ತನ್ನ’ಮತಗಳ್ಳತನ’ ಆರೋಪಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ಏಳು ದಿನಗಳಲ್ಲಿ ಪ್ರಮಾಣಪತ್ರ ಸಲ್ಲಿಸಬೇಕು. ಇಲ್ಲವಾದರೆ, ಅವರ ಆರೋಪಗಳನ್ನು ಆಧಾರರಹಿತ ಎಂಬುವುದಾಗಿ ಪರಿಗಣಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ಭಾನುವಾರ (ಆ.17) ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, “ಒಂದು ಕ್ಷೇತ್ರದ ಚುನಾವಣಾ ಅಕ್ರಮಗಳ ಬಗ್ಗೆ ಆ ಕ್ಷೇತ್ರದ ಮತದಾರ ಅಲ್ಲದವರು ದೂರು ದಾಖಲಿಸಲು ಬಯಸಿದರೆ, ಅವರ ಆರೋಪಕ್ಕೆ ಸಾಕ್ಷಿಯಾಗಿ ‘ಪ್ರಮಾಣಪತ್ರ’ ಸಲ್ಲಿಸಬೇಕು” ಎಂದಿದ್ದಾರೆ.
“ದೂರುದಾರರಿಂದ ಪ್ರಮಾಣಪತ್ರ ಸ್ವೀಕರಿಸದೆ 1.5 ಲಕ್ಷ ಮತದಾರರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಬೇಕೇ?” ಎಂದು ರಾಹುಲ್ ಗಾಂಧಿಯವರ ಆರೋಪಗಳ ಕುರಿತು ಜ್ಞಾನೇಶ್ ಕುಮಾರ್ ಪ್ರಶ್ನಿಸಿದ್ದು, “ಪ್ರಮಾಣಪತ್ರ ಸಲ್ಲಿಸಿ. ಇಲ್ಲವೇ, ಕ್ಷಮೆಯಾಚಿಸಿ” ಎಂದು ತಾಕೀತು ಮಾಡಿದ್ದಾರೆ.
“ಯಾರೋ ಏನೋ ಹೇಳುತ್ತಾರೆ ಎಂಬ ಕಾರಣಕ್ಕೆ ಸೂರ್ಯ ಪೂರ್ವದಲ್ಲಿ ಉದಯಿಸುವುದು ಬದಲಾಗುವುದಿಲ್ಲ” ಎಂದು ವ್ಯಂಗ್ಯವಾಡಿದ ಚುನಾವಣಾ ಆಯುಕ್ತ, “ಚುನಾವಣಾ ಆಯೋಗವಾಗಲಿ ಅಥವಾ ಮತದಾರರಾಗಲಿ ‘ನಕಲಿ ಮತದಾನ’ ಮತ್ತು ‘ಮತಗಳ್ಳತನ’ ಆರೋಪಗಳಿಗೆ ಹೆದರುವುದಿಲ್ಲ” ಎಂದು ಹೇಳಿದ್ದಾರೆ.
ಚುನಾವಣಾ ಆಯೋಗದ ಸುದ್ದಿಗೋಷ್ಠಿಯ ನಡುವೆ, ತಮ್ಮ ಆರೋಪಗಳಿಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಮತ್ತೊಮ್ಮೆ ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿದ್ದಾರೆ.
ಭಾನುವಾರ (ಆ.17) ಬಿಹಾರದ ಸಸಾರಾಮ್‌ನಲ್ಲಿ ತಮ್ಮ 1,300 ಕಿ.ಮೀ. ದೂರದ ‘ವೋಟರ್ ಅಧಿಕಾರ್ ಯಾತ್ರಾ’ (ಮತದಾರರ ಅಧಿಕಾರ ಯಾತ್ರೆ)ಗೆ ಚಾಲನೆ ನೀಡಿ ಮಾತನಾಡಿದ ರಾಹುಲ್ ಗಾಂಧಿ, “ಮತಗಳ್ಳತನ’ಕ್ಕೆ ಸಂಬಂಧಿಸಿದಂತೆ ನಾನು ಮಾಡಿರುವ ಆರೋಪಕ್ಕೆ ಚುನಾವಣಾ ಆಯೋಗ ‘ಪ್ರಮಾಣಪತ್ರ’ ಕೇಳಿದೆ. ಆದರೆ, ಬಿಜೆಪಿಯವರು ಮಾಡಿರುವ ಇದೇ ರೀತಿಯ ಆರೋಪಕ್ಕೆ ಪ್ರಮಾಣಪತ್ರ ಕೇಳಿಲ್ಲ” ಎಂದಿದ್ದಾರೆ.
ಬಿಹಾರದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರೋಧಿಸಿ, 2024ರ ಲೋಕಸಭೆ ಚುನಾವಣೆಯಲ್ಲಿ ದೇಶದಾದ್ಯಂತ ‘ಮತಗಳ್ಳತನ’ ನಡೆದಿದೆ ಎಂದು ಆರೋಪಿಸಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ಬಿಹಾರದಲ್ಲಿ ‘ವೋಟರ್ ಅಧಿಕಾರ್ ಯಾತ್ರಾ’ ಹಮ್ಮಿಕೊಂಡಿದೆ.
ಬಿಹಾರದಲ್ಲಿ ‘ವೋಟರ್ ಅಧಿಕಾರ್’ ಯಾತ್ರೆಗೆ ಚಾಲನೆ ನೀಡಿದ ರಾಹುಲ್ ಗಾಂಧಿ: ದೇಶದಾದ್ಯಂತ ಮತಗಳ್ಳನ ನಡೆದಿದೆ ಎಂದು ಆರೋಪ


