Homeಅಂಕಣಗಳುಶಾಸ್ತ್ರೀಯ - 2: ವೀರ ಗತಕಾಲದ ನೋವಿನ ಕಥನ ಸಾರುವ ವೀರಗಲ್ಲುಗಳು

ಶಾಸ್ತ್ರೀಯ – 2: ವೀರ ಗತಕಾಲದ ನೋವಿನ ಕಥನ ಸಾರುವ ವೀರಗಲ್ಲುಗಳು

- Advertisement -
- Advertisement -

ಭಾರತೀಯ ಚರಿತ್ರೆಯನ್ನು ಬರೆಯುವಾಗ ಶಾಸನಗಳೆಂತೆ ವೀರಗಲ್ಲುಗಳು ನೆರವಾಗಿವೆ. ಕರ್ನಾಟಕದ ಸಂದರ್ಭವನ್ನು ಗಮನಿಸುವುದಾದರೆ ನೂರಾರು ಹಳ್ಳಿಗಳಲ್ಲಿ ನೆಲದಲ್ಲಿ ಹೂತುಕೊಂಡ ಲಿಪಿರಹಿತ ಕಲ್ಲುಗಳಿವೆ. ಈ ವೀರಗಲ್ಲುಗಳ ಆತ್ಮಾಂತರಂಗದೊಳಗೆ ಅಡಗಿರುವ ನೋವಿನ ಧ್ವನಿಯನ್ನು ಮುಚ್ಚಿಟ್ಟು, ವೀರಪಟ್ಟ ಕಟ್ಟಿ ಅವರ ಆತ್ಮಬಲಿಯನ್ನು ಮಾಡಿ ಪುರೋಹಿತ ಧರ್ಮಶಾಹಿ, ಅಧಿಕಾರದ ಪ್ರಭುತ್ವಶಾಹಿಗಳು ತಮ್ಮ ನಿರಂಕುಶ ಅಧಿಕಾರವನ್ನು ಗಟ್ಟಿಗೊಳಿಸಿಕೊಂಡ ಗತಕಥನವನ್ನು ವರ್ತಮಾನ ಕಾಲದಲ್ಲಿ ‘ರೀವಿಜಿಟ್’ ಮಾಡುವ ತುರ್ತು ಇದೆ.

ಗ್ರಾಮೀಣ ಲೋಕದೃಷ್ಟಿಯಲ್ಲಿ ವೀರಗಲ್ಲುಗಳು ಪರಮಪೂಜ್ಯವಾಗಿವೆ. ಇನ್ನೂ ಕೆಲವೆಡೆ ‘ಕಳ್ಳಪ್ಪ’ ಎಂಬ ಹೆಸರಿನಿಂದಲೂ ಕರೆಯಲ್ಪಡುತ್ತವೆ. ವೀರಗಲ್ಲುಗಳನ್ನು ವೀರಭದ್ರನ ಅವತಾರವೆಂದು ಗ್ರಾಮೀಣ ಭಾಗದಲ್ಲಿ ಮಂದಿರ ಕಟ್ಟಿ ಪೂಜಿಸುವುದು ಉಂಟು. ಇಂತಹ ವೀರಗಲ್ಲುಗಳ ನಿಜಕಥನ ಬರೆಯಬೇಕಾಗಿದೆ. ಪ್ರಾಚೀನ ಕಾಲದ ಯುದ್ಧಕ್ಕೆ ಇಲ್ಲವೇ ಗ್ರಾಮ ರಕ್ಷಣೆಗೆ ಅಣಿಯಾಗುತ್ತಿದ್ದುದು ಶೂದ್ರ ಮತ್ತು ಅಸ್ಪೃಶ್ಯ ಸಮುದಾಯವೇ ಎಂಬುದನ್ನು ಈ ಆಕರಗಳು ನಿರೂಪಿಸುತ್ತವೆ. ಕನ್ನಡ ನಾಡಿನಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ದೊರೆಯುವ ವೀರಗಲ್ಲುಗಳು ಬಹುತೇಕ ಲಿಪಿರಹಿತವೇ. ಇವೆಲ್ಲಾ ಮೌಖಿಕ ಆಕರಗಳಂತೆ ನಿಂತಿವೆಯಷ್ಟೆ. ಇವುಗಳ ಹಿಂದಣ ಇರುವ ಜನಗಳು ಹೇಳುವ ಐತಿಹ್ಯದ ಸ್ವರೂಪವನ್ನು ಬಿಚ್ಚಿದರೆ ಮತ್ತೆ ಜನ ಇತಿಹಾಸ ಒಡಮೂಡುತ್ತದೆ. ಇಂತಹ ಅಧ್ಯಯನ ಆಗಬೇಕಿದೆ.

“ವೀರಗಲ್ಲುಗಳು ನಮ್ಮ ನಾಡಿನ ಪರಂಪರೆಯ ಹೆಗ್ಗುರುತುಗಳು, ನಾಡಿನ ಸಾಕ್ಷಿ ಪ್ರಜ್ಞೆಗಳು” ಎಂಬ ಆಖ್ಯಾನಗಳನ್ನು ಪಂಡಿತಮಾನ್ಯ ಇತಿಹಾಸ ಬರಹಗಾರರು ಮಾಡಿದ್ದಾರೆ. ಇದು ಹುಸಿನುಸುಳು ಎಂಬುದು ಸೂಕ್ಷ್ಮ ಅಧ್ಯಯನದಿಂದ ತಿಳಿಯುತ್ತದೆ. ಕಲ್ಪಿತ ಚರಿತ್ರೆಯ ಬರಹದ ಗೋಡೆಯನ್ನು ಒಡೆದು ನಿಜ ಚರಿತ್ರೆಯನ್ನು ಬರೆದುಕೊಂಬ ಹೊಣೆಗಾರಿಕೆ ಒಂದು ದೊಡ್ಡ ಸವಾಲು. ನಾಡಿನ ಹೆಗ್ಗುರುತು ಆದ ತಳ ಸಮುದಾಯಗಳ ಈ ವೀರರ ಚರಿತ್ರೆಯನ್ನು ಅನಾವರಣ ಮಾಡದೇ ಇರುವ ಹಿಂದಿನ ಸತ್ಯಗಳು ಹಲವಿವೆ.

“ಜಿತೇನ ಲಭ್ಯತೇ ಲಕ್ಷ್ಮೀ  ಮೃತೇನಾಪಿ ಸುರಾಂಗನಾ

ಕ್ಷಣ ವಿಧ್ವಂಸಿನಿ ಕಾಯೇಕಾ ಚಿಂತಾಮರಣೇ ರಣೇ||”

(ಗೆದ್ದರೇ ವಿಜಯಲಕ್ಷ್ಮೀ, ಮರಣ ಹೊಂದಿದರೆ ದೇವತಾ ಕನ್ಯೆ ದೊರೆಯುತ್ತಾಳೆ. ಅಸ್ಥಿರವಾದ ದೇಹ, ಪ್ರಾಣದ ಮೋಹವೇಕೆ?) ಎಂಬ ಶ್ಲೋಕವನ್ನು ಪ್ರಭುತ್ವಶಾಹಿಯು ಸಾರ್ವಜನಿಕ ಸ್ಥಳಗಳಲ್ಲಿ ಕಲ್ಬರಹದ ಮೂಲಕ ಪ್ರದರ್ಶಿಸುತ್ತಿತ್ತು. ಈ ಶ್ಲೋಕದ ಆಳದಲ್ಲಿ ಧರ್ಮ ನಿಯಂತ್ರಣತ್ವದ ವಾಸನೆಯಿದೆ. ಸತ್ತರೇ ವೀರಮರಣ, ದೇವಾಂಗನೆಯರು ಸ್ವರ್ಗಕ್ಕೆ ಕರೆದೊಯ್ಯುತ್ತಾರೆ ಎಂಬ ಪ್ರಲೋಭನೆಯನ್ನು ಜನಸಾಮಾನ್ಯರ ಮೆದುಳಿಗೆ ತುಂಬಲಾಯಿತು. ಒಂದು ನಾಡಿನ ರಕ್ಷಣೆಗೆ ಸೈನ್ಯ, ದಂಡು ಅಗತ್ಯವೇ. ಆದರೆ ಈ ಪ್ರಲೋಭನೆಗೆ ಒಳಗಾದದ್ದು ಕೇವಲ ತಳಸಮುದಾಯಗಳು ಮಾತ್ರ. ಊರು, ಮಂಡಲ, ರಾಜ್ಯ ಎಲ್ಲವನ್ನೂ ಕಟ್ಟುವಿಕೆಯ ಹಿಂದೆ ಈ ವೀರರ ತೋಳ್ಬಲದ ಶ್ರಮವಿದೆ. ಇಂತಹ ಚರಿತ್ರೆಯನ್ನು ಮುಖ್ಯಧಾರೆಗೆ ತರದೇ ಇರುವುದರ ಹಿಂದಣ ಹತಾರಗಳನ್ನು ಅರಿಯಬೇಕು.

ಮೇಲಿನ ಶ್ಲೋಕಕ್ಕೆ ಇಂಬು ಕೊಡುವಂತೆ ವೀರಗಲ್ಲುಗಳಲ್ಲಿ ಶಿಲ್ಪ ಕೆತ್ತನೆಯನ್ನು ಮಾಡಲಾಯಿತು. ಕಲ್ಲಿನ ಮೊದಲ ಪಟ್ಟಿಕೆಯಲ್ಲಿ ವೀರ ಹೋರಾಡುವ ಚಿತ್ರ, ಎರಡನೇ ಪಟ್ಟಿಕೆಯಲ್ಲಿ ಸುರಾಂಗನೆಯರು ಕರೆದೊಯ್ಯುವ ಚಿತ್ರ, ಮೂರನೇ ಪಟ್ಟಿಕೆಯಲ್ಲಿ ಸ್ವರ್ಗಸ್ಥ ಮುಕ್ತಿ ಪಡೆದ ದೃಶ್ಯ ಕೆತ್ತಲಾಗಿದೆ. ಇದನ್ನು ನೋಡಿದ ಗ್ರಾಮೀಣ ತಳಸಮುದಾಯಗಳ ವೀರರು ರಾಜ್ಯದ ರಕ್ಷಣೆಗೆ ಸ್ವಯಂ ಪ್ರೇರಣೆಯಿಂದ ನಿಂತರು. ನಾಡಿನ ಅನೇಕ ಊರುಗಳಲ್ಲಿ ಅನಾಥವಾಗಿ ಬಿದ್ದ ಏಕಾಂಗಿ ವೀರರ ಚಿತ್ರಗಳು ಹೊಸ ಚರಿತ್ರೆಯನ್ನು ರಚಿಸಿಕೊಳ್ಳಲು ಹಾತೊರೆಯುತ್ತಿವೆ. ವೀರಗಲ್ಲುಗಳು ನಾಡಿನ ಸಾಕ್ಷಿಪ್ರಜ್ಞೆಗಳು ಎಂದವರು ರಾಜಪರಿವಾರದ, ಅಧಿಕಾರ ಪರಿವಾರದ ವೀರಗಲ್ಲುಗಳಿಗೆ ಮಾನ್ಯತೆ ಕೊಟ್ಟಿದ್ದಾರೆ. ಆದರೆ ಅದರಾಚೆ ಬಹುದೊಡ್ಡ ವೀರರ ಲೋಕ ಇದೆ. ಗಂಗಾವತಿ ತಾಲ್ಲೂಕಿನ ಆನೆಗೊಂದಿ, ಹೇರೂರುಗಳಲ್ಲಿ ಅಂಬಿಗರ ಸುಂದರವಾದ ವೀರಗಲ್ಲುಗಳಿವೆ. ತುಂಗಭದ್ರಾ ನದಿಯಲ್ಲಿ ಮುಳುಗುತ್ತಿದ್ದ ವಿಜಯನಗರದ ಪ್ರಭುತ್ವ ಪರಿವಾರವನ್ನು ತೆಪ್ಪದಿಂದ ಕಾಪಾಡಿ ವೀರಮರಣ ಹೊಂದಿದ ದ್ಯೋತಕವಿದು. ಇವರು ಜಲವೀರರು. ಈ ಬಗ್ಗೆ ಚರಿತ್ರೆ ಜಾಣಮೌನವಹಿಸಿದೆ. ಈ ನೆಲದ ಮಕ್ಕಳ ಇಂತಹ ಸಾವಿರಾರು ಹೆಗ್ಗುರುತುಗಳು ನಿಜವಾರಸುದಾರರ ಹೆಸರಲ್ಲಿವೆ. ಶಾಸನಗಳಲ್ಲಿ ಉಲ್ಲೇಖಗೊಂಡ ಅನೇಕ ತಳವಾರರು ತಮ್ಮ ಜೀವ ಪಣಕ್ಕಿಟ್ಟು ಊರುಗಳನ್ನು ರಕ್ಷಿಸಿದ್ದಾರೆ. ಆನೆಗೊಂದಿಯ ಪರಿಸರದಲ್ಲಿ ಜನಸಾಮಾನ್ಯರನ್ನು ಭಯಭೀತಗೊಳಿಸಿದ್ದ ಹುಲಿಯೊಂದನ್ನು ಕಡೇಬಾಗಿಲಿನ ಯುವಕನೊಬ್ಬ ಕೊಂದು ವೀರಮರಣ ಹೊಂದುತ್ತಾನೆ. ಅವನ ಹೆಸರಿನಲ್ಲಿ ಹಾಕಿಸಿದ ಸುಂದರ ಕಲ್ಲನ್ನು ತಿಪ್ಪೆಯಲ್ಲಿ ಇಡಲಾಗಿದೆ. ಇದಕ್ಕೆ ಕಾರಣ ಅವನೊಬ್ಬ ಅಸ್ಪೃಶ್ಯನೆಂಬ ಐತಿಹ್ಯ ಸ್ಥಳೀಯರಲ್ಲಿದೆ. ಗ್ರಾಮ ರಕ್ಷಕರಾಗಿದ್ದ ತಳವಾರರು, ಅನೇಕ ಗಿರಿಜನರು ಇಂತಹ ರಾಜ್ಯ ರಕ್ಷಿಸುವ ಮಹತ್ವದ ಕೆಲಸದಲ್ಲಿದ್ದರು. ಆದರೆ ಇವರ ಚರಿತ್ರೆಯನ್ನು ತೆರೆಮರೆಯಲ್ಲಿಡಲಾಗಿದೆ.

ಊರುಗಳ ರಕ್ಷಣೆಗಾಗಿ ಪ್ರಾಣ ಕಳೆದುಕೊಂಡವರ ಸ್ಮಾರಕಗಳಿವೆ. ಗೋವುಗಳನ್ನು ಕಾಪಾಡಿ ಗೋಗ್ರಹಣದಲ್ಲಿ ಮಡಿದವರು, ಊರನ್ನು ರಕ್ಷಿಸಿ ಊರಳಿವಿನಲ್ಲಿ ಮಡಿದವರು, ಹೆಣ್ಣುಗಳನ್ನು ಅಪಹರಿಸಿದಾಗ ಅವರನ್ನು ಕಾಪಾಡಿ ಮಡಿದ ಪೆಣ್ಬುಯ್ಯಲ್ ಸ್ಮಾರಕವಾದವರು, ರಾಜನ, ಮಂತ್ರಿಗಳ, ಅಧಿಕಾರಿಗಳ ಹುಚ್ಚು ಹವ್ಯಾಸಕ್ಕೆ ಭೇಟೆಗಾಗಿ ತೆರಳಿ ಅವರನ್ನು ಕಾಡು ಪ್ರಾಣಿಗಳು ಮುತ್ತಿದಾಗ ಗಿರಿಜನರು ಅವರನ್ನು ರಕ್ಷಿಸಿ, ಸುರಕ್ಷಿತವಾಗಿ ಕಳಿಸಿ ಮರಣ ಹೊಂದಿದ ನಿದರ್ಶನಗಳಿವೆ. ಇಂತಹ ವೀರ ಬೇಟೆಕಲ್ಲುಗಳ ಅಧ್ಯಯನ ಆಗಬೇಕಿದೆ.

ವೀರಗಲ್ಲುಗಳು ಅಧಿಕವಾಗಿ ದೊರೆಯುವ ಸ್ಥಳ ಚರಿತ್ರೆಯ ಹೆಗ್ಗುರುತು ಎಂಬುದಕ್ಕಿಂತ ಅದು ಸದಾ ಒಂದಿಲ್ಲೊಂದು ಪೀಡನೆಗೆ ಒಳಗಾದ ಸಂತ್ರಸ್ತರ ಭೂಮಿ ಆಗಿತ್ತು ಎಂಬುದನ್ನು ಗಮನಿಸಬೇಕು. ಅಲ್ಲಿ ಮಾನಭಂಗ, ಕಳ್ಳತನ, ಆಕ್ರಮಣ, ಹಿಂಸೆ, ದರೋಡೆಗಳು ನಡೆದಿವೆ. ಅಂತಹ ಸಂತ್ರಸ್ತ ನೆಲವನ್ನು ಸದಾ ಕಾಪಾಡಿದ ಕೀರ್ತಿ ತಳಸಮುದಾಯದ ವೀರರದು. ಈ ವೀರರು ಪ್ರಭುತ್ವ ನೇಮಿಸಿದವರಲ್ಲ. ಮತ್ತು ಯಾವುದೇ ಉಂಬಳಿ, ಸಂಬಳ ಪಡೆದವರಲ್ಲ. ಊರಿನ ಆತ್ಮಗೌರವವನ್ನು ಕಾಪಾಡಿ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸಿದವರು. ವಾಸ್ತವವಾಗಿ ನಿರಂಕುಶ ಪ್ರಭುತ್ವದಲ್ಲಿ ದೇಶ ರಕ್ಷಣೆಯನ್ನು ಮಾಡುವ ಜವಬ್ದಾರಿ ಸರಕಾರದ್ದು. ಅದು ವಿಫಲವಾಗಿದೆ ಎಂದು ಹೇಳುವ ನಿದರ್ಶನಗಳು ವೀರಗಲ್ಲುಗಳು.

ಇಂತಹ ಕಥನವನ್ನು ನಾಡಿನ ಉದ್ದಕ್ಕೂ ತೋಂಡಿ ಪರಂಪರೆಯಲ್ಲಿ ಜನ ಕಥಿಸುತ್ತಾರೆ. ಧರ್ಮ ನಿಯಂತ್ರಣತ್ವದ ಪ್ರಲೋಭನೆಗೆ ಒಳಗಾದ ಕೆಲವರು ಈ ವೀರಗಲ್ಲುಗಳನ್ನು ಕಳ್ಳಪ್ಪನೆಂದು ಕರೆದದ್ದುಂಟು. ಜನರನ್ನು ಸಲುಹಲು ಪ್ರಭುತ್ವ ವಿಫಲವಾದಾಗ ಕೆಲ ವೀರರು ಸಂಪತ್ತನ್ನು ಎಲ್ಲೆಲ್ಲಿಂದಲೋ ತಂದು ಜನಸಮುದಾಯಕ್ಕೆ ಹಂಚಿ ಮಡಿದ ನಿದರ್ಶನಗಳಿವೆ. ಅವರ ಹೆಸರಿನ ಕಲ್ಲುಗಳಿಗೆ ಪ್ರಭುತ್ವ ವಿರೋಧಿ ಖಳನಾಯಕನೆಂದು ಬಿಂಬಿಸಲಾಗಿದೆ. ಈ ಹಣೆಪಟ್ಟಿ ಜನರ ಸರದಾರನಾಗಿರುವ ಗಂಡುಗಲಿ ಕುಮಾರರಾಮನಿಗೂ ಇರುವುದು ಚರಿತ್ರೆಯ ದುರಂತವೇ ಸರಿ. ಚರಿತ್ರೆಯಲ್ಲಿ ರಾಜ್ಯವನ್ನು ಕಾಪಾಡಲು ಧರ್ಮದ ವಾರಸುದಾರರಾದವರು ವೀರತ್ವವನ್ನು ಮೆರೆದು ರಾಜ್ಯ ಕಾಪಾಡಿದ ಯಾವೊಂದು ನಿದರ್ಶನವೂ ಇತಿಹಾಸದಲ್ಲಿಲ್ಲ. ಧರ್ಮಚಕ್ರದ ಪ್ರಲೋಭನೆಗೆ ಬಿದ್ದ ಬಹುಜನರ ಸಾಹಸ ಕಥನಗಳೇ ಈ ನೆಲದಲ್ಲಿ ಹೂತುಹೋಗಿವೆ.

ಹೀಗೆ ವೀರಗಲ್ಲುಗಳ ಒಳಸುಳಿಗಳನ್ನು ಅನಾವರಣಗೊಳಿಸುತ್ತಾ ಹೋದರೆ ಒಂದು ಹೊಸ ಜಗತ್ತು ಕಾಣಬರುತ್ತದೆ. ಪ್ರಾಚೀನ ಕರ್ನಾಟಕದಲ್ಲಿ ಮುಖ್ಯವಾಗಿ ಎರಡು ವರ್ಗಗಳಿದ್ದವೆಂಬುದನ್ನು ವೀರಗಲ್ಲುಗಳು ಸೂಚಿಸುತ್ತವೆ. ಒಂದು ಮುನ್ನುಗ್ಗಿ ಶೌರ್ಯ ಮೆರೆಯಲೇಬೇಕೆಂಬ ನಿಷ್ಟಾವಂತ ದೇಶಭಕ್ತ ಸಮುದಾಯ. ಎರಡು ಉಪಭೋಗಿ ಸಮುದಾಯ. ಮೊದಲನೇ ವರ್ಗಕ್ಕೆ ಶೌರ್ಯ ಪ್ರದರ್ಶನ ಮಾಡುವ, ಆ ಮೂಲಕ ತಮ್ಮ ಕರ್ತವ್ಯವನ್ನು ನಿರ್ವಹಿಸುವ ಪ್ರಜ್ಞೆ ಇರುತ್ತದೆ. ಇವರ ಕರ್ತವ್ಯಗಳನ್ನೆಲ್ಲಾ ಸೇವೆಯಾಗಿ ಸ್ವೀಕರಿಸಿ ಉಪಭೋಗಿಸಿದವರಿದ್ದಾರೆ. ಇದು ಕೇವಲ ಗತಕಾಲದ ಕಥನವಲ್ಲ. ವರ್ತಮಾನ ಭಾರತದ ರಾಜಕಾರಣದ ಸಂದರ್ಭದಲ್ಲಿಯೂ ಈ ಕವಚದಿಂದ ಹೊರಬಂದಿಲ್ಲ. ರಾಷ್ಟ್ರಭಕ್ತಿಯ ನೆಪದಲ್ಲಿ ಕೋಮು ಮತ್ತು ಜಾತಿಯ ವಿಷಬೀಜಗಳನ್ನು ಮುಗ್ಧರಿಗೆ ಬಿತ್ತುವ ಮುಖೇನ ಶೌರ್ಯ ಮೆರೆಯುವಂತೆ ಮಾಡಿ ಆ ಮೂಲಕ ತಳಸಮುದಾಯಗಳು ಪ್ರಾಚೀನ ಸಮಾಜದ “ವೀರಗಲ್ಲು”ಗಳಿಗೆ ಪರ್ಯಾಯವೆಂಬಂತೆ “ಕಾರ್ಯಕರ್ತ”, “ಸ್ವಯಂಸೇವಕ” ಹೆಸರಿನೊಳಗಡೆ ಬಲಿಯಾಗುತ್ತಿರುವ ಸಂದರ್ಭವನ್ನು ನೋಡಬಹುದು.

ಈ ನೆಲದ ರಕ್ಷಣೆಗಾಗಿ ಆಹುತಿಯಾದ ವೀರರ ಮೇಲೆ ರಾಜಪ್ರಭುತ್ವದ, ನಾಯಕತನದ ಅಹಂಕಾರ ಇತ್ತೇ ಹೊರತು ಅವರ ಮೇಲೆ ಒಂದು ಸಣ್ಣ ಕನಿಕರವೂ ಇರಲಿಲ್ಲ. ನಾಯಕತನಕ್ಕೆ ಕನಿಕರ ಬೆರೆತುಕೊಂಡರೇ ಆ ಪ್ರಭುತ್ವಕ್ಕೆ ಪ್ರಜಾಸುಖದ ಅರಿವಿರುತ್ತದೆ. ಹಾಗಾಗಿ ವೀರಗಲ್ಲುಗಳ ಆಳದಲ್ಲಿರುವ ಜನರಕ್ಷಣೆಯ ತಾಯಿತನವನ್ನು, ಸ್ವಯಂಘೋಷಿತ ಗ್ರಾಮ ರಕ್ಷಣೆಯ, ರಾಜ್ಯ ರಕ್ಷಣೆಯ ನೈತಿಕ ಹೊಣೆಗಾರಿಕೆ ನಿಭಾಯಿಸಿದ ಈ ನೆಲದ ಮಕ್ಕಳ ಕಥನವನ್ನು ಮರುನಿರ್ಮಾಣ ಮಾಡಬೇಕು.

– ಡಾ. ಜಾಜಿ ದೇವೇಂದ್ರಪ್ಪ, ಸಂಯೋಜಕರು, ಕನ್ನಡ ಸ್ನಾತಕೋತ್ತರ ಅಧ್ಯಯನ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗಂಗಾವತಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿಯ ಲೆಫ್ಟಿನೆಂಟ್ ಗವರ್ನರ್ ತಮ್ಮನ್ನೇ ನ್ಯಾಯಾಲಯ ಎಂದು ಭಾವಿಸಿರುವಂತಿದೆ: ಸುಪ್ರೀಂ ಕೋರ್ಟ್ ಕಿಡಿ

0
ಸುಪ್ರೀಂ ಕೋರ್ಟ್‌ ಆದೇಶ ಉಲ್ಲಂಘಿಸಿ ಉತ್ತರ ಅರಾವಳಿ ಚಿರತೆ ವನ್ಯಜೀವಿ ಕಾರಿಡಾರ್‌ ಆಗಿರುವ ದೆಹಲಿ ರಿಜ್‌ ಅರಣ್ಯ ಪ್ರದೇಶದಲ್ಲಿ ಸುಮಾರು 1,100 ಮರಗಳನ್ನು ಕಡಿಯಲು ನಿರ್ದೇಶನ ನೀಡುವಾಗ ದೆಹಲಿ ಅಭಿವೃದ್ಧಿ ಪ್ರಾಧಿಕಾರದ (ಡಿಡಿಎ)...