ನಿನ್ನೆ ನಡೆದ ದ್ವಿತೀಯ PUC ಪರೀಕ್ಷೆಯಲ್ಲಿ ಪಾಲ್ಗೊಂಡ ಬೆಂಗಳೂರಿನ ವಿದ್ಯಾರ್ಥಿನಿಯೊರ್ವಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದು ತೀವ್ರ ಆತಂಕಕ್ಕೆ ಒಳಗಾಗಿದ್ದು ಜೂನ್ 25 ರಿಂದ ನಡೆಯಬೇಕಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬೇಕಾ ಎಂಬ ಪ್ರಶ್ನೆಯನ್ನು ಮುನ್ನೆಲೆಗೆ ತಂದಿದೆ.
ಜಯನಗರ 4 ನೇ ಬ್ಲಾಕ್ ನಲ್ಲಿ ನಿನ್ನೆ PUC ಪರೀಕ್ಷೆ ಬರೆದ ವಿದ್ಯಾರ್ಥಿನಿಯೋರ್ವಳ ಕೊರೊನಾ ಪರೀಕ್ಷೆಯ ವರದಿ ಇಂದು ಬಿಡುಗಡೆಯಾಗಿದ್ದು ಆಕೆಗೆ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ವಿದ್ಯಾರ್ಥಿನಿ ಕಳೆದ ಒಂದು ವಾರದಿಂದ ಕ್ವಾರಂಟೈನ್‌ಗೆ ಒಳಗಾಗಿದ್ದರು. ಮೂರು ದಿನಗಳ ಹಿಂದೆ ಆಕೆಯ ರಕ್ತ ಮತ್ತು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಆದರೂ ಸಹ ಆಕೆ ಪರೀಕ್ಷೆ ತಪ್ಪಿಸಬಾರದೆಂಬ ಆತಂಕದಿಂದ ಪರೀಕ್ಷೆ ಹಾಜರಾಗಿದ್ದಾಳೆ. ಇಂದು ಪಾಸಿಟಿವ್ ಬಂದಿದ್ದು ದೊಡ್ಡ ಆತಂಕಕ್ಕೆ ಕಾರಣವಾಗಿದೆ.
Happy to inform you students are enthusiastically writing their II PU English exam, the only paper that was pending. I wish them all good luck, good health. Special thanks to teachers, healthcare officials & workers for near flawless arrangement. @CMofKarnataka pic.twitter.com/ixQ9j5M9mW
— S.Suresh Kumar, Minister – Govt of Karnataka (@nimmasuresh) June 18, 2020
ಈಗ ಆಕೆಯೊಂದಿಗೆ ಪರೀಕ್ಷೆ ಬರೆದ ಆ ಕೊಠಡಿಯಲಿದ್ದ ಎಲ್ಲಾ ವಿದ್ಯಾರ್ಥಿಗಳನ್ನೂ ಸಹ ಕ್ವಾರಂಟೈನ್ ಮಾಡುವುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೇ ಜೂನ್ 25 ರಿಂದ ಆರಂಭವಾಗಲಿರುವ ಮಹತ್ವದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ರಿಸ್ಕ್ ತೆಗೆದುಕೊಳ್ಳಬೇಕೆ ಎಂದು ಹಲವರು ಪ್ರಶ್ನಿಸುತ್ತಿದ್ದಾರೆ.
ಈ ಬಾರಿ SSLC ಪರೀಕ್ಷೆಯನ್ನು ತೆಗೆದುಕೊಳ್ಳಬಹುದಾದ ವಿದ್ಯಾರ್ಥಿಗಳ ಅಂದಾಜು ಸಂಖ್ಯೆ 8.5 ಲಕ್ಷ (ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್ ಸೈಟ್ ಮಾಹಿತಿಯಂತೆ). ಪರೀಕ್ಷೆಯ ನಿರ್ವಾಹಕ ಸಿಬ್ಬಂದಿ ಅಂದಾಜು 2.2 ಲಕ್ಷ. ಇವರಲ್ಲಿ ದುರದೃಷ್ಟವಶಾತ್ ಯಾರಿಗಾದರೂ ಸೋಂಕು ಉಂಟಾಗಿ ಅಲ್ಲಿಂದ ಹರಡಿದರೆ ಯಾರು ಜವಾಬ್ದಾರರು ಎಂಬ ಪ್ರಶ್ನೆ ಕುಟುಂಬದವರಿಗೆ ಕಾಡುತ್ತಿದೆ ಎಂದು ಚಿಂತಕರು ಆತಂಕ ವ್ಯಕ್ತಪಡಿಸಿದ್ದರು.
ಈಗಾಗಲೇ ತೆಲಂಗಾಣ ಮತ್ತು ತಮಿಳುನಾಡು ರಾಜ್ಯಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸದೇ ವಿದ್ಯಾರ್ಥಿಗಳಿಗೆ ಬಡ್ತಿ ನೀಡಲಾಗುತ್ತಿದೆ. ಆದರೆ ಕರ್ನಾಟಕ ಮಾತ್ರ ಪರೀಕ್ಷೆ ನಡೆಸಿಯೇ ಸಿದ್ಧ ಎಂದು ತೀರ್ಮಾನಿಸಿದೆ. ಕೇರಳದಲ್ಲಿ ಮೇ 28ಕ್ಕೆ ಉಳಿದಿದ್ದ ಮೂರು ವಿಷಯಗಳಲ್ಲಿ ಪರೀಕ್ಷೆ ನಡೆಸಿದೆ. ಅದೃಷ್ಟವಶಾತ್ ಯಾರೊಬ್ಬ ವಿದ್ಯಾರ್ಥಿಗೂ ಇದರಿಂದ ತೊಂದರೆಯಾದ ಪ್ರಕರಣಗಳು ವರದಿಯಾಗಿಲ್ಲ ಎಂದು ಅಲ್ಲಿನ ಸಚಿವರಾದ ಥಾಮಸ್ ಐಸಾಕ್ ಸ್ಪಷ್ಟಪಡಿಸಿದ್ದಾರೆ.
ಇಂದಿನ ಪರಿಸ್ಥಿತಿಯಲ್ಲಿ SSLC ಪರೀಕ್ಷೆ ನಡೆಸುವುದು ಸೂಕ್ತವಲ್ಲ : ಶಿಕ್ಷಣ ತಜ್ಞರು, ಹೋರಾಟಗಾರರ ಅಭಿಮತ
ರಾಜ್ಯದಲ್ಲಿ ಮತ್ತು ದೇಶದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲೇ ಇವೆ. ಇಂತಹ ಸಮಯದಲಿ ಪರೀಕ್ಷೆ ನಡೆಸುವುದು ಬೇಡ ಎಂದು ಮೇ ತಿಂಗಳಿನಲ್ಲಿಯೇ ಕರ್ನಾಟಕ ವಿದ್ಯಾರ್ಥಿ ಸಂಘಟನೆಗಳು, ಚಿಂತಕರು, ಶಿಕ್ಷಣ ತಜ್ಞರು ಆಗ್ರಹಿಸಿದ್ದರು. ಕೆಲವರು ಈ ವಿಚಾರವಾಗಿ ಕೋರ್ಟ್ ಮೆಟ್ಟಿಲು ಸಹ ಏರಿದ್ದರು. ಆದರೆ ಕೋರ್ಟ್ ಆ ಅರ್ಜಿಯನ್ನು ತಿರಸ್ಕರಿಸಿತ್ತು. ಕರ್ನಾಟಕ ಸರ್ಕಾರ ಸೂಕ್ತ ಮುನ್ನೆಚ್ಚರಿಕೆ ಮತ್ತು ಸಿದ್ಧತೆಗಳೊಂದಿಗೆ ಪರೀಕ್ಷೆ ನಡೆಸುತ್ತೇವೆ ಎಂದು ತೀರ್ಮಾನಿಸಿದೆ.
ಈಗ ನಿನ್ನೆ ಪರೀಕ್ಷೆ ಬರೆದ ಒಬ್ಬ ವಿದ್ಯಾರ್ಥಿನಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತನ್ನ ನಿಲುವನ್ನು ಮರುಪರಿಶೀಲನೆ ನಡೆಸುತ್ತದೆಯೇ ಅಥವಾ ಭಾರೀ ಮುನ್ನೆಚ್ಚರಿಕೆಗಳೊಂದಿಗೆ ಪರೀಕ್ಷೆ ನಡೆಸುತ್ತದೆಯೇ ಕಾದು ನೋಡಬೇಕಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲೂ SSLC ಪರೀಕ್ಷೆ ರದ್ದು: ವಿದ್ಯಾರ್ಥಿಗಳಿಗೆ ಮುಂಬಡ್ತಿ


