ರೋಹಿಂಗ್ಯಾ ನಿರಾಶ್ರಿತರನ್ನು ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ ಭಾರತ ಸರ್ಕಾರ ಸಮುದ್ರಕ್ಕೆ ತಳ್ಳಿದೆ ಎಂಬ ಗಂಭೀರ ಆರೋಪವನ್ನು ನಂಬಲು ಸುಪ್ರೀಂ ಕೋರ್ಟ್ ಶುಕ್ರವಾರ (ಮೇ.16) ಹಿಂದೇಟು ಹಾಕಿದ್ದು, ಸಾಕ್ಷಿ ಕೇಳಿದೆ ಎಂದು ವರದಿಯಾಗಿದೆ.
ಮಹಿಳೆಯರು, ಮಕ್ಕಳು, ವೃದ್ಧರು, ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳಿದ್ದ ಸುಮಾರು 43 ರೋಹಿಂಗ್ಯಾ ನಿರಾಶ್ರಿತರನ್ನು ಭಾರತ-ಮ್ಯಾನ್ಮಾರ್ ಅಂತಾರಾಷ್ಟ್ರೀಯ ಜಲ ಪ್ರದೇಶದಲ್ಲಿ ಭಾರತೀಯ ನೌಕಾಪಡೆ ಹಡಗಿನಿಂದ ಸಮುದ್ರಕ್ಕೆ ತಳ್ಳಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು ಎಂದು ಕೋರಿ ಇಬ್ಬರು ರೋಹಿಂಗ್ಯಾ ನಿರಾಶ್ರಿತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಎನ್.ಕೆ ಸಿಂಗ್ ಅವರ ಪೀಠವು, ದೃಢವಾದ ಪುರಾವೆಗಳಿಲ್ಲದೆ ಮಧ್ಯಪ್ರವೇಶಿಸಲು ಒಲವು ತೋರಿಲ್ಲ ಎಂದು ವರದಿಯಾಗಿದೆ.
“ಪ್ರತಿ ಬಾರಿಯೂ ನಿಮ್ಮದೊಂದು ಹೊಸ ಕಥೆ ಸಿದ್ದವಾಗುತ್ತದೆ. ಈ ಬಾರಿ ಈ ಸುಂದರವಾದ ರಚಿಸಿದ್ದೀರಿ. ಸಮುದ್ರಕ್ಕೆ ತಳ್ಳಿದ್ದರ ಫೋಟೋ, ವಿಡಿಯೋ ತೆಗೆದವರು ಯಾರು? ಅವರು ವಾಪಸ್ ಬಂದಿದ್ದು ಹೇಗೆ? ಏನು ದಾಖಲೆ ಇದೆ?” ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಕೇಳಿದ್ದಾರೆ ಎಂದು barandbench.com ವರದಿ ಮಾಡಿದೆ.
“ದೇಶ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವಾಗ, ನೀವು ಈ ಕಾಲ್ಪನಿಕ ಅರ್ಜಿ ಸಲ್ಲಿಸಿದ್ದೀರಿ” ನ್ಯಾಯಾಧೀಶರು ಹೇಳಿದ್ದಾರೆ. ಈ ಮೂಲಕ ಅವರು ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಅದರ ನಂತರದ ಘಟನೆಗಳನ್ನು ಉಲ್ಲೇಖಿಸಿರಬಹುದು ಎಂದು barandbench.com ವರದಿ ತಿಳಿಸಿದೆ.
ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೆಸ್ ಅವರು, ಅರ್ಜಿದಾರರಿಗೆ ಆಪಾದಿತ ಘಟನೆಗಳ ಬಗ್ಗೆ ಮಾಹಿತಿ ನೀಡುವ ಫೋನ್ ಕರೆಗಳು ಬಂದಿವೆ. ವಿಶ್ವಾಸಾರ್ಹ ಸುದ್ದಿ ವರದಿಗಳೂ ಇವೆ ಎಂದು ಹೇಳಿದ್ದಾರೆ.
“ಅವರನ್ನು (ರೋಹಿಂಗ್ಯಾ ನಿರಾಶ್ರಿತರನ್ನು) ಅಂಡಮಾನ್‌ಗೆ ಕರೆದೊಯ್ದು. ಲೈಫ್ ಜಾಕೆಟ್ ತೊಡಿಸಿ ಸಮುದ್ರಕ್ಕೆ ತಳ್ಳಲಾಗಿದೆ. ಈ ಬಗ್ಗೆ ಮ್ಯಾನ್ಮಾರ್‌ನಿಂದ ಕರೆ ಬಂದಿದೆ. ಅವರು (ಅರ್ಜಿದಾರರು) ದೆಹಲಿಯಲ್ಲಿದ್ದಾರೆ, ಅವರಿಗೆ ಫೋನ್‌ನಲ್ಲಿ ವಿಷಯ ತಿಳಿಸಲಾಗಿದೆ. ನಮ್ಮ ಬಳಿ ಫೋನ್ ಕರೆಯ ಅನುವಾದವೂ ಇದೆ. ದಯವಿಟ್ಟು ವಿದೇಶಿ ಮಾಧ್ಯಮ ವರದಿಗಳನ್ನು ನೋಡಿ… ಅದು ವಿಶ್ವಾಸಾರ್ಹ ವರದಿಗಳೆಂದು ಹೇಳುತ್ತದೆ” ಎಂದು ವಕೀಲ ಗೊನ್ಸಾಲ್ವೆಸ್ ನ್ಯಾಯಾಲಯಕ್ಕೆ ವಿವರಿಸಿದ್ದಾರೆ.
ಈ ಬಗ್ಗೆ ತನಿಖೆಗೆ ನಿರ್ದೇಶಿಸುವಂತೆ ಗೊನ್ಸಾಲ್ವೆಸ್ ನ್ಯಾಯಾಲಯವನ್ನು ಕೋರಿದ್ದಾರೆ. ಆದರೆ, ನ್ಯಾಯಾಲಯ ಈ ಬಗ್ಗೆ ಯಾವುದೇ ಆದೇಶ ನೀಡಲು ಒಲವು ತೋರಿಲ್ಲ.
“ಆ ಕರೆಗಳನ್ನು ಯಾರು ಪರಿಶೀಲಿಸಿದ್ದಾರೆ ಮತ್ತು ಯಾರಿಗೆ ಇದೆಲ್ಲದರ ಬಗ್ಗೆ ವೈಯಕ್ತಿಕ ಜ್ಞಾನವಿದೆ ಎಂಬುದನ್ನು ನಮಗೆ ತೋರಿಸಿ. ಯಾರಾದರೂ ನಿಂತು ಇದನ್ನು ವೀಕ್ಷಿಸದ, ಅರ್ಜಿದಾರರು ಅದನ್ನು ನೈಜ ಸಮಯದಲ್ಲಿ ನೋಡದ ಹೊರತು ನೀವು ಇದನ್ನು ಹೇಗೆ ದೃಢೀಕರಿಸುತ್ತೀರಿ? ಈ ವರದಿಗಳನ್ನು ದಾಖಲೆಯಲ್ಲಿ ಇರಿಸಿ… ನಾವು ನೋಡುತ್ತೇವೆ. ಹೊರಗೆ ಕುಳಿತಿರುವ ಈ ಎಲ್ಲಾ ಜನರು ನಮ್ಮ ಸಾರ್ವಭೌಮತ್ವ ಮತ್ತು ನಮ್ಮ ಅಧಿಕಾರವನ್ನು ಪ್ರಶ್ನಿಸಲು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಈ ನಡುವೆ ರೋಹಿಂಗ್ಯಾ ನಿರಾಶ್ರಿತರನ್ನು ರಕ್ಷಿಸಬೇಕು ಎಂಬುದನ್ನು ಪರಿಗಣಿಸುವಂತೆ ಗೊನ್ಸಾಲ್ವೆಸ್ ನ್ಯಾಯಾಲಯವನ್ನು ಕೋರಿದ್ದಾರೆ.
“ದಯವಿಟ್ಟು ಅಂತಾರಾಷ್ಟ್ರೀಯ ನ್ಯಾಯಾಲಯವು ರೋಹಿಂಗ್ಯಾಗಳ ಬಗ್ಗೆ ಏನು ಹೇಳಿದೆ ಮತ್ತು ರೋಹಿಂಗ್ಯಾಗಳನ್ನು ಏಕೆ ವಾಪಸ್ ಕಳಿಸಬಾರದು ಎಂಬುದನ್ನು ನೋಡಿ… ವಲಸಿಗರನ್ನು ವಾಪಸ್ ಕಳಿಸಬಹುದು. ಆದರೆ, ರೋಹಿಂಗ್ಯಾಗಳನ್ನು ಕಳುಹಿಸುವಂತಿಲ್ಲ” ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಅರ್ಜಿದಾರರು ಮಾಡಿರುವ ಆರೋಪಗಳಿಗೆ ವಿಶ್ವಾಸಾರ್ಹ ಪುರಾವೆಗಳಿದ್ದರೆ ಮಾತ್ರ ಮಧ್ಯಪ್ರವೇಶಿಸಬಹುದು ಎಂದಿದೆ.


