ಮಹಾರಾಷ್ಟ್ರ ರಾಜ್ಯಪಾಲರು ಬಿಜೆಪಿಗೆ ಸರ್ಕಾರ ರಚಿಸಲು ಆಹ್ವಾನಿಸಿರುವ ಪತ್ರ ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ನೀಡಿರುವ ಬೆಂಬಲ ಪತ್ರಗಳನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಸಾಲಿಸಿಟರ್ ತುಷಾರ ಮೆಹ್ತಾ ಅವರಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ಇದೇ ವೇಳೆ ಮಹಾರಾಷ್ಟ್ರ ಸರ್ಕಾರ, ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್, ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರಿಗೆ ಸುಪ್ರೀಂಕೋರ್ಟ್ ನೋಟೀಸ್ ನೀಡಿದೆ.
ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಬಹುಮತ ಸಾಬೀತು ಪಡಿಸುವಂತೆ ಸೂಚಿಸಿಲ್ಲ. ಇದರಿಂದ ದೇವೇಂದ್ರ ಫಡ್ನಾವಿಸ್‌ರವರಿಗೆ ದೊಡ್ಡ ರಿಲೀಫ್ ತಂದುಕೊಟ್ಟಿದೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿನ ರಾಜ್ಯಪಾಲರು ಅಮಿತ್ ಶಾರವರ ಹಿಟ್‌ಮ್ಯಾನ್ ಆಗಿದ್ದಾರೆ: ಕಾಂಗ್ರೆಸ್‌ನ 10 ಪ್ರಶ್ನೆಗಳು
“ವಿಶ್ವಾಸಮತ ಸಾಬೀತುಪಡಿಸುವುದೇ ಪ್ರಜಾಪ್ರಭುತ್ವದ ಹಾಲ್‌ಮಾರ್ಕ್ ಆಗಿದೆ. ಅದನ್ನು ಹೊರತುಪಡಿಸಿ ಬೇರೆ ಔಪಚಾರಿಕತೆಯ ಅಗತ್ಯವಿಲ್ಲ” ಎಂದು ಕಾಂಗ್ರೆಸ್ ಪ್ರತಿನಿಧಿಸಿದ ಅಭಿಷೇಕ್ ಸಿಂಗ್ವಿ ನ್ಯಾಯಾಲಯಕ್ಕೆ ತಿಳಿಸಿದ್ದರು.
ಅದಕ್ಕೆ ವಿರುದ್ಧವಾಗಿ, ರಾಜ್ಯಪಾಲರ ನಿರ್ಧಾರವನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸುವ ಅಗತ್ಯವಿಲ್ಲ ಎಂದು ವಾದ ಮಂಡಿಸಿತು. ಸುಪ್ರೀಂ ಸೂಚಿಸಿದ ಆ ಎರಡು ಪತ್ರಗಳನ್ನು ಹಾಜರುಪಡಿಸಲು ಹೆಚ್ಚಿನ ಸಮಯವನ್ನು ಬಿಜೆಪಿ ಕೇಳಿದರೂ ಕೂಡ, ನ್ಯಾಯಾಲಯ ಅದನ್ನು ತಿರಸ್ಕರಿಸಿದೆ.
ಎನ್‌ಸಿಪಿಯ 54 ಶಾಸಕರ ಬೆಂಬಲ ಬಿಜೆಪಿಗಿದೆ ಎಂದು ಬಿಜೆಪಿ ಹೇಳಿಕೊಂಡಿದೆ. ಇದು ಸಂಪೂರ್ಣ ಸುಳ್ಳು ಎಂದು ಎನ್‌ಸಿಪಿ ವಾದಿಸಿದೆ. ಮಾತ್ರವಲ್ಲದೇ ತನ್ನೊಂದಿಗೆ 50 ಶಾಸಕರು ಇದ್ದಾರೆ ಎಂದು ಎನ್‌ಸಿಪಿ ಹೇಳಿದೆ. ಅವರಲ್ಲಿ ಹೆಚ್ಚಿನವರು ನಿನ್ನೆ ಸಂಜೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು, ಸಭೆಯಲ್ಲಿ ಅಜಿತ್ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕ ಹುದ್ದೆಯಿಂದ ಕೆಳಗಿಳಿಸಲಾಗಿದೆ.
ಬಿಜೆಪಿ ಶಾಸಕರು ಮತ್ತು ಇಬ್ಬರು ಸ್ವತಂತ್ರರ ಪರವಾಗಿ ಹಾಜರಾದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು ರಾಜ್ಯಪಾಲರ ನಿರ್ಧಾರವನ್ನು ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ರಾಜ್ಯಪಾಲರು 361 ನೇ ವಿಧಿ ಅನ್ವಯ ವಿನಾಯಿತಿ ಹೊಂದಿದ್ದಾರೆ. ರಾಜ್ಯಪಾಲರ ವಿರುದ್ಧ ಯಾವುದೇ ಕ್ರಮಕ್ಕೆ ಸಂಪೂರ್ಣ ನಿರ್ಬಂಧವಿದೆ” ಎಂದು ಅವರು ಹೇಳಿದರು.
2018 ರಲ್ಲಿ ಕರ್ನಾಟಕದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಸುಪ್ರೀಂ ಕೋರ್ಟ್ ವಿಶ್ವಾಸಮತಯಾಚನೆಗೆ ಆದೇಶಿಸಿದ ನಂತರ, ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದ ಬಿಜೆಪಿಯ ಬಿಎಸ್ ಯಡಿಯೂರಪ್ಪ ಅವರು ತಮ್ಮ ಬಳಿ ಅಗತ್ಯ ಶಾಸಕರ ಬೆಂಬಲ ಇಲ್ಲವೆಂದು ಹೇಳಿ ರಾಜೀನಾಮೆ ನೀಡಿದ್ದರು.
ಇದನ್ನೂ ಓದಿ: ಮಹಾರಾಷ್ಟ್ರ ಸರ್ಕಾರ ರಚನೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್
154 ಶಾಸಕರನ್ನು ಒಟ್ಟಿಗೆ ಹೊಂದಿರುವ ಸೇನಾ, ಎನ್‌ಸಿಪಿ ಮತ್ತು ಕಾಂಗ್ರೆಸ್, ಸರ್ಕಾರ ರಚಿಸುವ ಹಕ್ಕನ್ನು ಹೊಂದಿದ್ದೇವೆ ಎಂದು ತಿಳಿಸಿದ್ದಾರೆ. “ಗೌರವಾನ್ವಿತ ರಾಜ್ಯಪಾಲರು ಪಕ್ಷಪಾತದ ರೀತಿಯಲ್ಲಿ ವರ್ತಿಸಿದ್ದಾರೆ ಮತ್ತು ರಾಜ್ಯಪಾಲರ ಉನ್ನತ ಕಚೇರಿಯನ್ನು ಅಪಹಾಸ್ಯ ಮಾಡಿದ್ದಾರೆ” ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಎನ್.ಸಿ.ಪಿ. ಮುಖಂಡ ನವಾಜ್ ಮಲ್ಲಿಕ್, ಸುಪ್ರೀಂ ಕೋರ್ಟ್ ಆದೇಶವನ್ನು ನಾವು ಸ್ವಾಗತಿಸುತ್ತೇವೆ. ನಮ್ಮ ಪಕ್ಷದ ಶಾಸಕರು ವಾಪಸ್ ಬಂದಿದ್ದಾರೆ. ಶರದ್ ಪವಾರ್ ಶಾಸಕರನ್ನು ಭೇಟಿ ಮಾಡಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಅಲ್ಪಮತದ ಸರ್ಕಾರವೆಂಬ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು. ಗೌರವಯುತವಾಗಿ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೊಂದೆಡೆ ನಾಪತ್ತೆಯಾಗಿದ್ದ ಶಾಸಕ ದೌಲತ್ ದರೋಡ ಪತ್ತಯಾಗಿದ್ದಾರೆ. ನಾನು ಸುರಕ್ಷಿತವಾಗಿದ್ದೇನೆ. ಎನ್.ಸಿ.ಪಿ ಪಕ್ಷದ ಗಡಿಯಾರದ ಗುರುತಿನ ಮೇಲೆ ಗೆದ್ದು ಬಂದು ಶಾಸಕನಾಗಿದ್ದೇನೆ. ಪಕ್ಷವನ್ನು ಬದಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಶರದ್ ಪವಾರ್ ಏನೇ ನಿರ್ಧಾರ ತೆಗೆದುಕೊಂಡರೂ ಅವರ ಜೊತೆ ಇರುತ್ತೇನೆ. ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಸ್ಪಷ್ಟಪಡಿಸಿದ್ದಾರೆ.


