ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಶಾಲಾ ವಿದ್ಯಾರ್ಥಿಗಳ ನಡುವಿನ ಜಗಳದ ನಂತರ ಬಾಲಕನೋರ್ವ ಸಾವನ್ನಪ್ಪಿದ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
ಮಾರ್ಚ್ 1ರಂದು ನಡೆದ ಎರಡು ಶಾಲೆಗಳ ವಿದ್ಯಾರ್ಥಿಗಳ ಮಾರಾಮಾರಿಯ ಬಳಿಕ ಮೊಹಮ್ಮದ್ ಶಹಬಾಝ್ ಎಂಬ 16 ವರ್ಷದ ಬಾಲಕ ಅಸ್ವಸ್ತಗೊಂಡಿದ್ದರು. ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.
ಪ್ರಕರಣ ತನಿಖೆ ಚುರುಕುಗೊಳಿಸಿರುವ ಪೊಲೀಸರು ಶಹಬಾಝ್ ಮೇಲೆ ದಾಳಿ ನಡೆಸಲು ಬಳಸಲಾಗಿದೆ ಎನ್ನಲಾದ ‘ನನ್ಚಾಕು’ ಎಂಬ ಆಯುಧವನ್ನು ವಶಕ್ಕೆ ಪಡೆದಿದ್ದಾರೆ.
‘ನನ್ಚಾಕು’ ಎಂಬುದು ಕರಾಟೆ ಮತ್ತು ಕೊಬುಡೊಗೆ ಸಂಬಂಧಿಸಿದ ಸಮರ ಕಲೆಗಳ ಆಯುಧವಾಗಿದೆ. ಇದನ್ನು ಸಾಂದರ್ಭಿಕವಾಗಿ ಟೇಕ್ವಾಂಡೋ, ಕುಂಗ್ ಫೂ ಮತ್ತು ಇತರ ಆಧುನಿಕ ಸಮರ ಕಲೆಗಳ ಶಸ್ತ್ರಾಸ್ತ್ರ ತರಬೇತಿಯಲ್ಲಿ ಬಳಸಲಾಗುತ್ತದೆ.
ಪ್ರಕರಣದ ಐವರು ಆರೋಪಿಗಳ ಮನೆಗಳಿಂದ ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್‌ಗಳು ಮತ್ತು ಇತರ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವರೆಲ್ಲರೂ ತಾಮರಶ್ಶೇ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳಾಗಿದ್ದಾರೆ.
ಕೋಝಿಕ್ಕೋಡ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕೆ.ಇ ಬೈಜು ಮಾಧ್ಯಮಗಳಿಗೆ ಮಾಹಿತಿ ನೀಡಿ, “ಈ ಕೊಲೆ ಯೋಜಿತ ಕೃತ್ಯ” ಎಂದು ತಿಳಿಸಿದ್ದಾರೆ. “ಶಹಬಾಝ್ ಮೇಲೆ ಹಲ್ಲೆ ನಡೆಸುವ ಮೊದಲು ಮತ್ತು ನಂತರ ಆರೋಪಿತ ವಿದ್ಯಾರ್ಥಿಗಳು ಈ ಸಂಬಂಧ ಚಾಟ್ ನಡೆಸಿದ್ದಾರೆ. ಇದು ಯೋಜಿತ ಅಪರಾಧ ಎಂಬುವುದನ್ನು ಬಹಿರಂಗಪಡಿಸಿದೆ” ಎಂದು ತಿಳಿಸಿದ್ದಾರೆ. ತನಿಖೆ ಮುಂದುವರೆದಿದ್ದು, ಪೊಲೀಸರು ಆರೋಪಿಗಳು ಸಂವಹನ ನಡೆಸಲು ಬಳಸುತ್ತಿದ್ದ ಮೊಬೈಲ್ ಫೋನ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಗುಂಪುಗಳನ್ನು ಪರಿಶೀಲಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಈ ನಡುವೆ, ಆರೋಪಿ ವಿದ್ಯಾರ್ಥಿಗಳಿಗೆ 10ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ನಿರ್ಧಾರವನ್ನು ವಿರೋಧಿಸಿ, ಕೇರಳ ವಿದ್ಯಾರ್ಥಿ ಸಂಘ (ಕೆಎಸ್‌ಯು) ಮತ್ತು ಮುಸ್ಲಿಂ ವಿದ್ಯಾರ್ಥಿ ಒಕ್ಕೂಟ (ಎಂಎಸ್‌ಎಫ್) ಆರೋಪಿಗಳನ್ನು ಬಂಧಿಸಿಟ್ಟಿರುವ ವೆಲ್ಲಿಮಡುಕುನ್ನುವಿನಲ್ಲಿರುವ ವೀಕ್ಷಣಾ ಗೃಹಕ್ಕೆ ಮೆರವಣಿಗೆ ನಡೆಸಿವೆ. ಮಾಧ್ಯಮಗಳೊಂದಿಗೆ ಮಾತನಾಡಿದ ಶಹಬಾಸ್ ತಂದೆ ಕೂಡ ಆರೋಪಿಗಳಿಗೆ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ನೀಡುವ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ನನ್ನ ಮಗ ಬದುಕಿದ್ದರೆ ಪರೀಕ್ಷೆ ಬರೆಯಲು ಸಾಧ್ಯವಾಗುತ್ತಿತ್ತು. ಯಾರಾದರು ವಿದ್ಯಾರ್ಥಿಗಳು ನಕಲು ಮಾಡಿದರೂ ಅವರಿಗೆ ಈ ಪರೀಕ್ಷೆ ಬರೆಯಲು ಅಥವಾ ಬೇರೆ ಯಾವುದೇ ಪರೀಕ್ಷೆ ಬರೆಯಲು ಅವಕಾಶ ಸಿಗುತ್ತಿರಲಿಲ್ಲ. ಇಲ್ಲಿ, ಈ ವಿದ್ಯಾರ್ಥಿಗಳು ಕೊಲೆಗಾರರು. ನಾವು ಇದನ್ನು ಒಪ್ಪಲು ಸಾಧ್ಯವಿಲ್ಲ. ಕನಿಷ್ಠ ಪಕ್ಷ ಈ ವರ್ಷ ಅವರಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಬಾರದು” ಎಂದು ಒತ್ತಾಯಿಸಿದ್ದಾರೆ.
ಫೆಬ್ರವರಿ 27ರಂದು ತಾಮರಶ್ಶೇರಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಮತ್ತು ಎಂ.ಜೆ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿತ್ತು. ಫೆಬ್ರವರಿ 23 ರಂದು ನಡೆದ ಟ್ಯೂಷನ್ ಸೆಂಟರ್‌ನ ವಿದಾಯ ಪಾರ್ಟಿಯಲ್ಲಿ ನಡೆದ ವಿವಾದದಿಂದಾಗಿ ಈ ಜಗಳ ನಡೆದಿತ್ತು.
ವರದಿಗಳ ಪ್ರಕಾರ, ಮೃತ ಶಹಬಾಸ್ ಟ್ಯೂಷನ್ ಸೆಂಟರ್‌ನ ವಿದ್ಯಾರ್ಥಿಯಾಗಿರಲಿಲ್ಲ. ಆದರೂ ಆತ, ಅವರ ಸ್ನೇಹಿತರ ಆಹ್ವಾನದ ಮೇರೆಗೆ ಹಾಜರಾಗಿದ್ದರು. ಈ ವಿಚಾರವಾಗಿ ನಡೆದ ಜಗಳದಲ್ಲಿ ಶಹಬಾಸ್‌ಗೆ ಯಾವುದೇ ಗಾಯಗಳಾಗಿರುವುದು ಕಂಡು ಬಂದಿರಲಿಲ್ಲ. ಆದರೆ, ಆಸ್ವಸ್ತಗೊಂಡಿದ್ದ ಅವರನ್ನು ಸ್ನೇಹಿತರು ಮನೆಗೆ ಕರೆದೊಯ್ದಿದ್ದರು. ರಾತ್ರಿ ಶಹಬಾಝ್ ವಾಂತಿ ಮಾಡಿಕೊಂಡಿದ್ದು, ಪ್ರಜ್ಞೆ ತಪ್ಪಿದೆ. ಅವರನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧರಾಗಿದ್ದಾರೆ.
ಪ್ರಕರಣ ಸಂಬಂಧ ಪೊಲೀಸರು ಐವರು ಅಪ್ರಾಪ್ತ ವಿದ್ಯಾರ್ಥಿಗಳನ್ನು ಬಂಧಿಸಿ ವೆಲ್ಲಿಮಡುಕುನ್ನುವಿನ ವೀಕ್ಷಣಾ ಗೃಹಕ್ಕೆ ಕಳುಹಿಸಿದ್ದಾರೆ.
ಉತ್ತರ ಪ್ರದೇಶ| ದಲಿತ ಕುಟುಂಬದ ಮದುವೆ ಮೆರವಣಿಗೆ ಮೇಲೆ ದಾಳಿ; ಇಬ್ಬರ ಬಂಧನ


