ನವದೆಹಲಿ: ಯೆಮನ್‌ನಲ್ಲಿ ಮರಣದಂಡನೆ ಎದುರಿಸುತ್ತಿರುವ ಕೇರಳದ ನರ್ಸ್ ನಿಮಿಷಾ ಪ್ರಿಯಾ ಅವರ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಾರ್ವಜನಿಕ ಹೇಳಿಕೆಗಳು ಮತ್ತು ಮಾಧ್ಯಮ ವರದಿಗಳನ್ನು ನಿರ್ಬಂಧಿಸುವಂತೆ ಕೋರಿ ಧರ್ಮಪ್ರಚಾರಕ ಡಾ. ಕೆ.ಎ. ಪಾಲ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ ಎಂದು ಲೈವ್ ಲಾ ವರದಿ ಮಾಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಈ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆಯ ವೇಳೆ, ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಕೇಂದ್ರ ಸರ್ಕಾರವು ಈ ಪ್ರಕರಣದ ಕುರಿತು ನಿಯಮಿತವಾಗಿ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿದ್ದು, ನಿಮಿಷಾ ಪ್ರಿಯಾ ಅವರ ಶಿಕ್ಷೆಯ ಅಂತಿಮ ಇತ್ಯರ್ಥವಾಗುವವರೆಗೆ ಮಾಧ್ಯಮ ವರದಿಗಳ ಬಗ್ಗೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ, ನಿಮಿಷಾ ಪ್ರಿಯಾಳನ್ನು ರಕ್ಷಿಸಲು ರಚನೆಯಾದ ‘ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್’ (ಮಾಜಿ ನ್ಯಾಯಾಧೀಶರು, ಸಂಸದರು, ಶಾಸಕರು ಇತ್ಯಾದಿಗಳನ್ನು ಒಳಗೊಂಡಿದೆ) ಕೂಡ ಮಾಧ್ಯಮಗಳ ಮುಂದೆ ಹೇಳಿಕೆ ನೀಡುವುದರಿಂದ ದೂರವಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿತು. ಈ ಹಿನ್ನೆಲೆಯಲ್ಲಿ, ಡಾ. ಪಾಲ್ ಅವರ ಅರ್ಜಿಯನ್ನು ವಜಾ ಮಾಡಲಾಯಿತು.
ರಕ್ತದ ಹಣದ ಕುರಿತ ವಿವಾದ
ಡಾ. ಪಾಲ್ ಅವರು, ಪ್ರಿಯಾಳನ್ನು ಬಿಡುಗಡೆ ಮಾಡಲು ಸರ್ಕಾರಕ್ಕೆ ಸಹಾಯ ಮಾಡುತ್ತಿದ್ದು, ಸಂತ್ರಸ್ತನ ಕುಟುಂಬದೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿದರು. ಸಂತ್ರಸ್ತನ ಕುಟುಂಬವು ಮೂರು ಷರತ್ತುಗಳಿಗೆ ಒಳಪಟ್ಟು ಪ್ರಿಯಾಳನ್ನು ಕ್ಷಮಿಸಲು ಸಿದ್ಧವಾಗಿದೆ. ಇದರಲ್ಲಿ ಎರಡು ಷರತ್ತುಗಳನ್ನು ಅವರು ಈಗಾಗಲೇ ಪೂರೈಸಿದ್ದಾರೆ ಎಂದು ಹೇಳಿಕೊಂಡರು. ರಕ್ತದ ಹಣ ಸಂಗ್ರಹಿಸಿ ಅವರಿಗೆ ಪಾವತಿಸಲಾಗಿದೆ ಎಂಬ ಮಾಧ್ಯಮ ವರದಿಗಳಿಂದ ಸಂತ್ರಸ್ತನ ಕುಟುಂಬ ಅಸಮಾಧಾನಗೊಂಡಿದೆ ಎಂದೂ ಅವರು ಸ್ಪಷ್ಟಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ‘ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್’ ಪರ ವಕೀಲ ರಾಗೆಂತ್ ಬಸಂತ್, ಸಂತ್ರಸ್ತನ ಕುಟುಂಬವು ಪ್ರಿಯಾಳನ್ನು ಕ್ಷಮಿಸುವುದು ಮೊದಲ ಹಂತ. ಅದರ ನಂತರವಷ್ಟೇ ರಕ್ತದ ಹಣದ ಪ್ರಶ್ನೆ ಬರುತ್ತದೆ ಎಂದು ವಾದಿಸಿದರು.
ಪಕ್ಷಗಳ ವಾದಗಳನ್ನು ಆಲಿಸಿದ ಪೀಠವು, ಯೆಮನ್ ಮೇಲೆ ನಮಗೆ ಅಧಿಕಾರ ಇಲ್ಲ. ಹಾಗಿದ್ದ ಮೇಲೆ ಈ ಅರ್ಜಿಯನ್ನು ನಾವು ಏಕೆ ಪರಿಗಣಿಸಬೇಕು ಎಂದು ಪ್ರಶ್ನಿಸಿತು. ಕೇಂದ್ರದ ಭರವಸೆಯ ಹಿನ್ನೆಲೆಯಲ್ಲಿ ಮಾಧ್ಯಮಗಳ ಮೇಲೆ ನಿರ್ಬಂಧ ಹೇರುವ ಆದೇಶ ನೀಡಲು ನ್ಯಾಯಾಲಯ ನಿರಾಕರಿಸಿತು, ಮತ್ತು ಅಂತಿಮವಾಗಿ ಅರ್ಜಿಯನ್ನು ವಜಾಗೊಳಿಸಲಾಯಿತು.
ಪ್ರಕರಣದ ಹಿನ್ನೆಲೆ
ಕೇರಳ ಮೂಲದ 36 ವರ್ಷದ ನರ್ಸ್ ನಿಮಿಷಾ ಪ್ರಿಯಾ, ಯೆಮನ್ ಪ್ರಜೆ ತಲಾಲ್ ಅಬ್ಡೋ ಮಹ್ದಿ ಹತ್ಯೆ ಪ್ರಕರಣದಲ್ಲಿ 2017 ರಿಂದ ಮರಣ ದಂಡನೆ ಎದುರಿಸುತ್ತಿದ್ದಾರೆ. ತನ್ನ ಪಾಸ್‌ಪೋರ್ಟ್ ಪಡೆಯಲು ತಲಾಲ್‌ನಿಗೆ ಕೆಟಮೈನ್‌ನಿಂದ ನಿದ್ರೆ ಮಾಡಲು ಪ್ರಯತ್ನಿಸಿದ್ದರು. ತಲಾಲ್ ಆಕೆಯ ಪಾಸ್‌ಪೋರ್ಟ್ ವಶಪಡಿಸಿಕೊಂಡಿದ್ದಲ್ಲದೆ, ಆಕೆಯೇ ತನ್ನ ಪತ್ನಿ ಎಂದು ನಕಲಿ ದಾಖಲೆ ಸೃಷ್ಟಿಸಿದ್ದ ಎಂದು ಆರೋಪಿಸಲಾಗಿದೆ. ಮಿತಿ ಮೀರಿದ ನಿದ್ರಾಜನಕದ ಡೋಸ್‌ನಿಂದ ತಲಾಲ್ ಸಾವನ್ನಪ್ಪಿದ್ದಾನೆ.
2018ರಲ್ಲಿ ಆಕೆಗೆ ಮರಣ ದಂಡನೆ ಶಿಕ್ಷೆ ವಿಧಿಸಲಾಯಿತು, 2020ರಲ್ಲಿ ಪುನರ್ ವಿಚಾರಣೆ ನಡೆಸಿದರೂ ಅದೇ ಶಿಕ್ಷೆ ದೃಢವಾಯಿತು, ಮತ್ತು 2023ರಲ್ಲಿ ಯೆಮನ್‌ನ ಸುಪ್ರೀಂ ಜುಡಿಶಿಯಲ್ ಕೌನ್ಸಿಲ್‌ನಲ್ಲಿ ಮೇಲ್ಮನವಿ ತಿರಸ್ಕೃತಗೊಂಡಿತು. ನಂತರ ಯೆಮನ್ ಅಧ್ಯಕ್ಷರು ಮರಣ ದಂಡನೆಯನ್ನು ಅನುಮೋದಿಸಿದರು.
ಶರಿಯತ್ ಕಾನೂನಿನ ಪ್ರಕಾರ, ರಕ್ತದ ಹಣಕ್ಕೆ ಪ್ರತಿಯಾಗಿ ಸಂತ್ರಸ್ತನ ಕುಟುಂಬವು ಅಪರಾಧಿಯನ್ನು ಕ್ಷಮಿಸಿದರೆ ಮರಣ ದಂಡನೆಯನ್ನು ರದ್ದುಗೊಳಿಸಬಹುದು. ನಿಮಿಷಾ ಪ್ರಿಯಾ ಅವರ ಸಂಬಂಧಿಕರು ಮತ್ತು ಬೆಂಬಲಿಗರು ‘ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್’ ಅನ್ನು ರಚಿಸಿದ್ದು, ರಕ್ತದ ಹಣ ಸಂಗ್ರಹಿಸಿ ಕ್ಷಮೆಗಾಗಿ ಪ್ರಯತ್ನಿಸುತ್ತಿದ್ದಾರೆ.
ಜುಲೈ 18ರಂದು, ಸುಪ್ರೀಂ ಕೋರ್ಟ್ ‘ಸೇವ್ ನಿಮಿಷಾ ಪ್ರಿಯಾ ಇಂಟರ್ನ್ಯಾಷನಲ್ ಆಕ್ಷನ್ ಕೌನ್ಸಿಲ್’ಗೆ ಯೆಮನ್‌ಗೆ ತೆರಳಿ ತಲಾಲ್‌ನ ಕುಟುಂಬವನ್ನು ಭೇಟಿಯಾಗಲು ಸರ್ಕಾರದ ಅನುಮತಿ ಪಡೆಯಲು ಅನುಮತಿಸಿತು. ಇದರಲ್ಲಿ ಕೇರಳದ ಸುನ್ನಿ ಇಸ್ಲಾಮಿಕ್ ನಾಯಕ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಅವರ ಪ್ರತಿನಿಧಿಯೂ ಸೇರಿದ್ದಾರೆ. ಮುಸ್ಲಿಯಾರ್ ಅವರ ಹಿಂದಿನ ಮಧ್ಯಸ್ಥಿಕೆಯಿಂದಾಗಿ ಪ್ರಿಯಾಳ ಮರಣದಂಡನೆ ಜುಲೈ 16ರಿಂದ ಮುಂದೂಡಲ್ಪಟ್ಟಿತ್ತು ಎಂದು ಸಂಸ್ಥೆಯು ಹೇಳಿಕೊಂಡಿದೆ.
ಪ್ರಿಯಾಳ ಮರಣದಂಡನೆಯ ಒಂದು ದಿನ ಮುಂಚಿತವಾಗಿ, ಖಾಸಗಿ ಮಧ್ಯಸ್ಥಿಕೆಗಳಿಂದಾಗಿ ಶಿಕ್ಷೆಯನ್ನು ಮುಂದೂಡಲಾಗಿದೆ ಎಂಬ ವರದಿಗಳು ಬಂದವು. ಆದರೆ, ಸಂತ್ರಸ್ತ ತಲಾಲ್ ಅಬ್ಡೋ ಮಹ್ದಿ ಅವರ ಕುಟುಂಬ, ಪ್ರಿಯಾಳನ್ನು ಕ್ಷಮಿಸುವುದಿಲ್ಲ ಎಂದು ಹೇಳಿಕೆ ನೀಡಿ, ಈ ತಾತ್ಕಾಲಿಕ ನಿರಾಳತೆ ಹೆಚ್ಚು ಕಾಲ ಇರಲಿಲ್ಲ.
ಪ್ರಕರಣದ ಶೀರ್ಷಿಕೆ: ಡಾ. ಕೆ. ಎ. ಪಾಲ್ ಅಲಿಯಾಸ್ ಕಿಲಾರಿ ಆನಂದ್ ಪಾಲ್ v. ಯೂನಿಯನ್ ಆಫ್ ಇಂಡಿಯಾ, ಡಬ್ಲ್ಯೂ.ಪಿ.(ಸಿ) ನಂ. 803/2025.


