Homeಅಂಕಣಗಳುಜನತೆ ಮೋದಿಯವರ ಸ್ವದೇಶಿ ಘೋಷಣೆಗೆ ಮರುಳಾಗಬಾರದು : ಎಚ್‌.ಎಸ್‌ ದೊರೆಸ್ವಾಮಿ

ಜನತೆ ಮೋದಿಯವರ ಸ್ವದೇಶಿ ಘೋಷಣೆಗೆ ಮರುಳಾಗಬಾರದು : ಎಚ್‌.ಎಸ್‌ ದೊರೆಸ್ವಾಮಿ

- Advertisement -
- Advertisement -

ಮೋದಿಯವರು ಆತ್ಮ ನಿರ್ಭರತೆ, ಸ್ವದೇಶಿ ಸ್ವಾವಲಂಬನೆ, ಸ್ವಾಭಿಮಾನದ ಮಾತನ್ನು ಆಡಿ ಭಾರತೀಯರನ್ನು ದಿಗ್ಬ್ರಮೆಗೊಳಿಸಿದ್ದಾರೆ. ಎಲ್ಲದಕ್ಕೂ ಪರ ರಾಷ್ಟ್ರಗಳನ್ನು ಅವಲಂಬನೆ ಮಾಡುವುದು ದೇಶದೃಷ್ಟಿಯಿಂದ ಸರಿಯಲ್ಲ, ಆತ್ಮ ನಿರ್ಭರತೆಗೆ ಒತ್ತು ಕೊಡಬೇಕು ಎಂಬುದು ಒಪ್ಪತಕ್ಕ ಮಾತು. ಆದರೆ ಈ ಮಾತನ್ನು ಮೋದಿಯವರು ಹರಿಬಿಟ್ಟಿರುವುದು ಅಭಾವ ವೈರಾಗ್ಯ ಕಾರಣದಿಂದ. ಬಹುರಾಷ್ಟ್ರೀಯ ಕಂಪನಿಗಳು ಆರ್ಥಿಕ ದುರ್ಭರತೆಯ ಕಾರಣದಿಂದ ಈ ಸಂದರ್ಭದಲ್ಲಿ ಬಂಡವಾಳ ತಂದು ಭಾರತದಲ್ಲಿ ಸುರಿಯುವುದಿಲ್ಲ ಎಂಬುದನ್ನು ಅರಿತು ಮೋದಿಯವರು ಆತ್ಮ ನಿರ್ಭರತೆಯ ಮಾತನ್ನು ಆಡಿದ್ದಾರೆ.

ಮೋದಿಯವರ ಆತ್ಮ ನಿರ್ಭರತೆಯ ಮಾತು ಗಾಂಧಿಜಿಯವರ ಸ್ವದೇಶಿ ಸಿದ್ಧಾಂತಕ್ಕೆ ಅಪಮಾನ ಮಾಡಿದಂತೆ ತೋರುತ್ತದೆ. ಅಂಕಣಕಾರ ಹರೀಶ್ ಬಿಜೂರ್ ಅವರು ಹೇಳುವಂತೆ ಆತ್ಮ ನಿರ್ಭರತೆ ಮಾತಿಗೆ ಎರಡು ಆಯಾಮಗಳಿವೆ. ಅವೆಂದರೆ ರಾಷ್ಟ್ರೀಯತೆ ಮತ್ತು ಆರ್ಥಿಕ ಸ್ವಾವಲಂಬನೆ. ಮೋದಿಯವರ ಪ್ರಕಾರ ಆತ್ಮ ನಿರ್ಭರತೆ ಬಹುರಾಷ್ಟ್ರೀಯ ಬ್ರಾಂಡಿನಿಂದ ಕೂಡಿದ ಸ್ವದೇಶಿ. ಇದು ಮೋದಿಯವರಿಗೆ ತಿಳಿಯದೆ ಇರುವ ಸಂಗತಿಯಲ್ಲ. ಈಗಾಗಲೇ ಭಾರತದಲ್ಲಿ ಸ್ಥಾಪನೆಯಾಗಿರುವ ಬಹುರಾಷ್ಟ್ರೀಯ ಉದ್ಯಮಗಳನ್ನು ಗಮನದಲ್ಲಿಟ್ಟುಕೊಂಡೇ ಮೋದಿ ಅವರು ಆತ್ಮನಿರ್ಭರತೆ ಮಾತನ್ನು ಹರಿಯಬಿಟ್ಟಿದ್ದಾರೆ. ಈ ಬ್ರಾಂಡಿನ ಉದ್ಯಮಗಳು ಹತ್ತಾರು ವರ್ಷಗಳಿಂದ ಭಾರತದಲ್ಲಿ ನಡೆಯುತ್ತಿವೆ. ಅವೆಲ್ಲ Made In India ಆದ್ದರಿಂದ ಅವು ಸ್ವದೇಶಿ ಎಂಬುದು ಮೋದಿ ಅವರ ವ್ಯಾಖ್ಯಾನ. ಈ ಯೋಜನೆಯನ್ನು ಪ್ರಕಟಿಸಿದ ಮೋದಿಯವರಿಗೆ ನಮ್ಮ ದೇಶದಲ್ಲಿ ಸ್ಥಾಪಿತವಾಗಿರುವ ಎಲ್ಲ ಬಹುರಾಷ್ಟ್ರೀಯ ಕಂಪನಿಗಳೂ ಸ್ಥಳೀಯವೇ.

ಜನರಿಗಂತೂ ಸ್ವದೇಶಿ-ವಿದೇಶಿ ಪದಾರ್ಥಗಳ ಕಲ್ಪನೆಯೇ ಇಲ್ಲ. ಸ್ವದೇಶಿ ಬಳಸಬೇಕೆಂಬ ಆತ್ಮಾಭಿಮಾನವೂ ಇಲ್ಲ. ಉದಾಹರಣೆಗೆ ನೆಸ್‍ಕೆಫೆ, ಕೋಕಾಕೋಲಾ, ಮ್ಯಾಗಿಶಾವಿಗೆಗಳಾಗಲಿ, ಅಡಿದಾಸ್ ಸಿದ್ದಪಡಿಸಿದ ಬಟ್ಟೆಗಳು, ಲಕ್ಸ್, 501 ಸೋಪುಗಳು ಬಾಟಾ ಷೂ ಮತ್ತು ಚಪ್ಪಲಿ ಮುಂತಾದ ದಿನಬಳಕೆಯ ವಸ್ತುಗಳಾಗಲಿ ವಿದೇಶಿಯೇ ಹೊರತು ಸ್ವದೇಶಿ ಅಲ್ಲ ಎಂಬ ಸಾಮಾನ್ಯ ತಿಳುವಳಿಕೆಯೂ ಜನಸಾಮಾನ್ಯರಲ್ಲಿ ಮಾತ್ರವಲ್ಲ ವಿದ್ಯಾವಂತರಲ್ಲಿ ಕೂಡ ಇದ್ದಂತೆ ತೋರುವುದಿಲ್ಲ.

ಜನರ ಈ ಅಜ್ಞಾನವನ್ನು ಮೋದಿಯವರು ಚೆನ್ನಾಗಿ ಬಳಸಿಕೊಳ್ಳಲು ನಿರ್ಧರಿಸಿದ್ದಾರೆ. ಇವಲ್ಲದೆ ನಾವು ಬೆಳಗಿನಿಂದ ರಾತ್ರಿಯವರೆಗೆ ಬಳಸುವ ಟೂತ್‍ಪೇಸ್ಟ್, ಟೂತ್‍ಬ್ರಷ್, ಬಟ್ಟೆಸೋಪು, ಸ್ನಾನದ ಸೋಪು, ಕುಂಕುಮ, ಕಾಡಿಗೆ, ಸ್ನೋ ಪೌಡರ್, ಲಿಪ್‍ಸ್ಟಿಕ್ ಎಲ್ಲ ಪರದೇಶದ ಕಂಪೆನಿಗಳು ತಯಾರಿಸುವವೇ. ನಮ್ಮ ದೇಶದಲ್ಲಿ ತಯಾರಾಗುವ ಬಹುರಾಷ್ಟ್ರೀಯ ಬ್ರಾಂಡ್‍ಗಳ ಪದಾರ್ಥಗಳು ಪರದೇಶದಿಂದ ಆಮದಾಗುವ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ವಸ್ತುಗಳು ಈಗ ಎಲ್ಲೆಲ್ಲೂ ದೊರೆಯುತ್ತವೆ. ಇವೆಲ್ಲ ಸ್ವದೇಶಿ ಅಲ್ಲ ಪರದೇಶಿ ಎಂಬುದನ್ನು ಜನ ತಿಳಿದುಕೊಂಡಿಲ್ಲ.

ಈಗ ಪರದೇಶದ ಕಂಪನಿಗಳು ಭಾರತಕ್ಕೆ ಬಂದು ತಮ್ಮ ಉದ್ಯಮಗಳನ್ನು ಆರಂಭ ಮಾಡಿರುವುದರಿಂದ ಮೋದಿಯವರಿಗೂ ಅವೆಲ್ಲ ಸ್ವದೇಶಿಯಂದೇ ಗೋಚರವಾಗುತ್ತಿದೆ. ಈಗ ಈ ಪರದೇಶಿ ಕಂಪನಿಗಳೂ ಲೋಕಲ್ಲು ದುಡಿಯುವ ಜನವೂ ಲೋಕಲ್. ಈ ಪದಾರ್ಥ ಬಳಸುವವರೂ ಲೋಕಲ್. ಈ ಬಹುರಾಷ್ಟ್ರೀಯ ಕಂಪನಿಗಳು ಬರುವ ಅಪಾರ ಲಾಭವನ್ನು ಡಿವಿಡೆಂಡ್ ರೂಪದಲ್ಲಿ ತಮ್ಮ ಷೇರುದಾರರಿಗೆ ಉದಾರವಾಗಿ ನೀಡಿ ಉಳಿದ ಪುಡಿಗಾಸು ಲಾಭವನ್ನು ಭಾರತದಲ್ಲೇ ಉಳಿಸಿಕೊಳ್ಳುತ್ತವೆ. ನಗನಾಣ್ಯದ ಇತರ ಉದ್ಯಮಗಳು ಅಂದರೆ ಅವು ದೇಶಿಯರು ಸ್ಥಾಪಿಸಿರುವ ಉದ್ಯಮಗಳು. ಇವು ಇಲ್ಲಿ ಉತ್ಪನ್ನವಾಗುವ ಎಲ್ಲ ಪದಾರ್ಥಗಳು ಭಾರತದಲ್ಲೇ ಮಾರಾಟವಾಗುವುದು.

ದಿನಕಳೆದಂತೆ ಈ ಮೂರು ಬಗೆಯ ಸಂಸ್ಥೆಗಳು ತಮ್ಮ ಕಾರ್ಯ ಚಟುವಟಿಕೆಯನ್ನೂ ವಿಸ್ತರಿಸುತ್ತ ಹೋಗುತ್ತವೆ. ವಿದೇಶಗಳಲ್ಲಿಯೇ ಇದ್ದುಕೊಂಡು ಭಾರತಕ್ಕೆ ಕಳಿಸುವ ವಸ್ತುಗಳನ್ನ ತಯಾರಿಸುವ ಕಂಪನಿಗಳು ಸ್ವದೇಶಿ ಬಗೆಗೆ ಒತ್ತುಕೊಟ್ಟು ಕಣ್ಕುಕ್ಕುವ ಜಾಹಿರಾತುಗಳನ್ನೂ ನೀಡಿ ತಮ್ಮ ಸರಕಿಗೆ ಮಾರುಕಟ್ಟೆ ವಿಸ್ತರಿಸುತ್ತದೆ. ದೇಶಿ ಕಂಪನಿಗಳು ದೇಶಿ ಪದಾರ್ಥಗಳನ್ನೇ ಬಳಸಿ ಎಂದು vocal to local ಘೋಷಣೆಯನ್ನು ಮೊಳಗಿಸುತ್ತದೆ. ಮೋದಿಯವರು ಎಂದಿನಂತೆ ಹೊಸ ಘೋಷಣೆಯೊಂದನ್ನು ಹರಿಯ ಬಿಟ್ಟಿದ್ದಾರೆ. ಇದು ಬರಿಯ ಘೋಷಣೆಯೇ ಹೊರತು ನಿಜವಾದ ಸ್ವದೇಶಿ ಚಳುವಳಿ ಕಟ್ಟುವ ಘೋಷಣೆಯಲ್ಲ.

ಚಳುವಳಿಯನ್ನು ಜನತೆ ಮಾತ್ರ ನಡೆಸಬಲ್ಲರು ಎಂಬುದು ಮೋದಿಯವರಿಗೆ ಗೊತ್ತು. ಜನತೆಯನ್ನು ಬೆಸ್ತು ಬೀಳಿಸಲು ಹೂಡಿರುವ ತಂತ್ರ ಇದು. ಖಂಡಿತವಾಗಿ ಇದು ಮೋದಿಯವರ ಫೋಕಸ್ ಚಳುವಳಿಯಲ್ಲ.

ಜನತೆ ಮೋದಿಯವರ ಘೋಷಣೆಗೆ ಮರುಳಾಗಬಾರದು. ಸ್ವದೇಶಿ ಬಗೆಗೆ ಗಾಂಧಿಜಿಗಿದ್ದ ಆಸೆ ಮೋದಿಯವರಿಗೆ ಖಂಡಿತ ಇಲ್ಲ. ಭಾರತದ ಆರ್ಥಿಕತೆ ಕುಸಿಯುತ್ತಿರುವಾಗ ಜನರ ಮನಸ್ಸನ್ನು ಬೇರೆ ಕಡೆಗೆ ಸೆಳೆಯುವ ಮತ್ತೊಂದು ತಂತ್ರ ಇದು.


ಇದನ್ನು ಓದಿ: ಮೋದಿ 2.1: ಹಿಂದೂ ರಾಷ್ಟ್ರೀಯವಾದದ ವಿಜೃಂಭಣೆಯೇ ಮೋದಿ ಸರ್ಕಾರದ ಸಾಧನೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಡ್ಯ | ಹೆಣ್ಣು ಭ್ರೂಣ ಹತ್ಯೆ ಪ್ರಕರಣ : ಮತ್ತೆ ಮೂವರ ಬಂಧನ

0
ಮಂಡ್ಯ ಜಿಲ್ಲೆಯ ಪಾಂಡವಪುರ, ಬೆಳ್ಳೂರು, ಮೇಲುಕೋಟೆ ಪೊಲೀಸ್ ಠಾಣೆಗಳಲ್ಲಿ ದಾಖಲಾದ ಭ್ರೂಣ ಪತ್ತೆ ಮತ್ತು ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ರಾಮಕೃಷ್ಣ ಅಲಿಯಾಸ್...