ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನ ಯೋಜನೆಯು (NOS) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಯ ಪಂಗಡ, ಭೂರಹಿತ ಕೃಷಿ ಕಾರ್ಮಿಕ ಕುಟುಂಬಗಳ ವಿದ್ಯಾರ್ಥಿಗಳಿಗಾಗಿ 1954ರಿಂದಲೂ ಜಾರಿಯಲ್ಲಿದೆ.
ಭಾರತದಾಚೆಯ ಉನ್ನತ-ಶ್ರೇಣಿಯ ವಿಶ್ವವಿದ್ಯಾಲಯಗಳಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು (ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಗಳು) ಪಡೆಯಲು ಈ ಯೋಜನೆಯಡಿ ಸಂಬಂಧಪಟ್ಟ ವಿದ್ಯಾರ್ಥಿಗಳು ಧನಸಹಾಯ ಪಡೆಯಬಹುದು. ಈ ವಿದ್ಯಾರ್ಥಿವೇತನ ಕಾರ್ಯಕ್ರಮವು 1954ರಲ್ಲಿ ಪ್ರಾರಂಭವಾಗಿ ಸುಮಾರು ಏಳು ದಶಕಗಳಿಂದ ಚಾಲ್ತಿಯಲ್ಲಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಸುಮಾರು 5.53 ಲಕ್ಷ ಭಾರತೀಯ ವಿದ್ಯಾರ್ಥಿಗಳು ವಿದೇಶದಲ್ಲಿ ಅಧ್ಯಯನ ಮಾಡುತ್ತಾರೆ. ಇದಕ್ಕೆ ಹೋಲಿಸಿದರೆ, NOS ಕಾರ್ಯಕ್ರಮದ ಗುರಿಯು ಕೇವಲ 100 ವಿದ್ಯಾರ್ಥಿಗಳಿಗೆ ಮಾತ್ರ ಇದೆ.
ಕಳೆದ ವರ್ಷದವರೆಗೆ, NOS ವಿದ್ಯಾರ್ಥಿವೇತನ ಕಾರ್ಯಕ್ರಮವು ಎಲ್ಲಾ ಪ್ರಮುಖ ವಿಭಾಗಗಳಿಗೂ ಅನ್ವಯವಾಗುತ್ತಿತ್ತು. ಆದರೆ ಈ ವರ್ಷ ಹೊರಡಿಸಲಾದ ಹೊಸ ನಿಯಮದ ಪ್ರಕಾರ, “ಭಾರತೀಯ ಸಂಸ್ಕೃತಿ, ಪರಂಪರೆ, ಇತಿಹಾಸ”ದ ಮೇಲಿನ ಸಾಮಾಜಿಕ ಅಧ್ಯಯನಗಳಿಗೆ ಸಂಬಂಧಿಸಿದ ವಿಷಯಗಳು ಅಥವಾ ಕೋರ್ಸ್‌ಗಳಿಗೆ ಸಾಗರೋತ್ತರ ವಿದ್ಯಾರ್ಥಿ ವೇತನ ಅನ್ವಯವಾಗುವುದಿಲ್ಲ.
ಇದನ್ನೂ ಓದಿರಿ: ರಾಜಧಾನಿಯಲ್ಲಿ ಭೋರ್ಗರೆದ ’ಭೀಮ ಸಾಗರ’: ರ್‍ಯಾಲಿಯನ್ನು ಚಿತ್ರಗಳಲ್ಲಿ ನೋಡಿ
ಇದಲ್ಲದೆ, ಯಾವ ವಿಷಯವು ಈ ವರ್ಗಗಳ ಅಡಿಯಲ್ಲಿ ಬರುತ್ತದೆ ಎಂಬುದರ ಕುರಿತು “NOSನ ಆಯ್ಕೆ ಮತ್ತು ಪರಿಶೀಲನಾ ಸಮಿತಿ ನಿರ್ಧರಿಸುತ್ತದೆ. ಈ ಹಠಾತ್ ಬದಲಾವಣೆಯನ್ನು ಅರ್ಜಿ ಸಲ್ಲಿಸಲು ಕೇವಲ ಎರಡು ತಿಂಗಳು ಬಾಕಿ ಇರುವ ಮೊದಲು ಮಾಡಲಾಗಿದೆ. ಮುಂಬರುವ ಶೈಕ್ಷಣಿಕ ವರ್ಷಕ್ಕೆ ಈ ವಿದ್ಯಾರ್ಥಿವೇತನವನ್ನು ಪಡೆಯಲು ಇಚ್ಛಿಸಿರುವವರಿಗೆ ದೊಡ್ಡ ಪೆಟ್ಟು ನೀಡಲಾಗಿದೆ.
ಈ ಹೊಸ ನಿಯಮವು ಭಾರತ ಜಾತಿ ವ್ಯವಸ್ಥೆ, ಹಿಂದೂಧರ್ಮ, ಭಾರತದಲ್ಲಿನ ಲಿಂಗ ತಾರತಮ್ಯ, ಬ್ರಾಹ್ಮಣ ಸಂಸ್ಕೃತಿ ಮತ್ತು ಸಂಪ್ರದಾಯ, ಜಾತಿಗೆ ಅಂಟಿಕೊಂಡ ಬಡತನ ಇತ್ಯಾದಿ ವಿಷಯಗಳ ಕುರಿತು ವಿದೇಶಿ ವಿವಿಗಳಲ್ಲಿ ಅಧ್ಯಯನ ಮಾಡದಂತೆ ತಡೆಯುತ್ತದೆ ಎಂದು ಅಂಬೇಡ್ಕರ್‌ವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿನ ಜಾತಿ ಮತ್ತು ಲಿಂಗ ತಾರತಮ್ಯವು ವಿದೇಶದಲ್ಲಿ ಟೀಕೆಗಳಿಗೆ ಒಳಗಾಗುತ್ತಿರುವಾಗ, ಪಾಶ್ಚಿಮಾತ್ಯ ದೇಶಗಳಲ್ಲಿ ಚರ್ಚೆಗಳನ್ನು ಹುಟ್ಟುಹಾಕಿರುವ ಸಂದರ್ಭದಲ್ಲಿ ರಾಷ್ಟ್ರೀಯ ಸಾಗರೋತ್ತರ ವಿದ್ಯಾರ್ಥಿವೇತನದ ಕುರಿತಾದ ಚರ್ಚೆಯು ಮುನ್ನೆಲೆಗೆ ಬಂದಿದೆ.
ಇದನ್ನೂ ಓದಿರಿ: ‘ಅಂಬೇಡ್ಕರ್‌ರಿಗೆ ಅವಮಾನವಾದರೆ ಶೋಷಿತ ಸಮುದಾಯ ಸುಮ್ಮನಿರುವುದಿಲ್ಲ’
2021-22ರವರೆಗೆ ಈ ನಿಬಂಧನೆ ಇರಲಿಲ್ಲ. ಯಾವುದೇ ವಿಷಯದ ಅಧ್ಯಯನಕ್ಕೆ ವಿದ್ಯಾರ್ಥಿವೇತನವನ್ನು ಈವರೆಗೆ ನೀಡಲಾಗುತ್ತಿತ್ತು. ಮುಖ್ಯವಾಗಿ ವಿಷಯದ ಆಯ್ಕೆ ಈಗ ಪರಿಶೀಲನಾ ಸಮಿತಿಯ ಮುಂದೆ ಬರುತ್ತದೆ.
ವಿದ್ಯಾರ್ಥಿವೇತನವು 2021-22 ರವರೆಗೆ ಅಂತಹ ಷರತ್ತುಗಳನ್ನು ಹೊಂದಿರಲಿಲ್ಲ. 2021-22ರ ಯೋಜನಾ ಮಾರ್ಗಸೂಚಿಯು ಯಾವುದೇ ಅಧ್ಯಯನ ಕ್ಷೇತ್ರಕ್ಕೆ ವಿದ್ಯಾರ್ಥಿವೇತನ ಲಭ್ಯವಿದೆ ಎಂದು ಹೇಳಿತ್ತು.
ಸಂಶೋಧನಾ ವಿಷಯಗಳ ಕುರಿತು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಪರಿಶೀಲನಾ ಸಮಿತಿಯಿಂದಾಗಿ ಯೋಜನೆಯ ವ್ಯಾಪ್ತಿಯನ್ನು ಮತ್ತಷ್ಟು ಕುಗ್ಗಿಸಬಹುದು ಎಂದು ಹಲವರು ಆತಂಕ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ಆರ್. ಸುಬ್ರಹ್ಮಣ್ಯಂ ಅವರಿಗೆ ಇಮೇಲ್ ಕಳುಹಿಸಿರುವ ದಿ ಟೆಲಿಗ್ರಾಫ್ ಪತ್ರಿಕೆಯು, “ಸರ್ಕಾರವು ಎತ್ತಿರುವ ಕಾಳಜಿಗಳ ಬಗ್ಗೆ ಸವಿವರವಾಗಿ ಹೇಳಬೇಕು” ಎಂದು ಒತ್ತಾಯಿಸಿದೆ. ಆದರೆ ಪ್ರತಿಕ್ರಿಯೆ ಈವರೆಗೆ ಬಂದಿಲ್ಲ ಎಂದು ಪತ್ರಿಕಾ ವರದಿ ಹೇಳಿದೆ.
ಕಳೆದ ವರ್ಷದವರೆಗೆ ಯೋಜನೆಯಡಿಯಲ್ಲಿ ಒಟ್ಟು ವಿದ್ಯಾರ್ಥಿವೇತನಗಳ ಸಂಖ್ಯೆ 100 ಆಗಿತ್ತು, ಇದನ್ನು 2022-23 ಅವಧಿಯಲ್ಲಿ 125ಕ್ಕೆ ಹೆಚ್ಚಿಸಲಾಗಿದೆ. ಕುಟುಂಬದ ವಾರ್ಷಿಕ ಆದಾಯ ರೂ. 8 ಲಕ್ಷಕ್ಕಿಂತ ಕಡಿಮೆ ಇರುವವರು ಅರ್ಜಿ ಸಲ್ಲಿಸಬಹುದು. ಸಚಿವಾಲಯವು ಅಭ್ಯರ್ಥಿಗಳಿಂದ ಮಾರ್ಚ್ 31ರವರೆಗೆ ಅರ್ಜಿಗಳನ್ನು ಕೋರಿದೆ.
ಯುಎಸ್‌ನಲ್ಲಿ ಸಂಶೋಧನೆಗೆ ಅರ್ಜಿ ಸಲ್ಲಿಸುವವರಿಗೆ, ಭಾರತ ಸರ್ಕಾರ ಸಂಪೂರ್ಣ ಬೋಧನಾ ಶುಲ್ಕವನ್ನು ಪಾವತಿಸುತ್ತದೆ. ಜೊತೆಗೆ 15,400 ಡಾಲರ್ ವಾರ್ಷಿಕ ನಿರ್ವಹಣೆ, 1,500 ಡಾಲರ್ ಕಾಂಟಿಜೆನ್ಸಿ ಭತ್ಯೆ, ವೈದ್ಯಕೀಯ ವಿಮೆ, ವಿಸಾ ಖರ್ಚು ವೆಚ್ಚಗಳನ್ನು ಭರಿಸುತ್ತದೆ.
ಐಐಎಂ ಬೆಂಗಳೂರಿನ ಪ್ರೊ.ದೀಪಕ್ ಮಲ್ಘನ್ ಅವರು “ಸರ್ಕಾರವು ಇಲ್ಲಿ ಸ್ಪಷ್ಟವಾಗಿ ಮತಿಭ್ರಮಣೆಯಾಗಿದೆ” ಎಂದು ಟೀಕಿಸಿದ್ದಾರೆ.
ನಾನುಗೌರಿ.ಕಾಂ ಜೊತೆ ಮಾತನಾಡಿದ ಉಪನ್ಯಾಸಕರೊಬ್ಬರು, “ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಸಾಗರೋತ್ತರ ವಿದ್ಯಾರ್ಥಿವೇತನವನ್ನು ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಜಾರಿಗೆ ತಂದಿದ್ದರು. ಇಲ್ಲಿಯವರೆಗೂ ಧನ ಸಹಾಯವನ್ನು ಸರ್ಕಾರ ಯಾವುದೇ ಅಡತಡೆ ಇಲ್ಲದೆ ಮಾಡುತ್ತಿತ್ತು. ಇಂಥದ್ದೇ ಸಂಶೋಧನೆ ಮಾಡಬೇಕು ಎಂದು ಸರ್ಕಾರ ಇಲ್ಲಿಯವರೆಗೆ ನಿರ್ಬಂಧ ವಿಧಿಸಿರಲಿಲ್ಲ. ಆದರೆ ಈಗ ಕೆಲವು ಮಾನವಿಕ ಹಾಗೂ ವಿಜ್ಞಾನ ವಿಷಯಗಳಿಗೆ ನಿರ್ಬಂಧ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಯಾವುದೇ ವಿದ್ಯಾರ್ಥಿಗೆ ಈ ವಿಷಯವನ್ನು ಓದಬಾರದೆಂದು ಈ ಸರ್ಕಾರ ಹೇಗೆ ನಿರ್ಬಂಧ ವಿಧಿಸಲು ಸಾಧ್ಯ?” ಎಂದು ಅವರು ಪ್ರಶ್ನಿಸಿದರು.
ಇದನ್ನೂ ಓದಿರಿ: ವಿಧಾನಸೌಧ ಚಲೋ: ಮೊಳಗಿದ ‘ಭೀಮ ಸಾಗರ’ದ ಆಗ್ರಹ


