‘ಬುಲ್ಡೋಝರ್ ಅ’ನ್ಯಾಯ’ಕ್ಕೆ ಲಗಾಮು ಹಾಕಿರುವ ಸುಪ್ರೀಂ ಕೋರ್ಟ್, “ಕಾರ್ಯಾಂಗ ನ್ಯಾಯಾಧೀಶರಾಗಲು ಸಾಧ್ಯವಿಲ್ಲ. ನ್ಯಾಯದ ಹೆಸರಿನಲ್ಲಿ ಆರೋಪಿಯನ್ನು ಅಪರಾಧಿ ಎಂದು ಘೋಷಿಸುವುದು ಮತ್ತು ಅವರ ಕಟ್ಟಡಗಳನ್ನು ಕೆಡುವುದು ಅಸಂವಿಧಾನಿಕ” ಎಂದು ಹೇಳಿದೆ.
ಬುಲ್ಡೋಝರ್ ಅನ್ಯಾಯ ಪ್ರಶ್ನಿಸಿ ಜಮಿಯತ್ ಉಲೇಮಾ-ಇ-ಹಿಂದ್ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರಿದ್ದ ಪೀಠ, ಕೇವಲ ಆರೋಪಿಗಳು ಅಥವಾ ಅಪರಾಧಿಗಳು ಎಂಬ ಕಾರಣಕ್ಕಾಗಿ ಜನರ ಮನೆಗಳನ್ನು ಕೆಡವುದು ಸಂಪೂರ್ಣ ಅಸಂವಿಧಾನಿಕ ಎಂದು ಇಂದು (ನ.13) ತೀರ್ಪು ನೀಡಿದೆ
“ಮನೆಗಳನ್ನು ಕೆಡವಿದ ಕಾರಣಕ್ಕೆ ಮಹಿಳೆಯರು ಮತ್ತು ಮಕ್ಕಳು ರಾತ್ರೋರಾತ್ರಿ ಬೀದಿಗೆ ಬೀಳುವುದು ಸಂತಸಪಡುವ ವಿಷಯವಲ್ಲ” ಎಂದು ತೀರ್ಪು ಪ್ರಕಟಿಸುವ ವೇಳೆ ನ್ಯಾ. ಗವಾಯಿ ಪ್ರತ್ಯೇಕವಾಗಿ ಹೇಳಿದ್ದಾರೆ.
ಪೂರ್ವಭಾವಿ ಶೋಕಾಸ್ ನೋಟಿಸ್ ನೀಡದೆ ಮತ್ತು ನೋಟಿಸ್ ಜಾರಿ ಮಾಡಿದ 15 ದಿನಗಳ ಒಳಗಾಗಿ ಯಾವುದೇ ಕಟ್ಟಡವನ್ನು ಕೆಡವಬಾರದು ಎಂದು ಪೀಠ ಸೂಚಿಸಿದೆ. ನಿಯಮ ಪ್ರಕಾರ ಕಟ್ಟಡಗಳನ್ನು ಕೆಡವುದಾದರೆ, ಕೆಡವುವ ಪ್ರಕ್ರಿಯೆಯ ಸಂಪೂರ್ಣ ವಿಡಿಯೋ ಚಿತ್ರೀಕರಣ ಮಾಡಬೇಕು ಎಂದು ನಿರ್ದೇಶನ ನೀಡಿದೆ.
ಸಾರ್ವಜನಿಕ ಭೂಮಿಯಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಾಣವಾದರೆ ಅಂತಹ ಸಮಯದಲ್ಲಿ ಈ ನಿರ್ದೇಶನ ಅನ್ವಯವಾಗುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ. ಸಂವಿಧಾನ ಮತ್ತು ಕ್ರಿಮಿನಲ್ ಕಾನೂನಿನ ಬೆಳಕಿನಲ್ಲಿ ಆರೋಪಿಗಳು ಮತ್ತು ಅಪರಾಧಿಗಳೂ ಕೆಲವು ಹಕ್ಕುಗಳು ಮತ್ತು ಸುರಕ್ಷತೆಗಳನ್ನು ಹೊಂದಿದ್ದಾರೆ ಎಂದು ಇದೇ ವೇಳೆ ಹೇಳಿದೆ.
ನಿಯಮಬಾಹಿರವಾಗಿ ಕಟ್ಟಡ ಕೆಡವಿದರೆ ಅಧಿಕಾರಿಗಳು ಹೊಣೆ
ನಿಯಮ ಬಾಹಿರವಾಗಿ ಜನರ ಮನೆಗಳು ಸೇರಿದಂತೆ ಕಟ್ಟಡಗಳನ್ನು ಕೆಡವಿದರೆ, ಅದಕ್ಕೆ ಸಂಬಂಧಿತ ಅಧಿಕಾರಿಗಳು ಹೊಣೆ ಎಂದು ನ್ಯಾಯಾಲಯ ಹೇಳಿದೆ.
ಆರೋಪಿ ಅಥವಾ ಅಪರಾಧಿಯ ಮನೆಗಳನ್ನು ಕೆಡವುದು, ಅವರ ಇಡೀ ಕುಟುಂಬಕ್ಕೆ ಶಿಕ್ಷೆ ವಿಧಿಸಿದಂತೆ. ಒಂದು ವೇಳೆ ಆಯ್ದ ವ್ಯಕ್ತಿಗಳ ಕಟ್ಟಡಗಳನ್ನು ಏನಾದರು ಅಧಿಕಾರಿಗಳು ಕೆಡವಿದರೆ, ಅದು ದುರುದ್ದೇಶಪೂರಿತ ನಡೆ ಎಂದು ಪರಿಗಣಿಸಲಾಗುತ್ತದೆ ಎಂದಿದೆ.
ತೆರವು ಕಾರ್ಯಾಚರಣೆಯಲ್ಲಿ ನಿಯಮಾವಳಿ ಉಲ್ಲಂಘನೆ ಕಂಡುಬಂದರೆ, ಕೆಡವಲಾದ ಆಸ್ತಿಯ ಮರುಪಾವತಿಗೆ ಅಧಿಕಾರಿಗಳೇ ಹೊಣೆಯಾಗುತ್ತಾರೆ. ಇದಕ್ಕೆ ತಗಲುವ ವೆಚ್ಚವನ್ನು ಅಧಿಕಾರಿಗಳ ವೇತನದಿಂದ ವಸೂಲಿ ಮಾಡಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.
ಕಟ್ಟಡ ಕೆಡವಲು ನ್ಯಾಯಾಲಯ ಸೂಚಿಸಿದ ಮಾರ್ಗಸೂಚಿಗಳು
- ಯಾವುದೇ ಕಟ್ಟಡ ಕೆಡವಲು ನಿರ್ಧರಿಸಿದರೆ, ಆ ಕಟ್ಟಡಕ್ಕೆ ಸಂಬಂಧಿಸಿದವರಿಗೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಸಮಯವಕಾಶ ನೀಡಬೇಕು. ಒಂದು ವೇಳೆ ಅವರು ನ್ಯಾಯಾಲಯದಲ್ಲಿ ಪ್ರಶ್ನಿಸದಿದ್ದರೂ, ಮನೆ ಅಥವಾ ಕಟ್ಟಡ ಖಾಲಿ ಮಾಡಲು ಸಮಯ ನೀಡಬೇಕು.
- ಈ ನಿಯಮ ರಸ್ತೆ, ಬೀದಿ, ಫುಟ್‌ಪಾತ್, ರೈಲ್ವೆ ಮಾರ್ಗಗಳಿಗೆ ಹೊಂದಿಕೊಂಡಿರುವ ಅಥವಾ ಯಾವುದೇ ನದಿ ಅಥವಾ ಜಲಾನಯನದಂತಹ ಸಾರ್ವಜನಿಕ ಸ್ಥಳಗಳಲ್ಲಿ ಇರುವ ಅನಧಿಕೃತ ಕಟ್ಟಡಗಳಿಗೆ ಅನ್ವಯಿಸುವುದಿಲ್ಲ.
- ಪೂರ್ವಭಾವಿ ಶೋಕಾಸ್ ನೋಟಿಸ್ ನೀಡದೆ ಮತ್ತು ನೋಟಿಸ್ ಜಾರಿ ಮಾಡಿದ 15 ದಿನಗಳ ಒಳಗಾಗಿ ಯಾವುದೇ ಕಟ್ಟಡವನ್ನು ಕೆಡವಬಾರದು. ನೋಟಿಸ್ ನೀಡಿದ ದಿನದಿಂದ 15 ದಿನದ ಅವಧಿ ಪ್ರಾರಂಭವಾಗುತ್ತದೆ.
- ನೋಟಿಸ್ ಅನ್ನು ನೋಂದಾಯಿತ ಅಂಚೆ (Registered post) ಮೂಲಕ ಕಟ್ಟಡ ಮಾಲೀಕರಿಗೆ ನೀಡಬೇಕು. ಅದೇ ನೋಟಿಸ್ ಅನ್ನು ಕೆಡವಲು ಉದ್ದೇಶಿಸಿದ ಕಟ್ಟಡದ ಗೋಡೆ ಮೇಲೆ ಅಂಟಿಸಬೇಕು.
- ನೋಟಿಸ್ ಅನಧಿಕೃತ ನಿರ್ಮಾಣದ ಸ್ವರೂಪ, ನಿಯಮಗಳ ಉಲ್ಲಂಘನೆ ಬಗ್ಗೆ ವಿವರಗಳು ಮತ್ತು ಕೆಡವುವಿಕೆಗೆ ಕಾರಣಗಳನ್ನು ಒಳಗೊಂಡಿರಬೇಕು.
- ನೋಟಿಸ್ ನೀಡಿರುವುದು ತಡವಾಗಿದೆ ಎಂಬ ಆರೋಪಗಳು ಕೇಳಿ ಬರದಿರಲು. ಕಟ್ಟಡ ಮಾಲೀಕರಿಗೆ ನೀಡಿದ ನೋಟಿಸ್ ಅನ್ನೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಗೆ ಇ-ಮೇಲ್ ಮೂಲಕ ಕಳುಹಿಸಬೇಕು. ಅದನ್ನು ಸ್ವೀಕರಿಸಿದ ಬಳಿಕ ಜಿಲ್ಲಾಧಿಕಾರಿ ಕಚೇರಿಯಿಂದ ಡಿಜಿಟಲ್ ರಶೀದಿ ಒದಗಿಸಬೇಕು.
- ಕಟ್ಟಡ ಕೆಡವುವ ಪ್ರಕರಣಗಳ ನಿರ್ವಹಣೆ ಸಂಬಂಧ ಜಿಲ್ಲಾಧಿಕಾರಿ ನೋಡಲ್ ಅಧಿಕಾರಿಯನ್ನು ನೇಮಿಸಬೇಕು. ಅವರಿಗೆ ಪ್ರತ್ಯೇಕ ಇ-ಮೇಲ್ ಐಡಿ ಸೃಷ್ಟಿಸಬೇಕು. ಕಟ್ಟಡ ಕೆಡವುದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಸಂಬಂಧಿತ ಎಲ್ಲಾ ಅಧಿಕಾರಿಗಳಿಗೆ ನೀಡಬೇಕು. ಇಂದಿನಿಂದ ಒಂದು ತಿಂಗಳ ಒಳಗಾಗಿ ಈ ಪ್ರಕ್ರಿಯೆ ಆಗಬೇಕು.
- ಮುನ್ಸಿಪಲ್ ಪ್ರಾಧಿಕಾರಗಳು ಕಟ್ಟಡ ಕೆಡವುವ ಸಂಬಂಧ ಪ್ರತ್ಯೇಕ ಡಿಜಿಟಲ್ ಪೋರ್ಟಲ್ ಸ್ಥಾಪಿಸಬೇಕು. ಅದರಲ್ಲಿ ಕಟ್ಟಡ ತೆರವಿಗೆ ನೀಡಿದ ನೋಟಿಸ್ ಸೇರಿದಂತೆ ಎಲ್ಲಾ ಮಾಹಿತಿಗಳು ಹಂತ ಹಂತವಾಗಿ ದಾಖಲಿಸಬೇಕು.
ಈ ಪ್ರಕರಣದಲ್ಲಿ ಹಿರಿಯ ವಕೀಲರಾದ ಡಾ. ಅಭಿಷೇಕ್ ಮನು ಸಿಂಘ್ವಿ, ಸಿಯು ಸಿಂಗ್, ಎಂ.ಆರ್ ಶಂಶಾದ್, ನಿತ್ಯಾ ರಾಮಕೃಷ್ಣನ್, ವಕೀಲರಾದ ಪ್ರಶಾಂತ್ ಭೂಷಣ್, ಮೊಹಮ್ಮದ್ ನಿಝಾಮ್ ಪಾಷಾ, ಫೌಝಿಯಾ ಶೇಖ್, ರಶ್ಮಿ ಸಿಂಗ್ ಮುಂತಾದವರ ಸಲಹೆಗಳಿಗೆ ನ್ಯಾಯಾಲಯ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.
ಹಿರಿಯ ವಕೀಲ ನಚಿಕೇತ ಜೋಶಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರ ಸಹಕಾರವನ್ನು ನ್ಯಾಯಾಲಯ ಶ್ಲಾಘಿಸಿದೆ.ತೀರ್ಪು ಸ್ವಾಗತಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್
ಬುಲ್ಡೋಝರ್ ಅನ್ಯಾಯಕ್ಕೆ ಲಗಾಮು ಹಾಕಿದ ಸುಪ್ರೀಂ ಕೋರ್ಟ್‌ನ ಮಹತ್ವದ ತೀರ್ಪನ್ನು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಸ್ವಾಗತಿಸಿದ್ದಾರೆ. ಈ ತೀರ್ಪು ಆಶಾದಾಯಕವಾಗಿದೆ. ಇದು ‘ಬುಲ್ಢೋಝರ್ ನ್ಯಾಯ’ಕ್ಕೆ ಬ್ರೇಕ್ ಹಾಕುವ ಭರವಸೆ ಇದೆ ಎಂದಿದ್ದಾರೆ.
Fantastic Judgement of the SC on punitive Demolitions which were demolishing the rule of law!
SC has ordered that no demolitions w/o provable notice of at least 2 weeks, hearing the noticee & giving him at least 15 days to challenge demolition order.
Any violation by officers…— Prashant Bhushan (@pbhushan1) November 13, 2024
ಇದನ್ನೂ ಓದಿ : ಶ್ರೀಲಂಕಾ ಬಂಧಿಸಿರುವ ತಮಿಳು ಮೀನುಗಾರರ ಬಿಡುಗಡೆಗೆ ಸಹಕರಿಸಿ: ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ ಎಂಕೆ ಸ್ಟಾಲಿನ್


