Homeಅಂಕಣಗಳುಸ್ತ್ರೀಮತಿ- 2: ಲಾಕ್ - ಅನ್ ಲಾಕ್ ಗಳ ನಡುವೆ ಕಳೆದುಹೋದ ಕೀಲಿ

ಸ್ತ್ರೀಮತಿ- 2: ಲಾಕ್ – ಅನ್ ಲಾಕ್ ಗಳ ನಡುವೆ ಕಳೆದುಹೋದ ಕೀಲಿ

- Advertisement -
- Advertisement -

ನನಗೆ ಸಣ್ಣವಯಸ್ಸಿನಿಂದಲೂ ಏನಾದರೂ ಪೆಟ್ಟಾದಾಗ, ನೋವಾದಾಗ ಅಮ್ಮ ಹೇಳುತ್ತಿದ್ದರು, (ಬಹುಶಃ ಅವರಿಗೆ ಅವರಮ್ಮ ಹೇಳುತ್ತಿದ್ದಿರಬಹುದು)  ಮುಂದೆ ನೀನು ಹೆರಿಗೆಯಂತಹ ನೋವನ್ನೇ ಸಹಿಸಿಕೊಳ್ಳಬೇಕಾಗುತ್ತದೆ ಈಗ ಇಷ್ಟು ಸಣ್ಣ ನೋವಿಗೆ ಅಳುತ್ತಾ ಕೂತರೆ ಹೇಗೆ ಎಂದು, ನಂತರ ಹೆರಿಗೆಯಾದ ಮೇಲೆ ಏನಾದರೂ ನೋವಾದಾಗ ಅಂತಹ ದೊಡ್ಡ ನೋವನ್ನೇ ತಿಂದ ಮೇಲೆ ಇಷ್ಟು ಸಣ್ಣಪುಟ್ಟದಕ್ಕೆಲ್ಲಾ ಅಧೀರಳಾಗುವುದೇ ಎನ್ನುತ್ತಿದ್ದರು.  ಹೆಣ್ಣಿನ ಈ ‘ಸಹಿಸಿಕೊಳ್ಳುವ ಪರಂಪರೆ’ಗೆ ಬಹಳಷ್ಟು ಉಲ್ಲೇಖಗಳನ್ನು ನೀಡಬಹುದು.

ಇತ್ತೀಚಿಗೆ ಬಿಡುಗಡೆಯಾದ ‘ಬುಲ್‍ಬುಲ್‍’ ಎಂಬ ಹಿಂದಿ ಸಿನಿಮಾದಲ್ಲಿ  ಸಹಿಸಿಕೊಳ್ಳುವುದನ್ನು ಕಲಿಸುವ ಒಂದು ದೃಶ್ಯವಿದೆ. ಆ ಮನೆಗೆ ಸೊಸೆಯಾಗಿ ಮೊದಲು ಬಂದವಳು ತನ್ನ ನಂತರ ಬಂದವಳಿಗೆ ಹೇಳುವ ಮಾತುಗಳಿವು. ತಾನು ಮದುವೆಯಾಗಿ ಬಂದಾಗ ತನಗೆ ಹೇಳಲಾದ ಮಾತುಗಳನ್ನೇ ಈಗ ಬಂದವಳಿಗೆ ಹೇಳುತ್ತಿರುತ್ತಾಳೆ. –“ಇಷ್ಟು ದೊಡ್ಡಮನೆತನದ ಸೊಸೆಯಾಗಿ ಬಂದಿದ್ದೀಯ, ಹೀಗೆಲ್ಲ ಅಳುತ್ತಾರೆಯೇ. ಅವನು ಸ್ವಲ್ಪ ಹುಚ್ಚ ಆದರೆ ಮದುವೆಯಾದ ಮೇಲೆ ಸರಿಹೋಗುತ್ತಾನೆ, ಎಷ್ಟೇ ಆದರೂ ನಿನ್ನ ಗಂಡನಲ್ಲವೇ, ಹೊರಗೆಲ್ಲೂ ಈ ವಿಚಾರಗಳನ್ನು ಮಾತನಾಡಬೇಡ ಸುಮ್ಮನಿರು; ಅವನು ಸ್ವಲ್ಪ ಹುಚ್ಚುಹುಚ್ಚಾಗಿ ಆಡುತ್ತಾನೆ ನಿಜ, ಆದರೆ ನಿನಗೆ ಎಷ್ಟೆಲ್ಲಾ ಒಡವೆ, ವಸ್ತ್ರ, ಆಸ್ತಿ ಸಿಗುತ್ತಿದೆ, ಹೀಗಾಗಿ ಸ್ವಲ್ಪ ಸಹಿಸಿಕೋ; ಅವನು ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸದಿದ್ದರೂ ಅವನ ಸೋದರ ನೋಡಿಕೊಳ್ಳುತ್ತಾನೆ. ದೊಡ್ಡಮನೆಗಳಲ್ಲಿ ದೊಡ್ಡದೊಡ್ಡ ಗುಟ್ಟುಗಳಿರುತ್ತವೆ ಮೌನವಾಗಿದ್ದುಬಿಡು.” ಭಾಮೈದ ತನ್ನ ನಾದಿನಿಯ ಮೇಲೆ ಅತ್ಯಾಚಾರ ಮಾಡಿದ ಸಂದರ್ಭದಲ್ಲಿ ಅವನ ಹೆಂಡತಿ  ಅತ್ಯಾಚಾರಕ್ಕೊಳಗಾದವಳಿಗೆ ಹೇಳುವ ಮಾತುಗಳಿವು.

ಸಹಿಸಿಕೊಳ್ಳುವುದೇ ತನ್ನ ಹೆಚ್ಚುಗಾರಿಕೆ ಎಂಬ ಭಾವನೆ ಹೆಣ್ಣಿನಲ್ಲಿಯೂ ಇರುವಾಗ (ಮಾತೃದೇವತೆ, ಗೃಹಲಕ್ಷ್ಮಿ , ಸೌಭಾಗ್ಯದೇವತೆ-ಮುಂತಾಗಿ ಆರೋಪಿಸಲಾದ ವೈಭವೀಕೃತ ಪದವಿಗಳನ್ನು –ಹೆಣ್ಣಿನ ಮನಸ್ಸಿನಲ್ಲಿ ಕೂಡಾ ಭಂಜಿಸುವುದು ಅಷ್ಟು ಸುಲಭವೇನಲ್ಲ)  ಅವಳು ಹಿಂಸೆಯನ್ನಾಗಲಿ, ಕ್ರೌರ್ಯವನ್ನಾಗಲಿ ಒಂದು ಅಪರಾಧವನ್ನಾಗಿ ಪರಿಗಣಿಸುವುದಿಲ್ಲ, ಅವಳಿಗೆ ಅದನ್ನು ವಿರೋಧಿಸಬೇಕು ಎನಿಸುವುದಿಲ್ಲ ಅಥವಾ ದೂರು ನೀಡಬೇಕು ಎಂಬ ಭಾವ ಮೂಡುವುದಿಲ್ಲ. ಹೊಡೆಯುವುದು ಪತಿಧರ್ಮ ಸಹಿಸಿಕೊಳ್ಳುವುದು ಸತಿಧರ್ಮ ಎಂಬಷ್ಟು ಸಹಜ ವಿದ್ಯಮಾನವಾಗಿಬಿಟ್ಟಿದೆ. ಹೆಣ್ಣಿನ ದೇಹರಚೆನೆಯೇ ಕಾರಣವಾಗಿ ಪ್ರಕೃತಿ ಹೆಣ್ಣಿಗೆ ಸಹಿಷ್ಣುತೆಯನ್ನು ಕೊಟ್ಟಿರುವುದು ತನ್ನ ಗರ್ಭದಲ್ಲಿ ಮತ್ತೊಂದು ಜೀವವನ್ನು ಹೊರಲು, ಆದರೆ ಬೇರೆ ಜೀವಿಗಳು ಕೊಡುವ ಕ್ರೌರ್ಯವನ್ನು ಸಹಿಸಲು ಅಲ್ಲ, ಪೊರೆಯುವ ಗುಣ ಇರುವುದು ಈ ಸೃಷ್ಟಿಕ್ರಿಯೆಯ ಭಾಗವಾಗಿಯೇ ಹೊರತು ಬೇಜವಾಬ್ದಾರಿ, ಸೋಮಾರಿ ಗಂಡಂದಿರನ್ನು ಮಕ್ಕಳನ್ನು ಸಾಕಲೆಂದಲ್ಲ. ಈ ಸಹಿಸಿಕೊಳ್ಳುವ ಪರಂಪರೆಯ ವಾರಸುದಾರಿಕೆಯ ಹೊರೆ ಇನ್ನೆಷ್ಟು ಕಾಲ?

ಕೋವಿಡ್‍-19 ಅನ್ನು ನಿಯಂತ್ರಿಸಲಾಗದ ಸಂದರ್ಭದಲ್ಲಿ ಅದರಿಂದಾಗಿ ಎದುರಿಸುತ್ತಿರುವ ಇತರ ಸಮಸ್ಯೆಗಳನ್ನು ಹಿನ್ನೆಲೆಗೆ ಸರಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇಂತಹ ಸನ್ನಿವೇಶದಲ್ಲಿ ಅವನ್ನು ಗಂಭೀರವಾಗಿ ಪರಿಗಣಿಸಿರುವ ವಿಶ್ವಸಂಸ್ಥೆಯು ಲಿಂಗಾಧಾರಿತ ಹಿಂಸೆಯನ್ನು `ಶ್ಯಾಡೋ ಪ್ಯಾಂಡೆಮಿಕ್’ (Shadow Pandemic) ಎಂದು ಗುರುತಿಸಿದೆ. ಲೈಂಗಿಕ ಹಿಂಸೆಯನ್ನು ದೌರ್ಜನ್ಯವನ್ನು ನಿಗ್ರಹಿಸುವುದು ಕೋವಿಡ್‍-19ನ ಕ್ರಿಯಾ ಯೋಜನೆಯ ಭಾಗವಾಗಿರಬೇಕು ಎಂದು ವಿಶ್ವಸಂಸ್ಥೆ ತನ್ನ ಸದಸ್ಯ ರಾಷ್ಟ್ರಗಳಿಗೆ ಹೇಳಿದೆ.

ಲಾಕ್‌ಡೌನಿನ ಪರಿಣಾಮಗಳನ್ನು ಹೆಣ್ಣು, ಗಂಡುಗಳಿಬ್ಬರೂ ಎದುರಿಸುತ್ತಿದ್ದರೂ, ಅವುಗಳ ಸ್ವರೂಪ ಮತ್ತು ತೀವ್ರತೆಯಲ್ಲಿ ಅಂತರವಿದೆ. ಲಾಕ್‍ಡೌನ್‍ ಸಮಯದಲ್ಲಿ ಮಹಿಳೆಯರ ಮೇಲಿನ ಕೌಟುಂಬಿಕ ಹಿಂಸಾಚಾರ ಹೆಚ್ಚಾಗಿದೆ, ಉದ್ಯೋಗಸ್ಥ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಭಿನ್ನ ಸ್ವರೂಪ ಪಡೆದುಕೊಂಡಿದೆ, ಗೃಹಿಣಿಯರು ಅನುಭವಿಸುತ್ತಿರುವ ಹಿಂಸೆಗಳನ್ನು ಹೇಳಿಕೊಳ್ಳಲಾರದೆ ಮಾನಸಿಕ ಅಸ್ವಸ್ಥತೆ ಹೆಚ್ಚಾಗಿದೆ.

‘ಸ್ಟೇ ಹೋಂ ಸ್ಟೇ ಸೇಫ್- ಮನೆಯಲ್ಲಿಯೇ ಇರಿ ಸುರಕ್ಷಿತವಾಗಿರಿ’ ಎಂಬ ಘೋಷವಾಕ್ಯ ಮಹಿಳೆಯರ ಪಾಲಿಗೆ ಅಕ್ಷರಶಃ ಹುಸಿಯಾಗಿದೆ. ಯುನೆಸ್ಕೋ,ಯುನಿಸೆಫ್ ಮತ್ತು ವಿಶ್ವಸಂಸ್ಥೆಯ ಸಹಕಾರದೊಂದಿಗೆ ನಂದಿತಾ ದಾಸ್ ಅವರ ರಚನೆ ಮತ್ತು ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ಕಿರುಚಿತ್ರ ‘ಲಿಸನ್‍ ಟು ಹರ್’ ಏಕಕಾಲಕ್ಕೆ ಮೇಲ್ವರ್ಗದ ಸುಶಿಕ್ಷಿತ ಉದ್ಯೋಗಸ್ಥ ಮಹಿಳೆ ಮತ್ತು ಕೆಳವರ್ಗದ ಅಸಹಾಯಕ ಮಹಿಳೆ ಮನೆಯೊಳಗೇ ಅನುಭವಿಸುವಂತಹ ತಣ್ಣನೆಯ ಕ್ರೌರ್ಯವನ್ನು ಸೂಕ್ಷ್ಮವಾಗಿ ಬಿಚ್ಚಿಡುತ್ತದೆ.

ವರ್ಕ್‍ ಫ್ರಮ್‍ ಹೋಮ್‍ ಮಾಡುತ್ತಿರುವ ಮಹಿಳೆಯರಿಗೆ ಆನ್ಲೈನ್‍ ಮೀಟಿಂಗ್‍, ಚಾಟಿಂಗ್‍ಗಳಲ್ಲಿಯೇ ಶುರುವಾದ ಕಿರುಕುಳಗಳು, ಉದ್ಯೋಗಸ್ಥ ಮಹಿಳೆಯರು ಎದುರಿಸುವ ಲೈಂಗಿಕ ದೌರ್ಜನ್ಯಕ್ಕೆ ಹೊಸ ವ್ಯಾಖ್ಯಾನವನ್ನೇ ದಯಪಾಲಿಸಿವೆ.

ಹರಿಯಾಣದ ಪಂಚ್‍ಕುಲಾ ಜಿಲ್ಲೆಯ ಆಸ್ಪತ್ರೆಯೊಂದರಲ್ಲಿ ಕೋವಿಡ್‍-19 ಐಸೋಲೇಶನ್ ವಾರ್ಡಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ನರ್ಸ್ ಮೇಲೆ ಅಲ್ಲಿನ ವೈದ್ಯ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ರೆಸ್ಟ್ ರೂಮಿನಲ್ಲಿ ತಾನು ವಿಶ್ರಮಿಸುತ್ತಿದ್ದಾಗ ವೈದ್ಯ ಈ ಕೃತ್ಯ ಎಸಗಿರುವುದಾಗಿ ನರ್ಸ್ ದೂರು ನೀಡಿದ್ದಾಳೆ.

ಕರ್ಣಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ತಂದೆಯಂದಿರೇ ತಮ್ಮ ಮಕ್ಕಳ ಮೇಲೆಯೇ ಅತ್ಯಾಚಾರ ಮಾಡಿರುವ ವರದಿಗಳು ಬಂದಿವೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಎಂಬ ಉಪಮೆಯನ್ನಿಲ್ಲಿ ಬಳಸುವುದಿಲ್ಲ. ಬೇಲಿ-ಹೊಲ, ರಕ್ಷಣೆ-ರಕ್ಷಕ ಮುಂತಾದವುಗಳಿಗಿಂತ ಮನುಷ್ಯನ ಸಂವೇದನೆ, ಯುಕ್ತಾಯುಕ್ತ ವಿವೇಚನೆಗಳ ಚಿಂತನೆ  ಅವಳೂ ತನ್ನಂತೆಯೇ ಮನುಷ್ಯಜೀವಿ ಎಂದು ಭಾವಿಸಲು ಏಕೆ ಸಾಧ್ಯವಾಗುವುದಿಲ್ಲ.

ಹೊಡೆದುಬಡಿದು ಮಾಡಿದರೆ ಮಾತ್ರ ಅದು ಹಿಂಸೆ, ಕ್ರೌರ್ಯ ಎನಿಸಿಕೊಳ್ಳುವುದಿಲ್ಲ. ಮಾನಸಿಕ ಕಿರಿಕಿರಿಯುಂಟು ಮಾಡುವುದು, ಅವಳ ವ್ಯಕ್ತಿತ್ವಕ್ಕೆ ಘನತೆಗೆ ಕುಂದು ಉಂಟುಮಾಡುವಂತಹ ಎಲ್ಲ ಕೃತ್ಯಗಳೂ ದೌರ್ಜನ್ಯವೇ. ಮಾಧ್ಯಮಗಳಲ್ಲಿ ಸುದ್ದಿಯಾಗದಂತಹ ವಿದ್ಯಮಾನಗಳೆಲ್ಲಾ ಗಂಭೀರವಲ್ಲ ಎಂದು ಪರಿಗಣಿಸಲಾಗುವುದಿಲ್ಲ. ಭೀಕರವಾದ ಪ್ರಕರಣಗಳು ಪ್ರತಿನಿತ್ಯ ಮನೆಯೊಳಗೆ ನಡೆಯುತ್ತಿದ್ದರೂ ಅವು ಎಲ್ಲೂ ದಾಖಲಾಗುವುದಿಲ್ಲ. ಮಾನಸಿಕ ಆರೋಗ್ಯ ಹಿಂದೆಂದಿಗಿಂತಲೂ ಇಂದು ಅತ್ಯಗತ್ಯವಾಗಿದೆ. ಆದರೆ ಎಷ್ಟರಮಟ್ಟಿಗೆ ಸಹಾಯವಾಣಿ ನಂಬರ್‌ಗಳು, ಎನ್‌ಜಿಓಗಳು, ಗೆಳೆಯರು ಪೂರ್ಣಪ್ರಮಾಣದ ಮನೋಚಿಕಿತ್ಸೆ ಕೊಡುವುದಕ್ಕೆ ಸಾಧ್ಯ. ಅದಕ್ಕಿಂತ ಹೆಚ್ಚಾಗಿ ಖಿನ್ನತೆಗೆ ಒಳಗಾದವರು ಇತರರೊಂದಿಗಿನ ಸಂವಾದವನ್ನು ಬಹಳ ಹಿಂದೆಯೇ ನಿಲ್ಲಿಸಬಿಟ್ಟಿರುತ್ತಾರೆ, ಅಂತಹವರನ್ನು ಮಾತಿಗೆಳೆಯುವುದು ಅಷ್ಟು ಸುಲಭವಲ್ಲ.

ಕೋವಿಡ್‌ಗೆ ಔಷಧ ಕಂಡುಹಿಡಿಯುವವರೆಗೆ ಮತ್ತೆ ಮತ್ತೆ ಬೇರೆ ಬೇರೆ ಸ್ವರೂಪದಲ್ಲಿ ಲಾಕ್‌ಡೌನ್ ಬರುವುದಿದೆ (ಸೆಲ್ಫ್ ಲಾಕ್‌ಡೌನ್, ಹೋಂ ಕ್ವಾರೈನ್‌ಟೇನ್, ಹೋಂ ಐಸೋಲೇಶನ್). ಲಾಕ್‌ಡೌನಿನ ಕರಾಳತೆ ಮಾಧ್ಯಮದವರು ಬಿಂಬಿಸುತ್ತಿರುವುದಕ್ಕಿಂತ ಭೀಕರವಾಗಿದೆ. ಒಂದೊಂದು ವರ್ಗದ ಮಹಿಳೆಯರು ವಿಭಿನ್ನವಾದ ಸವಾಲುಗಳನ್ನೆದುರಿಸುತ್ತಿದ್ದಾರೆ. ಕೊರೋನಾದ ದುಷ್ಪರಿಣಾಮ ಎಲ್ಲ ವರ್ಗದ ಹೆಣ್ಣುಮಕ್ಕಳ ಬದುಕನ್ನೂ ಅಲುಗಾಡಿಸಿದೆ. ಮನೆಕೆಲಸ, ಗಾರ್ಮೆಂಟ್ಸ್‌ನವರಿಂದ ಹಿಡಿದು.  ಆದರೆ ಬಹಳಷ್ಟು ಮಹಿಳೆಯರು ಅನುಭವಿಸುತ್ತಿರುವ ಸಂಕಟಗಳು ಈ ಅಂಕಿಸಂಖ್ಯೆಗೆ ನಿಲುಕದಂತಹವು ಏಕೆಂದರೆ ಅವು ನಾಲ್ಕು ಗೋಡೆಗಳಾಚೆಗೆ ಬರುವುದೇ ಇಲ್ಲ. `ಮೌನಂ ಸಮ್ಮತಿ ಲಕ್ಷಣಂ’ ಎಂಬ ತಪ್ಪು ಅಭಿಪ್ರಾಯವಿನ್ನೂ ಪ್ರಚಲಿತವಾಗಿದೆ. ಮಹಿಳೆ ಅದನ್ನು ಹೇಳಿಕೊಂಡರೆ, ವಿರೋಧಿಸಿದರೆ ಸಂಘರ್ಷವನ್ನು ಎದುರಿಸಬೇಕಾಗುತ್ತದೆ ಅಥವಾ ಇನ್ನೂ ಅಪಾಯ ಹೆಚ್ಚಾಗುತ್ತದೆ ಎಂದು ಸುಮ್ಮನಿರಬಹುದು. ಇನ್ನು ಉದ್ಯೋಗಸ್ಥ ಮಹಿಳೆಯರೂ ಇಷ್ಟು ದಿನ ಮನೆಯೊಳಗೂ ಮಾಡಿ ಕಛೇರಿಯಲ್ಲೂ ಮಾಡುತ್ತಿದ್ದವರು, ಈಗ ಮನೆಯಲ್ಲಿಯೇ ವರ್ಕ್‍ ಫ್ರಮ್‍ ಹೋಮ್‍ ಮತ್ತು ಮನೆಯ ಕೆಲಸ ಕೂಡ, ಇಂತಹ ವಿಚಾರಗಳೆಲ್ಲ ಗಂಡನಿಗೆ ಗೊತ್ತಾದರೆ ಮನಸ್ತಾಪವಾಗುವ ಆತಂಕ. ಇದರೊಂದಿಗೆ ಸಂಬಳದಲ್ಲಿ ಕಡಿತ, ಉದ್ಯೋಗ ಕಳೆದುಕೊಳ್ಳುವ ಭಯ. ಹೀಗಾಗಿ ಎಷ್ಟೋ ಪ್ರಕರಣಗಳು ದಾಖಲಾಗುವುದೇ ಇಲ್ಲ.

ಹೆಚ್ಚುತ್ತಿರುವ ಕೌಟುಂಬಿಕ ದೌರ್ಜನ್ಯದ ಮೂಲವನ್ನು ಕೆದಕಿದರೆ ಸಿಗುವುದು ಮತ್ತೊಂದು ತೆರನಾದ ‘ಲೈಫ್‍ಟೈಮ್‍ ಲಾಕ್‍’ ಆಗಿರುವ ವೆಡ್‍ಲಾಕ್ ಅಂದರೆ ವೈವಾಹಿಕ ಬಂಧನ.

ಲಾಕ್‍ಡೌನಿನ ಹೊಸ ವರ್ಷನ್‍ಗಳಿಗೆ ನಿಯಮಗಳನ್ನು ಪರಿಷ್ಕರಣೆ ಮಾಡುವಂತೆಯೇ, ಕಾಲಕಾಲಕ್ಕೆ ವಿವಾಹಬಂಧನದಲ್ಲಿಯೂ ಮಾರ್ಪಾಡು ಮಾಡಿಕೊಳ್ಳುವುದು ಅತ್ಯಗತ್ಯ. ವಿವಾಹ ಎಂಬ ವ್ಯವಸ್ಥೆಯನ್ನು ಹೊಸದಾಗಿ ನಿರ್ವಚಿಸಿಕೊಳ್ಳದೇ ಕೌಟುಂಬಿಕ ದೌರ್ಜನ್ಯಕ್ಕೆ ಅಂತ್ಯ ಹಾಡಲು ಸಾಧ್ಯವಿಲ್ಲ.

ಸಂಬಂಧಗಳನ್ನು ಸರಿಪಡಿಸಿಕೊಳ್ಳಲು ಇರುವ ರಿಫ್ರೆಶ್/ರೀಬೂಟ್ ಬಟನ್ ಎಂದರೆ ಮುಕ್ತವಾದ ಮಾತುಕತೆ. ಆದರೆ ನಗರ ಪ್ರದೇಶಗಳಲ್ಲಿ, ಮೇಲ್ವರ್ಗದ ಅಥವಾ ಮೇಲ್ಮಧ್ಯಮ ವರ್ಗದ ಕೆಲವು ಕುಟುಂಬಗಳಲ್ಲಿ ಮಾತ್ರ ಚರ್ಚೆಗೆ ಅವಕಾಶವಿರುತ್ತದೆ. ಇನ್ನುಳಿದ ಸಂಬಂಧಗಳು ಸಾಂಪ್ರದಾಯಿಕ ನೆಲೆಗೇ ಕಟ್ಟುಬಿದ್ದಿರುತ್ತವೆ.

“ಗೃಹಿಣಿ ಗೃಹಮುಚ್ಯತೇ – ಗೃಹಿಣಿಯು ಗೃಹ ಎನ್ನಿಸಿಕೊಳ್ಳುತ್ತಾಳೆ” ಎಂಬ ಮಾತು ಕೇಳಿರುತ್ತೀರಿ. ಮನೆ ಅಂದ ತಕ್ಷಣ ಅದು ಅಮ್ಮ ಅಥವಾ ಹೆಂಡತಿಯ ಜವಾಬ್ದಾರಿಯಾಗಿಬಿಡುತ್ತದಲ್ಲ ಏಕೆ? ಗಂಡಸರು ಇದನ್ನು ಮಾಡಬಾರದು ಹೆಂಗಸರು ಅದನ್ನೇ ಮಾಡಬೇಕು ಎಂಬ ಇನ್ಸ್‍ಟ್ರಕ್ಷನ್‍ ಮ್ಯಾನುಯಲ್, ಗೈಡ್‍ಲೈನ್ಸ್‍, ಯಥೇಚ್ಛವಾಗಿವೆ. ಗಂಡುಹುಡುಗರಿಗೆ ತಟ್ಟೆಯಲ್ಲಿ ಕೈತೊಳೆದುಕೊಂಡು ಏಳು, ನೀನೇಕೆ ಎಂಜಲು ತಟ್ಟೆ ಎತ್ತುವೆ ಎಂದೇ ಹೇಳುತ್ತಾರೆ, ನೀನ್ಯಾಕೆ ಪೊರಕೆ ಮುಟ್ಟುತ್ತೀಯ ಬಿಡು ಎನ್ನುವವರನ್ನೂ ನೋಡಿರುತ್ತೇವೆ.

ಸೂರ್ಯ ಪೂರ್ವದಲ್ಲಿ ಹುಟ್ಟುತ್ತಾನೆ ಎಂಬ ಹೇಳಿಕೆಯನ್ನು ಸರಿಯೆನ್ನುವಿರೋ ತಪ್ಪೆನ್ನುವಿರೋ. ಏಕೆಂದರೆ ಸೂರ್ಯ ಎಲ್ಲಿಯೂ ಹುಟ್ಟುವುದಿಲ್ಲ, ಮುಳುಗುವುದೂ ಇಲ್ಲ ಇದ್ದಲ್ಲಿಯೇ ಇರುತ್ತಾನೆ. ತಿರುಗುತ್ತಿರುವುದು ಭೂಮಿ. ಹೀಗೆಯೇ ಗಂಡು ಹೆಣ್ಣಿನ ಬಗ್ಗೆ ನಮ್ಮ ಪ್ರಜ್ಞೆಯ ಆಳದಲ್ಲಿ ನಮ್ಮ ಸಂಸ್ಕೃತಿ, ನಮ್ಮ ಸಮಾಜ ನೆಟ್ಟಿರುವ ತಪ್ಪು ಗ್ರಹಿಕೆಗಳನ್ನು ಬೇರುಸಹಿತ ಕಿತ್ತೆಸೆಯಬೇಕು.

ಗಂಡಸರು ಇರುವುದೇ ಹಾಗೇ ನ್ಯಾಯಾಧೀಶರಾಗಲೀ ವೈದ್ಯರಾಗಲೀ ಅದರ ಬಗ್ಗೆ ಆಶ್ಚರ್ಯಪಡಬೇಕಾಗಿಲ್ಲ ಎಂದೊಬ್ಬರು ಹೇಳುತ್ತಿದ್ದರು. ಕ್ರೌರ್ಯ, ಹಿಂಸೆ, ದೌರ್ಜನ್ಯ ಸರ್ವೇಸಾಮಾನ್ಯ ಎಂದೇಕೆ ಪರಿಗಣಿತವಾಗಬೇಕು, ಅದೇಕೆ ಅಬ್‍ನಾರ್ಮಲ್‍ ಎನಿಸಬಾರದು. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಪಾಡುವುದು ನ್ಯೂನಾರ್ಮಲ್ ಆದ ಹಾಗೆ ಹೆಣ್ಣನ್ನು ಅವಳ ಆತ್ಮಗೌರವಕ್ಕೆ ಕುಂದುಂಟಾಗದಂತೆ, ಆತ್ಮಸ್ಥೈರ್ಯಕ್ಕೆ ಧಕ್ಕೆಯಾಗದಂತೆ  ಸಹಜೀವಿಯಂತೆ ನಡೆಸಿಕೊಳ್ಳುವುದೂ ನ್ಯೂನಾರ್ಮಲ್ ಆಗಬಾರದೇಕೆ.

ಸಣ್ಣವಯಸ್ಸಿನಿಂದಲೇ ಹೆಣ್ಣನ್ನು ಕುಟುಂಬವನ್ನು ಪೊರೆಯುವ ಜವಾಬ್ದಾರಿ ಹೊರುವಂತೆ ಬಗ್ಗಿಸಿ ಬೆಳೆಸಲಾಗುತ್ತದೆ, ಆದರೆ ಗಂಡನ್ನು ಕೇವಲ ಆರ್ಥಿಕ ಬೆಂಬಲ ನೀಡುತ್ತಾ ಆಳುವ ಅಧಿಕಾರ ಚಲಾಯಿಸುವ ಪುರುಷತ್ವದ ಮಾದರಿಯಲ್ಲಿ ಬೆಳೆಸಲಾಗುತ್ತದೆ. ದಬ್ಬಾಳಿಕೆ ನಡೆಸುವುದಕ್ಕಿಂತ ಗೆಳೆಯನಂತಹ, ಸಹಜೀವಿಯಂತಹ ಗಂಡಿನ ಮಾದರಿ ನಮ್ಮ ಸಮಾಜದೊಳಗೆ ಬರಬೇಕಿದೆ. ಅದಕ್ಕೆ ಸ್ವೀಕೃತಿಯ ಮುದ್ರೆಯನ್ನೊತ್ತಬೇಕಾಗಿರುವವರೂ ನಾವೇ!

ಲೇಖಕಿ ಬೆಟ್ಟಿ ಫ್ರೀಡನ್‍ ಹೇಳುತ್ತಾಳೆ “ಮೆನ್‍ ಆರ್ ನಾಟ್‍ ದಿ ಎನಿಮಿ ಬಟ್ ಫೆಲ್ಲೋ ವಿಕ್ಟಿಮ್ಸ್” (ಪುರುಷರು ಶತ್ರುಗಳಲ್ಲ, ಆದರೆ ನಮ್ಮಂತೆಯೇ ಬಲಿಪಶುಗಳು). ಇಲ್ಲಿ ಮುಖಾಮುಖಿಯಾಗಬೇಕಿರುವುದು ಪರಸ್ಪರ ಗಂಡುಹೆಣ್ಣಲ್ಲ ಬದಲಿಗೆ ಎದುರಾಗಬೇಕಿರುವುದು ಎದುರಿಸಬೇಕಾಗಿರುವುದು ಎಕ್ಸ್ಪೈರಿ ಡೇಟ್‍ ಆಗಿಹೋಗಿರುವ ಮೌಲ್ಯವ್ಯವಸ್ಥೆಯನ್ನು. ಹೀಗಾಗಿ ಗಂಡು ಹೆಣ್ಣು ಇಬ್ಬರೂ ಸೇರಿಯೇ ಕಂಡುಕೊಳ್ಳಬೇಕಾದ ಕಟ್ಟಿಕೊಳ್ಳಬೇಕಾದ ಬಿಡುಗಡೆಯ ದಾರಿಯಿದು.

– ಡಾ. ಕಾವ್ಯಶ್ರೀ ಎಚ್, ಲೇಖಕಿ- ಉಪನ್ಯಾಸಕಿ. (ಚಿಂತಕಿ ಚಿಮಮಾಂಡ ಅಡಿಚಿ ಅವರ ಫೆಮಿನಿಸ್ಟ್ ಮ್ಯಾನಿಫೆಸ್ಟೋ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....