ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿ ಕಲ್ಪಿಸುವ ‘ನಾರಿ ಶಕ್ತಿ ವಂದನ ಕಾಯ್ದೆ-2023’ರ ವಿರುದ್ಧದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ಶುಕ್ರವಾರ (ಜನವರಿ 10, 2025) ನಿರಾಕರಿಸಿದೆ.
ಮಸೂದೆ ಈಗಾಗಲೇ ಕಾಯ್ದೆಯಾಗಿದೆ ಮತ್ತು ಸಾಂವಿಧಾನಿಕ ತಿದ್ದುಪಡಿಯಾಗಿ ಮಾರ್ಪಟ್ಟಿದೆ ಎಂದು ಗಮನಿಸಿದ ನ್ಯಾಯಪೀಠ ಅರ್ಜಿಗಳನ್ನು ನಿಷ್ಪ್ರಯೋಜಕವೆಂದು ವಜಾಗೊಳಿಸಿದೆ.
2023ರಲ್ಲಿ ಸಂಸತ್ತಿನಲ್ಲಿ ಪರಿಚಯಿಸಲಾದ ಮಹಿಳಾ ಮೀಸಲಾತಿ ಮಸೂದೆಯು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಅನುಮೋದನೆಯ ನಂತರ ಸೆಪ್ಟೆಂಬರ್ 29, 2023ರಂದು ಕಾನೂನಾಗಿ ಜಾರಿಗೆ ಬಂದಿದೆ. ಲೋಕಸಭೆಯಲ್ಲಿ ಇದನ್ನು ಸಂವಿಧಾನ (128 ನೇ) ತಿದ್ದುಪಡಿ ಮಸೂದೆ ಎಂದು ಪರಿಚಯಿಸಲಾಗಿದ್ದರೂ, ಈಗ ಇದನ್ನು ಸಂವಿಧಾನ (106 ನೇ ತಿದ್ದುಪಡಿ) ಕಾಯ್ದೆ ಎಂದು ಕರೆಯಲಾಗುತ್ತದೆ.
ಸಂವಿಧಾನದ ಪರಿಚ್ಛೇದ 32ರ ಅಡಿ ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ(ಎನ್‌ಎಫ್‌ಐಡಬ್ಲ್ಯು) ಮತ್ತು ಜಯಾ ಠಾಕೂರ್ ಎಂಬವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಜಯಾ ಠಾಕೂರ್ ಅವರು ಕಾಯ್ದೆಯ ಜಾರಿಯನ್ನೇ ಪ್ರಶ್ನಿಸಿದ್ದರೆ, ಎನ್‌ಎಫ್‌ಐಡಬ್ಲ್ಯು, ಕಾಯ್ದೆಯ ಮರುಹಂಚಿಕೆಯ ನಿಯಮಗಳನ್ನು, ಅಂದರೆ ಆರ್ಟಿಕಲ್ 334 ಎ (1) ಅಥವಾ 2023ರ ಕಾಯ್ದೆಯ ಷರತ್ತು 5ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿತ್ತು.
ನ್ಯಾಯಮೂರ್ತಿಗಳಾದ ಬೇಲಾ ಎಂ ತ್ರಿವೇದಿ ಮತ್ತು ಪಿ.ಬಿ. ವರಾಳೆ ನೇತೃತ್ವದ ಪೀಠವು ಜಯ ಠಾಕೂರ್ ಅವರ ಅರ್ಜಿಯನ್ನು ನಿರುಪಯುಕ್ತವೆಂದು ತಳ್ಳಿಹಾಕಿದ್ದು, ಪರಿಚ್ಛೇದ 32ರ ಅಡಿಯಲ್ಲಿ ಎನ್‌ಎಫ್‌ಐಡಬ್ಲ್ಯು ಅರ್ಜಿಯನ್ನು ಪರಿಶೀಲಿಸಲು ಒಲವು ತೋರಲಿಲ್ಲ. ಆದರೆ, ಈ ಸಂಬಂಧ ಅರ್ಜಿದಾರರು ಹೈಕೋರ್ಟ್ ಅಥವಾ ಯಾವುದೇ ಸೂಕ್ತ ವೇದಿಕೆಗೆ ಹೋಗಬಹುದು ಎಂದು ಪೀಠ ಹೇಳಿದೆ.
2023ರ ನವೆಂಬರ್ 3ರಂದು ಜಯಾ ಠಾಕೂರ್ ಅವರ ಮನವಿಯನ್ನು ಆಲಿಸಿದ್ದ ನ್ಯಾಯಾಲಯವು, ಜನಗಣತಿಯ ನಂತರ ಜಾರಿಗೆ ಬರಲಿರುವ ಮಹಿಳಾ ಮೀಸಲಾತಿ ಕಾನೂನಿನ ಒಂದು ಭಾಗವನ್ನು ನ್ಯಾಯಾಲಯವು ರದ್ದುಗೊಳಿಸುವುದು ಬಹಳ ಕಷ್ಟ ಎಂದು ಹೇಳಿತ್ತು.
ಇದನ್ನೂ ಓದಿ : ತಿರುಪತಿ ಕಾಲ್ತುಳಿತ ಪ್ರಕರಣ: ಗಾಯಗೊಂಡವರಿಗೆ ವಿಶೇಷ ವಿಐಪಿ ವೈಕುಂಠ ಏಕಾದಶಿ ದರ್ಶನ


