“ಸರ್ಕಾರವು ನಮಗೆ ಸಮವಸ್ತ್ರ ಮತ್ತು ವಿದ್ಯಾರ್ಥಿವೇತನವನ್ನು ನೀಡುವುದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡುತ್ತಿದೆ. ಹೀಗಿರುವಾಗ, ಕೇವಲ 20-30ರೂಗಳ ಸ್ಯಾನಿಟರಿ ಪ್ಯಾಡ್‌ಗಳನ್ನು ಏಕೆ ನೀಡಲು ಸಾಧ್ಯವಿಲ್ಲ?” ಎಂದು ದಿಟ್ಟ ಪ್ರಶ್ನೆ ಎತ್ತಿದ್ದ ಬಿಹಾರದ ವಿದ್ಯಾರ್ಥಿನಿ ರಿಯಾ ಕುಮಾರಿಯವರ ಬೆಂಬಲಕ್ಕೆ ಹಲವರು ಮುಂದೆ ಬಂದಿದ್ದಾರೆ.
ಸೆಪ್ಟಂಬರ್ ಕೊನೆಯ ವಾರದಲ್ಲಿ ಪಾಟ್ನಾದಲ್ಲಿ ನಡೆದ ಯುನಿಸೆಫ್ ಮತ್ತು ರಾಜ್ಯ ಸರ್ಕಾರವು ಜಂಟಿಯಾಗಿ ಆಯೋಜಿಸಿದ್ದ ‘ಸಶಕ್ತ ಬೇಟಿ, ಸಮ್ರದ್ದ ಬಿಹಾರ’ ಎಂಬ ಕಾರ್ಯಗಾರದಲ್ಲಿ ರಿಯಾ ಕುಮಾರಿ ಕೇಳಿದ ಪ್ರಶ್ನೆಗೆ ಬಿಹಾರದ ಮಹಿಳಾ ಅಭಿವೃದ್ಧಿ ನಿಗಮ (ಡಬ್ಲ್ಯುಡಿಸಿ) ವ್ಯವಸ್ಥಾಪಕ ನಿರ್ದೇಶಕಿ ಹರ್ಜೋತ್ ಕೌರ್ ಬಾಮ್ಹ್ರಾ ಮುಂದೆ ನೀವು ಕಾಂಡೋಮ್ ಸಹ ಕೇಳುತ್ತೀರಿ ಎಂದು ಉದ್ಧಟತನದಿಂದ ಉತ್ತರಿಸಿದ್ದರು.
ರಾಜಕಾರಣಿಗಳು ಮತಗಳನ್ನು ಕೇಳುತ್ತಾರೆ, ಹೀಗಿರುವಾಗ ಕೆಲವು ಸೌಲಭ್ಯಗಳನ್ನು ನೀಡುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ವಿದ್ಯಾರ್ಥಿನಿ ವಾದಿಸಿದಾಗ, “ಮತ ಹಾಕಬೇಡಿ, ಪಾಕಿಸ್ತಾನ ಮಾಡಿ ಈ ದೇಶವನ್ನು. ಹಣ ಅಥವಾ ಸೌಕರ್ಯಗಳಿಗಾಗಿ ನೀವು ಮತ ಚಲಾಯಿಸುತ್ತೀರಾ?” ಎಂದು ಐಎಎಸ್ ಅಧಿಕಾರಿ ಹೇಳಿ ಆ ಹುಡುಗಿಯ ಬಾಯಿ ಮುಚ್ಚಿಸಿ ವ್ಯಾಪಕ ಟೀಕೆಗೆ ಒಳಗಾಗಿದ್ದರು. ತದ ನಂತರ ತನ್ನ ತಪ್ಪಿಗೆ ಕ್ಷಮೆಯಾಚಿಸಿದ್ದರು.
ಸದ್ಯ ಸಾರ್ವಜನಿಕ ವೇದಿಕೆಯಲ್ಲಿ ಮುಜುಗರ ಎಂದು ಭಾವಿಸಿರುವ ವಿಷಯಗಳ ಕುರಿತು ದಿಟ್ಟವಾಗಿ ಪ್ರಶ್ನಿಸಿದ್ದಕ್ಕೆ ರಿಯಾ ಕುಮಾರಿಗೆ ಹಲವು ಎನ್‌ಜಿಓಗಳು ನೆರವು ನೀಡಲು ಮುಂದಾಗಿವೆ.
20 ವರ್ಷದ ರಿಯಾ ಕುಮಾರಿ ಪಾಟ್ನಾದ ಕಮಲ ನೆಹರು ನಗರ ಕಾಲೋನಿಯ ಸ್ಲಮ್ ನಿವಾಸಿಯಾಗಿದ್ದಾರೆ. ರಘುಪುರ್‌ನ ರಾಮ್ ವಿಲಾಸ್ ರಾಯ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ನಾಲ್ವರು ಸಹೋದರಿಯರು ಮತ್ತು ಮೂವರು ಸಹೋದರರ ದೊಡ್ಡ ಕುಟುಂಬ ಅವರದು. ಅಣ್ಣಂದಿರು ರೈಲುಗಳಲ್ಲಿ ಕೂಲಿಗಳಾಗಿ ಕೆಲಸ ಮಾಡುತ್ತಿದ್ದಾರೆ.
ಭಾರತೀಯ ಸ್ಯಾನಿಟರಿ ನ್ಯಾಪ್ಕಿನ್ ತಯಾರಕ ಪ್ಯಾನ್ ಹೆಲ್ತ್‌ಕೇರ್ ಪ್ರೈ.ಲಿ ಸಂಸ್ಥೆಯು ರಿಯಾಗೆ ಒಂದು ವರ್ಷದ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಒದಗಿಸುವುದಾಗಿ ಹೇಳಿಕೊಂಡಿದೆ.
ವೆಟ್ ಅಂಡ್ ಡ್ರೈ ಪರ್ಸನಲ್ ಕೇರ್ ಎಂಬ ದೆಹಲಿ ಮೂಲದ ಹೆಣ್ಣು ಮಕ್ಕಳ ನೈರ್ಮಲ್ಯ ಕಾಪಾಡುವ ಕಂಪನಿಯ ಸಿಇಒ ಹರಿಓಂ ತ್ಯಾಗಿಯವರು, “ಸಾರ್ವಜನಿಕ ವೇದಿಕೆಯಲ್ಲಿ ಬಡ ಹುಡುಗಿಯರು ಮತ್ತು ಸ್ಲಂಗಳಲ್ಲಿ ವಾಸಿಸುವ ಮಹಿಳೆಯರಿಗೆ ಮುಟ್ಟಿನ ನೈರ್ಮಲ್ಯ ವಿಧಾನಗಳ ಸಮಸ್ಯೆಯನ್ನು ದಿಟ್ಟವಾಗಿ ಪ್ರಶ್ನಿಸಿದಕ್ಕಾಗಿ” ಆ ಹುಡುಗಿಗೆ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.
“ಸದ್ಯಕ್ಕೆ ಪದವಿ ಮುಗಿಯುವವರೆಗೆ ರಿಯಾ ಕುಮಾರಿಯ ಶಿಕ್ಷಣದ ವೆಚ್ಚವನ್ನು ಕಂಪನಿಯೇ ಭರಿಸಲು ನಿರ್ಧರಿಸಿದೆ. ಭವಿಷ್ಯದಲ್ಲಿ ಅವರು ಯಾವುದೇ ಹೆಚ್ಚಿನ ಸಹಾಯ ಅಥವಾ ಬೆಂಬಲವನ್ನು ಬಯಸಿದರೆ ಅದು ನಿಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಲು ನಾವು ನೀಡುವ ಕೊಡುಗೆ ಎಂದು ಭಾವಿಸಿ ಸಹಾಯ ಮಾಡುತ್ತೇವೆ” ಎಂದು ತ್ಯಾಗಿ ಹೇಳಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ರಿಯಾ, “ಸ್ಯಾನಿಟರಿ ನ್ಯಾಪ್‌ಕಿನ್ ಬಗೆಗಿನ ನನ್ನ ಪ್ರಶ್ನೆಯಲ್ಲಿ ಯಾವುದೇ ತಪ್ಪಿಲ್ಲ. ಈ ಪ್ರಶ್ನೆ ಎತ್ತಿದ್ದು ಕೂಡ ಕೇವಲ ನನಗಾಗಿ ಮಾತ್ರವಲ್ಲ. ನಾನು ಬೇಕಾದರೆ ಹಣ ಕೊಟ್ಟು ಖರೀದಿಸಬಲ್ಲೆ. ಆದರೆ ನಮ್ಮ ಸ್ಲಮ್‌ನಲ್ಲಿನ ಬಹುತೇಕ ಹೆಣ್ಣುಮಕ್ಕಳಿಗೆ ಕೊಳ್ಳುವ ಶಕ್ತಿಯಿಲ್ಲ. ಈ ಬಗ್ಗೆ ದನಿ ಎತ್ತಿದೆ. ನನಗೆ ಸಿಗುವ ಸ್ಯಾನಿಟರಿ ಪ್ಯಾಡ್‌ಗಳನ್ನು ಬೇರೆ ಹೆಣ್ಣು ಮಕ್ಕಳೊಂದಿಗೆ ಹಂಚಿಕೊಳ್ಳುತ್ತೇನೆ. ನನಗೆ ಸಿಗುವ ಶಿಕ್ಷಣವನ್ನು ಉಳಿದವರಿಗೆ ಅರಿವು ಮೂಡಿಸಲು ಬಳುಸತ್ತೇನೆ” ಎಂದಿದ್ದಾರೆ.
ಕ್ವಿಂಟ್ ಜೊತೆ ಮಾತನಾಡಿರುವ ರಿಯಾ, “ನಾನು ಮಕ್ಕಳನ್ನು ಉಳಿಸಿ ಎಂಬ ಎನ್‌ಜಿಓಗೆ ಸ್ವಯಂ ಸೇವಕಿಯಾಗಿ ಕೆಲಸ ಮಾಡುತ್ತಿದ್ದೆ. ಆಗ ಹಲವು ಸ್ಲಂಗಳಿಗೆ ಭೇಟಿ ನೀಡಿ ಮುಟ್ಟಿನ ಬಗ್ಗೆ ಅರಿವು ಮೂಡಿಸುವ ಕೆಲಸ ನನ್ನದಾಗಿತ್ತು. ಕೆಲವು ಸ್ಲಂಗಳಿಗೆ ಹೋದಾಗ ಅಲ್ಲಿನ ಹೆಣ್ಣು ಮಕ್ಕಳ ಸ್ಥಿತಿ ನೋಡಿ ಬೇಸರವಾಯಿತು. ಬಹುತೇಕರು ಸ್ಯಾನಿಟರಿ ನ್ಯಾಪ್‌ಕಿನ್ ಖರೀದಿಸಲು ಸಾಧ್ಯವಾಗದೆ ಇಂದಿಗೂ ಬಟ್ಟೆಗಳನ್ನೆ ಬಳಸುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಕಣ್ಣಾರೆ ಕಂಡ ಕಷ್ಟಗಳನ್ನು ಪ್ರಶ್ನೆಯಾಗಿಸಿದೆ” ಎಂದಿದ್ದಾರೆ.
ಬಹಳಷ್ಟು ಹೆಣ್ಣು ಮಕ್ಕಳು ಮುಟ್ಟಿನ ಸಮಯದಲ್ಲಿ ವಾರಗಟ್ಟಲೆ ಶಾಲೆಗಳಿಗೆ ಹೋಗದೆ ರಜೆ ಹಾಕುತ್ತಾರೆ. ಇದರಿಂದ ಅವರ ಕಲಿಕೆಯು ಕುಂಠಿತಗೊಳ್ಳುತ್ತದೆ. ಅಂತವರಿಗೆ ಅರಿವು ಮತ್ತು ಧೈರ್ಯ ತುಂಬುತ್ತೇನೆ. ಮುಟ್ಟು ಎಂಬುದು ನಾಚಿಕೆಯ ವಿಷಯವಲ್ಲ ಎಂದು ಅವರಿಗೆ ಕಲಿಸಬೇಕಾಗಿದೆ ಎನ್ನುತ್ತಾರೆ ರಿಯಾ.
ಇದನ್ನೂ ಓದಿ: ಗ್ಯಾಸ್ ಪುರಾಣ: ಗೃಹ ಬಳಕೆಯ ಗ್ಯಾಸ್ ಬೆಲೆ ಹೆಚ್ಚಾಗುತ್ತಿರುವುದಕ್ಕೆ ಕಾರಣಗಳಿವು


