ಗುರು ಪೂರ್ಣಿಮಾ ಅಂಗವಾಗಿ ಆಯೋಜಿಸಿದ್ದ ಗುರುವಂದನಾ ಸಮಾರಂಭ ವೇಳೆ ಶಿಕ್ಷಕರ ಪಾದ ತೊಳೆಯುವಂತೆ ಕೇರಳದ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಒತ್ತಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಶಿಕ್ಷಣ ಸಚಿವ ಶಿವನ್ ಕುಟ್ಟಿ ಗರಂ ಆಗಿದ್ದು, ಅಧಿಕಾರಿಗಳಿಂದ ವರದಿ ಕೇಳಿದ್ದಾರೆ.
ಕಾಸರಗೋಡು ಮತ್ತು ಮಾವೇಲಿಕರದ ಎರಡು ಖಾಸಗಿ ಶಾಲೆಗಳಿಂದ ವಿವರಣೆ ಕೇಳಲಾಗಿದೆ. ವರದಿ ನೀಡುವಂತೆ ಶಿಕ್ಷಣ ಇಲಾಖೆ ಮಹಾ ನಿರ್ದೇಶಕರಿಗೆ ಸಚಿವ ಶಿವನ್ ಕುಟ್ಟಿ ಸೂಚಿಸಿದ್ದಾರೆ. ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಕೂಡ ಈ ವಿಷಯದಲ್ಲಿ ಮಧ್ಯಪ್ರವೇಶಿಸಿದೆ ಎಂದು onmanorama.com ವರದಿ ಮಾಡಿದೆ.
ಶನಿವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಚಿವ ಶಿವನ್ ಕುಟ್ಟಿ, ವಿದ್ಯಾರ್ಥಿಗಳಿಂದ ಶಿಕ್ಷರ ಪಾದ ತೊಳೆಯುವಂತೆ ಒತ್ತಾಯಿಸಿದ ಶಾಲೆಗಳ ಆಡಳಿತ ಮಂಡಳಿ ವಿರುದ್ದ ಕಿಡಿಕಾರಿದ್ದು, “ಇದು ಅನುಚಿತ ವರ್ತನೆ, ಅಲ್ಲದೆ ಪ್ರಜಾಪ್ರಭುತ್ವ ಮತ್ತು ಪ್ರಗತಿಪರ ಶಿಕ್ಷಣ ವ್ಯವಸ್ಥೆಯ ಮೌಲ್ಯಗಳಿಗೆ ವಿರುದ್ಧವಾಗಿದೆ” ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ, ಕಾಸರಗೋಡಿನ ಬಂದಡ್ಕದ ಸರಸ್ವತಿ ವಿದ್ಯಾಲಯದಲ್ಲಿ ಮತ್ತು ಆಲಪ್ಪುಝದ ಮಾವೇಲಿಕರದಲ್ಲಿರುವ ವಿದ್ಯಾಧಿರಾಜ ವಿದ್ಯಾಪೀಠಂ ಸೈನಿಕ ಶಾಲೆಯಲ್ಲಿ ಮಕ್ಕಳಿಂದ ಪಾದ ಪೂಜೆ ಮಾಡಲಿಸಲಾಗಿದೆ. ಇವೆರಡೂ ಸಿಬಿಎಸ್‌ಸಿ ಸಂಯೋಜಿತ ಶಾಲೆಗಳಾಗಿದ್ದು, ಭಾರತೀಯ ವಿದ್ಯಾ ನಿಕೇತನ ಇವುಗಳನ್ನು ನಿರ್ವಹಿಸುತ್ತಿದೆ.
ಭಾರತೀಯ ವಿದ್ಯಾ ನಿಕೇತನ ಆರ್‌ಎಸ್‌ಎಸ್‌ನ ಶೈಕ್ಷಣಿಕ ವಿಭಾಗವಾದ ವಿದ್ಯಾ ಭಾರತಿಯ (ವಿದ್ಯಾ ಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ) ಕೇರಳದ ಅಂಗ ಸಂಸ್ಥೆಯಾಗಿದೆ.
ಎರಡು ಶಾಲೆಗಳು ಮಾತ್ರವಲ್ಲದೆ ಕಾಸರಗೋಡು ಜಿಲ್ಲೆಯ ತ್ರಿಕರಿಪುರದ ಶ್ರೀ ಚಕ್ರಪಾಣಿ ವಿದ್ಯಾ ಮಂದಿರ, ಕುಂದಂಕುಝಿಯ ಹರಿಶ್ರೀ ವಿದ್ಯಾಲಯ, ಚೀಮೇನಿಯ ವಿವೇಕಾನಂದ ವಿದ್ಯಾ ಮಂದಿರ ಸೇರಿದಂತೆ ಇತರೆ ಖಾಸಗಿ ಶಾಲೆಗಳಲ್ಲೂ ಮಕ್ಕಳಿಂದ ಶಿಕ್ಷಕರ ಪಾದಗಳನ್ನು ತೊಳೆಯುವಂತೆ ಒತ್ತಾಯಿಸಲಾಗಿದೆ ಎಂದು ವರದಿಯಾಗಿದೆ.
ಕಾಸರಗೋಡಿನ ಬಂದಡ್ಕ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಮಾತ್ರವಲ್ಲದೆ, ಅತಿಥಿಗಳ ಪಾದಗಳನ್ನೂ ನೀರು ಹಾಕಿ ತೊಳೆದು, ನಂತರ ಹೂವು ಅರ್ಪಿಸಿ ಪೂಜೆ ಮಾಡಿದ ವಿಡಿಯೋ ವೈರಲ್ ಆದ ಬಳಿಕ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಕೆಲವೆಡೆ ಅತಿಥಿಗಳ ಹೆಸರಿನಲ್ಲಿ ಮಕ್ಕಳು ಸ್ಥಳೀಯ ಆರ್‌ಎಸ್‌ಎಸ್, ಬಿಜೆಪಿ ನಾಯಕರ ಪಾದಗಳನ್ನು ತೊಳೆದಿದ್ದಾರೆ ಎನ್ನಲಾಗಿದೆ.
ಡಿವೈಎಫ್‌ಐ ಮತ್ತು ಎಸ್‌ಎಫ್‌ಐ ಸಂಘಟನೆಗಳು ಮಕ್ಕಳು ಪಾದ ತೊಳೆದಿರುವುದನ್ನು ಬಲವಾಗಿ ಖಂಡಿಸಿವೆ. ಚೀಮೇನಿ ಶಾಲೆಯಲ್ಲಿ ವಿದ್ಯಾರ್ಥಿಗಳು ನೂರಾರು ಶಿಕ್ಷಕರ ಪಾದಗಳನ್ನು ತೊಳೆದಿದ್ದಾರೆ ಎಂದು ಡಿವೈಎಫ್‌ಐ ಆರೋಪಿಸಿದೆ. “ಈ ಬ್ರಾಹ್ಮಣ್ಯದ ಆಚರಣೆಗಳನ್ನು ಆರ್‌ಎಸ್‌ಎಸ್ ಬೆಂಬಲಿತ ಶಾಲೆಗಳಲ್ಲಿ ನಡೆಸಲಾಗಿದ್ದರೂ, ಇದು ನಮ್ಮ ರಾಜ್ಯಕ್ಕೆ ನಾಚಿಕೆಗೇಡಿನ ಸಂಗತಿ” ಎಂದು ಡಿವೈಎಫ್‌ಐ ಹೇಳಿಕೆಯಲ್ಲಿ ತಿಳಿಸಿದೆ.
ಆಲಪ್ಪುಝ ಜಿಲ್ಲೆಯ ಅಟ್ಟುವದಲ್ಲಿರುವ ವಿವೇಕಾನಂದ ವಿದ್ಯಾ ಪೀಠದಲ್ಲಿ ವಿದ್ಯಾರ್ಥಿಗಳಿಗೆ ಬಿಜೆಪಿ ನಾಯಕನ ಪಾದಗಳನ್ನು ತೊಳೆಯುವಂತೆ ಒತ್ತಾಯಿಸಲಾಗಿದೆ ಎಂದು ಎಸ್‌ಎಫ್‌ಐ ಆರೋಪಿಸಿದೆ. ಎಸ್‌ಎಫ್‌ಐ ರಾಜ್ಯ ಸಮಿತಿ ಶಿಕ್ಷಣ ಸಚಿವ ಶಿವನ್‌ಕುಟ್ಟಿ ಮತ್ತು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ಆಯೋಗಕ್ಕೆ ದೂರು ಸಲ್ಲಿಸಿದೆ.
ಮಕ್ಕಳ ಹಕ್ಕುಗಳ ಆಯೋಗ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿದೆ. “ಬಂದಡ್ಕದ ಸರಸ್ವತಿ ವಿದ್ಯಾಲಯದ ಬಗ್ಗೆ ಆರಂಭಿಕ ದೂರು ಬಂದಿತ್ತು. ನಂತರ ರಾಜ್ಯಾದ್ಯಂತ ಹಲವು ಶಾಲೆಗಳಲ್ಲಿ ಈ ರೀತಿಯ ಕೃತ್ಯ ನಡೆದಿರುವುದು ನಮ್ಮ ಗಮನಕ್ಕೆ ಬಂದಿದೆ. ಆಯೋಗವು ಈ ಬಗ್ಗೆ ವರದಿ ಸಲ್ಲಿಸುವಂತೆ ಪೊಲೀಸರಿಗ ಸೂಚಿಸಿದೆ” ಎಂದು ಆಯೋಗದ ಕಾಸರಗೋಡು ಜಿಲ್ಲಾ ಉಸ್ತುವಾರಿ ಮೋಹನಕುಮಾರ್ ಬಿ ತಿಳಿಸಿದ್ದಾರೆ.
ಮಕ್ಕಳು ಪಾದ ತೊಳೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಂದಡ್ಕ ಶಾಲೆಯ ಮುಖ್ಯೋಪಾಧ್ಯಾಯಿನಿ ಪಿ.ಟಿ. ಉಮಾ “ಇದು ‘ವ್ಯಾಸ ಜಯಂತಿ’ಯ ಅಂಗವಾಗಿ ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಪದ್ದತಿ. ಆಹ್ವಾನಿತ ಗೌರವಾನ್ವಿತರ ಪಾದಗಳನ್ನು ಶಿಕ್ಷಕರು ಸ್ವತಃ ತೊಳೆದಿದ್ದಾರೆ. ವಿದ್ಯಾರ್ಥಿಗಳು ಅವರ ಪಾದಗಳಿಗೆ ಹೂವುಗಳನ್ನು ಮಾತ್ರ ಅರ್ಪಿಸಿದ್ದಾರೆ. ಈ ಮೂಲಕ ಮಕ್ಕಳು ಹಿರಿಯರ ಆಶೀರ್ವಾದ ಪಡೆದಿದ್ದಾರೆ. ಮಕ್ಕಳು ಪ್ರತಿದಿನ ಅವರ ಪೋಷಕರ ಪಾದಗಳನ್ನು ಮುಟ್ಟಿ ನಮಸ್ಕರಿಸಲು ಪ್ರೋತ್ಸಾಹಿಸಲಾಗುತ್ತದೆ. ಇಂತಹ ಅಭ್ಯಾಸಗಳ ಅನುಪಸ್ಥಿತಿಯು ಮಕ್ಕಳು ಮಾದಕ ದ್ರವ್ಯ ಸೇವನೆ ಬಲಿಯಾಗಲು ಮತ್ತು ಅನೈತಿಕ ವರ್ತನೆಗೆ ಕಾರಣವಾಗುತ್ತದೆ” ಎಂದು ಹೇಳಿರುವುದಾಗಿ ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಚೀಮೇನಿಯ ವಿವೇಕಾನಂದ ಶಾಲೆಯ ಶಿಕ್ಷಕರು ಮತ್ತು ಪೋಷಕರ ಸಮಿತಿಯ ಅಧಿಕಾರಿ ರಾಜೀವನ್ ಮಕ್ಕಳು ಪಾದ ತೊಳೆದಿರುವುದನ್ನು ಸಮರ್ಥಿಸಿಕೊಂಡಿದ್ದು, “ಇದು ಪ್ರಾಚೀನ ಮತ್ತು ದೈವಿಕ ಸನಾತನ ಧರ್ಮದ ಭಾಗವಾಗಿದೆ. ಈ ಆಚರಣೆಗೆ ಬರುವ ವಿರೋಧಗಳನ್ನು ನಾವು ‘ಒಗ್ಗಟ್ಟಿನಿಂದ ಪ್ರತಿರೋಧಿಸುತ್ತೇವೆ’ ಎಂಬುವುದಾಗಿ ಹೇಳಿದ್ದಾರೆ” ಎಂದು ನ್ಯೂಸ್ ಮಿನಿಟ್ ತಿಳಿಸಿದೆ.
ಊರಿಗೆ ರಸ್ತೆ ನಿರ್ಮಿಸುವಂತೆ ಗರ್ಭಿಣಿ ಬೇಡಿಕೆ: ಹೆರಿಗೆ ದಿನಾಂಕ ತಿಳಿಸಿ ಎಂದ ಬಿಜೆಪಿ ಸಂಸದ!