ಈಶಾನ್ಯ ದೆಹಲಿ ಗಲಭೆ ಪ್ರಕರಣದಲ್ಲಿ 36 ಗಂಟೆಗಳ ಹಿಂದೆ ಜಾಮೀನು ಪಡೆದಿದ್ದರೂ ವಿದ್ಯಾರ್ಥಿ ಹೋರಾಟಗಾರರಾದ ನತಾಶಾ ನರ್ವಾಲ್, ದೇವಂಗಾನಾ ಕಾಳಿತಾ ಮತ್ತು ಆಸಿಫ್ ಇಕ್ಬಾಲ್ ತನ್ಹಾ ಅವರನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಇದೀಗ ತಮ್ಮನ್ನು ಬಂಧನದಿಂದ ತಕ್ಷಣ ಬಿಡುಗಡೆ ಮಾಡುವಂತೆ ಕೋರಿ ದೆಹಲಿ ಹೈಕೋರ್ಟ್ ಕದ ತಟ್ಟಿದ್ದಾರೆ.
ಕಳೆದ ವರ್ಷ ನಡೆದ ದೆಹಲಿ ಗಲಭೆಯಲ್ಲಿ ಪಿಂಜ್ರಾ ತೋಡ್ ಕಾರ್ಯಕರ್ತರಾದ ನತಾಶಾ, ದೇವಂಗಾನಾ ಮತ್ತು ವಿದ್ಯಾರ್ಥಿ ಹೋರಾಟಗಾರ ಆಸಿಫ್ ಅವರ ಕೈವಾಡವಿದೆ ಎಂದು ಆರೋಪಿಸಿ ಅವರ ವಿರುದ್ಧ ಯುಎಪಿಎ ಭಯೋತ್ಪಾದನಾ ವಿರೋಧಿ ಕಾನೂನಿನ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಇದನ್ನೂ ಓದಿ: ದೆಹಲಿ ಗಲಭೆ ಪ್ರಕರಣ: ನತಾಶಾ ನರ್ವಾಲ್, ದೇವಂಗನಾ ಕಾಳಿತ, ಆಸಿಫ್ ಇಕ್ಬಾಲ್‌ಗೆ ಜಾಮೀನು
ಬುಧವಾರ, ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರವೀಂದರ್ ಬೇಡಿ ಅವರು ಮೊದಲು ಪಟ್ಟಿ ಮಾಡಲಾಗಿರುವ ಭಾರಿ ಜಾಮೀನು ಅರ್ಜಿಗಳನ್ನು ಉಲ್ಲೇಖಿಸಿ ಆರೋಪಿಗಳನ್ನು ತಕ್ಷಣ ಬಿಡುಗಡೆ ಮಾಡುವ ಬಗ್ಗೆ ಆದೇಶ ಹೊರಡಿಸುವುದನ್ನು ಮುಂದೂಡಿದ್ದರು.
ಹೈಕೋರ್ಟ್ ಜಾಮೀನು ಆದೇಶ ನೀಡಿದ ನಂತರ, ಮೂವರು ವಿದ್ಯಾರ್ಥಿಗಳು ಜಾಮೀನಿನ ಮೇಲೆ ತಕ್ಷಣ ಬಿಡುಗಡೆಗಾಗಿ ನಗರ ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಿದರು. ಆದರೆ ದೆಹಲಿ ಪೊಲೀಸರ ವಿನಂತಿಯ ಮೇರೆಗೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರವೀಂದರ್ ಬೇಡಿ ಅವರು ಅವರನ್ನು ಬಿಡುಗಡೆ ಮಾಡಿರಲಿಲ್ಲ.
ನತಾಶಾ ನರ್ವಾಲ್ ಮತ್ತು ದೇವಂಗನಾ ಕಾಳಿತಾ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಸಂಶೋಧನಾ ವಿದ್ಯಾರ್ಥಿಗಳಾಗಿದ್ದಾರೆ. ಪಿಂಜ್ರಾ ತೋಡ್ ಎಂಬ ಸಂಘಟನೆಯ ಸದಸ್ಯರಾದ ಇವರು ಮೇ 2020 ರಿಂದಲೂ ಬಂಧನದಲ್ಲಿದ್ದಾರೆ. ಆಸಿಫ್ ಇಕ್ಬಾಲ್ ತನ್ಹಾ ಅವರು ಬಿ.ಎ. ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಪದವಿ ಅಭ್ಯಾಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ತಂದೆಯ ಸಾವಿನ ಬಳಿಕ ಜಾಮೀನು ಪಡೆದ ಸಾಮಾಜಿಕ ಕಾರ್ಯಕರ್ತೆ ನತಾಶಾ ನರ್ವಾಲ್



ಈ ಮೂವರು ವಿದ್ಯಾರ್ಥಿಗಳನ್ನು ಈ ಕೂಡಲೇ ಬಿಡುಗಡೆ ಮಾಡಬೇಕು.