀಸಲಾದ ಸಮೋಸವನ್ನು ಯಾರು ತಿಂದರು ಎಂಬ ವಿಚಾರದಲ್ಲಿ ಗಲಾಟೆ ಶುರುವಾದೆ ಎಂದು TNIE ವರದಿ ಮಾಡಿದೆ.
ಆದರೆ, ಡಿಎಸ್ಪಿ ನಡೆಸಿದ ವಿಚಾರಣಾ ವರದಿಯ ಪ್ರಕಾರ ಬಾಕ್ಸ್‌ಗಳನ್ನು ಸಿಎಂ ಭದ್ರತಾ ಸಿಬ್ಬಂದಿಗೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ ಎಂದು ವರದಿ ಉಲ್ಲೇಖಿಸಿದೆ. ವಿಚಿತ್ರ ಘಟನೆ
ಇದನ್ನೂ ಓದಿ: ಮಣಿಪುರ ಹಿಂಸಾಚಾರದಲ್ಲಿ ಸಿಎಂ ಬಿರೇನ್ ಸಿಂಗ್ ಪಾತ್ರ ಆರೋಪ : ಆಡಿಯೋ ಟೇಪ್ ಪರಿಶೀಲಿಸಲಿರುವ ಸುಪ್ರೀಂ ಕೋರ್ಟ್
ಮಣಿಪುರ ಹಿಂಸಾಚಾರದಲ್ಲಿ ಸಿಎಂ ಬಿರೇನ್ ಸಿಂಗ್ ಪಾತ್ರ ಆರೋಪ : ಆಡಿಯೋ ಟೇಪ್ ಪರಿಶೀಲಿಸಲಿರುವ ಸುಪ್ರೀಂ ಕೋರ್ಟ್


