ಈಗಾಗಲೆ ಪಂಚರಾಜ್ಯ ವಿಧಾನಸಭಾ ಚುನಾವಣೆಗಳು ಪ್ರಾರಂಭವಾಗಿದೆ. ಇಂದು ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಲ್ಲಿ ಎರಡನೆ ಹಂತದ ಚುನಾವಣೆ ನಡೆಯುತ್ತಿದೆ. ದೇಶವೆ ಕೂತೂಹಲದಿಂದ ಗಮನಿಸುತ್ತಿರುವ ಪಶ್ಚಿಮ ಬಂಗಾಳದ ಅತ್ಯಂತ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾದ ‘ನಂದಿಗ್ರಾಮ’ದಲ್ಲಿ ಇಂದು ಮತದಾನ ನಡೆಯುತ್ತಿದೆ. ಈ ವೇಳೆ ಅಲ್ಲಿ ಆಡಳಿತರೂಢ ಟಿಎಂಸಿ, ಹೊಸದಾಗಿ ಎದ್ದು ನಿಲ್ಲಲು ಪ್ರಯತ್ನಿಸುತ್ತಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿಕೂಟಗಳ ನಡುವೆ ಸ್ಪರ್ಧೆ ನಡೆಯುತ್ತಿದೆ.
ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿಕೂಟದ ಜೊತೆ ಸೇರದೆ ಎಡಪಕ್ಷವಾದ ಸೋಷಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ-ಕಮ್ಯುನಿಷ್ಟ್ (SUCI-C) ಪಕ್ಷವು ಏಕಾಂಗಿ ಹೋರಾಟ ನಡೆಸುತ್ತಿದೆ. ಪಕ್ಷವು ಪ್ರಸ್ತುತ ಐದು ರಾಜ್ಯಗಳಲ್ಲಿನ ವಿಧಾನಸಭಾ ಚುನಾವಣೆಗಳಲ್ಲಿ ಒಟ್ಟು 258 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಇದು ದೇಶದ ಪ್ರಮುಖ ಎಡಪಕ್ಷಗಳಾಗಿರುವ ಸಿಪಿಐಎಂ ಮತ್ತು ಸಿಪಿಐಗಿಂತಲೂ ಹೆಚ್ಚಾಗಿದೆ. ಸಿಪಿಐಎಂ 227 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದ್ದರೆ, ಸಿಪಿಐ 50 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.
SUCI-C ಪಕ್ಷವು ಪಶ್ಚಿಮ ಬಂಗಾಳದಲ್ಲಿ ಒಟ್ಟು 193 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಕೇರಳದಲ್ಲಿ 27 ಮತ್ತು ಅಸ್ಸಾಂನಲ್ಲಿ 29 ಕ್ಷೇತ್ರಗಳಲ್ಲಿ ಪಕ್ಷವು ಸ್ಪರ್ಧಿಸುತ್ತಿದೆ. ಈ ಎಲ್ಲಾ ಕ್ಷೇತ್ರದಲ್ಲಿ ಇತರ ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳದೆ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.
ಇದನ್ನೂ ಓದಿ: ಏಪ್ರಿಲ್ 1: ರಾಷ್ಟ್ರೀಯ ಜುಮ್ಲಾ ದಿನವನ್ನಾಗಿ ಆಚರಿಸಿದ ನೆಟ್ಟಿಗರು – #NationalJumlaDay ಟ್ರೆಂಡಿಂಗ್!
ಪಕ್ಷವು 2019 ರ ಸಂಸತ್ ಚುನಾವಣೆಯಲ್ಲಿ ಕೂಡಾ ಏಕಾಂಗಿಯಾಗಿ ಹೋರಾಟ ನಡೆಸಿತ್ತು. ಒಟ್ಟು 23 ರಾಜ್ಯಗಳಲ್ಲಿ 119 ಸ್ಥಾನಗಳಲ್ಲಿ ಹೋರಾಟ ಮಾಡಿತ್ತು. ಪಶ್ಚಿಮ ಬಂಗಾಳ ರಾಜ್ಯವೊಂದರಲ್ಲೇ ಪಕ್ಷದ 42 ಅಭ್ಯರ್ಥಿಗಳು ಇದ್ದರು. ಕೇರಳದಲ್ಲಿ 9, ಬಿಹಾರ, ಒರಿಸ್ಸಾ ಮತ್ತು ಕರ್ನಾಟಕದಲ್ಲಿ ತಲಾ 8, ಅಂಡಮಾನ್ ಮತ್ತು ಪಾಂಡಿಚೆರಿಯಲ್ಲಿ ತಲಾ ಒಬ್ಬೊಬ್ಬರು ಅಭ್ಯರ್ಥಿಗಳನ್ನು ಪಕ್ಷವು ಸ್ಪರ್ಧೆಗೆ ಇಳಿಸಿತ್ತು.
SUCI-C ದೇಶದಾದ್ಯಂತ 27 ರಾಜ್ಯಗಳಲ್ಲಿ ಘಟಕಗಳನ್ನು ಹೊಂದಿದೆಯಾದರೂ ಪಶ್ಚಿಮ ಬಂಗಾಳ, ಅಸ್ಸಾಂ, ಒರಿಸ್ಸಾ, ಜಾರ್ಖಂಡ್, ಹರಿಯಾಣ ಮತ್ತು ಕರ್ನಾಟಕದಲ್ಲಿ ಗಟ್ಟಿಯಾದ ಅಸ್ತಿತ್ವವನ್ನು ಹೊಂದಿದೆ. 2009 ರಲ್ಲಿ ಪಶ್ಚಿಮ ಬಂಗಾಳದಲ್ಲಿ SUCI-C ಒಬ್ಬ ಸಂಸದನನ್ನು ಹೊಂದಿತ್ತು.
ಪಕ್ಷದ ಪ್ರಧಾನ ಕಚೇರಿ ಕೋಲ್ಕತಾದಲ್ಲಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಪ್ರೋವಾಶ್ ಘೋಷ್ ಕಾರ್ಯನಿರ್ವಹಿಸುತ್ತಿದ್ದಾರೆ.
ಪಶ್ಚಿಮ ಬಂಗಾಳದ ನಂದಿಗ್ರಾಮ ಚಳುವಳಿಯಲ್ಲಿ ಅಂದಿನ ಎಡಪಕ್ಷ ಸರ್ಕಾರದ ವಿರುದ್ದ ಪ್ರಬಲ ಹೋರಾಟವನ್ನು SUCI-C ಕಟ್ಟಿತ್ತು. ಆ ಹೊತ್ತಲ್ಲಿ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಜೊತೆ ಸೇರಿಕೊಂಡಿತ್ತು. ಆದರೆ ನಂತರ ಮಮತಾ ಬ್ಯಾನರ್ಜಿ ಅವರ ನೀತಿಗಳಿಂದ ಬೇಸೆತ್ತು ಅವರ ಸಖ್ಯದಿಂದ ದೂರ ಸರಿದು ತಮ್ಮದೆ ಆದ ಹೋರಾಟವನ್ನು ಕಟ್ಟುತ್ತಾ ಬರುತ್ತಿದೆ.
ಇದನ್ನೂ ಓದಿ: ಬಡ್ಡಿದರ ಕಡಿತಗೊಳಿಸಿ ‘ನಿನ್ನೆ’ ಆದೇಶ: ‘ಇಂದು’ ಯೂಟರ್ನ್ ಹೊಡೆದ ಕೇಂದ್ರ ಸರ್ಕಾರ!
ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ SUCI-C ಪಕ್ಷ ಕರ್ನಾಟಕ ರಾಜ್ಯ ಸಮಿತಿ ಕಾರ್ಯದರ್ಶಿ ಕೆ. ಉಮಾ ಅವರು, “ಪ್ರಸ್ತುತ ಎಲ್ಲಾ ಪಕ್ಷಗಳು ಬಂಡವಾಳಶಾಹಿಗಳ ಪರವಾಗಿ ಮಾತ್ರವೆ ಕೆಲಸ ನಿರ್ವಹಿಸುತ್ತಿದೆ. ಕಾಂಗ್ರೆಸ್ ಇದಕ್ಕೆ ದಾರಿ ಮಾಡಿಕೊಟ್ಟರೂ ಬಿಜೆಪಿ ಅವುಗಳನ್ನೂ ಮೀರಿ ಬಂಡವಾಳಶಾಹಿಗಳ ಪರವಾಗಿ ಕೆಲಸ ಮಾಡುತ್ತಿದೆ. ಸಿಂಗೂರು, ನಂದಿಗ್ರಾಮ ಹೋರಾಟದ ಸಮಯದಲ್ಲಿ ಬಂಡವಾಳಶಾಹಿಗಳಿಗೆ ಕೆಂಪುಹಾಸು ಹಾಸಿದ್ದೇ ಸಿಪಿಐಎಂ ನೇತೃತ್ವದ ಎಡಪಂಥೀಯ ಸರ್ಕಾರವಾಗಿದೆ. ನಮ್ಮ ವಿರೋಧದ ನಡುವೆಯ ಪೊಲೀಸರನ್ನು ಕಳುಹಿಸಿ ಸರ್ಕಾರದ ಕುಮ್ಮಕ್ಕಿನಿಂದ ರೈತರ ಮೇಲೆ ಹಲ್ಲೆ ನಡೆದಿದೆ” ಎಂದು ಆರೋಪಿಸಿದ್ದಾರೆ.
“ಈ ಹೊತ್ತಲ್ಲಿ ನಾವು ಜನರ ನಡುವೆ ನಿಂತು ಹೋರಾಟ ಕಟ್ಟಿದ್ದೇವೆ. ಈ ಹೋರಾಟದ ಕ್ರೆಡಿಟನ್ನು ಪ್ರಸ್ತುತ ಯಾರು ಯಾರೋ ಪಡೆದುಕೊಳ್ಳುತ್ತಿದ್ದಾರೆ. ಆ ಹೊತ್ತಲ್ಲಿ ತೃಣಮೂಲ ಪಕ್ಷವು ನಮ್ಮ ಜೊತೆ ಸೇರಿ ಸೀಟು ಹೊಂದಾಣಿಕೆ ಮಾಡಿಕೊಂಡಿತ್ತು. ಆಮೇಲೆ ಟಿಎಂಸಿ ಯಾವುದೇ ಜನಪರ ಕೆಲಸ ಮಾಡದೆ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡ ಪರಿಣಾಮ ಎಲ್ಲರಿಂದಲೂ ದೂರವಿದ್ದು ಹೋರಾಟ ನಿರತರಾಗಿದ್ದೇವೆ” ಎಂದು ಕೆ. ಉಮಾ ತಿಳಿಸಿದ್ದಾರೆ.
“ಅಧಿಕಾರ ಬಲ ಮತ್ತು ಹಣ ಬಲದಿಂದ ಚುನಾವಣೆ ನಡೆಯುತ್ತಿರುವ ಈ ಸಮಯದಲ್ಲಿ ನಮ್ಮ ಮೌಲ್ಯಾಧಾರಿತ ರಾಜಕೀಯವು ಅದಕ್ಕೆ ಸಮನಾಗಿ ಸ್ಪರ್ಧಿಸಲು ಆಗುತ್ತಿಲ್ಲ ಎಂಬುವುದು ನಿಜವಾಗಿದೆ. ಆದರೆ ಈ ಭಾರಿ ಎಲ್ಲಾ ಕಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಬರುತ್ತಿದೆ. ಹಾಗಾಗಿ ಹೆಚ್ಚಿನ ಕಡೆಗಳಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: 66 ವರ್ಷದ ಆಂಟಿ ಸಂಯಮದಿಂದಿರಬೇಕು: ಮಮತಾ ಬ್ಯಾನರ್ಜಿ ವಿರುದ್ಧ ಸುವೇಂಧು ಅಧಿಕಾರಿ ಟೀಕೆ


