ಶುಕ್ರವಾರ (ನವೆಂಬರ್ 21) ಬೆಳಿಗ್ಗೆ ಬಾಂಗ್ಲಾದೇಶದಲ್ಲಿ 5.7 ತೀವ್ರತೆಯ ಭೂಕಂಪ ಸಂಭವಿಸಿದ್ದು, ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. 26 ಸೆಕೆಂಡುಗಳ ಕಾಲ ಕಂಪನ ಸಂಭವಿಸಿದ್ದು, ಪೂರ್ವ ಮತ್ತು ಈಶಾನ್ಯ ಭಾರತದ ಕೆಲವು ಭಾಗಗಳಲ್ಲೂ ಪರಿಣಾಮ ಕಂಡು ಬಂದಿದೆ.
ಕೋಲ್ಕತ್ತಾ ಸೇರಿದಂತೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ಕೆಲವು ಭಾಗಗಳಲ್ಲಿ ಭೂಕಂಪದ ಅನುಭವವಾಗಿದ್ದು, ಜನರು ಭಯಭೀತರಾಗಿ ಕಟ್ಟಡಗಳಿಂದ ಹೊರಗೆ ಬಂಧಿದ್ದಾರೆ. ಭಾರತದಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.
ಬಾಂಗ್ಲಾದೇಶ ಹವಾಮಾನ ಇಲಾಖೆ ಮತ್ತು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರವು ಭೂಕಂಪದ ತೀವ್ರತೆಯನ್ನು 5.7 ಎಂದು ಅಂದಾಜಿಸಿದೆ. ಆದರೆ, ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) 5.5 ತೀವ್ರತೆ ಗುರುತಿಸಿದೆ.
ಭೂಕಂಪದ ಕೇಂದ್ರಬಿಂದುವು ಢಾಕಾದಿಂದ ಸುಮಾರು 40 ಕಿಮೀ (25 ಮೈಲುಗಳು) ಪೂರ್ವಕ್ಕೆ ನರಸಿಂಗಡಿ ನಗರದ ಪತ್ತೆಯಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ಹೇಳಿದೆ.
ಭೂಕಂಪದ ಕೇಂದ್ರ ಬಿಂದು ಬಾಂಗ್ಲಾದೇಶದ ನರಸಿಂಗಡಿಯಲ್ಲಿ ಪತ್ತೆಯಾಗಿದೆ ಅಂದರೆ, ಢಾಕಾದಿಂದ 10 ಕಿ.ಮೀ ಪೂರ್ವ-ಆಗ್ನೇಯ (ಇಎಸ್‌ಇ) ದೂರ ಮತ್ತು ಭೂಮಿಯ 10 ಕಿ.ಮೀ ಆಳದಲ್ಲಿ ಕಂಡು ಬಂದಿದೆ ಎಂದು ಭಾರತದ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (ಎನ್‌ಸಿಎಸ್) ತಿಳಿಸಿದೆ.
ಕೋಲ್ಕತ್ತಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಜನರು ತಮ್ಮ ಮನೆ ಮತ್ತು ಕಚೇರಿಗಳಿಂದ ಹೊರಗೆ ಓಡಿಬಂದಿದ್ದಾರೆ. ಭೂಕಂಪದಿಂದ ಜನರು ಭೀತಿಗೊಳಗಾಗಿದ್ದಾರೆ ಎಂದು ಭಾರತದ ವರದಿಗಳು ಹೇಳಿವೆ.
ಬಾಂಗ್ಲಾದೇಶದ ಬಂದ ಆರಂಭಿಕ ವರದಿಗಳು ಮೂವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರೆ, ಢಾಕಾ ಮೂಲದ ಡಿಬಿಸಿ ಟೆಲಿವಿಷನ್ ಢಾಕಾದಲ್ಲಿ ಮಾತ್ರ ಆರು ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ. ಕಟ್ಟಡದ ಛಾವಣಿ ಮತ್ತು ಗೋಡೆಯ ಭಾಗಗಳು ಕುಸಿದು ಮೂವರು ಸಾವನ್ನಪ್ಪಿದ್ದಾರೆ ಮತ್ತು ಮೂವರು ಪಾದಚಾರಿಗಳು ತಡೆಗೋಡೆ ಮೈಮೇಲೆ ಬಿದ್ದು ಸಾವಿಗೀಡಾಗಿದ್ದಾರೆ ಎಂದು ಹೇಳಿದೆ.
ಢಾಕಾದಾದ್ಯಂತ ಸಂಭವಿಸಿದ ದುರ್ಘಟನೆಗಳಲ್ಲಿ ನೂರಾರು ಜನರು ಗಾಯಗೊಂಡಿದ್ದಾರೆ. ಭೂಕಂಪದ ಸಮಯದಲ್ಲಿ ಕಟ್ಟಡಗಳು ತೀವ್ರವಾಗಿ ಕಂಪಿಸಿವೆ. ಜನರು ಮನೆ ಕಚೇರಿಗಳು ಮತ್ತು ಬಹುಮಹಡಿ ಕಟ್ಟಡಗಳಿಂದ ಹೊರಗೆ ಓಡಿಬಂದು, ಬಯಲು ಪ್ರದೇಶಗಳಲ್ಲಿ ಜಮಾಯಿಸಿದ್ದಾರೆ ಎಂದು ವರದಿ ವಿವರಿಸಿದೆ.
ಭಾರತ ಮತ್ತು ಯುರೇಷಿಯಾ ಟೆಕ್ಟೋನಿಕ್ ಪ್ಲೇಟ್‌ಗಳ ಡಿಕ್ಕಿಯಿಂದಾಗಿ ಉತ್ತರ ಮತ್ತು ಆಗ್ನೇಯ ಬಾಂಗ್ಲಾದೇಶಗಳನ್ನು ಭೂಕಂಪ ಪೀಡಿತ ವಲಯಗಳೆಂದು ಗುರುತಿಸಲಾಗಿದೆ. ಶುಕ್ರವಾರದ ಭೂಕಂಪ ಸಂಭವಿಸಿದ ಸೆಂಟ್ರಲ್ ರೀಜನ್ ಸಾಮಾನ್ಯವಾಗಿ ಕಡಿಮೆ ಭೂಕಂಪ ಸಂಭವಿಸುವ ಪ್ರದೇಶ ಯುಎಸ್‌ಜಿಎಸ್ ತಿಳಿಸಿದೆ.


