ದೇಶಾದ್ಯಂತ ತೀವ್ರ ಬಿರುಗಾಳಿ ಸೃಷ್ಟಿಸಿರುವ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ಕಾನೂನನ್ನು ಪ್ರಶ್ನಿಸಿ ಸುಮಾರು 60 ಅರ್ಜಿಗಳು ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿವೆ.
ಅರ್ಜಿಯನ್ನು ಸಲ್ಲಿಸಿದವರಲ್ಲಿ ಹಿರಿಯ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್, ಟಿಎಂಸಿಯ ಮಹುವಾ ಮೊಹಿತ್ರಾ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ ಮತ್ತು ಅಸ್ಸಾಂನ ಆಡಳಿತಾರೂಡ BJP ಬಿಜೆಪಿಯ ಮಿತ್ರಪಕ್ಷ ಅಸ್ಸಾಂ ಗಣ ಪರಿಷತ್ ಸೇರಿದ್ದಾರೆ.
ಭಾರತದ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬಾಬ್ಡೆ ನೇತೃತ್ವದ ತ್ರಿಸದಸ್ಯ ಪೀಠವು ಅರ್ಜಿಯನ್ನು ಆಲಿಸಲಿದೆ. ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಸೂರ್ಯ ಕಾಂತ್ ಅವರು ನ್ಯಾಯಪೀಠದ ಇತರ ನ್ಯಾಯಾಧೀಶಗಳಾಗಿದ್ದಾರೆ.
ಪೌರತ್ವ ನೀಡಲು ಧರ್ಮವು ಆಧಾರವಾಗಿರಲು ಸಾಧ್ಯವಿಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ. ಹೊಸ ಕಾನೂನು, ಸಂವಿಧಾನದ ಮೂಲಭೂತ ರಚನೆಗೆ ವಿರುದ್ಧವಾಗಿದೆ, ಏಕೆಂದರೆ ಅಕ್ರಮ ವಲಸಿಗರನ್ನು ಧರ್ಮದ ಆಧಾರದ ಮೇಲೆ ನಾಗರಿಕರನ್ನಾಗಿ ಒಪ್ಪಿಕೊಳ್ಳುವುದು ಜೀವನ ಮತ್ತು ಸಮಾನತೆಯ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಈ ಕಾನೂನು ರಾಷ್ಟ್ರದ ಜಾತ್ಯತೀತತೆಯ ಮೂಲಭೂತ ತತ್ತ್ವದ ಮೇಲೆ ಪರಿಣಾಮ ಬೀರುತ್ತದೆ. ಎಲ್ಲಾ ಧರ್ಮಗಳ ಜನರನ್ನು ಸಮಾನವಾಗಿ ನೋಡುವ ಕರ್ತವ್ಯ ಸರ್ಕಾರಕ್ಕಿದೆ ಎಂದು ಅವರು ವಾದಿಸಿದ್ದಾರೆ.
ಸಾಕಷ್ಟು ಪ್ರತಿಭಟನೆ, ಹಿಂಸಾಚಾರದ ಕಾರಣಕ್ಕಾಗಿ ದೇಶದ ಗಮನಸೆಳೆದಿರುವ ಕಾಯ್ದೆಯ ಕುರಿತು ಸುಪ್ರೀಂ ಏನು ಅಭಿಪ್ರಾಯಪಡುತ್ತದೆ ಎಂಬುದರ ಮೇಲೆ ಎಲ್ಲರ ಗಮನ ನೆಟ್ಟಿದೆ.


