ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕ ಮಗಂತಿ ಗೋಪಿನಾಥ್ ಅವರ ನಿಧನದಿಂದ ತೆರವಾದ ಹೈದರಾಬಾದ್‌ನ ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರಕ್ಕೆ ಮಂಗಳವಾರ (ನ.11) ಉಪ ಚುನಾವಣೆ ನಡೆಯಿತು.
ಉಪ ಚುನಾವಣೆಗೆ ಬಿಆರ್‌ಎಸ್ ಪಕ್ಷ ಮಗಂತಿ ಗೋಪಿನಾಥ್ ಅವರ ಪತ್ನಿ ಮಗಂತಿ ಸುನಿತಾ ಅವರನ್ನು ಕಣಕ್ಕಿಳಿಸಿದ್ದು, ಅನುಕಂಪದ ಆಧಾರದಲ್ಲಿ ಗೆಲ್ಲುವ ಲೆಕ್ಕಾಚಾರದಲ್ಲಿದೆ. ಕಾಂಗ್ರೆಸ್ ವಿ. ನವೀನ್ ಯಾದವ್ ಅವರಿಗೆ ಟಿಕೆಟ್ ನೀಡಿದ್ದು, ಇವರಿಗೆ ಎಐಎಂಐಎಂ ಬೆಂಬಲ ಇದೆ ಎಂದು ವರದಿಯಾಗಿದೆ. ಇನ್ನು ಬಿಜೆಪಿಯಿಂದ ಲಂಕಲ ದೀಪಕ್ ರೆಡ್ಡಿ ಎಂಬವರು ಸ್ಪರ್ಧೆ ಮಾಡಿದ್ದಾರೆ.
ಮತದಾನಕ್ಕೂ ಮುನ್ನ ‘ಮತಗಳ್ಳತನ’ ಬಯಲು
ಜುಲಿಬಿ ಹಿಲ್ಸ್ ಉಪ ಚುನಾವಣೆಯ ಮತದಾನಕ್ಕೂ ಮುನ್ನಾದಿನ, ಅಂದರೆ ನವೆಂಬರ್ 10, 2025ರಂದು ‘ಪೊಲಿ ಇಂಟೆಲ್ ಲ್ಯಾಬ್’ ಎಂಬ ಸಂಸ್ಥೆ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ 1,609 ನಕಲಿ ಮತದಾರರನ್ನು ಗುರುತಿಸಿರುವುದಾಗಿ ವೈಜ್ಞಾನಿಕ ಮತ್ತು ತಾಂತ್ರಿಕ ದಾಖಲೆಗಳೊಂದಿಗೆ ವರದಿ ಬಿಡುಗಡೆ ಮಾಡಿದೆ.
ಜುಬಿಲಿ ಹಿಲ್ಸ್ ಕ್ಷೇತ್ರದ 407 ಮತಗಟ್ಟೆಗಳಲ್ಲಿ 1,609 ನಕಲಿ ಮತದಾರರ ನೋಂದಣಿಗಳನ್ನು ಸಮಗ್ರ ವಿಶ್ಲೇಷಣೆಯು ಬಹಿರಂಗಪಡಿಸಿದೆ. ಇದನ್ನು ಎಪಿಕ್ (ಮತದಾರರ ಗುರುತಿನ ಚೀಟಿ) ಹೊಂದಾಣಿಕೆ ಮತ್ತು ಹಸ್ತಚಾಲಿತ (ಮ್ಯಾನುಯೆಲ್) ಪರಿಶೀಲನೆಯ ಮೂಲಕ ಪತ್ತೆ ಹಚ್ಚಲಾಗಿದೆ ಎಂದು ವರದಿ ಹೇಳಿದೆ.
407 ಮತಗಟ್ಟೆಗಳ ಪೈಕಿ 321 ಮತಗಟ್ಟೆಗಳಲ್ಲಿ (ಶೇ.79) ಕನಿಷ್ಠ 1ರಿಂದ ಗರಿಷ್ಠ 19ರವರೆಗೆ ನಕಲಿ ಮತದಾರರು ಪತ್ತೆಯಾಗಿದ್ದಾರೆ. ಹಬೀಬ್ ಫಾತಿಮಾ ನಗರದ ಮತಗಟ್ಟೆ ಸಂಖ್ಯೆ-115ರಲ್ಲಿ ಗರಿಷ್ಠ 19, ಹಬೀಬ್ ಫಾತಿಮಾ ನಗರದ ಮತಗಟ್ಟೆ ಸಂಖ್ಯೆ -103ರಲ್ಲಿ 18 ನಕಲಿ ಮತದಾರರು ಪತ್ತೆಯಾಗಿದ್ದಾರೆ ಎಂದು ವರದಿ ವಿವರಿಸಿದೆ.
🚨 Could 1,609 "potential" duplicate voters decide Jubilee Hills tomorrow Nov 11th 2025?
● 🤔 What do these patterns tell us about our electoral data?
If the winning margin is just 2000-3000 votes, could these duplicates be a game changer? Our computational analysis… pic.twitter.com/JYgDhEUsnY— Poli Intel Lab (@PoliIntelLab) November 10, 2025
ಚುನಾವಣಾ ಆಯೋಗದ ಪ್ರಕಾರ, ಜುಬಿಲಿ ಹಿಲ್ಸ್ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 4,01,379 ಮತದಾರರಿದ್ದಾರೆ. ಈ ಪೈಕಿ 2,08,558 ಪುರುಷರು ಮತ್ತು 1,92,795 ಮಹಿಳೆಯರು ಒಳಗೊಂಡಿದ್ದಾರೆ.
ಇವರಲ್ಲಿ, “ಒಂದು ಮತಗಟ್ಟೆಯಲ್ಲಿ ಒಬ್ಬ ವ್ಯಕ್ತಿಯ ಹೆಸರು ಅಥವಾ ಮಾಹಿತಿ ಒಂದಕ್ಕಿಂತ ಹೆಚ್ಚು ಬಾರಿ ಕಾಣಿಸಿಕೊಂಡಿರುವುದು, ಒಬ್ಬ ವ್ಯಕ್ತಿಯ ಮಾಹಿತಿ ವಿವಿಧ ಮತಗಟ್ಟೆಗಳಲ್ಲಿ ಪುನರಾವರ್ತನೆಯಾಗಿರುವುದು, ಒಬ್ಬರ ಹೆಸರು ಅಥವಾ ಮಾಹಿತಿ ಒಂದೇ ಮತಗಟ್ಟೆಯಲ್ಲಿ ಮೂರು ಬಾರಿ ದಾಖಲಾಗಿರುವುದು ಮತ್ತು ಒಬ್ಬ ವ್ಯಕ್ತಿಯ ಮಾಹಿತಿ ಹಲವು ವಿಭಿನ್ನ ಮತಗಟ್ಟೆಗಳಲ್ಲಿ ಹಲವು ಬಾರಿಗೆ ಕಾಣಿಸಿಕೊಂಡಿರುವುದು” ಹೀಗೆ ನಾಲ್ಕು ವಿಧದಲ್ಲಿ ನಕಲಿ ಮತದಾರರನ್ನು ಪತ್ತೆ ಹಚ್ಚಲಾಗಿದೆ ಎಂದು ವರದಿ ತಿಳಿಸಿದೆ.
ಒಂದೇ ರೀತಿಯ ಹೆಸರುಗಳು, ತಂದೆ, ತಾಯಿ, ಗಂಡ, ಹೆಂಡತಿಯ ಸಂಬಂಧಗಳು ಒಂದೇ ರೀತಿ ಇರುವುದು, ಸಂಬಂಧಿಕರ ಹೆಸರು ಒಂದೇ ರೀತಿ ಇರುವುದು, ಮನೆ ಸಂಖ್ಯೆ, ವಯಸ್ಸು ಮತ್ತು ಲಿಂಗ ಒಂದೇ ರೀತಿ ಇರುವುದನ್ನು ನಕಲಿ ಮತದಾರರ ಪತ್ತೆಗೆ ಪರಿಗಣಿಸಲಾಗಿದೆ ಎಂದು ಹೇಳಿದೆ.
ಎಲ್ಲಾ ನಕಲಿ ಮತದಾರರ ವಿವರವಾದ ಮಾಹಿತಿ, ಒಂದೇ ರೀತಿಯ ಗುರುತಿನ ಚೀಟಿಗಳ ಹೋಲಿಕೆಯ ದಾಖಲೆ ಮತ್ತು ಸಂಬಂಧಗಳು ಒಂದೇ ರೀತಿ ಇರುವ ಮಾಹಿತಿಯ ದಾಖಲೆಗಳನ್ನು ಸಂಸ್ಥೆ ಬಹಿರಂಗಪಡಿಸಿದೆ.
ಪೈಥಾನ್ ಪ್ರೋಗ್ರಾಮ್, ಸುಧಾರಿತ ಅಕ್ಷರ ಗುರುತಿಸುವ ತಂತ್ರ (advanced text-recognition algorithm) ಮತ್ತು ಮತದಾರರ ಗುರುತಿನ ಚೀಟಿ ಹೋಲಿಕೆ ತಂತ್ರ (EPIC matching techniques) ಇವುಗಳ ಮೂಲಕ ವೈಜ್ಞಾನಿಕವಾಗಿ ನಕಲಿ ಮತಗಳನ್ನು ಪತ್ತೆ ಹಚ್ಚಲಾಗಿದೆ ಎಂದು ಪೊಲಿ ಇಂಟೆಲ್ ಲ್ಯಾಬ್ ಸಂಸ್ಥೆ ತಿಳಿಸಿದೆ.


