Homeಮುಖಪುಟಸ್ತ್ರೀಮತಿ-1: ನನ್ನನ್ನೀಗ ಯಾವ ಪಾತ್ರದ ಆಕಾರಕ್ಕೆ ಹೊಂದಿಸಲಿ! -ಡಾ. ಕಾವ್ಯಶ್ರೀ ಎಚ್

ಸ್ತ್ರೀಮತಿ-1: ನನ್ನನ್ನೀಗ ಯಾವ ಪಾತ್ರದ ಆಕಾರಕ್ಕೆ ಹೊಂದಿಸಲಿ! -ಡಾ. ಕಾವ್ಯಶ್ರೀ ಎಚ್

ಹೆಣ್ಣಿಗೆ ಬೇಕಿರುವುದು ನಿರ್ಬಂಧಸಹಿತ ಸಂರಕ್ಷಣೆಯಲ್ಲ, ತಾನು ತಾನಾಗಿಯೇ ಇರುವ ಸ್ವಾತಂತ್ರ್ಯ. ತನ್ನ ಪಾಡಿಗೆ ತಾನಿರಲು, ನಿರಾಳ ಉಸಿರಾಡಲು ಅವಳಿಗೆ ಸ್ವಲ್ಪ ಸ್ಪೇಸ್ ಕೊಡಿ ಪ್ಲೀಸ್!

- Advertisement -
- Advertisement -

ಲಾಕ್‌ಡೌನ್ ಮತ್ತು ದ್ವಿತೀಯ ಪಿಯುಸಿ ಉತ್ತರಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಮುಗಿದಮೇಲೆ ಎಂದಿನಂತೆ ಕಾಲೇಜು ಆರಂಭವಾಗಿದೆ. ಮೊನ್ನೆಯ ದಿನ ಕಾಲೇಜಿಗೆ ಹೋದಮೇಲೆ ಕಾಫಿ ಕುಡಿಯಲೇಬೇಕು ಅನಿಸಿತು. ಮೊದಲಿನಿಂದಲೂ ಕಾಲೇಜಿನಲ್ಲಿ ಅದೊಂದು ರಿಚ್ಯುವಲ್ ಆಗಿಬಿಟ್ಟಿರುವುದರಿಂದಲೂ ಮತ್ತು ನಮ್ಮ ಕ್ಯಾಂಟೀನಿನ ಶುಚಿತ್ವದ ಮೇಲಿರುವ ನಂಬಿಕೆಯಿಂದಲೂ ಕೊರೊನಾ ಸಮಯದಲ್ಲಿಯೂ ಧೈರ್ಯ ಮಾಡಿ ಹೋದೆ. ನನ್ನೊಂದಿಗೆ ಕಾಫಿಗೆ ಜೊತೆಯಾಗುತ್ತಿದ್ದ ಸಹೋದ್ಯೋಗಿಗಳ ವಾಲ್ಯುಯೇಶನ್ ವರ್ಕ್ ಇನ್ನೂ ಮುಗಿದಿರಲಿಲ್ಲವಾದ್ದರಿಂದ ಮತ್ತು ಅಲ್ಲಿದ್ದ ಇನ್ನುಳಿದವರಿಗೆ ಹೊರಬರುವ ಮನಸ್ಸಿರಲಿಲ್ಲವಾದ್ದರಿಂದಲೂ ನಾನೊಬ್ಬಳೇ ಕ್ಯಾಂಟೀನಿಗೆ ಹೊರಟೆ.

ಒಂದೇ ಕಟ್ಟಡದಲ್ಲಿ ಶಾಲೆ, ಕಾಲೇಜುಗಳೆರಡೂ ಇವೆ. ಎಸ್‌ಎಸ್‌ಎಲ್‌ಸಿ ಎಕ್ಸಾಮ್ ಅಂದು ಇರಲಿಲ್ಲವಾದ್ದರಿಂದ ಕ್ಯಾಂಟೀನ್ ತೆರೆದಿತ್ತು. ಕ್ಯಾಂಟೀನ್ ಕೇವಲ ಕಾಲೇಜಿನವರಿಗಷ್ಟೇ ಅಲ್ಲದೇ ಸಾರ್ವಜನಿಕರಿಗೂ ಸೇವೆಯೊದಗಿಸುತ್ತದೆ. ಕಾಫಿ ತೆಗೆದುಕೊಂಡು ಕುಡಿಯುತ್ತಾ ಸುತ್ತಮುತ್ತ ಕಣ್ಣಾಡಿಸಿದೆ. ಅಲ್ಲಿದ್ದ ಬಹುತೇಕರು ವಿಚಿತ್ರವಾಗಿ ನನ್ನನ್ನೇ ಗಮನಿಸುತ್ತಿದ್ದುದು ನೋಡಿ ಅಚ್ಚರಿಯಾಯಿತು. ಯೋಚಿಸುವಷ್ಟರಲ್ಲಿ ತಟ್ಟನೆ ಹೊಳೆಯಿತು. ಅಲ್ಲಿ ಅಂದು ಆ ಇಡೀ ಕ್ಯಾಂಟೀನಿನಲ್ಲಿ ನಾನೊಬ್ಬಳೇ ಹೆಂಗಸು! ಅಷ್ಟು ಪರಿಚಿತ ಮತ್ತು ಆಪ್ತವಾದ ಕ್ಯಾಂಟೀನ್ ಒಂದರೆಕ್ಷಣ ಅಪರಿಚಿತ ಭಾವವನ್ನು ಮೂಡಿಸಿ ಮರೆಯಾಯಿತು. ಮಾಸ್ಕ್ ತೆಗೆದು ನನ್ನ ಕಾಫಿಯನ್ನು ಹೀರುತ್ತಾ ಆಲೋಚನೆಗೆ ಬಿದ್ದೆ.

ಕ್ಯಾಂಟೀನಿಗೆ ಬೆಳಗ್ಗಿನ ವಾಕಿಂಗ್, ಜಾಗ್ಗಿಂಗ್ ಮುಗಿಸಿ ಬರುವವರು, ಇಲ್ಲಿಯ ಕಾಫಿ-ತಿಂಡಿಗೆಂದೇ ಪ್ರತಿದಿನ ಬರುವವರೂ ಇರುತ್ತಾರೆ. ನಾನೇನಾದರೂ ಮನೆಯಲ್ಲಿ ಕುಳಿತು ಬೇಸರವಾಗಿ ಹವಾಸೇವನೆಗೆಂದೊ, ಕಾಫಿ ಕುಡಿಯಲೆಂದೋ ಹೊರಬಂದರೆ ಹೇಗಿರುತ್ತದೆ. ಹೀಗೆ ಗಂಡಸರು ಮನೆಯಿಂದ ಹೊರಗೆ ಬರುವುದಿಲ್ಲವೇ. ನಿಂತಿದ್ದವರು ನಿಂತಿದ್ದ ಹಾಗೆಯೇ ಉಟ್ಟಬಟ್ಟೆಯಲ್ಲಿಯೇ ಚಪ್ಪಲಿಯೇರಿಸಿ ಸ್ವಲ್ಪ ಹೊರಗೆಹೋಗಿ ಬರ‍್ತೀನಿ ಅಂತ ಹೊರಟೇಬಿಡ್ತಾರೆ. ಆದರೆ ಹೆಣ್ಣುಮಕ್ಕಳು ಹಾಗೆ ಹೋಗುವುದಕ್ಕೆ ಸಾಧ್ಯವೇ ಯೋಚಿಸಿ ನೋಡಿ? ಕೊರೊನಾ ಕಾಲದಲ್ಲಿರಲಿ, ಕೊರೊನಾ ಪೂರ್ವದಲ್ಲಿಯೂ, ಕೊರೊನೋತ್ತರ ಕಾಲದಲ್ಲಿಯೂ ಕಲ್ಪಿಸಿಕೊಳ್ಳುವುದಕ್ಕೇ ಕಷ್ಟವಾಗುತ್ತಿದೆ ಅಲ್ಲವೇ? ಇಂತಹ ಸಂದರ್ಭದಲ್ಲಿಯೂ ಅವಳಿಗೆ ಹೊರಬರುವಂತಹ ಅವಶ್ಯಕತೆ ಏನಿದೆ? ಅಂಥಹದ್ದೇನಿರುತ್ತದೆ ಅವರಿಗೆ? ಹೌದಲ್ವಾ? ಸುಮ್ಮನೆ ಮನೆಯಲ್ಲಿದ್ದರೆ ಆಗುವುದಿಲ್ಲವೇ. ಸಾಮಾನ್ಯವಾಗಿ ಎಲ್ಲರ ಅಥವಾ ಬಹುತೇಕರ ಆಲೋಚನಾಧಾಟಿ ಹೀಗೇ ಇರುತ್ತದೆ.

ಇಷ್ಟು ಸಣ್ಣ, ಸೂಕ್ಷ್ಮ ವಿಚಾರಗಳೇ ಒಂದಿಡೀ ಮನೋಧರ್ಮವನ್ನು, ಆಲೋಚನಾಕ್ರಮವನ್ನು ರೂಪಿಸುತ್ತಿರುತ್ತದೆ, ಆದ್ದರಿಂದ ಮನಸ್ಸಿನಲ್ಲಿ ಹಾದುಹೋಗುವ ಇಂತಹ ಸಣ್ಣಸಣ್ಣ ಯೋಚನೆಗಳನ್ನು, ಭಾವನೆಗಳನ್ನೇ ನಾವು ಕೌಂಟರ್ ಮಾಡಬೇಕಿರುವುದು.

ಏಕೆಂದರೆ ಹೆಣ್ಣನ್ನು ಒಂದೊಂದು ಪಾತ್ರದ ಅಚ್ಚಿನೊಳಗೆ ತೂರಿಸಿ ಕೂರಿಸಲಾಗಿದೆ. ತಾಯಿ, ತಂಗಿ, ಹೆಂಡತಿ, ಗೆಳತಿ ಹೀಗೇ. ಕಾರ್ಯೇಶು ದಾಸಿ, ಕರಣೇಶು ಮಂತ್ರಿ, ಭುಜ್ಯೇಶು ಮಾತಾ, ಶಯನೇಶು ರಂಭಾ ಎನ್ನುವ ಸಾಲುಗಳನ್ನೂ ಅಲಿಖಿತ ಶಾಸನದಂತೆ, ಎಂದೂ ಬದಲಾಯಿಸಲಾಗದಂತೆ ಜನಮಾನಸದಲ್ಲಿ ಆಳವಾಗಿ ಕೆತ್ತಿಬಿಟ್ಟಿದ್ದಾರೆ. ಒಂದೊಂದು ಪಾತ್ರವನ್ನೂ ಒಂದೊಂದು ಚೌಕಟ್ಟಿನಲ್ಲಿ ಬಂಧಿಸಿಬಿಟ್ಟಿದ್ದೇವೆ, ನೀರನ್ನು ಪಾತ್ರೆಯ ಒಳಗೆ ಹಾಕಿದಂತೆ. ನೀರನ್ನು ಯಾವ ಪಾತ್ರೆಗೆ ಹಾಕುತ್ತೀರೋ ಆ ಆಕಾರವನ್ನು ಮೈವೆತ್ತುತ್ತದೆ. ಆದರೆ ಸಮಸ್ಯೆ ಎದುರಾಗುವುದು ನೀರು ಅದೇ ಆಕಾರದಲ್ಲಿರಬೇಕು ಎಂದು ನಿರೀಕ್ಷಿಸಿದಾಗ, ನಿರ್ದೇಶಿಸಿದಾಗ, ಫರ್ಮಾನು ಹೊರಡಿಸಿದಾಗ!

ಇತ್ತೀಚೆಗೆ ಅತ್ಯಾಚಾರ ಪ್ರಕರಣವೊಂದರಲ್ಲಿ ಆರೋಪಿಗೆ ಜಾಮೀನು ಮಂಜೂರು ಮಾಡಿದ ನ್ಯಾಯಾಧೀಶರೊಬ್ಬರು ಆ ಸಂದರ್ಭದಲ್ಲಿ ಅತ್ಯಾಚಾರಕ್ಕೊಳಗಾದ ಹೆಣ್ಣಿನ ಬಗ್ಗೆ ಆಡಿರುವ ಮಾತುಗಳು ಆಘಾತಕಾರಿಯಾಗಿದೆ. ಅತ್ಯಾಚಾರಕ್ಕೆ ಆಕೆಯೇ ಕಾರಣ ಎಂಬಂತೆ ಆಕೆಯ ವರ್ತನೆಯ ವಿಶ್ಲೇಷಣೆ ಮಾಡಿರುವ ನ್ಯಾಯಾಧೀಶರು ಅತ್ಯಾಚಾರವಾದ ನಂತರ ಆಕೆ ಸುಸ್ತಾಗಿ ಮಲಗಿಬಿಟ್ಟಿದ್ದನ್ನು ಒಬ್ಬ `ಭಾರತೀಯ ಮಹಿಳೆ’ಗೆ ತಕ್ಕುದಾದ ನಡವಳಿಕೆ ಅದಲ್ಲ ಎಂದು ಹೇಳಿದ್ದಾರೆ. ಹಾಗಿದ್ದರೆ ಇಲ್ಲಿ ಭಾರತೀಯ ಮಹಿಳೆಯಾಗಿ ಅವಳು ಚಂಡಿಚಾಮುಂಡಿಯ ರೂಪವನ್ನೋ, ಕಾಳಿಯ ಅವತಾರವನ್ನೋ ತಾಳಿ ಅವನನ್ನು ಸಂಹರಿಸಬೇಕಿತ್ತೇ? (ಆಕೆ ಮರುದಿನ ಬೆಳಗ್ಗೆ ಹೋಗಿ ದೂರನ್ನು ಸಲ್ಲಿಸಿದ್ದಾಳೆ)

ದೂರು ನೀಡಿರುವ ಮಹಿಳೆ ಆರೋಪಿಯೊಂದಿಗೆ ತಡರಾತ್ರಿಯವರೆಗೆ ಇದ್ದುದು ಏಕೆ ಎಂದು ಪ್ರಶ್ನಿಸುವುದಲ್ಲದೇ, ಪರೋಕ್ಷವಾಗಿ ಘಟನೆಗೆ ಆಕೆಯೇ ಕಾರಣಳಾಗುತ್ತಾಳೆ ಎಂದಿದ್ದಾರೆ. ಭಾರತೀಯ ಹೆಣ್ಣು `ಹಾಗಿರುವುದಕ್ಕೆ ಸಾಧ್ಯವಿಲ್ಲ’, `ಹಾಗಿರುವುದಿಲ್ಲ’ ಎಂದು ನ್ಯಾಯಾಧೀಶರೇ ತೀರ್ಪು ನೀಡಿದರೆ, ಸುಶಿಕ್ಷಿತರಾಗಿ ಅಷ್ಟು ಉನ್ನತ ಹುದ್ದೆಯನ್ನೇರಿ, ಸಾಮಾಜಿಕ ವ್ಯವಸ್ಥೆಯ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೂ ಒಬ್ಬ ಸಾಮಾನ್ಯ ಮನುಷ್ಯನಂತೆ ಸಂಕುಚಿತವಾಗಿ ಯೋಚಿಸುವುದಾದರೆ – ಈ ಪೂರ್ವಾಗ್ರಹಗಳು, ಸಮಾಜದ ಅಪ್‌ಬ್ರಿಂಗಿಂಗ್, ಕಂಡೀಶನಿಂಗ್‌ ನಿಂದ ಹೊರಬಂದು ಯೋಚಿಸುವುದು ಅಷ್ಟು ಕಷ್ಟವೆಂದಾದರೆ, ಆ ಆಕ್ಟೋಪಸ್ ಹಿಡಿತ ಎಷ್ಟು ಬಿಗಿಯಾಗಿದೆ. ಅದರಿಂದ ಬಿಡುಗಡೆ ಪಡೆಯುವುದಕ್ಕೆ ಇನ್ನೂ ಎಷ್ಟು ಶತಮಾನಗಳು ಬೇಕಾಗಬಹುದೋ.

`ಅನ್‌ಬಿಕಮಿಂಗ್ ಆಫ್ ಇಂಡಿಯನ್ ವುಮೆನ್’ ಎಂಬ ಸಾಲನ್ನು ಅವರು ಬಳಸಿದ್ದಾರೆ, ಇಲ್ಲಿ ಆಗಬೇಕಿರುವುದು `ಅನ್‌ಲರ್ನಿಂಗ್ ಆಫ್ ಜೆಂಡರ್ ಬಯಾಸ್’, `ಅನ್‌ಲರ್ನಿಂಗ್ ಆಫ್ ಪೆಟ್ರಿಯಾರ್ಕಿ’, `ಅನ್‌ಲರ್ನಿಂಗ್ ಆಫ್ ಮಿಸೊಜಿನಿ’. ರಾತ್ರಿ ಹೊರಗೆ ಹೋಗುವ, ಪುರುಷರೊಂದಿಗೆ ಮಾತನಾಡುವ ಮಹಿಳೆಯರ ನಡತೆ ಸರಿಯಿಲ್ಲ ಎನ್ನುವುದಾದರೆ ನಾವಿನ್ನೂ ಯಾವ ಯುಗದಲ್ಲಿದ್ದೇವೆ. ಮನೆಯಲ್ಲಿ ಅವಳನ್ನು ಕೂಡಿಹಾಕಿ ಪುರುಷ ಮಾತ್ರ ಹೊರಗೆಹೋಗಿ ದುಡಿದುಕೊಂಡು ಬರುವ ಕಾಲ ಇದಲ್ಲ. ಆಕೆಯೂ ಸಮಾನವಾಗಿ ದುಡಿಯುತ್ತಿರುವ ದಿನಮಾನಗಳಲ್ಲಿ ಮತ್ತು ರಾತ್ರಿಪಾಳಿಗಳಲ್ಲೂ ಕರ್ತವ್ಯ ನಿರ್ವಹಿಸಲಾರಂಭಿಸಿ ದಶಕಗಳೇ ಕಳೆದಿದ್ದರೂ, ಅವಳ ಮೇಲೆ ಇಂತಹ ನಿರ್ಬಂಧಗಳನ್ನು ಹೊರಿಸುವುದನ್ನು ಪ್ರಾಕ್ಟಿಕಲ್ ಆಗಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ. ಇನ್ನು ಇದನ್ನು ಆಧರಿಸಿ ಅವಳ ಚಾರಿತ್ರ್ಯದ ಬಗ್ಗೆ ತೀರ್ಪು ಕೊಡುವುದು ಎಷ್ಟು ಸರಿ. ಮಹಿಳೆಯರೂ ಕೂಡ ಇಂತಹ ಹೆಣ್ಣುಮಕ್ಕಳನ್ನು ಆಡಿಕೊಳ್ಳುವುದಿದೆ.

ನಾವು ಆ ಮನೋಧರ್ಮವನ್ನು ಸುಲಭವಾಗಿ ಬದಲಾಯಿಸಲು ಸಾಧ್ಯವೇ ಇಲ್ಲ. ಪುರುಷರದಷ್ಟೇ ಅಲ್ಲ ಮಹಿಳೆಯರದ್ದೂ ಕೂಡ. `ತಪ್ಪಡ್’ ಸಿನಿಮಾಗೆ ಬಂದ ಪ್ರತಿಕ್ರಿಯೆಗಳನ್ನು ಗಮನಿಸುತ್ತಿದ್ದಾಗ ಕೆಲವಷ್ಟು ಹೆಣ್ಣುಮಕ್ಕಳೇ ಆ ಕಥಾವಸ್ತು ಉತ್ಪ್ರೇಕ್ಷೆಯಿಂದ ಕೂಡಿದೆ, ಅಸಂಬದ್ಧವಾಗಿದೆ ಎಂದದ್ದನ್ನು ನೋಡಿದೆ. (ಆ ಚಿತ್ರದಲ್ಲಿನ ನಾಯಕಿ, ಗಂಡ ಪಾರ್ಟಿಯಲ್ಲಿ ತನ್ನ ಕಪಾಳಕ್ಕೆ ಹೊಡೆದ ಕಾರಣಕ್ಕೇ ಆತನಿಂದ ವಿಚ್ಛೇದನ ಪಡೆದುಕೊಳ್ಳುತ್ತಾಳೆ).

ಅಂದರೆ ಈ ಸಮಾಜ ಅವರನ್ನು ಎಷ್ಟರಮಟ್ಟಿಗೆ ಕಂಡೀಶನಿಂಗ್ ಮಾಡಿದೆ ಎಂಬುದು ತಿಳಿದುಬರುತ್ತದೆ. ಇನ್ನು ಮ್ಯಾರಿಟಲ್ ರೇಪ್‌ಅನ್ನು ಅರ್ಥಮಾಡಿಸಲು ಎಷ್ಟು ಶತಮಾನಗಳು ಬೇಕಾಗಬಹುದು. ಈ ಸಮಸ್ಯೆ ಕೇವಲ ಭಾರತೀಯ ಸಮಾಜಕ್ಕೆ ಮಾತ್ರ ಸೀಮಿತವಲ್ಲ.

ವೈಯಕ್ತಿಕ ನಿಲುವುಗಳು ಸಾಂಸ್ಥಿಕ ರೂಪ ಪಡೆದು ಇಡೀ ವ್ಯವಸ್ಥೆಯನ್ನೇ ಪ್ರಭಾವಿಸುವುದಕ್ಕೆ ಇದೊಂದು ಸಣ್ಣ ಉದಾಹರಣೆಯಷ್ಟೇ. ಈ ಘಟನೆಯಂತೂ ಕಾನೂನಾತ್ಮಕವಾಗಿ ಪಿತೃಪ್ರಧಾನ ಮನಸ್ಥಿತಿಗೆ ಒಂದು ಸಾಂವಿಧಾನಿಕ ಚೌಕಟ್ಟನ್ನೂ ಒದಗಿಸುತ್ತಿರುವಂತಿದೆ. `ನಥಿಂಗ್ ಪರ್ಸನಲ್’ ಎಂದು ನಯವಾಗಿ ನುಣುಚಿಕೊಳ್ಳುವುದರಿಂದ ಮುಂದಕ್ಕೆ ಸಾಗಿ `ಪರ್ಸನಲ್ ಇಸ್ ಪೊಲಿಟಿಕಲ್’ ಎನ್ನುವ ಅರಿವು ಮೂಡಬೇಕಿದೆ.

ಪಾತ್ರೆಯೊಳಗೆ ನೀರು ತುಂಬಿಸಿಟ್ಟಂತೆ ನೀನು ಹೀಗೇ ಇರಬೇಕು, ನಿನ್ನ ಪಾತ್ರವಿಷ್ಟೇ ಎಂದರೆ ಹೇಗೆ? ಸ್ತ್ರೀ ತನ್ನ ಪಾತ್ರವನ್ನು ಸ್ವತಂತ್ರವಾಗಿ ನಿರ್ವಹಿಸಲು ತಕ್ಕುದಾದ ಮನೋಭೂಮಿಕೆಯೊಂದನ್ನು ಸಿದ್ಧಪಡಿಸುವುದು ಹೇಗೆ? ಬದಲಾಗದ ಪಿತೃಪ್ರಧಾನ ಸಂಸ್ಕೃತಿಯನ್ನು ಬದಲಾಯಿಸಬೇಕು ಅಂದರೆ ನಾವು ಬದಲಾಗಬೇಕು. ಹೆಣ್ಣಿಗೆ ಬೇಕಿರುವುದು ನಿರ್ಬಂಧಸಹಿತ ಸಂರಕ್ಷಣೆಯಲ್ಲ, ತಾನು ತಾನಾಗಿಯೇ ಇರುವ ಸ್ವಾತಂತ್ರ್ಯ. ತನ್ನ ಪಾಡಿಗೆ ತಾನಿರಲು, ನಿರಾಳ ಉಸಿರಾಡಲು ಅವಳಿಗೆ ಸ್ವಲ್ಪ ಸ್ಪೇಸ್ ಕೊಡಿ ಪ್ಲೀಸ್!

ಕಾಫಿ ಮುಗಿಯುವುದರೊಂದಿಗೇ ಆಲೋಚನಾ ಸರಣಿಯೂ ತುಂಡಾಯಿತು. ಪೇಪರ್ ಕಪ್ಪಿನ ತಳದಲ್ಲಿ ಸ್ವಲ್ಪ ಕಾಫಿ ಉಳಿದಿತ್ತು. ಕಪ್ಪಿನ ಆಕಾರದಲ್ಲಿಯೇ ತಳದಲ್ಲಿದ್ದ ಕಾಫಿ ಅಂಚಿನ ಸುತ್ತಲೂ ಹರಡಿಕೊಂಡಿತ್ತು
ನೋಡುತ್ತಲೇ ಅನ್ನಿಸಿದ್ದು…..

ಹೌದು ನಾನೀಗ ಯಾವ ಪಾತ್ರೆಯ ಒಳಗೆ ಕೂರಲಿ?
ಅಲ್ಲಲ್ಲಾ ಯಾವ ಪಾತ್ರದ ಒಳಹೋಗಲಿ?
ನನ್ನನ್ನು ಈಗ ಯಾವ ಪಾತ್ರದ ಆಕಾರಕ್ಕೆ ಹೊಂದಿಸಲಿ?

ಚಿತ್ತಕಾವ್ಯ: ಇನ್ನೂ ಎಷ್ಟು ದಿನ ಹೇಳಿದ್ದನ್ನೇ ಹೇಳಿಕೊಂಡು ಇರುತ್ತೀರಾ? ಕಾಲ ಬದಲಾಗಿದೆ, ಪುರುಷರ ಮನಸ್ಥಿತಿ ಬದಲಾಗಿದೆ ಎನ್ನುವವರಿಗೇನೂ ಕೊರತೆಯಿಲ್ಲ. ಪುರುಷರ ಮೇಲೆ ಮಹಿಳೆಯರು ನಡೆಸುವ ದೌರ್ಜನದ ಬಗ್ಗೆ ಸ್ತ್ರೀವಾದಿಗಳು ಮಾತನಾಡುವುದಿಲ್ಲ! ಎಂದು ಕೊಂಕು ನುಡಿಯುವವರ ಸಂಖ್ಯೆಯೂ ಕಡಿಮೆ ಏನಿಲ್ಲ. ಆದರೆ ನಾವಿಲ್ಲಿ ಮಾತನಾಡುತ್ತಿರುವುದು ಬಹುಜನಭಾರತದ ಬಹುಸಂಖ್ಯಾತರ ಬಗ್ಗೆ !!

ಎಲ್ಲಿಯವರೆಗೆ ಮಾಡಿದ್ದನ್ನೇ ಮಾಡುತ್ತಿರುತ್ತೀರೋ ಅಲ್ಲಿಯವರೆಗೆ ಹೇಳಿದ್ದನ್ನೇ ಹೇಳುತ್ತಿರಬೇಕಾಗುತ್ತದೆ.

ಡಾ. ಕಾವ್ಯಶ್ರೀ ಎಚ್, ಲೇಖಕಿ- ಉಪನ್ಯಾಸಕಿ. (ಲೇಖಕಿ-ಚಿಂತಕಿ ಚಿಮಮಾಂಡ ಅಡಿಚಿ ಅವರ ಫೆಮಿನಿಸ್ಟ್ ಮ್ಯಾನಿಫೆಸ್ಟೋ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ)


ಇದನ್ನೂ ಓದಿ: ಬಹುಜನ ಭಾರತ: ಲಾಭದ ಗುಲಾಮಗಿರಿಗೆ ಬಿದ್ದಿರುವ ಮಾಧ್ಯಮ! – ಡಿ.ಉಮಾಪತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸ್ಪೇಸ್ ಕೊಡಿ ಅಂತ ಕೇಳೋದಕ್ಕೆ ಅವರ್ಯಾರು? ನಾವೇ ಸೃಷ್ಟಿ ಮಾಡಿಕೊಳ್ಳಬೇಕಿದೆ ಮೇಡಂ.. ಚಂದದ ಬರಹ..

LEAVE A REPLY

Please enter your comment!
Please enter your name here

- Advertisment -

ರಾಹುಲ್ ಗಾಂಧಿ ಆಪ್ತ ಸಹಾಯಕನ ಪತ್ನಿ ಪ್ರಜ್ಞಾ ಸತವ್ ಕಾಂಗ್ರೆಸ್ ಎಂಎಲ್‌ಸಿ ಸ್ಥಾನಕ್ಕೆ ರಾಜೀನಾಮೆ; ಬಿಜೆಪಿ ಸೇರುವ ನಿರೀಕ್ಷೆ

ಕಾಂಗ್ರೆಸ್ಸಿಗ ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರ ಆಪ್ತರಾಗಿದ್ದ ದಿವಂಗತ ರಾಜೀವ್ ಸತವ್ ಅವರ ಪತ್ನಿ ಸತವ್ ಬಿಜೆಪಿಗೆ ಸೇರುವ ನಿರೀಕ್ಷೆಯಿದೆ. ಮಹಾರಾಷ್ಟ್ರದ ಕಾಂಗ್ರೆಸ್ ನಾಯಕಿ ಪ್ರಜ್ಞಾ ಸತವ್ ಅವರು ಗುರುವಾರ...

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...