Homeಅಂಕಣಗಳುಬೆಂಕಿ ಬರಹ-2: ಪತಂಜಲಿ ಯೋಗ ಮತ್ತು ರಾಮ್‌ದೇವ್-ಯೋಗಿ; ಪತಂಜಲಿ ಹೆಸರಿನಲ್ಲಿ ಭಾರತಕ್ಕೆ ಅವಮಾನಿಸುತ್ತಿರುವ ಲೂಟಿಕೋರರು

ಬೆಂಕಿ ಬರಹ-2: ಪತಂಜಲಿ ಯೋಗ ಮತ್ತು ರಾಮ್‌ದೇವ್-ಯೋಗಿ; ಪತಂಜಲಿ ಹೆಸರಿನಲ್ಲಿ ಭಾರತಕ್ಕೆ ಅವಮಾನಿಸುತ್ತಿರುವ ಲೂಟಿಕೋರರು

- Advertisement -
- Advertisement -

ಡೆಡ್ಲಿ ಕೊರೊನಾ ವೈರಸ್ ಅನ್ನು ತಡೆಗಟ್ಟಲು ಔಷಧವನ್ನು ಕಂಡುಹಿಡಿದಿದ್ದೇನೆ ಅದು 7 ದಿನದೊಳಗಾಗಿ ಶೇ.100% ರಷ್ಟು ಗುಣಮುಖವಾಗುತ್ತದೆ ಎಂದು ಹೇಳಿಕೊಂಡು ಇದೀಗ ಕ್ರಿಮಿನಲ್ ಮೊಕದ್ದಮೆಯನ್ನು ಎದುರಿಸುತ್ತಿರುವ ಬಾಬಾರಾಮ್‌ದೇವ್ ದೇಶದ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು. ಪತಂಜಲಿ ಉತ್ಪನ್ನಗಳ ಮಾರಾಟದಿಂದ ಇದೀಗ ‘ಯೋಗ ಗುರು’ ಆಗಿದ್ದ ರಾಮ್‌ದೇವ್ ಹಲವಾರು ಮಲ್ಟಿನ್ಯಾಷನಲ್ ಕಂಪನಿಗಳನ್ನೂ ಹಿಂದಿಕ್ಕಿ ಶ್ರೀಮಂತರ ಪಟ್ಟಿಯನ್ನೂ ಸೇರಿದ್ದಾರೆ.

ಐಶಾರಾಮಿ ರೇಂಜ್ ರೋವರ್, ಆಡಿ ಯಂತಹ ಕಾರುಗಳಲ್ಲಿ ಓಡಾಡುವ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಭಾರತ ಸರ್ಕಾರ ಘೋಷಿಸಿದ ‘ಯೋಗ ದಿನದ’ ಪ್ರಚಾರಕರಾಗಿಯೂ ಇದ್ದಾರೆ. ಪತಂಜಲಿ ಆಯುರ್ವೇದ, ಪತಂಜಲಿ ಯೋಗ್‌ದೀಪ್, ಭಾರತ್ ಸ್ವಾಭಿಮಾನ್ ಟ್ರಸ್ಟ್ ನ ಸಂಸ್ಥಾಪಕರಾಗಿರುವ ರಾಮ್‌ದೇವ್‌ರ ಪ್ರಭಾವ ಎಷ್ಟರ ಮಟ್ಟಿಗಿದೆ ಎಂದರೆ ಭಾರತದ ಸನಾತನ ಯೋಗ ಗುರು ‘ಪತಂಜಲಿ’ಯ ಕುರಿತು ಹುಡುಕಿದರೆ ರಾಮ್‌ದೇವ್‌ರ ಕುರಿತು, ಆತನ ವೆಬ್‌ಸೈಟ್‌ಗಳ ಮಾಹಿತಿಯೇ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಈ ಸದ್ಯ ಸ್ವದೇಶಿ ಹೆಸರಿನಲ್ಲಿ ಗೋಧಿ ಹಿಟ್ಟಿನಿಂದ ನೂಡಲ್ಸ್ ವರೆಗೂ, ಶೇವಿಂಗ್ ಕ್ರೀಮಿನಿಂದ ಜೀನ್ಸ್ ಪ್ಯಾಂಟಿನವರೆಗೂ ಆತ ಮಾರದೇ ಇರುವ ವಸ್ತುವೇ ಇಲ್ಲ. ಅಲ್ಲದೆ ರಾಜಕೀಯ, ಟಿವಿ ಚಾನಲ್‌ಗಳು, ಫಾರ್ಮಸಿಗಳು ಎಲ್ಲಾ ಕ್ಷೇತ್ರದಲ್ಲಿ ರಾಮ್‌ದೇವ್ ಪ್ರವೇಶ ಮಾಡಿದ್ದಾರೆ. ಹೀಗಾಗಿ ಆತನ ಆಸ್ತಿ ಇಂತಿಷ್ಟೇ ಎಂದು ಲೆಕ್ಕ ಹಾಕಲು ಕಷ್ಟವಾಗುತ್ತದೆ. ಭ್ರಷ್ಟಾಚಾರದ ವಿರುದ್ಧ ಭಾರತದಲ್ಲಿ 2011ರಿಂದ ಶುರುವಾಗಿದ್ದ ‘ಆಂಟಿ ಕರಪ್ಷನ್ ಮೂವ್ಮೆಂಟ್’ನಲ್ಲಿ ಸಕ್ರಿಯವಾಗಿ ಭಾಗವಹಿಸಿ ಜನ್‌ಲೋಕ್‌ಪಾಲ್ ಮಸೂದೆ ಜಾರಿಗಾಗಿನ ಹೋರಾಟದಲ್ಲಿ ಲೈಮ್‌ಲೈಟ್‌ಗೆ ಬಂದಿದ್ದ ರಾಮ್‌ದೇವ್‌ರ ಆಸ್ತಿ ಅಂದಾಜು 5 ರಿಂದ 8 ಸಾವಿರ ಕೋಟಿಗಳಾಗಿವೆ. ಇನ್ನೂ ಪತಂಜಲಿ ಆರ್ಯುವೇದ ಕಂಪನಿಯ ಒಟ್ಟು ಆಸ್ತಿ 6.1 ಬಿಲಿಯನ್ ಡಾಲರ್ ಇದೆ ಎಂದು ಕೇಳಿದರೆ ಬ್ರಷ್ಟಾಚಾರ ವಿರೋಧಿ ಹೋರಾಟದಲ್ಲಿ ರಾಮ್‌ದೇವ್‌ರ ಜೊತೆ ಬೀದಿಗಿಳಿದ ಸಾಮಾನ್ಯ ಜನರಿಗೆ ಶಾಕ್ ಆಗಬಹುದೇನೋ.

ಇದೆಲ್ಲವನ್ನು ಪಕ್ಕಕ್ಕಿಟ್ಟು ಯೋಗಿ ಎಂದರೆ ಯಾರು, ಯೋಗಿ ಆಗಬೇಕಾದರೆ ಪಾಲಿಸಬೇಕಾದ ನಿಯಮಗಳೇನು, ಪತಂಜಲಿಯ ಯೋಗ ಸೂತ್ರಗಳು ಏನನ್ನು ಹೇಳುತ್ತದೆ ಎಂದು ನೋಡೋಣ. ಇದನ್ನು ನಾವು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆಧಿತ್ಯನಾಥ್ ಅವರಿಗೂ ಹೋಲಿಸಿ ನೋಡಬಹುದಾಗಿದೆ. ಒಂದು ರೀತಿ ಪತಂಜಲಿಯ ಒಡೆಯರಂಬಂತೆ ಬಿಂಬಿತರಾಗಿರುವ ಬಾಬಾ ರಾಮ್‌ದೇವ್ ಮತ್ತು ಅವರ ಸಂಸ್ಥೆಯ ಉತ್ಪನ್ನಗಳ ಶೇ.98% ರಷ್ಟು ಒಡೆತನ ಹೊಂದಿರುವ ಬಾಲಕೃಷ್ಣ ಇವರೆಲ್ಲರನ್ನೂ ಪತಂಜಲಿಯ ಯೋಗ ಸೂತ್ರದೊಂದಿಗೇ ಹೋಲಿಸಿ ನೋಡುವುದು ಅಗತ್ಯವಾಗಿದೆ. ಯಾಕೆಂದರೆ ರಾಮ್‌ದೇವ್ ಸದ್ಯ ಮೀಡಿಯಾದ ಡಾರ್ಲಿಂಗ್ ಆಗಿರುವ ಕಾರಣಕ್ಕೆ ಆತನ ಆಸ್ತಿಯ ಬಗ್ಗೆಯಾಗಲಿ, ಒಬ್ಬ ಯೋಗಿಗೆ ಇರಬೇಕಾದ ನೈತಿಕತೆ ಬಗ್ಗೆಯಾಗಲಿ ಮಾಧ್ಯಮಗಳು ಪ್ರಶ್ನೆ/ವಿಮರ್ಶೆ ಮಾಡುವುದಿಲ್ಲ.

ವಿಶ್ವಕ್ಕೆ ಭಾರತದ ಕೊಡುಗೆಗಳಲ್ಲಿ ಯೋಗವೂ ಒಂದು ಎಂದು ಹೇಳಲಾಗುತ್ತದೆ. ಈ ಪರಂಪರೆ ಅತ್ಯಂತ ಪ್ರಾಚೀನ ಕಲೆಯಾಗಿದ್ದು ಯಾರು ಇದರ ಜನಕರು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಶೂದ್ರರು ಆರಾಧಿಸುವ ದೇವರು ಶಿವ ಕೂಡ ಯೋಗ ಭಂಗಿಯಲ್ಲಿ ಇರುವುದನ್ನು ನೋಡಬಹುದಾಗಿದೆ. ಆದರೆ ಯೋಗವನ್ನು ಅಭಿವೃದ್ಧಿಪಡಿಸಿ ಅದನ್ನು ಸಿದ್ಧಾಂತಿಕರಿಸಿದವರಲ್ಲಿ ಪತಂಜಲಿ ಪ್ರಮುಖರು. ಪತಂಜಲಿ ಒಬ್ಬ ವ್ಯಕ್ತಿ ಅಲ್ಲ ಅದೊಂದು ಬಿರುದು ಎಂಬ ವಾದವೂ ಇದೆ. ಪತಂಜಲಿಯ ಪ್ರಕಾರ ವ್ಯಕ್ತಿಯೊಬ್ಬರು ಯೋಗಿ ಆಗಬೇಕಾದರೆ 8 ಹಂತಗಳನ್ನು ಪೂರ್ಣಗೊಳಿಸಬೇಕು. ಮೊದಲ ಐದು ಹಂತಗಳು ದೇಹ ಮತ್ತು ಮನಸ್ಸಿಗೆ ಸಂಬಂಧಿಸಿದ್ದವು – ಇವುನ್ನು ‘ಹಠಯೋಗ’ ಎಂದೂ ಮತ್ತು ಕೊನೆಯ ಮೂರು ಹಂತಗಳು ‘ರಾಜಯೋಗ’ ಎನ್ನುತ್ತಾರೆ. ಇವೆರಡನ್ನೂ ಸೇರಿಸುವುದು ಐದನೇ ಹಂತವಾದ ಪ್ರತ್ಯೆಯ. ಈ ಹಂತಗಳನ್ನು ನೋಡೊಣ.

  1. ಯಮ: (ಅಹಿಂಸೆ, ಸತ್ಯ, ಆಸ್ತೆಯ, ಬ್ರಹ್ಮಚಾರ್ಯ, ಅಪರಿಗ್ರಹ). ಮೌಲ್ಯಗಳಿಂದ ತುಂಬಿದ ಬದುಕು. ಯಮ ಎಂದರೆ ಸಾವಿಗೆ ಹೋಲಿಸಿ ವ್ಯಖ್ಯಾನಿಸಲಾಗುತ್ತದೆ. ಅಂದರೆ ಯಮವು ಬಡವ, ಶ್ರೀಮಂತ, ಜಾತಿ, ಧರ್ಮ ಯಾವುದೇ ತಾರತಮ್ಯ ಮಾಡದೇ ಎಲ್ಲರಿಗೂ ಸಾವು ಬರುತ್ತದೆ. ಇಂತಹ ತಾತಮ್ಯವಿಲ್ಲದ ಸಮಾನ ದೃಷ್ಟಿಯಿಂದ ನೋಡುವ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು.

ರಾಮ್‌ದೇವ್‌ರ ಒಂದು ಉದಾಹರಣೆಯನ್ನು ನೋಡೋಣ: ಆಸ್ತಿ ಮಿತಿಯ ಬಗ್ಗೆ ಮಾತನಾಡುತ್ತಾ ತಾವೇ ಮಿತಿಮೀರಿ ಆಸ್ತಿ ಹೊಂದುವುದು, ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಜನ್‌ಲೋಕಪಾಲ್ ಮಸೂದೆ ಜಾರಿಗೆ ಒತ್ತಾಯಿಸೋದು. ಭಾಜಪ ಬಂದಾಗ ಸುಮ್ಮನಾಗುವುದು. ಯೋಗಿ ಆದಿತ್ಯನಾಥ್ ಕೂಡ ತನ್ನ ರಾಜ್ಯದ ಎಲ್ಲಾ ಜನರನ್ನು ಸಮಾನವಾಗಿ ನೋಡದೇ ತಾನು ನಂಬುವ ಧರ್ಮವೇ ಶ್ರೇಷ್ಠ ಎಂದು ಪ್ರತಿಪಾದನೆ ಮಾಡುವವರು. ಹಾಗಾಗಿ ಈ ಇಬ್ಬರೂ ಪತಂಜಲಿಯ ಮೊದಲ ಹಂತದಲ್ಲಿಯೇ ವಿಫಲರಾಗಿದ್ದಾರೆ.

  1. ನಿಯಮ: (ಶೌಚ, ಸಂತೋಷ, ತಪಸ್ಸು, ಸ್ವಅಧ್ಯಾಯ, ಈಶ್ವರಪರಿಧ್ಯಾನ) ಇದನ್ನು ಪ್ರಕೃತಿಯ ನಿಯಮಗಳಿಗೆ ಬದ್ಧವಾಗಿ/ಪೂರಕವಾಗಿ ಬದುಕುವುದು ಎನ್ನಬಹುದು. ಪ್ರಕೃತಿಯು ತನ್ನ ಒಡಲಲ್ಲಿ ಇರುವುದನ್ನು ಎಲ್ಲವನ್ನೂ ಒಪ್ಪಿಕೊಂಡು ಅಪ್ಪಿಕೊಂಡಹಾಗೆ, ಯೋಗಿ ಆದವರು ಎಲ್ಲರನ್ನೂ ಒಪ್ಪಿಕೊಳ್ಳಬೇಕು ಅವರನ್ನು ಆದರ್ಶವಾದಿಗಾಳಾಗಿ ಪರಿವರ್ತಿಸಬೇಕು.

ಈ ಹಂತವನ್ನು ಯೋಗಿಯಾಗಲಿ ರಾಮ್‌ದೇವ್ ಆಗಲಿ ಪಾಲಿಸಲು ಸಾಧ್ಯವೇ ಇಲ್ಲವೇನೋ! ಯುಪಿಯ ಮುಜಾಫರ್ ನಗರದಲ್ಲಿ ನಡೆದ ಕೋಮು ಗಲಭೆ, ಅದರ ಸತ್ಯಗಳನ್ನು ತೋರಿಸಲು ಮುಂದಾದ ವಿದ್ಯಾರ್ಥಿ ರೋಹಿತ್ ವೇಮುಲ ಹಾಗೂ ಜೆಎನ್‌ಯು ವಿದ್ಯಾರ್ಥಿಗಳ ಮೇಲೆ ನಡೆದ ದಾಳಿ, ಇದನ್ನು ಸಮರ್ಥಿಕೊಳ್ಳುವ ಸರ್ಕಾರ ಮತ್ತು ಇವರು ಆ ಪಕ್ಷದ ಅಭ್ಯರ್ಥಿ ಮತ್ತು ಬೆಂಬಲಿಗರಾಗಿದ್ದಾರೆ. ಅಂದರೆ ಎಲ್ಲರನ್ನೂ ಒಪ್ಪಿಕೊಳ್ಳದೇ ತಮ್ಮ ಧರ್ಮ, ತಾವು ನಂಬುವ ಸಂಸ್ಕೃತಿ- ಆಚರಣೆಯನ್ನು ಇತರರೂ ಒಪ್ಪಿಕೊಳ್ಳಬೇಕು ಎನ್ನವು ದೋರಣೆ ಪತಂಜಲಿಯ ನಿಯಮ ಹಂತದ ವಿರುದ್ಧವಾಗಿದೆ.

  1. ಆಸನ: ದೇಹ ಮತ್ತು ಮನಸ್ಸಿಗೆ ವ್ಯಾಯಾಮ (ಭಂಗಿ)

ಬಹುಶಃ ಯೋಗ ಸೂತ್ರಗಳಲ್ಲಿ ರಾಮ್‌ದೇವ್ ಸರಿಯಾಗಿ ನಿಭಾಯಿಸುತ್ತಿರುವ ಹಂತ ಇದೇ ಆಗಿದೆ. ಉತ್ತಮ ಯೋಗಾಸನದ ಪಟುಗಳಲ್ಲಿ ಬಾಬಾರಾಮ್‌ದೇವ್ ಕೂಡ ಒಬ್ಬರು ಎನ್ನಬಹುದು. ಆದರೆ ಕ್ಷಮಿಸಿ ಯೋಗಿ ಆಧಿತ್ಯನಾಥ್ ಇಲ್ಲೂ ಕೂಡ ಫೇಲ್ ಆಗುತ್ತಾರೆ!

  1. ಪ್ರಾಣಯಾಮ: ಉಸಿರಾಟದ ನಿರ್ವಾಹಣೆ

ಪ್ರಾಣಯಾಮ ಬಹಳ ಜನಪ್ರಿಯವಾದ ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮವೂ ಹೌದು. ಕೊರೊನಾ ಭಾರತದಲ್ಲಿ ಹರಡುವ ಸಂದರ್ಭದಲ್ಲಿ ಟಿವಿಗಳಲ್ಲಿ ಕಾರ್ಯಕ್ರಮ ನೀಡಲು ಬರುತ್ತಿದ್ದ ಬಾಬಾ ಕೊರೊನಾ ಇದೆಯೋ ಇಲ್ಲವೋ ಎಂದು ನೀವೆ ಪರೀಕ್ಷೆ ಮಾಡಿಕೊಳ್ಳಬಹುದು. 30-40 ಸೆಕೆಂಡ್ ಉಸಿರುಗಟ್ಟಿ ಇರಲು ಸಾಧ್ಯವಾದರೆ ನಿಮಗೆ ಕೊರೊನಾ ಇರುವುದಿಲ್ಲ ಎಂದು ಹೆಳಿದರು. ವಾಸ್ತವದಲ್ಲಿ ಲೈವ್ ಕಾರ್ಯಕ್ರಮದಲ್ಲಿ ಅವರಿಗೇ ಅಷ್ಟು ಹೊತ್ತು ಇರಲು ಸಾಧ್ಯವಾಗಲಿಲ್ಲ. ನಂತರ ಆರೋಗ್ಯ ಸಂಸ್ಥೆಯೊಂದು ಬಾಬಾರ ಈ ಪರೀಕ್ಷಾಕ್ರಮ ಸುಳ್ಳು ಎಂದು ಹೇಳಿತು. ಇದರ ಹೊರತಾಗಿ ಕಪಾಲಬಾತಿ ಪ್ರಾಣಯಾಮಕ್ಕೆ ರಾಮ್‌ದೇವ್ ಬಹಳ ಫೇಮಸ್ ಎಂಬ ಮಾತಿದೆ. ಪ್ರಾಣಯಾಮವನ್ನು ಅವರು ಚೆನ್ನಾಗಿಯೂ ಮಾಡಬಹುದು. ಆದರೆ ಆಧಿತ್ಯನಾಥ್ ಕುರಿತು ಹೀಗೆ ಎಂದು ಹೇಳಲು ಸಾಧ್ಯವಿಲ್ಲ.

  1. ಪ್ರತ್ಯಯ: (ಪಂಚೇಂದ್ರಿಯಗಳ ನಿಗ್ರಹ) ಕಣ್ಣು, ಮತ್ತು ಮನಸ್ಸನ್ನು ಮುಚ್ಚಿಕೊಂಡು ಅಂದರೆ ನಮ್ಮೊಳಗಿನ ಎಲ್ಲಾ ಪೂರ್ವನಿಯೋಜಿತ ಭಾವನೆಗಳನ್ನು ಅಳಿಸಿಹಾಕಿ ನಮ್ಮ ಸುತ್ತಲೂ ಇರುವ ಭೌತಿಕ ಜಗತ್ತಿಗೆ ನಮ್ಮ ಕಣ್ಣು ಮತ್ತು ಮನಸ್ಸುಗಳನ್ನು ತೆರೆದುಕೊಳ್ಳುವುದು. ಭೌತಿಕ ಜಗತ್ತಿನ ಎಲ್ಲಾ ಭಾವನೆಗಳನ್ನು ತನ್ನ ಅನುಭವಕ್ಕೆ ಪಡೆದುಕೊಳ್ಳುವುದು.

“ಒಬ್ಬ ನಿಜವಾದ ಕ್ರಾಂತಿಕಾರಿಗೆ, ಇರುವೆ ಅಳುವ ಶಬ್ದವೂ ಕೇಳಿಸಬೇಕು” ಎನ್ನುವ ಪ್ರಖ್ಯಾತ ಮಾತಿದೆ. ಬಾಬಾ ರಾಮ್‌ದೇವ್ ಮತ್ತು ಯೋಗಿ ಆಧಿತ್ಯಾನಾಥ್ ಕೇವಲ ಸಂನ್ಯಾಸಿ(?)ಗಳಲ್ಲ ಇಬ್ಬರು ರಾಜಕಾರಣಿಯೂ ಹೌದು. ಇದನ್ನು ಗಮನದಲ್ಲಿಟ್ಟುಕೊಂಡು ನೋಡಿದಾಗ ತಮ್ಮ ಪಂಚೇಂದ್ರಿಯಗಳನ್ನು ನಿಗ್ರಹಿಸಿ ತಮ್ಮ ಕಣ್ಣು ಮತ್ತು ಮನಸ್ಸನ್ನು ತಮ್ಮ ಸುತ್ತಲು ಇರುವ ಜಗತ್ತಿನ ಶೋಷಿತರ ಪರವಾಗಿ ಮಿಡಿಯಬೇಕಿತ್ತು. ಇದು ಅವರ ಯೋಗಿಗಳ ಜೀವನದ ಪ್ರತ್ಯಯ ಹಂತವಾದೀತು. ಕನಿಷ್ಠ ಅದರ ನೋವಿನ ಭಾವನೆಗಳಾದರೂ ತಮ್ಮ ಅರಿವಿಗೆ ಬರಬೇಕಿತ್ತು. ಆದರೆ ಹೆಚ್ಚಾಗುತ್ತಿರುವ ಭ್ರಷ್ಟಾಚಾರ, ಅತ್ಯಾಚಾರ, ದಲಿತರ ಮೇಲಿನ ದೌರ್ಜನ್ಯ, ಲಾಕ್‌ಡೌನ್ ಕಾರಣಕ್ಕೆ ಸಾವಿರಾರು ಕಿ.ಮೀ ನಡೆದ, ಪ್ರಾಣಬಿಟ್ಟ ಕಾರ್ಮಿಕರ ಕುರಿತು ಒಂದು ಶಬ್ದವೂ ಮಾತನಾಡಲಿಲ್ಲ ರಾಜಕಾರಣಿ ಯೋಗಿಗಳು. ಇನ್ನೂ ಭಯಾನಕವೆಂದರೆ ಇವುಗಳನ್ನು ಸಮರ್ಥಿಸಿದರು ಮತ್ತು ಸಮರ್ಥಿಸುವ ಪಕ್ಷದ ಪರ ನಿಂತುಬಿಟ್ಟರು.

  1. ಧಾರಣ: ಏಕಾಗ್ರತೆ. ಮನಸ್ಸನ್ನು ಸ್ಥಿಮಿತತೆಯಲ್ಲಿ ಇಟ್ಟುಕೊಳ್ಳುವುದು.

ಇದು ಯೋಗ ಸಾಧನೆ ಮಾಡುತ್ತಿರುವ ಯೋಗಿಗಳ ವೈಯಕ್ತಿಕ ಶಕ್ತಿಯ ಮೇಲೆ ಆಧಾರಿತವಾಗಿದ್ದು. ಬಾಬಾರಾಮ್‌ದೇವ್ ಮತ್ತು ಯೋಗಿ ಆಧಿತ್ಯಾನಾಥ್ ಇಬ್ಬರೂ ತಮ್ಮ ಕೆಲಸದಲ್ಲಿ ಏಕಾಗ್ರತೆಯನ್ನು ಸಾಧಿಸಿರಲೂಬಹುದು. ಆದರೆ ಆ ಏಕಾಗ್ರತೆ ಒಳ್ಳೆಯ ಕೆಲಸಗಳಿಗೆ ಬಳಕೆಯಾಗುತ್ತಿದೆಯೇ ಎಂಬುದು ಪ್ರಶ್ನೆ?

  1. ಧ್ಯಾನ: ಚಿಂತನೆ, ಪ್ರತಿಫಲನ, ಆಳವಾದ ತಪಸ್ಸು, ಒಂದು ಚಿಂತನೆಯ ಮೇಲೆ ನಿರಂತರವಾಗಿ ಕೇಂದ್ರೀಕೃತವಾದ ಗಮನ ಹರಿಸವುವುದು. ಜ್ಞಾನ ಮತ್ತು ಅರಿವಿನ ಪ್ರವಾಹದ ನಿತ್ಯ ಹರಿವು

ಈ ಹಂತವನ್ನು ರಾಮ್‌ದೇವ್ ಅವರಿಗೆ ಸಾಮಾಜಿಕವಾಗಿ ಸ್ವಲ್ಪ ವಿಸ್ತರಿಸಿ ನೋಡುವುದಾದರೆ ಲೋಕಪಾಲ್ ಮಸೂದೆ ಜಾರಿಗಾಗಿ, ಭ್ರಷ್ಟಾಚಾರ ವಿರೋಧಿ ಆಂದೋಲನ ನಡೆಯುವ ಸಂದರ್ಭದಲ್ಲಿ ಬಾಬಾ ಕೂಡ ಭಾಗಿಯಾಗಿ ಜನರನ್ನು ಭಾವಹಿಸಿಲು ಕರೆ ಕೊಟ್ಟರು. ಸಾವಿರಾರು ಜನರೂ ಸೇರಿದರು. ಮಸೂದೆ ಜಾರಿ ಆಗುವವರೆಗೂ ನಾನು ಹೋರಾಟವನ್ನು ಮುಂದುವರೆಸುತ್ತೇನೆ, ಉಪವಾಸ ಕೂರುತ್ತೇನೆ ಇದು ನನ್ನ ‘ತಪಸ್ಸು’ ಎಂದೂ ಹೇಳಿದರು. ಮತ್ತು ತಪಸ್ಸಿಗೆ ಕೂತರು ಕೂಡ. ಇದಕ್ಕಾಗಿ ಅವರ ಮೇಲೆ ದೆಹಲಿ ಪೋಲಿಸರು ಒಂದೆರೆಡು ಕೇಸುಗಳನ್ನು ಹಾಕುತ್ತಿದ್ದಂತೆಯೇ ‘ಹುಡುಗಿಯಂತೆ ವೇಷ ಮರೆಸಿ ಪ್ರತಿಭಟನಾ ಸ್ಥಳದಿಂದ ಪರಾರಿ ಆಗಿದ್ದರು ರಾಮ್‌ದೇವ್’. ಇನ್ನೂ 2014 ರಲ್ಲಿ ತಾವು ಪೂರ್ಣ ಬೆಂಬಲವನ್ನು ನೀಡಿದ್ದ ಪಕ್ಷ ಅಧಿಕಾರಕ್ಕೆ ಬಂದಮೇಲೆ ಅದರ ಮಾತೇ ಇಲ್ಲ! ಹೀಗೆ ಅವರ ತಪ್ಪಸ್ಸು ಪಲಾಯನಗೊಂಡಿತು.

  1. ಸಮಾಧಿ: ಮುಕ್ತಿ, ವಿಮೋಚನೆ

ಸಂನ್ಯಾಸಿ ಎಂದರೆ ಸರ್ವಸಂಗ ಪರಿತ್ಯಾಗಿ ಆಗಿರಬೇಕು ಎನ್ನವುದು ಹಳೆಯ ಮಾತು. ಸಮಾಧಿ ಎಂದರೂ ಎಲ್ಲಾ ಆಸೆ ಅಭಿಲಾಷೆಯಿಂದ ಹೊರಬಂದು ಉನ್ನತಮಟ್ಟವನ್ನು ಏರುವುದಾಗಿದೆ. ಆದರೆ ಯೋಗಿ ಆಧಿತ್ಯನಾಥ್ ಮತ್ತು ರಾಮ್‌ದೇವ್ ಇಬ್ಬರೂ ಸಹ ಹಣ, ಆಸ್ತಿ ಮತ್ತು ಅಧಿಕಾರದ ಹಿಂದೆ ಬಿದ್ದವರಾಗಿದ್ದಾರೆ.

ಭಾರತದ ವಿಶೇಷ ಪರಂಪರೆಯಾದ ಯೋಗವನ್ನು ಪತಂಜಲಿ ಹೆಸರಿನಲ್ಲಿ ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಐಡೆಂಟಿಟಿ ಗಳಿಸಿಕೊಂಡು ಅಪಾರ ಆಸ್ತಿಯೂ ಗಳಿಸಿಕೊಂಡಿರುವ ಬಾಬಾರಾಮ್‌ದೇವ್‌ಗೆ ಪೂಜ್ಯನೀಯ ಸ್ಥಾನವೂ ಇದೆ. ದೇಶದ ಪ್ರಧಾನ ಮಂತ್ರಿಯಿಂದ ಹಿಡಿದು ದೊಡ್ಡ ದೊಡ್ಡ ರಾಜಕಾರಣಿಗಳೂ ಇವರಿಗೆ ಮಣೆಹಾಕುತ್ತಾರೆ ಆದರೆ ಅಸಲಿಗೆ ಪತಂಜಲಿಯ ಹೆಸರಿನಲ್ಲಿ ಇವರು ಮಾಡುತ್ತಿರುವುದು ಕೇವಲ ವ್ಯಾಪಾರ ಮಾತ್ರ. ಅಷ್ಟೇ ಅಲ್ಲದೆ ಜಾಗತಿಕ ಮಟ್ಟದಲ್ಲಿ ನೈಜ ಪತಂಜಲಿ ಯೋಗ ಸೂತ್ರಗಳ ವಿರುದ್ಧವೇ ಕೆಲಸ ಮಾಡುತ್ತಾ ಭಾರತದ ಪರಂಪರೆ ಹಾಗೂ ಪತಂಜಲಿ ಯೋಗ ಸೂತ್ರಕ್ಕೇ ಅವಮಾನವನ್ನು ಮಾಡುತ್ತಿದ್ದಾರೆ.

ಗಂಡು ಮಗು ಶ್ರೇಷ್ಠ, ಬೆಳ್ಳಗಿನ ಚರ್ಮದ ಬಣ್ಣ ಶ್ರೇಷ್ಠ ಎನ್ನುವುದು ‘ಬ್ರಾಹ್ಮಣ್ಯ’. ಈ ಗಂಡು ಮಗು ಹಾಗೂ ಚರ್ಮದ ಬಣ್ಣಕ್ಕೆ ರಾಮ್‌ದೇವ್ ಔಷಧವನ್ನು ಮಾರುತ್ತಾರೆ. ಚಿಕ್ಕ ಚಿಕ್ಕ ಗುಡಿ ಕೈಗಾರಿಕೆಗಳನ್ನು, ಕರಕುಶಲಗಳನ್ನು ನುಂಗಿ ಬಂಡವಾಳದಿಂದ ಕಾರ್ಮಿಕರ ಶ್ರಮವನ್ನೂ ಲೂಟಿ ಮಾಡಿ ಆರ್ಥಿಕ ಅಸಮಾನತೆ ಹೆಚ್ಚಿಸುವುದು ‘ಬಂಡವಾಳವಾದ’. ಬಾಬಾ ಈಗ ಸ್ವದೇಶಿ ಹೆಸರಿನಲ್ಲಿ ಬಂಡವಾಳಶಾಹಿಯೂ ಆಗಿಬಿಟ್ಟರು. ಈ ಸಮಯದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾತನ್ನು ನಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು “ಬ್ರಾಹ್ಮಣ್ಯ ಮತ್ತು ಬಂಡವಾಳವಾದ ನಮ್ಮ ದೇಶದ ಎರಡು ಪ್ರಧಾನವಾದ ಶತೃಗಳು”.

ಸರೋವರ್ ಬೆಂಕಿಕೆರೆ 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣೆಗಾಗಿ ಕಾಗೇರಿಯಿಂದ ಮೇಸ್ತಾ ಪ್ರಕರಣ ಬಳಕೆ: ಹಿಂದುತ್ವ ಕಾರ್ಯಕರ್ತರ ಅಸಮಾಧಾನ

0
ಚುನಾವಣೆ ಬಂದಾಗ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಪರೇಶ್ ಮೇಸ್ತಾ ಪ್ರಕರಣದ ಪ್ಲೇ ಕಾರ್ಡ್ ಪ್ರಯೋಗಿಸುತ್ತಿದ್ದಾರೆ. ದಯವಿಟ್ಟು ನಿಮ್ಮ ರಾಜಕೀಯದ ತೆವಲಿಗೆ ಹಿಂದುಳಿದ ಯುವಕರನ್ನು ಬಳಸಿಕೊಳ್ಳಬೇಡಿ ಎಂದು ಹಿಂದುತ್ವ ಕಾರ್ಯಕರ್ತ ಶ್ರೀರಾಮ್...