ಕೆಪಿಎಸ್ ಮ್ಯಾಗ್ನೆಟ್ ಹೆಸರಿನಲ್ಲಿ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿದೆ ಎಂದು ಎಡ ವಿದ್ಯಾರ್ಥಿ ಸಂಘಟನೆಗಳು ಆರೋಪಿಸಿವೆ.
ಬುಧವಾರ (ಜ.21) ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ಎಐಎಸ್ಎಫ್, ಎಸ್ಎಫ್ಐ, ಎಐಡಿಎಸ್ಓ, ಎಐಎಸ್ಎ ಹಾಗೂ ಕೆವಿಎಸ್ ಸಂಘಟನೆಗಳ ಪ್ರತಿನಿಧಿಗಳು ಸರ್ಕಾರದ ಆದೇಶ ಪ್ರತಿ ಬಿಡುಗಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಭಾಗದ 40 ಸಾವಿರಕ್ಕೂ ಅಧಿಕ ಶಾಲೆಗಳನ್ನು ಮುಚ್ಚಿ ಪಂಚಾಯಿತಿಗೊಂದರಂತೆ ಕೇವಲ 6 ಸಾವಿರ ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸ್ಥಾಪಿಸಲು ಕರ್ನಾಟಕ ರಾಜ್ಯ ಸರ್ಕಾರ ಮುಂದಾಗಿದೆ. ಮೊದಲ ಹಂತದಲ್ಲೇ 900 ಮ್ಯಾಗ್ನೆಟ್ ಶಾಲೆ ಮಾಡಲು ಆದೇಶಿಸಲಾಗಿದೆ ಎಂದು ಹೇಳಿದರು.
ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಾಗಿ ಪರಿವರ್ತಿಸಲು 1-5 ಕಿಲೋ ಮೀಟರ್ ವ್ಯಾಪ್ತಿಯ ಎಲ್ಲಾ ಶಾಲೆಗಳನ್ನು ವಿಲೀನ ಮಾಡಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈಗಾಗಲೇ ಚನ್ನಪಟ್ಟಣದ ಹೊಂಗನೂರಿನಲ್ಲಿ 50, 70, 80, ಹಾಗೂ 100 ದಾಖಲಾತಿ ಇರುವ ಶಾಲೆಗಳನ್ನು ವಿಲೀನ ಮಾಡಲು ಆದೇಶ ಹೊರಡಿಸಲಾಗಿದೆ. ಅಲ್ಲದೆ, ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳಿಗೆ ಸಾರಿಗೆ ವ್ಯವಸ್ಥೆ ಮಾಡುವುದು ಎಸ್‌ಡಿಎಂಸಿ, ಅಂದರೆ ಪೋಷಕರ ಜವಾಬ್ದಾರಿ ಎಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ. ಶಾಲೆಗಳನ್ನು ನಡೆಸಲು ಹೊರಗುತ್ತಿಗೆ ನೀಡಲಾಗುವುದು ಹಾಗೂ ಶಾಲೆಗಳು ತಮ್ಮ ಆದಾಯವನ್ನು ತಾವೇ ಉತ್ಪತ್ತಿ ಮಾಡಿಕೊಳ್ಳಬೇಕು ಎಂಬ ಗಂಭೀರ ಮತ್ತು ಆಘಾತಕಾರಿ ಅಂಶಗಳು ಸುತ್ತೋಲೆಯಲ್ಲಿ ಇವೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ತೆರೆಯಲು ಕಾರ್ಪೊರೇಟ್ ದೇಣಿಗೆಯನ್ನು ಪಡೆಯಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಆ ಶಾಲೆಗಳನ್ನು ಖಾಸಗಿ ಒಡೆತನಕ್ಕೆ ಒಪ್ಪಿಸುವ ಹುನ್ನಾರ ಇದರಲ್ಲಿ ಅಡಗಿದೆ ಎಂದು ವಿದ್ಯಾರ್ಥಿ ಸಂಘಟನೆಗಳ ಪ್ರತಿನಿಧಿಗಳು ಆರೋಪಿಸಿದರು.
ಈ ಉದ್ದೇಶಕ್ಕಾಗಿ ಏಷಿಯನ್ ಡೆವಲಪ್‌ಮೆಂಟ್ ಬ್ಯಾಂಕಿನಿಂದ 2,500 ಕೋಟಿ ರೂಪಾಯಿ ಸಾಲ ಪಡೆಯಲಾಗಿದೆ. ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕ ಭಾಗದ ಜನರ ಏಳಿಗೆಗಾಗಿ ಇರುವ ಕೆಕೆಆರ್‌ಡಿಬಿ ಮತ್ತು ಗಣಿಗಾರಿಕೆಯಿಂದ ಬದುಕು ಕಳೆದುಕೊಂಡ 10 ತಾಲೂಕಿನ ಜನರ ಪುನಶ್ಚೇತನಕ್ಕಾಗಿ ಇರುವ ಕೆಎಂಇಆರ್‌ಸಿ ನಿಧಿಗಳಿಂದ 700 ಕೋಟಿ ರೂಪಾಯಿ ಹಣ ಪಡೆಯಲಾಗಿದೆ. ಅಲ್ಪಸಂಖ್ಯಾತರ ನಿಧಿಯಿಂದ 100ಕೋಟಿ ಪಡೆಯಲಾಗಿದೆ. ಜನಕಲ್ಯಾಣಕ್ಕಾಗಿ ಬಳಸಬೇಕಾದ ನಿಧಿಯನ್ನು ಅದೇ ಜನರ ಮಕ್ಕಳು ಓದುವ ಗ್ರಾಮೀಣ ಶಾಲೆಗಳನ್ನು ಮುಚ್ಚಲು ಬಳಸಲಾಗುತ್ತಿದೆ. ಇದು ಈ ಜನರಿಗೆ ಮಾಡುತ್ತಿರುವ ವಿಶ್ವಾಸ ದ್ರೋಹವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಶಾಲಾ ಶಿಕ್ಷಣ ಇಲಾಖೆಯಲ್ಲಿ 59 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿ ಇವೆ. 21,000 ಶಾಲೆಗಳು ದುರಸ್ತಿ ಕಾಣದೆ ನಲುಗುತ್ತಿವೆ. 7 ಸಾವಿರ ಶಾಲೆಗಳಲ್ಲಿ ಏಕೋಪಾಧ್ಯಾಯ ಶಿಕ್ಷಕರಿದ್ದಾರೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದಲ್ಲಿನ ಶಾಲೆಗಳನ್ನು ಅಭಿವೃದ್ಧಿಪಡಿಸದೇ, ಶಾಲೆಗಳನ್ನು ವಿಲೀನ ಮಾಡಿ ಮುಚ್ಚಿ ಹಾಕುತ್ತಿರುವುದು ಶಿಕ್ಷಣ ವಿರೋಧಿ ನಿಲುವಾಗಿದೆ ಎಂದರು.
ಊರಿನ ಶಾಲೆಗಳನ್ನು ಕೊಂದು ಸ್ಥಾಪಿಸಲಾಗುತ್ತಿರುವ ಈ ಕೆಪಿಎಸ್ ಶಾಲೆಗಳಲ್ಲಿ ಕೌಶಲ್ಯದ ಹೆಸರಿನಲ್ಲಿ ಬಡ ಮಕ್ಕಳನ್ನು ಕಾರ್ಮಿಕರನ್ನಾಗಿಸುವ ವೃತ್ತಿ ಶಿಕ್ಷಣವನ್ನು 6ನೇ ತರಗತಿಯಿಂದಲೇ ಕಡ್ಡಾಯಗೊಳಿಸಲಾಗಿದೆ. ಮಣ್ಣಿನ ಹಣತೆ ತಯಾರಿಸುವುದು, ಅಡಿಕೆ ಸುಲಿಯುವುದು, ಟೈಲರಿಂಗ್ ಸೇರಿದಂತೆ ಮುಂತಾದ ಕಸುಬುಗಳನ್ನು ಕಲಿಸಲಾಗುವ ಪಠ್ಯಕ್ರಮವನ್ನು ಉದ್ಯಮ ಪಾಲುದಾರರೊಂದಿಗೆ ರೂಪಿಸಲು ಹೊರಟಿರುವ ಸರ್ಕಾರವು, ರೈತ-ಕಾರ್ಮಿಕರ ಮಕ್ಕಳನ್ನು ಮತ್ತೆ ಅವರ ಕಾರ್ಖಾನೆಗಳಲ್ಲಿ ಅಗ್ಗದ ಕೂಲಿಗೆ ದೂಡುವ ಹುನ್ನಾರವನ್ನು ರಚಿಸಿದೆ. ಶಿಕ್ಷಣವು ಚಾರಿತ್ರ್ಯ ನಿರ್ಮಾಣದ ಪ್ರಕ್ರಿಯೆಯಾಗಬೇಕೆಂಬ ದೇಶದ ಮಹಾನ್ ವ್ಯಕ್ತಿಗಳ ಆಶಯಕ್ಕೆ ತಿಲಾಂಜಲಿಯಿಟ್ಟು ಕನಿಷ್ಟ ವಿಷಯಗಳ ಜ್ಞಾನ ಹೊಂದಿರದ, ಚಿಂತನೆಯ ಪರಿವೆಯಿಲ್ಲದ ಯಂತ್ರಮಾನವರನ್ನು ಸೃಷ್ಟಿಸುವ ನಾಗರಿಕತೆ ವಿರೋಧಿ ಕೆಲಸಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ಮುಂದಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರದ ಈ ನಡೆ ವಿರುದ್ಧ ರಾಜ್ಯದಲ್ಲೆಡೆ ಜನ ಹೋರಾಟ ಭುಗಿಲೆದ್ದಿದೆ. ಸಾವಿರಾರು ಸಂಖ್ಯೆಯಲ್ಲಿ ಪಾಲಕರು ಹಾಗೂ ಗ್ರಾಮಸ್ಥರು ಬೀದಿಗಿಳಿದು ಊರಿನ ಶಾಲೆಗಳನ್ನು ಮುಚ್ಚುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ತೀವ್ರ ಜನವಿರೋಧದ ನಡುವೆಯೂ ಸರ್ಕಾರವು ಈ ಕುಕೃತ್ಯವನ್ನು ಮುಂದುವರೆಸಿದೆ. ಜನಾಭಿಪ್ರಾಯವನ್ನು ಧಿಕ್ಕರಿಸಿರುವ ಸರ್ಕಾರದ ಈ ನಿರಂಕುಶ ಮತ್ತು ಅಪ್ರಜಾತಾಂತ್ರಿಕ ನಡೆಯನ್ನು ಎಡ ವಿದ್ಯಾರ್ಥಿ ಸಂಘಟನೆಗಳು ಅತ್ಯುಗ್ರ ಪದಗಳಲ್ಲಿ ಖಂಡಿಸುತ್ತವೆ. ಈ ಕೂಡಲೇ ಕರಾಳ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಹಿಂಪಡೆಯಬೇಕು ಮತ್ತು ಶಿಕ್ಷಕರು ಹಾಗೂ ಸೌಲಭ್ಯಗಳ ಕೊರತೆಯಿಂದ ನರಳುತ್ತಿರುವ ರಾಜ್ಯದ ಸರ್ಕಾರಿ ಶಾಲೆಗಳಿಗೆ ಸಮರ್ಪಕ ಸೌಲಭ್ಯ ನೀಡಿ ಅಭಿವೃದ್ಧಿಪಡಿಸಬೇಕೆಂದು ರಾಜ್ಯದ ವಿದ್ಯಾರ್ಥಿಗಳು, ಶಿಕ್ಷಕರು, ಪಾಲಕರು ಹಾಗೂ ಶಿಕ್ಷಣ ಪ್ರೇಮಿ ಜನತೆಯ ಪರವಾಗಿ ಸರ್ಕಾರವನ್ನು ಆಗ್ರಹಿಸುತ್ತದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಐಎಸ್ಎಫ್ ರಾಜ್ಯಾಧ್ಯಕ್ಷೆ ವೀಣಾ ನಾಯಕ್, ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಿಜಯ್ ಕುಮಾರ್ ಟಿಎಸ್, ಎಐಡಿಎಸ್ಓ ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದ ಕೊಪ್ಪ, ಎಐಎಸ್ಎ ಜಿಲ್ಲಾ ಮಂಡಳಿ ಸದಸ್ಯ ಸುಶಾಂತ್, ಹಾಗೂ ಕೆವಿಎಸ್ ರಾಜ್ಯ ಕಾರ್ಯದರ್ಶಿ ದುರ್ಗೇಶ್ ಉಪಸ್ಥಿತರಿದ್ದರು.


