ಕಳೆದ ಒಂಭತ್ತು ತಿಂಗಳಿನಿಂದ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಸಿಲುಕಿಕೊಂಡಿದ್ದ ಅಮೆರಿಕದ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಭೂಮಿಗೆ ತಲುಪುವ ಸಮಯ ಸನ್ನಿಹಿತವಾಗಿದೆ. ಇಡೀ ಜಗತ್ತು ಭಾರೀ ನಿರೀಕ್ಷೆಯೊಂದಿಗೆ ಇವರನ್ನು ಎದುರು ನೋಡುತ್ತಿದೆ.
ಇಂದು (ಮಾ.18) ಬೆಳಿಗ್ಗೆ ಸ್ಪೇಸ್ ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ (SpaceX Dragon spacecraft) ಐಎಸ್‌ಎಸ್‌ನಿಂದ ನಾಲ್ವರು ಗಗನಯಾನಿಗಳು ಹೊರಟಿದ್ದಾರೆ. ಸ್ಪೇಸ್ ಎಕ್ಸ್ ಕ್ರೂ-9 (SpaceX’s Crew-9) ಬೆಳಿಗ್ಗೆ 10:35ಕ್ಕೆ (ಭಾರತೀಯ ಕಾಲಮಾನ) ಐಎಸ್‌ಎಸ್‌ನಿಂದ ಹೊರಟಿದೆ (ಅನ್‌ಡಾಕ್) ಎಂದು ನಾಸಾ ತಿಳಿಸಿದೆ. ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಬಾಹ್ಯಾಕಾಶ ನಿಲ್ದಾಣದಿಂದ (ಐಎಸ್‌ಎಸ್) ಬೇರ್ಪಡುವ ವಿಡಿಯೋವನ್ನು ಹಂಚಿಕೊಂಡಿದೆ. ಮುಂದಿನ 17 ಗಂಟೆಗಳಲ್ಲಿ ಅದು ಭೂಮಿಗೆ ತಲುಪುವ ನಿರೀಕ್ಷೆಯಿದೆ ಎಂದಿದೆ.
They're on their way! #Crew9 undocked from the @Space_Station at 1:05am ET (0505 UTC). Reentry and splashdown coverage begins on X, YouTube, and NASA+ at 4:45pm ET (2145 UTC) this evening. pic.twitter.com/W3jcoEdjDG
— NASA (@NASA) March 18, 2025
“ಬಾಹ್ಯಾಕಾಶದಲ್ಲಿ ಸಿಲುಕಿಕೊಂಡಿರುವ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರನ್ನು ಹಿಂದಿನ ಬೈಡೆನ್ ಸರ್ಕಾರ ಮರೆತು ಬಿಟ್ಟಿದೆ” ಎಂದು ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಾಗ್ದಾಳಿ ನಡೆಸಿದ ಬೆನ್ನಲ್ಲೇ, ಸ್ಪೇಸ್‌ಎಕ್ಸ್ ಸಂಸ್ಥೆ ಕಳೆದ ಶುಕ್ರವಾರ (ಮಾ.14) ತನ್ನ ಫಾಲ್ಕನ್ 9 ರಾಕೆಟ್‌ನಲ್ಲಿ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಉಡಾಯಿಸಿತ್ತು.
ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಕಳೆದ ವರ್ಷ (2024) ಜೂನ್ 5ರಂದು, ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಗಗನನೌಕೆಯಲ್ಲಿ ಐಎಸ್‌ಎಸ್‌ನತ್ತ ಪ್ರಯಾಣ ಬೆಳೆಸಿದ್ದರು. 8 ದಿನಗಳ ನಂತರ ಅವರು ಭೂಮಿಗೆ ಮರಳಬೇಕಿತ್ತು. ಆದರೆ, ಗಗನನೌಕೆಯಲ್ಲಿ ತಾಂತ್ರಿಕ ದೋಷ ಕಂಡುಬಂದ ಕಾರಣ ಅವರಿಗೆ ಮರಳಲು ಸಾಧ್ಯವಾಗದೆ ಅಲ್ಲೇ ಉಳಿದುಕೊಂಡಿದ್ದರು.
ಹಿಂದಿರುಗುವ ಸಮಸ್ಯೆ ಉಂಟಾದ ನಡುವೆಯೂ, ಸುನಿತಾ ಮತ್ತು ಬುಚ್ ಅವರನ್ನು ನಾಸಾ ಸ್ಪೇಸ್‌ಎಕ್ಸ್‌ನ ಕ್ರೂ-9 ಕಾರ್ಯಾಚರಣೆಗೆ ಮರು ನಿಯೋಜಿಸಿತ್ತು. ಇವರಿಬ್ಬರಿಗೆ ಸ್ಥಳಾವಕಾಶ ಕಲ್ಪಿಸುವ ಸಲುವಾಗಿ ನಾಲ್ವರ ಬದಲಿಗೆ ಇಬ್ಬರು ಸಿಬ್ಬಂದಿಯೊಂದಿಗೆ ಸೆಪ್ಟೆಂಬರ್‌ನಲ್ಲಿ ಸ್ಪೇಸ್‌ಎಕ್ಸ್‌ನ ಕ್ರೂ-9 ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಐಎಸ್‌ಎಸ್‌ಗೆ ಕಳುಹಿಸಿತ್ತು.
ಬರೋಬ್ಬರಿ 9 ತಿಂಗಳ ನಂತರ ಕಳೆದ ಭಾನುವಾರ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯನ್ನು ಹೊತ್ತ ಸ್ಪೇಸ್‌ಎಕ್ಸ್‌ನ ಕ್ರೂ-10 ಮಿಷನ್ (SpaceX’s Crew-10) ಐಎಸ್‌ಎಸ್ ತಲುಪಿದೆ. ಆ ಬಳಿಕ ಸುನಿತಾ ವಿಲಿಯಮ್ಸ್, ಬುಚ್ ವಿಲ್ಮೋರ್, ಸ್ಪೇಸ್‌ಎಕ್ಸ್‌ನ ಕ್ರೂ-9ನಲ್ಲಿ ತೆರಳಿದ್ದ ನಾಸಾದ ನಿಕ್ ಹೇಗ್ ಮತ್ತು ಅಲೆಕ್ಸಾಂಡರ್ ಗೋರ್ಬುನೋವ್ ಭೂಮಿಗೆ ಹೊರಟಿದ್ದಾರೆ.
ಸ್ಪೇಸ್‌ಎಕ್ಸ್‌ನ ಕ್ರೂ-10 ಮಿಷನ್‌ನಲ್ಲಿ ತೆರಳಿದ ನಾಲ್ವರು ಗಗಯಾನಿಗಳಾದ ನಾಸಾದ ಆ್ಯನ್ ಮೆಕ್ಲೇನ್ ಮತ್ತು ನಿಕೋಲ್ ಆಯೆರ್ಸ್, ಜಪಾನ್‌ನ ತಕುಯಾ ಒನಿಶಿ ಹಾಗೂ ರಷ್ಯಾದ ಕಿರಿಲ್ ಪೆಸ್ಕೊವ್ ಅವರು ಕೆಲ ದಿನಗಳ ಕಾಲ ಐಎಸ್‌ಎಸ್‌ನಲ್ಲಿ ಉಳಿಯಲಿದ್ದಾರೆ.
ಹಿಂದಿರುವ ಮುನ್ನ ಕೊನೆಯದಾಗಿ ತಮ್ಮ ಸಹೋದ್ಯೋಗಿಗಳಿಗೆ ಸಂದೇಶ ಕಳುಹಿಸಿರುವ ಕ್ರೂ-9ನಲ್ಲಿ ತೆರಳಿದ್ದ ನಿಕ್ ಹೇಗ್ “ಐಎಸ್‌ಎಸ್‌ನಲ್ಲಿ ಉಳಿದಿರುವ ಸಹೋದ್ಯೋಗಿಗಳು ಮತ್ತು ಆತ್ಮೀಯ ಸ್ನೇಹಿತರೇ… ನಾವು ನಿಮಗಾಗಿ ಕಾಯುತ್ತಿರುತ್ತೇವೆ, ಕ್ರೂ-9 ಮನೆಗೆ ಹೋಗುತ್ತಿದೆ” ಎಂದು ಹೇಳಿದ್ದಾರೆ.
ಐಎಸ್‌ಎಸ್‌ನಲ್ಲಿ ಉಳಿದುಕೊಂಡಿರುವ ಗಗನಯಾನಿಗಳು ಬಾಹ್ಯಾಕಾಶ ಸೂಟ್‌ಗಳನ್ನು ಕಳಚಿ ಆರಾಮದಾಯಕ ಬಟ್ಟೆಗಳನ್ನು ಧರಿಸಲು ಅವಕಾಶ ನೀಡಲಾಗಿದೆ ಎಂದು ವರದಿಗಳು ಹೇಳಿವೆ.
ಗಗನಯಾನಿಗಳು ಭೂಮಿಗೆ ತಲುಪುವುದು ಯಾವಾಗ?
ಭಾರತೀಯ ಕಾಲಮಾನ ಮಾರ್ಚ್ 19 ಬುಧವಾರ ಮುಂಜಾನೆ 3.27 ಮತ್ತು ಅಮೆರಿಕದ ಕಾಲಮಾನ ಮಾರ್ಚ್ 18 ಮಂಗಳವಾರ ಸಂಜೆ 5.57ಕ್ಕೆ ಫ್ಲೋರಿಡಾ ಕರಾವಳಿಯಲ್ಲಿ ಸುನಿತಾ, ಬುಚ್ ಸೇರಿದಂತೆ ನಾಲ್ವರು ಗಗನಯಾನಿಗಳನ್ನು ಹೊತ್ತ ಬಾಹ್ಯಾಕಾಶ ನೌಕೆ ಪ್ಯಾರಚೂಟ್‌ಗಳನ್ನು ಬಳಸಿ ನೀರಿನ ಮೇಲೆ ಇಳಿಯುವ ಸಾಧ್ಯತೆ ಇದೆ. ಆ ಬಳಿಕ ರಕ್ಷಣಾ ಬೋಟ್‌ಗಳು ಅವರನ್ನು ದಡಕ್ಕೆ ಕರೆತರಲಿದೆ.


